ಆಗಸದಲ್ಲಿ ನಿಯೋವೈಸ್ ಧೂಮಕೇತು ಗೋಚರ!

ಜುಲೈ 14 ರಿಂದ ಆಗಸ್ಟ್ 2ರ ವರೆಗೆ ಖಗೋಳ ವಿಸ್ಮಯವೊಂದು ಗೋಚರಿಸಲಿದೆ. ನಾಸಾ ವಿಜ್ಞಾನಿಗಳು ಇತ್ತೀಚೆಗೆ ಅನ್ವೇಷಿಸಿದ ನಿಯೋವೈಸ್ ಎಂಬ ಹೊಸ ಧೂಮಕೇತು ಈ ಅವಧಿಯಲ್ಲಿ ನೈರುತ್ಯ ಆಕಾಶದಲ್ಲಿ ಗೋಚರಿಸಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜುಲೈ 14 ರಿಂದ ಆಗಸ್ಟ್ 2ರ ವರೆಗೆ ಖಗೋಳ ವಿಸ್ಮಯವೊಂದು ಗೋಚರಿಸಲಿದೆ. ನಾಸಾ ವಿಜ್ಞಾನಿಗಳು ಇತ್ತೀಚೆಗೆ ಅನ್ವೇಷಿಸಿದ ನಿಯೋವೈಸ್ ಎಂಬ ಹೊಸ ಧೂಮಕೇತು ಈ ಅವಧಿಯಲ್ಲಿ ನೈರುತ್ಯ ಆಕಾಶದಲ್ಲಿ ಗೋಚರಿಸಲಿದೆ. 

ಇಂತಹ ವಿಸ್ಮಯಗಳು ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಈ ಧೂಮಕೇತುವನ್ನು ಆಕಾಶವು ಮೇಘಾವೃತವಾಗಿಲ್ಲದೇ ಇದ್ದಲ್ಲಿ ಬರೀಗಣ್ಣಿನಿಂದ ವೀಕ್ಷಿಸಬಹುದಾಗಿದೆ. ಧೂಮಕೇತುಗಳು ಸೌರವ್ಯೂಹದ ಸಣ್ಣ ಭಾಗಗಳಾಗಿದ್ದು, ಸೌರವ್ಯೂಹದಲ್ಲಿ ಸುತ್ತುತ್ತಿರುತ್ತವೆ. ಇವುಗಳಿಗೆ ಸ್ವಂತ ಬೆಳಕಿರುವುದಿಲ್ಲ. ಸೂರ್ಯನ ಬೆಳಕನ್ನೇ ಪ್ರತಿಫಲಿಸುತ್ತವೆ. ಬೆಳಕನ್ನು ಪ್ರಜ್ವಲಿಸುವ ಸಮಯದಲ್ಲಿ ವಿಜ್ಞಾನಿಗಳು ದೂರದರ್ಶಕಗಳನ್ನು ಬಳಸಿ ಇವುಗಳನ್ನು ಗುರುತಿಸುತ್ತಾರೆ. ಈ ಧೂಮಕೇತುಗಳನ್ನು ಕುಬ್ಜ ಗ್ರಹವೆಂದೇ ಕರೆಯಲಾಗುತ್ತದೆ. ಪ್ಲೂಟೋನ ನಂತರದ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಇವು ಸುತ್ತುತ್ತಿರುತ್ತವೆ. ಧೂಮಕೇತುಗಳ ಮೇಲ್ಮೈ ಮಂಜಿನಿಂದ ಆವೃತವಾಗಿದೆ. ಇವುಗಳು ಸೂರ್ಯನ ಹತ್ತಿರದ ಕಕ್ಷೆಗಳಲ್ಲಿ ಬಂದಾಗ ಮಂಜು ಕರಗಿ ಬಾಲದ ರೂಪದಲ್ಲಿ ಗೋಚರಿಸುತ್ತದೆ.

ಏನಿದು ನಿಯೋವೈಸ್ ಧೂಮಕೇತು
ನಾಸ ವಿಜ್ಞಾನಿಗಳು ಇದೇ ವರ್ಷದ ಮಾರ್ಚ್ 27 ರಂದು ಬುಧ ಗ್ರಹದ ಕಕ್ಷೆಯ ಹತ್ತಿರವಿದ್ದಾಗ ನಿಯೋವೈಸ್ ಬಾಹ್ಯ ದೂರದರ್ಶಕವನ್ನು ಬಳಸಿ ಅನ್ವೇಷಿಸಿದ್ದಾರೆ. ಆದ್ದರಿಂದ ಈ ಧೂಮಕೇತುವಿಗೆ ನಿಯೋವೈಸ್ ಎಂಬ ಹೆಸರಿಡಲಾಯಿತು. ಈ ಧೂಮಕೇತುವಿನ ವೈಜ್ಞಾನಿಕ ಹೆಸರು “ಸಿ 2020 ಎಫ್ 3” ಎಂದು. ನಿಯೋವೈಸ್ ಧೂಮಕೇತುವಿನ ನ್ಯೂಕ್ಲಿಯಸ್ ನ ವ್ಯಾಸವು 5ಕಿ.ಮೀ ನಷ್ಟಿರುತ್ತದೆ. ನಿಯೋವೈಸ್ ಧೂಮಕೇತು ಸೂರ್ಯನಿಂದ ದೂರ ಸರಿಯುತ್ತಾ ಸುತ್ತುತ್ತಿರಬೇಕಾದರೆ, ಜುಲೈ 22ರಂದು ಭೂಮಿಗೆ ಹತ್ತಿರವಾಗುತ್ತದೆ. ನಿಯೋವೈಸ್ ಧೂಮಕೇತುವನ್ನು ಮರಳಿ ನೋಡಬೇಕಾದರೆ 6,800 ವರ್ಷಗಳು ಕಾಯಬೇಕಾಗುತ್ತದೆ. 

ಸುಮಾರು 5 ಕಿ.ಮೀ ವ್ಯಾಸವಿರುವ ಧೂಮಕೇತು ಸೂರ್ಯನನ್ನು ಸಮೀಪಿಸುತ್ತಿದ್ದಂತೆ ಅದಕ್ಕೆ ಲಕ್ಷ ಕಿ.ಮೀ ಉದ್ದದ ಬಾಲ ಬೆಳೆಯುತ್ತದೆ. ಸೂರ್ಯನ ಬಿಸಿ ಕಿರಣಗಳಿಂದ ಧೂಮಕೇತುವಿನ ಕರಗುವ ತೇವಾಂಶ ಹಾಗೂ ಅನಿಲವನ್ನು ಬಾಲ ಎಂದು ಕರೆಯಲಾಗುತ್ತದೆ ಎಂದು ಡಾ.ಎ.ಪಿ. ಭಟ್‌ ಮಾಹಿತಿ ನೀಡಿದ್ದಾರೆ.

ಸೂರ್ಯನಿಂದ ಸರಾಸರಿ 74 ಕೋಟಿ ಕಿ.ಮೀ. ದೂರದಲ್ಲಿರುವ ಗುರುಗ್ರಹ ಯಾವಾಗಲೂ ಭೂಮಿಗೆ ಒಂದೇ ದೂರದಲ್ಲಿರುವುದಿಲ್ಲ. ವರ್ಷಕ್ಕೊಮ್ಮೆ ಸುಮಾರು 59 ಕೋಟಿ ಕಿ.ಮೀ. ದೂರದಲ್ಲಿದ್ದರೆ, ಮತ್ತೆ ಆರು ತಿಂಗಳ ನಂತರ ಸುಮಾರು 89 ಕೋಟಿ ಕೀಮೀ ದೂರದಲ್ಲಿರುತ್ತದೆ. ಅದು ಭೂಮಿಗೆ ಹತ್ತಿರ ಬಂದಾಗ ದೊಡ್ಡದಾಗಿ ಕಂಡುಬರುತ್ತದೆ. ಶನಿಗ್ರಹ ಸೂರ್ಯನ ಸುತ್ತು ಸುಮಾರು 140 ಕೋಟಿ ಕಿ.ಮೀ ದೂರದಲ್ಲಿ ಸುತ್ತುತ್ತಿದ್ದರೂ ಭೂಮಿಗೆ ಸಮೀಪ ಬಂದಾಗ ವರ್ಷಕ್ಕೊಮ್ಮೆ 125 ಕೋಟಿ ಕಿಮೀ ಇದ್ದು, ಅರು ತಿಂಗಳ ನಂತರ ಸುಮಾರು 165 ಕೋಟಿ ಕಿ.ಮೀ ದೂರದಲ್ಲಿ ಇರುತ್ತದೆ.

ಈ ವಾರದಲ್ಲಿ ಈ ಎರಡೂ ಗ್ರಹಗಳು ಭೂಮಿಗೆ ತೀರಾ ಹತ್ತಿರಕ್ಕೆ ಬರುವುದರಿಂದ ಪೂರ್ವ ಆಕಾಶದಲ್ಲಿ ಸಂಜೆ ವ್ರಶ್ಚಿಕ ರಾಶಿಯ ಬುಡದಲ್ಲಿ ಚೆನ್ನಾಗಿ ಹೊಳೆಯುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಸಪ್ತರ್ಷಿ ಮಂಡಲದ ಕೆಳಗೆ ಗೋಚರಿಸುವ ನಿಯೋವೈಸ್ ಧೂಮಕೇತುವನ್ನು ಹಾಗೂ ಸೌರಮಂಡಲದ ಎರಡು ದೈತ್ಯ ಗ್ರಹಗಳು ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಪ್ರಕಾಶಮಾನವಾಗಿ ಹೊಳೆಯುವ ವಿದ್ಯಮಾನಗಳನ್ನು ಎಲ್ಲರೂ ಯಾವುದೇ ಅಪಾಯಗಳಿಲ್ಲದೇ, ಬರಿಗಣ್ಣಿನಲ್ಲಿ ತಪ್ಪದೇ ವೀಕ್ಷಿಸುವಂತೆ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಡಾ.ಎ.ಪಿ.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com