ಇಸ್ರೋದಿಂದ ವರ್ಷದ ಮೊದಲ ಕಾರ್ಯಾಚರಣೆ: ಫೆ.28ಕ್ಕೆ ಬ್ರೆಜಿಲಿಯನ್, ಭಾರತೀಯ ಸ್ಟಾರ್ಟ್ ಅಪ್ ಉಪಗ್ರಹ ಉಡಾವಣೆ
2021 ರಲ್ಲಿನ ಇಸ್ರೋದ ಮೊಟ್ಟ ಮೊದಲ ಕಾರ್ಯಾಚರಣೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಫೆಬ್ರವರಿ 28 ರಂದು ಬ್ರೆಜಿಲಿಯನ್ ಉಪಗ್ರಹ ಅಮೆಜಾನಿಯಾ-1 ಮತ್ತು ಮೂರು ಭಾರತೀಯ ನಿರ್ಮಿತ ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸಿದೆ, ಇದರಲ್ಲಿ ಒಂದು ಸ್ವದೇಶೀ ನಿರ್ಮಿತ ಸ್ಟಾರ್ಟ್ ಅಪ್ ಆಗಿದೆ.
Published: 05th February 2021 02:36 PM | Last Updated: 05th February 2021 02:58 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: 2021 ರಲ್ಲಿನ ಇಸ್ರೋದ ಮೊಟ್ಟ ಮೊದಲ ಕಾರ್ಯಾಚರಣೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಫೆಬ್ರವರಿ 28 ರಂದು ಬ್ರೆಜಿಲಿಯನ್ ಉಪಗ್ರಹ ಅಮೆಜಾನಿಯಾ-1 ಮತ್ತು ಮೂರು ಭಾರತೀಯ ನಿರ್ಮಿತ ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸಿದೆ, ಇದರಲ್ಲಿ ಒಂದು ಸ್ವದೇಶೀ ನಿರ್ಮಿತ ಸ್ಟಾರ್ಟ್ ಅಪ್ ಆಗಿದೆ.
ಈ ಉಪಗ್ರಹಗಳನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಸಿ -51 ನಲ್ಲಿ ಬೆಳಿಗ್ಗೆ 10.28 ಕ್ಕೆ ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ಉಡಾಯಿಸಲಾಗುವುದು.
ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಯ ಅಧ್ಯಕ್ಷ ಕೆ.ಶಿವನ್ ಈ ಉಡಾವಣಾ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶುಕ್ರವಾರ ಖಚಿತಪಡಿಸಿದ್ದಾರೆ.
ಅಮೆಜೋನಿಯಾ-1 ಎನ್ನುವುದು ಸಂಪೂರ್ಣವಾಗಿ ಬ್ರೆಜಿಲ್ಅಭಿವೃದ್ಧಿಪಡಿಸಿದ ಮೊದಲ ಭೂ ವೀಕ್ಷಣಾ ಉಪಗ್ರಹವಾಗಿದೆ, ಇದು ಪ್ರಾಥಮಿಕ ಉಪಗ್ರಹವಾಗಿರಲಿದೆ. 'ಆನಂದ್', 'ಸತೀಶ್ ಧವನ್' ಉಪಗ್ರಹ ಮತ್ತು 'ಯುನಿಟಿಸಾಟ್' ಇದರೊಡನೆ ಬಾಹ್ಯಾಕಾಶಕ್ಕೇರಲಿರುವ ಇತರೆ ಉಪಗ್ರಹಗಳಾಗಿದೆ. 'ಆನಂದ್' ಅನ್ನು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್ ಅಪ್ ಪಿಕ್ಸೆಲ್ (Pixxel) ನಿರ್ಮಾಣ ಮಾಡಿದ್ದರೆ ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾ ' ಸಂಸ್ಥೆ 'ಸತೀಶ್ ಧವನ್ ಉಪಗ್ರಹ'ವನ್ನು ನಿರ್ಮಿಸಿದೆ.
ಯುನಿಟಿಸಾಟ್ ಮೂರು ಉಪಗ್ರಹಗಳ ಸಂಯೋಜನೆಯಾಗಿದ್ದು, ಜೆಪ್ಪಿಯಾರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಶ್ರೀಪೆರುಂಪುಡೂರ್ (ಜೆಐಟ್ಸಾಟ್), ಜಿ.ಎಚ್. ರೈಸೋನಿ ಕಾಲೇಜ್ ಆಫ್ ಎಂಜಿನಿಯರಿಂಗ್, ನಾಗ್ಪುರ (ಜಿಹೆಚ್ಆರ್ಸಿಇಸ್ಯಾಟ್) ಮತ್ತು ಶ್ರೀ ಶಕ್ತಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಕೊಯಮತ್ತೂರು (ಶ್ರೀ ಶಕ್ತಿ ಸ್ಯಾಟ್) ಜಂಟಿಯಾಗಿ ನಿರ್ಮಿಸಿದೆ.