ನೀವು 'ಬೆಂಕಿ ಉಂಗುರ' ನೋಡಲು ಸಾಧ್ಯವೆ? ನಾಳಿನ ಗ್ರಹಣದ ಬಗ್ಗೆ ತಿಳಿಯಬೇಕಾದ ಸಂಗತಿ ಇವು

ಭಾರತವು ಜೂನ್ 21(ನಾಳೆ) ಈ ಕ್ಯಾಲೆಂಡರ್ ವರ್ಷದ ಪ್ರಥಮ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದು, ಇದು ದೇಶದ ಕೆಲವು ಭಾಗಗಳಲ್ಲಿ ಕಾಣಿಸಲಿದೆ.
ಸೂರ್ಯಗ್ರಹಣ
ಸೂರ್ಯಗ್ರಹಣ

ನವದೆಹಲಿ: ಭಾರತವು ಜೂನ್ 21(ನಾಳೆ) ಈ ಕ್ಯಾಲೆಂಡರ್ ವರ್ಷದ ಪ್ರಥಮ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದ್ದು, ಇದು ದೇಶದ ಕೆಲವು ಭಾಗಗಳಲ್ಲಿ ಕಾಣಿಸಲಿದೆ.

ಈ ವರ್ಷ ನಡೆಯಲಿರುವ ಎರಡು ಸೂರ್ಯಗ್ರಹಣಗಳ ಪೈಕಿ ಇದು ಮೊದಲಿನದಾಗಿದ್ದು ಎರಡನೇ ಸೂರ್ಯಗ್ರಹಣ ಡಿಸೆಂಬರ್ 14ಕ್ಕೆ ಸಂಭವಿಸಲಿದೆ.

ರಾಜಸ್ಥಾನದ ಸೂರತ್ ಘರ್ ಹಾಗೂ ಅನೂಪ್ ಘರ್ , ಹರಿಯಾಣದ ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ,  ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ, ಜೋಶಿಮಠ ಪ್ರದೇಶಗಲಲ್ಲಿ ಸೂರ್ಯಗ್ರಹಣದಲ್ಲಿ ಕಾಣಲಿರುವ ಸುಮಾರು ಒಂದು ನಿಮಿಷಗಳ "ಬೆಂಕಿ ಉಂಗುರ" ಗೋಚರಿಸುತ್ತದೆ.

ಆದಾಗ್ಯೂ, 2019 ರ ಡಿಸೆಂಬರ್ 26ಕ್ಕೂ ಇದ್ದಂತೆ ಈ ಬಾರಿಯ ಗ್ರಹಣದಲ್ಲಿ "ಬೆಂಕಿ ಉಂಗುರ"ಕ್ಕೆ ಅಷ್ಟು ಪ್ರಾಮುಖ್ಯತೆ ಇಲ್ಲ ಎಂದು ಮಧ್ಯಪ್ರದೇಶದ ಬಿರ್ಲಾ ಪ್ಲಾನೆಟೇರಿಯಂ ನಿರ್ದೇಶಕ ದೇಬಿಪ್ರಸಾದ್ ದುಯಾರಿ ಹೇಳಿದ್ದಾರೆ. ಕೊರೋನಾವೈರಸ್ ಸಾಂಕ್ರಾಮಿಕ ಇರುವ ಕಾರಣ ಈ ಖಗೋಳ ವಿಸ್ಮಯದ ವೀಕ್ಷಣೆಗೆ ಹೆಚ್ಚಿನ ಜನ ಹೊರಬರದಂತೆ ನಿರ್ಬಂಧವಿದೆ.

ಜೂನ್ 21ರ  ಗ್ರಹಣವು ಆಫ್ರಿಕಾದ ಕಾಂಗೋ ಪ್ರದೇಶದಲ್ಲಿ ಮೊದಲಿಗೆ ಪ್ರಾರಂಭವಾಗಲಿದೆ. ದಕ್ಷಿಣ ಸುಡಾನ್, ಇಥಿಯೋಪಿಯಾ, ಯೆಮೆನ್, ಓಮನ್, ಸೌದಿ ಅರೇಬಿಯಾ, ಹಿಂದೂ ಮಹಾಸಾಗರ ಮತ್ತು ಪಾಕಿಸ್ತಾನದ ಮೂಲಕ ರಾಜಸ್ಥಾನ ಮುಖೇನ ಭಾರತಕ್ಕೆ ಪ್ರವೇಶಿಸುತ್ತದೆ. ಇದು ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ ಕೊನೆಗೊಳ್ಳುವ ಮೊದಲು ಟಿಬೆಟ್, ಚೀನಾ, ತೈವಾನ್‌ ಭಾಗಗಳಲ್ಲಿ ಗೋಚರಿಸಲಿದೆ.

ಸೂರ್ಯಗ್ರಹಣ ಎಂದರೇನು?
ಸೂರ್ಯ, ಚಂದ್ರ ಮತ್ತು ಭೂಮಿಯು ಸರಳ ರೇಖೆಯಲ್ಲಿ ಒಂದೇ ಸಮತಲದಲ್ಲಿ ಬಂದಾಗ  ಸೂರ್ಯಗ್ರಹಣ ಸಂಭವಿಸುತ್ತದೆ ಚಂದ್ರನು ಸೂರ್ಯನ ಮಧ್ಯದಿಂದ ಹಾದು ಹೋಗುವ ವೇಳೆ ಗೋಚರಿಸುವ ಬೆಳಕಿನ ಉಂಗುರ ಈ ಗ್ರಹಣದ ಆಕರ್ಷಣೆಯಾಗಿದೆ. ಚಂದ್ರನ ಗಾತ್ರ ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವಷ್ಟು ದೊಡ್ಡದಾಗಿರದ ಕಾರಣ ಸೂರ್ಯನ ಪ್ರಭೆ ಚಂದ್ರನ ಸುತ್ತಲೂ ಹರಡಿ ಬೆಂಕಿ ಉಂಗುರ ಸೃಷ್ಟಿಯಾಗುತ್ತದೆ.

ಜೂನ್ 21ರ ಸೂರ್ಯಗ್ರಹಣದ ಬಗ್ಗೆ ಕೆಲವು ಸಂಗತಿಗಳು:
ಸೂರ್ಯ ಗ್ರಹಣವು ಮೊದಲು ಭುಜ್‌ನಲ್ಲಿ ಬೆಳಿಗ್ಗೆ 9:58ಕ್ಕೆ ಗೋಚರಿಸುತ್ತದೆ ಮತ್ತು ಕೊನೆಯದಾಗಿ ದಿಬ್ರುಘರ್ ನಲ್ಲಿ ಮಧ್ಯಾಹ್ನ 2:29ಕ್ಕೆ ಕೊನೆಯಾಗಲಿದೆ. Timeanddate.com ಪ್ರಕಾರ, ಏಷ್ಯಾ, ಆಫ್ರಿಕಾ, ಪೆಸಿಫಿಕ್, ಹಿಂದೂ ಮಹಾಸಾಗರ, ಯುರೋಪ್ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಈ ಗ್ರಹಣ  ಗೋಚರಿಸುತ್ತದೆ ನೆಹರು ತಾರಾಲಯದ ಪ್ರಕಾರ ಮುಂದಿನ 28 ತಿಂಗಳುಗಳಲ್ಲಿ ಭಾರತದಲ್ಲಿ ಕಾಣುವ  ಕೊನೆಯ ಸೂರ್ಯಗ್ರಹಣ ಇದಾಗಿದೆ. ಭಾರತದಿಂದ ಗೋಚರಿಸುವ ಮುಂದಿನ ಸೂರ್ಯಗ್ರಹಣವು ಅಕ್ಟೋಬರ್ 25, 2022ಕ್ಕೆ ಸಂಭವಿಸಲಿದೆ.

ಭಾರತದ ಯಾವ ರಾಜ್ಯಗಳು ಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಬಲ್ಲವು?
ರಾಜಸ್ಥಾನ, ಹರಿಯಾಣ ಮತ್ತು ಉತ್ತರಾಖಂಡ

ಗ್ರಹಣವನ್ನು ನೋಡುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಬಿಳಿ ಕಾರ್ಡ್‌ನಲ್ಲಿ ಸೂರ್ಯನ ಚಿತ್ರವನ್ನು  ಟ್ರೈಪಾಡ್‌ನಲ್ಲಿ ಅಳವಡಿಸಲಾದ ಬೈನಾಕ್ಯುಲರ್‌ಗಳು ಅಥವಾ ದೂರದರ್ಶಕವನ್ನು ಬಳಸಿ ನೋಡಬಹುದಾಗಿದೆ.  ಗ್ರಹಣವನ್ನು ನೇರವಾಗಿ ನೋಡಬಾರದು. ಹಾಗೊಮ್ಮೆ ನೋಡಿದ್ದಾದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com