ಸೈಕಲ್ ಚಕ್ರಕ್ಕೆ ಸಿಕ್ಕ ಕೋಳಿ ಮರಿಯನ್ನು ಆಸ್ಪತ್ರೆಗೆ ತಂದ ಬಾಲಕನಿಗೆ 'ಪೇಟಾ'ದಿಂದ ಸಹಾನುಭೂತಿಯ ಮಗು ಪ್ರಶಸ್ತಿ!

ಪುಟ್ಟ ಬಾಲಕ ಆಟವಾಡುವಾಗ ಆಕಸ್ಮಿಕವಾಗಿ ಅವನ ಸೈಕಲ್ ಚಕ್ರಕ್ಕೆ ಸಿಕ್ಕಿಹಾಕಿಕೊಂಡ ...

Published: 27th April 2019 12:00 PM  |   Last Updated: 27th April 2019 01:11 AM   |  A+A-


Mizoram boy

ಮಿಜೋರಂನ ಬಾಲಕ

Posted By : SUD SUD
Source : The New Indian Express
ಮಿಜೋರಾಂ: ಪುಟ್ಟ ಬಾಲಕ ಆಟವಾಡುವಾಗ ಆಕಸ್ಮಿಕವಾಗಿ ಅವನ ಸೈಕಲ್ ಚಕ್ರಕ್ಕೆ ಸಿಕ್ಕಿಹಾಕಿಕೊಂಡ ಕೋಳಿಮರಿಯನ್ನು ಆಸ್ಪತ್ರೆಗೆ ಕೊಂಡೊಯ್ಡು ಪೇಟಾ ಸಂಘಟನೆಯಿಂದ ಪ್ರಶಸ್ತಿ ಗಳಸಿದ್ದಲ್ಲದೆ ಇಂಟರ್ನೆಟ್ ನಲ್ಲಿ ಈ ಪುಟ್ಟ ಬಾಲಕನ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕೋಳಿ ಮರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲು ಒಂದು ಕೈಯಲ್ಲಿ ಕೋಳಿ ಮರಿ ಹಾಗೂ ಇನ್ನೊಂದು ಕೈಯಲ್ಲಿ 10 ರೂಪಾಯಿ ನೋಟು ಹಿಡಿದುಕೊಂಡು ಬಾಲಕ ಒಬ್ಬನೇ ಆಸ್ಪತ್ರೆಗೆ ಹೋಗಿದ್ದಾನೆ.

ದಯೆ ಮತ್ತು ಮಾನವೀಯತೆಯ ಸಾಕ್ಷಿಯೆಂಬಂತೆ ಬಾಲಕನ ಈ ಚಿತ್ರವಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಭಾರತೀಯ ಪೇಟಾ ಸಂಘಟನೆ ಬಾಲಕ ಡೆರೆಕ್ ಸಿ ಲಾಲ್ಚಾನಿಹಿಮಾಗೆ ಸಹಾನುಭೂತಿಯ ಮಗು ಪ್ರಶಸ್ತಿ ನೀಡಿ ಗೌರವಿಸಿದ್ದು ಬೇರೆ ಮಕ್ಕಳಿಗೆ ಅದು ಸ್ಫೂರ್ತಿಯಾಗಲಿದೆ ಎಂದು ಹೇಳಿದೆ.

ಸಂಗಾ ಸೇಸ್ ಎಂಬ ಪ್ರೊಫೈಲ್ ನಲ್ಲಿ ಬಾಲಕನ ಫೋಟೋ ಶೇರ್ ಆಗಿದೆ. ಮಿಜೋರಾಂನ ಸೈರಾಂಗ್ ಪ್ರದೇಶದ ಈ ಬಾಲಕ ತನ್ನ ಮನೆಯ ಮುಂದೆ ಸೈಕಲ್ ಓಡಿಸುತ್ತಿರುವಾಗ ಆಕಸ್ಮಿಕವಾಗಿ ಸೈಕಲ್ ನ ಚಕ್ರ ನೆರೆಮನೆಯವರ ಕೋಳಿಮರಿಯ ಮೇಲೆ ಹಾದುಹೋಗಿದೆ.  ತಕ್ಷಣವೇ ಬಾಲಕ ಸೈಕಲ್ ನ್ನು ಅಲ್ಲಿ ಬಿಸಾಕಿ ಕೋಳಿಮರಿಯನ್ನು ಕೈಗೆತ್ತಿಕೊಂಡು ತನ್ನ ಮನೆಯಲ್ಲಿ ಸಿಕ್ಕಿದ ಹಣವನ್ನು ಎತ್ತಿಕೊಂಡು ನೇರವಾಗಿ ಹತ್ತಿರದ ಆಸ್ಪತ್ರೆಗೆ ಓಡಿಹೋಗಿದ್ದಾನೆ. ಈ ಫೋಟೋ ನೋಡುವಾಗ ನಗು, ಅಳು ಎರಡೂ ಒಟ್ಟಿಗೆ ನನಗೆ ಬರುತ್ತಿರುತ್ತದೆ ಎಂದು ಸಂಗಾ ಬರೆದುಕೊಂಡಿದ್ದಾರೆ.

ಸಂಗಾ ಅವರ ಪ್ರೊಫೈಲ್ ನಿಂದ ಫೋಟೋ ವೈರಲ್ ಆಗಿದೆ. ಬಹುತೇಕರು ಇದನ್ನು ಶೇರ್ ಮಾಡಿ ಕಮೆಂಟ್ ಮಾಡಿದ್ದಾರೆ. ಬಾಲಕನ ತಂದೆ ತಮ್ಮ ಸ್ನೇಹಿತ ಎಂದು ಸಂಗಾ ಮಾಧ್ಯಮಗಳಿಗೆ ಹೇಳಿದ್ದಾರೆ.

ಬಾಲಕನ ಸೈಕಲ್ ಚಕ್ರ ಕೋಳಿಮರಿ ಮೇಲೆ ಹಾದುಹೋಗಿ ಅದು ಅಲ್ಲಿಯೇ ಮೃತಪಟ್ಟಿತ್ತು. ಅದನ್ನು ಮನೆಗೆ ತಂದು ತಂದೆ-ತಾಯಿಗೆ ತೋರಿಸಿದ್ದಾನೆ. ಅವರು ಕೋಳಿಮರಿ ಸತ್ತಿದೆ ಎಂದು ಹೇಳಿದ್ದಾರೆ. ಆದರೆ ಬಾಲಕ ಸಮಾಧಾನವಾಗದೆ ಹಣ ಹಿಡಿದುಕೊಂಡು ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ. ಅಲ್ಲಿ ಕೋಳಿ ಮರಿ ಸತ್ತುಹೋಗಿದೆ, ಮನೆಗೆ ತೆಗೆದುಕೊಂಡು ಹೋಗು ಎಂದಿದ್ದಾರೆ. ಆದರೆ ಮನೆಗೆ ಬಂದವನೇ 100 ರೂಪಾಯಿ ತೆಗೆದುಕೊಂಡು ಮತ್ತೊಂದು ಆಸ್ಪತ್ರೆಗೆ ಹೋಗಿದ್ದಾನೆ.

ಡೆರೆಕ್ ನ ಶಾಲೆಯಲ್ಲಿ ಅವನ ಪ್ರೀತಿ, ಕಾಳಜಿ, ದಯೆಯನ್ನು ಕಂಡು ಶಿಕ್ಷಕರು ಖುಷಿಯಿಂದ ಸನ್ಮಾನಿಸಿದ್ದಾರೆ.
Stay up to date on all the latest ವಿಶೇಷ news with The Kannadaprabha App. Download now
facebook twitter whatsapp