ಇಂದು ಸ್ಟ್ರಾಬೆರಿ ಚಂದ್ರಗ್ರಹಣ; ನಭೋ ಮಂಡಲದ ಕೌತುಕದ ಕುರಿತು ಮಹತ್ವದ ಮಾಹಿತಿ

2020ರ ಅಪರೂಪದ ವಿದ್ಯಮಾನಕ್ಕೆ ನಾವು ಇಂದು ಸಾಕ್ಷಿಯಾಗುತ್ತಿದ್ದು,  ವರ್ಷದ ಎರಡನೇ ಚಂದ್ರಗ್ರಹಣ ಇಂದು ರಾತ್ರಿ  (ಜೂನ್ 5ಹಾಗೂ 6) ಸಂಭವಿಸಲಿದ್ದು, ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣವಾಗಿದೆ.
ಸ್ಟ್ರಾಬೆರಿ ಚಂದ್ರಗ್ರಹಣ-ಸಂಗ್ರಹ ಚಿತ್ರ
ಸ್ಟ್ರಾಬೆರಿ ಚಂದ್ರಗ್ರಹಣ-ಸಂಗ್ರಹ ಚಿತ್ರ

ನವದೆಹಲಿ: 2020ರ ಅಪರೂಪದ ವಿದ್ಯಮಾನಕ್ಕೆ ನಾವು ಇಂದು ಸಾಕ್ಷಿಯಾಗುತ್ತಿದ್ದು,  ವರ್ಷದ ಎರಡನೇ ಚಂದ್ರಗ್ರಹಣ ಇಂದು ರಾತ್ರಿ  (ಜೂನ್ 5ಹಾಗೂ 6) ಸಂಭವಿಸಲಿದ್ದು, ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣವಾಗಿದೆ.

ಈ ವರ್ಷದ ಜನವರಿ 10ರಂದು ಪ್ರಥಮ ಚಂದ್ರಗ್ರಹಣ ಸುಮಾರು 4ಗಂಟೆ ಐದು ನಿಮಿಷಗಳ ಕಾಲ ಭಾರತದಲ್ಲಿ ಗೋಚರಿಸಿತ್ತು. ಇದೀಗ ಎರಡನೇ ಸ್ಟ್ರಾಬೆರಿ ಚಂದ್ರಗ್ರಹಣ ಜೂನ್ 5ಮತ್ತು 6ರ ರಾತ್ರಿ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬಾರಿಯ ಚಂದ್ರಗ್ರಹಣವನ್ನು Penumbral Eclipse ಎಂದು ಹೆಸರಿಸಲಾಗಿದ್ದು, ಇಂದು ಚಂದ್ರನ ಮೇಲ್ಮೈ ಶೇ.75ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರಿಸುತ್ತದೆ. ಈ ನಿಟ್ಟಿನಲ್ಲಿ ಗ್ರಹಣ ಪೂರ್ಣಪ್ರಮಾಣದಲ್ಲಿ ಗೋಚರವಾಗದಿರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಏನಿದು ಸ್ಟ್ರಾಬೆರಿ ಚಂದ್ರಗ್ರಹಣ?
ಖಗ್ರಾಹ, ಖಂಡಗ್ರಾಸ, ತೋಳಚಂದ್ರಗ್ರಹಣ ಹೀಗೆ ಹಲವಾರು ರೀತಿಯ ಹೆಸರಿನ ಚಂದ್ರಗ್ರಹಣಗಳಿವೆ. ಅದೇ ರೀತಿ ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣ.  ಅಮೆರಿಕದಲ್ಲಿ ಈ ಸ್ಟ್ರಾಬೆರಿ ಹಣ್ಣುಗಳ ಸೀಸನ್ ಆಗಿದ್ದು, ಈ ನಿಟ್ಟಿನಲ್ಲಿ ಜೂನ್ ತಿಂಗಳಿನಲ್ಲಿ ಸಂಭವಿಸುತ್ತಿರುವ ಪೂರ್ಣ ಚಂದ್ರಗ್ರಹಣಕ್ಕೆ ಸ್ಟ್ರಾಬೆರಿ ಚಂದ್ರಗ್ರಹಣ ಎಂದು ಹೆಸರಿಸಲಾಗಿದೆಯಂತೆ. ಅದೇ ರೀತಿ ರೋಸ್ ಮೂನ್, ಹಾಟ್ ಮೂನ್ ಇತ್ಯಾದಿ ಹೆಸರುಗಳನ್ನು ಈಗಾಗಲೇ ಇಡಲಾಗಿದೆ. ಗ್ರಹಣದ ವೇಳೆ ಚಂದ್ರನು ಭೂಮಿಯ ನೆರಳಿನಲ್ಲಿಯೇ ಪರಿಭ್ರಮಿಸುವುದರಿಂದ 'ಛಾಯಾ ಚಂದ್ರಗ್ರಹಣ' ಎನ್ನಲಾಗುತ್ತದೆ. 

ಎಲ್ಲೆಲ್ಲಿ ಗೋಚರಿಸುತ್ತದೆ?
ಇಂದಿನ ಖಗೋಳ ವಿಸ್ಮಯವು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಫೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಭಾರತದಾದ್ಯಂತ ಈ ಚಂದ್ರಗ್ರಹಣ ಗೋಚರಿಸಲಿದೆ.

ಸಮಯ
ಸ್ಟ್ರಾಬೆರಿ ಚಂದ್ರಗ್ರಹಣ ಇಂದು ರಾತ್ರಿ 11.15ಕ್ಕೆ ಆರಂಭವಾಗಲಿದ್ದು, ಜೂನ್ 6ರಂದು 12.54ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದ್ದು, ಜೂನ್ 6ರ ಬೆಳಗ್ಗಿನ ಜಾವ 2.34ಕ್ಕೆ ಪೂರ್ಣಗೊಳ್ಳಲಿದೆ. ಸ್ಟ್ರಾಬೆರಿ ಚಂದ್ರಗ್ರಹಣ ಮೂರು ಗಂಟೆ 18 ನಿಮಿಷಗಳ ಕಾಲದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com