ಮುಖದಲ್ಲಿ ರಕ್ತ, ಕಣ್ಣಿಗೆ ಪಟ್ಟಿ, ಪಾಕ್ ಸೇನೆಯ ಜೀಪಿನಲ್ಲಿ ಕುಳಿತೇ ಪಾಕ್ ಸೈನಿಕರ ಕಾಲೆಳೆದಿದ್ದ ಐಎಎಫ್ ಪೈಲಟ್ ಅಭಿನಂದನ್, ವಿಡಿಯೋ ವೈರಲ್

ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ತಮಾನ್ ಪಾಕ್ ಸೇನೆಯ ಜೀಪಿನಲ್ಲಿ ಕುಳಿತೇ ಪಾಕಿಸ್ತಾನ ಸೈನಿಕರ ಕಾಳೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Published: 06th March 2019 12:00 PM  |   Last Updated: 06th March 2019 03:53 AM   |  A+A-


Watch: Wing Commander Abhinandan sarcastically trolls Pakistan army while in their custody

ಪಾಕ್ ಸೇನೆಯ ಕಾಲೆಳೆದ ಅಭಿನಂದನ್

Posted By : SVN SVN
Source : Online Desk
ನವದೆಹಲಿ: ಪಾಕಿಸ್ತಾನ ವಾಯುಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪಾಕಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವರ್ತಮಾನ್ ಪಾಕ್ ಸೇನೆಯ ಜೀಪಿನಲ್ಲಿ ಕುಳಿತೇ ಪಾಕಿಸ್ತಾನ ಸೈನಿಕರ ಕಾಲೆಳೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಭಾರತೀಯ ವಾಯು ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಅಲ್ಲಿದ್ದ ಜೈಶ್ ಉಗ್ರ ಸಂಘಟನೆಯ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದ ಬೆನ್ನಲ್ಲೇ ಪಾಕಿಸ್ತಾನ ವಾಯುಸೇನೆ ಕೂಡ ಭಾರತೀಯ ವಾಯುಗಡಿ ಉಲ್ಲಂಘಿಸಿ ಭಾರತದೊಳಗೆ ಪ್ರವೇಶ ಮಾಡಲು ಮುಂದಾಗಿತ್ತು. ಈ ವೇಳೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳಿಗೆ ಠಕ್ಕರ್ ನೀಡಿದ್ದ ಭಾರತೀಯ ವಾಯುಸೇನೆಯ ಯುದ್ಖ ವಿಮಾನಗಳು ಇದರಲ್ಲಿ ಯಶಸ್ವಿ ಕೂಡ ಆಗಿದ್ದವು. 

ಆಗಸದಲ್ಲಿ ನಡೆದ ಈ ಭೀಕರ ಕಾಳಗದಲ್ಲಿ ಭಾರತೀಯ ವಾಯುಸೇನೆಯ ಸಾಹಸೀ ಪೈಲಟ್ ಅಭಿನಂದನ್ ವರ್ತಮಾನ್ ಪಾಕ್ ಸೇನೆಯ ಎಫ್-16 ಯುದ್ದ ವಿಮಾನವನ್ನು ಹೊಡೆದುರುಳಿಸಿದ್ದರು. ಅಂತೆಯೇ ತಮ್ಮ ವಿಮಾನಕ್ಕೂ ಹಾನಿಯಾದ ಕಾರಣ ಅವರು ಎಮರ್ಜೆನ್ಸಿ ಇಜೆಕ್ಟ್ ಮೂಲಕ ಹೊರಗೆ ಹಾರಿ ಪಿಒಕೆ ಒಳಗೆ ಬಿದ್ದರು. ಅಲ್ಲಿ ಪಾಕಿಸ್ತಾನೀ ಸಾರ್ವಜನಿಕರ ಕೈಗೆ ಸಿಕ್ಕಿದ್ದ ಅಭಿನಂದನ್ ವರ್ತಮಾನ್ ರನ್ನು ಸಾರ್ವಜನಿಕರು ಸಾಮೂಹಿಕವಾಗಿ ಥಳಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಪಾಕಿಸ್ತಾನಿ ಸೈನಿಕರು ಅಭಿನಂದನ್ ರನ್ನು ರಕ್ಷಿಸಿ ತಮ್ಮ ವಶಕ್ಕೆ ಪಡೆದರು.

ಸಾರ್ವಜನಿಕರು ಥಳಿಸಿದ್ದರಿಂದ ರಕ್ತದ ಮಡುವಿನಲ್ಲಿದ್ದ ಅಭಿನಂದನ್ ರ ಕಣ್ಣಿಗೆ ಪಟ್ಟಿ ಕಟ್ಟಿದೆ ಪಾಕಿಸ್ತಾನದ ಸೈನಿಕರು ಅವರ ಕೈಗಳನ್ನೂ ಕೂಡ ಕಟ್ಟಿ ಹಾಕಿ ಜೀಪಿನಲ್ಲಿ ಕೂರಿಸಿಕೊಂಡು ತಮ್ಮ ಕ್ಯಾಂಪ್ ಗೆ ಕರೆದೊಯ್ದರು. ಮಾರ್ಗ ಮಧ್ಯೆ ಜೀಪಿನಲ್ಲಿದ್ದ ಪಾಕ್ ಸೇನೆಯ ಯೋಧ ಅಭಿನಂದನ್ ರನ್ನು ಪಾಕಿಸ್ತಾನ ಸೇನೆಯ ಕುರಿತು ನಿಮ್ಮ ಭಾವನೆ ಏನು ಎಂದು ಕೇಳುತ್ತಾನೆ. ಮುಖದಲ್ಲಿ ರಕ್ತ, ಕಣ್ಣಿಗೆ ಕಪ್ಪು ಪಟ್ಟಿ. ಕೈ ಕಟ್ಟಿ ಹಾಕಿಸಿಕೊಂಡಿರುವ ಅಭಿನಂದನ್ ಈ ಪ್ರಶ್ನೆಗೆ ಅಂತಹ ಕಠಿಣ ಸಂದರ್ಭದಲ್ಲೂ ಅಷ್ಟೇ ಹಾಸ್ಯಮಯವಾಗಿ ಉತ್ತರ ನೀಡಿದ್ದಾರೆ. 

ಅಭಿನಂದನ್ ನೀಡಿದ ಉತ್ತರಕ್ಕೆ ಪ್ರಶ್ನೆ ಕೇಳಿದ್ದ ಪಾಕ್ ಸೇನೆಯ ಯೋಧ ಕೂಡ ಅರೆ ಕ್ಷಣ ಮೌನವಾಗಿದ್ದ. ಅಭಿನಂದನ್ ಮತ್ತು ಪಾಕ್ ಸೈನಿಕನ ನಡುವೆ ನಡೆದ ಮಾತಿನ ಸಮರ ಈ ಕೆಳಗಿನಂತಿದೆ.

ಪಾಕಿಸ್ತಾನ ಯೋಧ: ಸೋ.. ವಿಂಗ್ ಕಮಾಂಡರ್ ಅಭಿ?
ಅಭಿನಂದನ್: (ಜೋರಾದ ಮತ್ತು ಸ್ಪಷ್ಟವಾದ ಧನಿಯಲ್ಲಿ) ಎಸ್ ಸರ್..!
ಪಾಕಿಸ್ತಾನ ಯೋಧ: ಪಾಕಿಸ್ತಾನದ ಯೋಧರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅಭಿನಂದನ್: ಪಾಕಿಸ್ತಾನ ಸೇನೆಯ ಬಗ್ಗೆ ನನಗೂ ಗೌರವವಿದೆ. ನಾನು ಪಿಒಕೆಯಲ್ಲಿ ಬಿದ್ದಾಗ ಖಂಡಿತಾ ನನ್ನನ್ನು ಹಿಡಿಯುವ ಯೋಧ ಪಾಕಿಸ್ತಾನದಲ್ಲಿ ಇದ್ದಾರೆ ಎಂಬ ಭರವಸೆ ನನಗಿತ್ತು. ಪಾಕಿಸ್ತಾನ ಸೇನೆಯಲ್ಲಿರುವವರೂ ಕೂಡ ಯೋಧರೇ ಅಲ್ಲವೇ.. ಇದೇ ಕಾರಣಕ್ಕೆ ನಾನು ನಿಮ್ಮನ್ನು ನೀವು ಪಾಕಿಸ್ತಾನಿ ಸೇನೆಗೆ ಸೇರಿದವರೇ ಎಂದು ಕೇಳಿದ್ದು ಎಂದು ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ಅಭಿನಂದನ್ ನೀಡಿದ ಉತ್ತರಕ್ಕೆ ಆ ಪ್ರಶ್ನೆ ಕೇಳಿದ್ದ ಸೈನಿಕ ಅರೆ ಕ್ಷಣ ಮೌನವಾಗಿರುವುದೂ ವಿಡಿಯೋದಲ್ಲಿ ದಾಖಲಾಗಿದೆ. ಒಟ್ಟಾರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಇನ್ನೂ ಈ ವಿಡಿಯೋವನ್ನು ಶಿವ್ ಅರೂರ್ ಎಂಬ ಪತ್ರಕರ್ತ ಶೇರ್ ಮಾಡಿದ್ದಾರೆ.
Stay up to date on all the latest ವಿಶೇಷ news with The Kannadaprabha App. Download now
facebook twitter whatsapp