ಮಹಿಳಾ ದಿನಾಚರಣೆ ವಿಶೇಷ: ಯೋಗಿನಿಯ ಸಾಧನೆ, ಯೋಗಪಟುವಿನ 'ಸೌಭಾಗ್ಯ'!

Multi tasking ಮಹಿಳೆಯರ ಸಾಧನೆಯ ಪಟ್ಟಿಗೆ ಈ ಯೋಗವೂ ಹೊರತಾಗಿಲ್ಲ. ಆಕೆ ಅದರಲ್ಲೂ ಛಾಪು ಮೂಡಿಸಬಲ್ಲಳು ಎಂಬುದಕ್ಕೆ ನಮ್ಮ ನಡುವೆಯೇ ಅನೇಕ ಉದಾಹರಣೆಗಳಿವೆ.. ಯೋಗಪಟು ಸಮೀಕ್ಷಾ....

Published: 08th March 2019 12:00 PM  |   Last Updated: 08th March 2019 08:25 AM   |  A+A-


Sameeksha

ಯೋಗಪಟು ಸಮೀಕ್ಷಾ

Posted By : SBV SBV
Source : Online Desk
ಮಹಿಳೆ ನಿತ್ಯ ನಿರಂತರ ಕಾಯಕಯೋಗಿ, ಆಕೆಗೆ ಬಹುಶಃ ನಿವೃತ್ತಿ ಎಂಬುದೇ ಇಲ್ಲ. ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ ಆಕೆಯ ಜವಾಬ್ದಾರಿ ನಿರ್ವಹಣೆ ಸುಧೀರ್ಘವಾದದ್ದು. ದಣಿವರಿಯದೆ ನಿರಂತರ ಜವಾಬ್ದಾರಿ ನಿರ್ವಹಿಸುವ ಮಹಿಳೆಯರಿಗೆ ದೈಹಿಕ-ಮಾನಸಿಕ ಒತ್ತಡ ನಿರ್ವಹಿಸಿಕೊಳ್ಳುವುದಕ್ಕೆ ಯೋಗ ಅತ್ಯಂತ ಪರಿಣಾಮಕಾರಿ ಮಾರ್ಗ. Multi tasking ಮಹಿಳೆಯರ ಸಾಧನೆಯ ಪಟ್ಟಿಗೆ ಈ ಯೋಗವೂ ಹೊರತಾಗಿಲ್ಲ. ಆಕೆ ಅದರಲ್ಲೂ ಛಾಪು ಮೂಡಿಸಬಲ್ಲಳು ಎಂಬುದಕ್ಕೆ ನಮ್ಮ ನಡುವೆಯೇ ಅನೇಕ ಉದಾಹರಣೆಗಳಿವೆ. 

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪದಕ ಗೆದ್ದಾಗ ಸಮೀಕ್ಷಾಗೆ ಕೇವಲ 5 ವರ್ಷ. ಈಗ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಯೋಗ ಪಟುಗಳನ್ನು ತಯಾರಿಸಿರುವ ಗುರು.  ಸ್ಪರ್ಧಾತ್ಮಕ ಯುಗದಲ್ಲಿ ಯೋಗಪಟು ಸಮೀಕ್ಷಾ ಹಾಗೂ ಅವರ ತಾಯಿ ಸೌಭಾಗ್ಯ ಮಹಿಳಾ ಯೋಗ ಸಾಧಕರಲ್ಲಿ ಗಮನಾರ್ಹರು. ಸಮೀಕ್ಷಾ ಯೋಗ, ಸೌಭಾಗ್ಯ ಯೋಗ ಕೇಂದ್ರದ ಕುರಿತು ಮಾಹಿತಿ ನೀಡುವ ಸಂದರ್ಶನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿದೆ. 

ನಿಮ್ಮ ಯೋಗ ಅಭ್ಯಾಸ ಪ್ರಾರಂಭವಾಗಿದ್ದು ಹೇಗೆ? ಪ್ರೇರಣೆ ಯಾರು?

ಯೋಗ ಕಲಿಯುವುದಕ್ಕೆ ನನಗೆ ಅಮ್ಮನೇ ಪ್ರೇರಣೆ, ಅವರೇ ಗುರು. ಅವರು ಬೆಂಗಳೂರು ಆಯುರ್ವೇದಿಕ್ ಕಾಲೇಜಿನಲ್ಲಿ ಯೋಗ-ಪ್ರಕೃತಿ ಚಿಕಿತ್ಸೆ (naturopathy) ಕೋರ್ಸ್ ಮಾಡಿದ್ದರು. ಯೋಗ ಕಲಿಕೆಗಾಗಿ ಅಮ್ಮ ಸುಮಾರು 36 ವರ್ಷಗಳಿಂದ ಸೌಭಾಗ್ಯ ಯೋಗ ಕೇಂದ್ರವನ್ನು ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಯೋಗ ತರಗತಿಗಳನ್ನು ಆರಂಭಿಸಿ ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ತರಗತಿಗಳಿಗೆ ಅಮ್ಮನ ಜೊತೆ ಹೋಗುತ್ತಿದ್ದರಿಂದ ಅದೇ ನನಗೆ ಪ್ರೇರಣೆಯಾಯಿತು. ಓದಿದ್ದು ಇಂಜಿನಿಯರಿಂಗ್, ಎಂ ಟೆಕ್ ಆದರೂ ಸಹ ನನ್ನ ಆಸಕ್ತಿಯ ಕ್ಷೇತ್ರ ಯೋಗ

ಯೋಗ ತರಗತಿಗಳಲ್ಲಿ ವಿದ್ಯಾರ್ಥಿಗಳ ತರಬೇತಿ ಹೇಗಿರುತ್ತೆ?

ಪ್ರತಿ ದಿನ 1 ಗಂಟೆ ತರಗತಿ ಇರುತ್ತೆ, 5-50 ವರ್ಷದ ವಯಸ್ಸಿನವರೆಗೂ ಎಲ್ಲರಿಗೂ ಯೋಗ ತರಬೇತಿ ನೀಡಲಾಗುತ್ತೆ. ಸೂರ್ಯನಮಸ್ಕಾರ ಬೇಸಿಕ್ ವಾರ್ಮಪ್, ಆಸನಗಳನ್ನು ಹೇಳಿಕೊಡಲಾಗುತ್ತೆ. ಮಕ್ಕಳನ್ನು ಯೋಗ ಸ್ಪರ್ಧೆಗೆ ಕರೆದೊಯ್ಯಲಾಗುತ್ತದೆ, ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಹೆಚ್ಚುವರಿ ತರಬೇತಿ ಇರುತ್ತೆ. ನನ್ನ ತರಗತಿಗಳಲ್ಲಿ ಕಲಿತವರು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಪಾಂಡಿಚರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾರೆ. ತರಬೇತಿ ನೀಡುವುದು ಸಂತಸದ ವಿಷಯ.

ಮಹಿಳೆ ಮತ್ತು ಯೋಗ ಈ ಬಗ್ಗೆ ಹೇಳುತ್ತೀರಾ?...

ಯೋಗ, ಪುರುಷರಿಗಿಂತಲೂ ಹೆಚ್ಚು ಮಹಿಳೆಯರಿಗೇ ಅಗತ್ಯವಿರೋದು, ಥಾರ್ಯಾಡ್, ಪಿಸಿಒಡಿ, ಅನಿಯಮಿತ ಋತುಸ್ರಾವ ಸೇರಿದಂತೆ ಮಹಿಳೆಯರನ್ನು ಕಾಡುವ ಹಲವು ಸಮಸ್ಯೆಗಳಿಗೆ ಮೆಡಿಕಲ್ ಚಿಕಿತ್ಸೆಗಿಂತಲೂ ಯೋಗದಲ್ಲೇ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬಹುದು. ಪಿಸಿಒಡಿ ಸಮಸ್ಯೆ ಇರುವ ಮಹಿಳೆಯರಿಗೆ ಯೋಗ ಮಾಡಲು ವೈದ್ಯರೇ ಸಲಹೆ ನೀಡುತ್ತಾರೆ. ಉದ್ಯೋಗಸ್ಥ ಮಹಿಳೆಯರಿಗಂತೂ ಒತ್ತಡದಿಂದ ಹೊರಬರುವುದಕ್ಕೆ ಯೋಗ ಅತ್ಯುತ್ತಮವಾದ ಮಾರ್ಗ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ತರಬೇತಿ ಪಡೆಯಲು ಬರುತ್ತಾರೆ. ಮಹಿಳೆಯರಿಗೆ ಯೋಗ ಕಲಿಯುವುದಕ್ಕೆ ಆಸಕ್ತಿ ಇರುತ್ತೆ. ಒಂದು ವಯಸ್ಸಿನವರೆಗೆ ಯೋಗ ಕಲಿಯುತ್ತಾರೆ ಕೂಡ. ಆದರೆ ಯಾವುದೇ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುವುದಿಲ್ಲ. ಸಾಂಪ್ರದಾಯಿಕವಾಗಿರುವವರು ಮಡಿವಂತಿಕೆ ಇರುವವರು ಯೋಗ ಉಡುಪು (yoga costume) ಧರಿಸಿ ಯೋಗದ ಭಂಗಿ ಪ್ರದರ್ಶಿಸುವಾಗ ಮುಜುಗರ ಉಂಟಾಗುತ್ತದೆಂಬ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಮುಂದಾಗುವುದಿಲ್ಲ. 
 
ಯೋಗಾಭ್ಯಾಸ ಪ್ರಾರಂಭಿಸುವುದಕ್ಕೆ ವಯಸ್ಸಿನ ಮಿತಿ ಇದೆಯೇ?

ಹಾಗೇನು ಇಲ್ಲ, ದೇಹದ ನಮ್ಯತೆ (flexibility) ಮುಖ್ಯವಾಗುತ್ತೆ. ಹೌದು ಎಳೆಯ ವಯಸ್ಸಿನಲ್ಲೇ ಯೋಗ ಪ್ರಾರಂಭಿಸಿದರೆ ಉತ್ತಮ,ಕೆಲವರಿಗೆ ದೇಹ ತುಂಬ Flexible ಆಗಿರುತ್ತೆ. ಈ ರೀತಿ ಇರುವವರು 18-19 ವಯಸ್ಸಿನಲ್ಲಿ ಪ್ರಾರಂಭಿಸಿದರೂ ಚೆನ್ನಾಗಿ ಯೋಗ ಕಲಿಯಬಹುದು.
  
ಅಂತಾರಾಷ್ಟ್ರ‍ೀಯ ಯೋಗ ದಿನಾಚರಣೆ ಘೋಷಣೆಯಾದ ನಂತರ ಯೋಗಾಭ್ಯಾಸದ ಕುರಿತ ದೃಷ್ಟಿಕೋನದಲ್ಲಿ ಗಮನಾರ್ಹ ಬದಲಾವಣೆ...?

ತುಂಬಾ ಬದಲಾವಣೆಯಾಗಿದೆ. ಯೋಗ ದಿನಾಚರಣೆ ಘೋಷಣೆಯಾಗುವುದಕ್ಕೂ ಮುನ್ನ ಯೋಗ ಅಂದರೆ ಏನು ಎಂದು ಗೊತ್ತಿಲ್ಲದವರೂ ಇದ್ದರು, ಇನ್ನೂ ಹಲವರು ಅದನ್ನು ಕೇವಲ ವ್ಯಾಯಾಮ ಎಂದುಕೊಂಡಿದ್ದರು. ಮತ್ತೆ ಕೆಲವರಿಗೆ ಯೋಗ ಎಂದರೇನು ಎಂಬುದನ್ನು ವಿವರಿಸಬೇಕಾಗುತ್ತಿತ್ತು. ಹೆಚ್ಚು ಗುರುತಿಸುತ್ತಿರಲಿಲ್ಲ. ಅಥವಾ ಏನಾದರು ಸಮಸ್ಯೆ ಇದ್ದರೆ ಮಾತ್ರ ಯೋಗ ಕಲಿಯಲು ಬರುತ್ತಿದ್ದರು. 2007 ರಿಂದ ನಾನು ಯೋಗ ತರಗತಿಗಳನ್ನು ನಡೆಸುತ್ತಿದ್ದೇನೆ. ಆಗೆಲ್ಲಾ ಯೋಗ ಕಲಿಯಲು ಬರುವವರ ಸಂಖ್ಯೆ ತುಂಬ ಕಡಿಮೆ ಇತ್ತು. ಯೋಗ ದಿನಾಚರಣೆ ಘೋಷಣೆಯಾದಾಗಿನಿಂದ ಟ್ರೆಂಡ್ ಪ್ರಾರಂಭ ಆಯ್ತು. ಆರೋಗ್ಯಕ್ಕಾಗಿ, ಏಕಾಗ್ರತೆಗಾಗಿ ಯೋಗ ಮಾಡಬೇಕೆಂಬ ಜಾಗೃತಿ ಮೂಡಿದೆ. ಮಹತ್ವ ತಿಳಿದಿದೆ. 

ಜನಸಾಮಾನ್ಯರಿಗೆ ವೈದ್ಯರು ಅಗತ್ಯ, ವೈದ್ಯರಿಗೂ ಯೋಗ ಅಗತ್ಯ, ನಿಮ್ಮ ಬಳಿ ವೈದ್ಯರು ಯೋಗಾಭ್ಯಾಸ ಕಲಿಯಲು ಬಂದಿರುವ ಉದಾಹರಣೆ ಇದೆಯೇ?

ಹೌದು, ವೈದ್ಯರಿ ಹಲವು ವೈದ್ಯರಿಗೆ ನಾನು ಮತ್ತು ನನ್ನ ತಾಯಿ ಯೋಗ ತರಬೇತಿ ನೀಡುತ್ತಿದ್ದೇವೆ. ಪರ್ಸನಲ್ ಕೋಚಿಂಗ್ ಮೂಲಕ  ವೈದ್ಯರು ಯೋಗ ತರಬೇತಿ ಪಡೆಯುತ್ತಿದ್ದಾರೆ. ವೈದ್ಯರಷ್ಟೆ ಅಲ್ಲದೇ ಪೊಲೀಸ್ ಇಲಾಖೆಯಲ್ಲಿರುವವರೂ ತರಬೇತಿ ಪಡೆಯುತ್ತಿದ್ದಾರೆ.  

ಯೋಗವನ್ನು standardize ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಯೋಗದಲ್ಲಿ Standard protocol ಅಂತ ಇಲ್ಲ. ಯೋಗದಲ್ಲಿ ಒಟ್ಟಾರೆ 84 ಲಕ್ಷ ಆಸನಗಳಿವೆ. ಸಾಂಪ್ರದಾಯಿಕವಾಗಿ ಯೋಗ ತರಬೇತಿ ನೀಡುವವರು ಸಾಮಾನ್ಯವಾಗಿ ಪತಂಜಲಿ ಯೋಗ, ಬಿಕೆಎಸ್ ಅಯ್ಯಂಗಾರ್ ಅವರ ಯೋಗವನ್ನು ಅನುಸರಿಸುತ್ತಾರೆ. ಅದರಲ್ಲಿಯೂ ತರಬೇತಿ ನೀಡುವವರು ತಮ್ಮ ಬಳಿ ಬರುವವರ ಆರೋಗ್ಯ ಗಮನದಲ್ಲಿಟ್ಟುಕೊಂಡು ಸೂಕ್ತವಾದ ಆಸನಗಳನ್ನು ಹೇಳಿಕೊಡುತ್ತಾರೆ. ಆದರೆ ಈಗೆಲ್ಲಾ, ಸಾಂಪ್ರದಾಯಿಕ ಯೋಗವನ್ನು ಆಧುನೀಕರಣಗೊಳಿಸಿ ಪವರ್ ಯೋಗ ಸೇರಿದಂತೆ ಹೊಸ ಮಾದರಿಯ ಯೋಗಗಳನ್ನ ಹೇಳಿಕೊಡಲಾಗುತ್ತಿದೆ. ಆದರೆ ಸೂರ್ಯನಮಸ್ಕಾರ ಸಹಿತ ಅಷ್ಟಾಂಗ ಯೋಗ ಉತ್ತಮವಾದದ್ದು. ಯೋಗವನ್ನು ತೀರಾ ಆಧುನೀಕರಣಗೊಳಿಸಿ ಮೂಲವನ್ನೇ ಮರೆಯುವಂತೆ ಇರಬಾರದು. 

ಸ್ಪರ್ಧಾತ್ಮಕ ವೇದಿಕೆಗಳಲ್ಲಿ ಮಹಿಳಾ ಯೋಗ ಪಟುಗಳಿಗಿರುವ ಸವಾಲುಗಳು.... 

ಯೋಗವನ್ನು ಕ್ರೀಡೆಯಾಗಿ ಪರಿಗಣಿಸಬೇಕು.... 

ಪ್ರಶ್ನೆ: ಯೋಗವನ್ನು ಕ್ರೀಡೆಯಾಗಿಯೇ ಏಕೆ ಪರಿಗಣಿಸಬೇಕು? 

ಕ್ರೀಡೆಯಾಗಿ ಪರಿಗಣಿಸಿದರೆ ಒಲಂಪಿಕ್ಸ್ ನಲ್ಲಿ ಯೋಗ ಪಟುಗಳೂ ಭಾಗವಹಿಸಲು ಸಾಧ್ಯವಾಗುತ್ತದೆ. ಬೇರೆಲ್ಲಾ ಕ್ರೀಡೆಗಳಿಗೂ ಫೆಡರೇಷನ್ ಗಳಿಗೆ ಅದರದ್ದೇ ಆದ ಸಂಸ್ಥೆಗಳಿವೆ ಆದರೆ ಯೋಗಕ್ಕೆ ಬೇರೆ ಕ್ರೀಡೆಗಳಿಗಿರುವ ರೀತಿಯ ವ್ಯವಸ್ಥೆ ಇಲ್ಲ. ಯೋಗ ಪಟುಗಳಿಗೆ ಹೆಚ್ಚು ಉತ್ತೇಜನ ಸಿಗುವಂತಾಗಬೇಕು.

ಅತಿ ಸಣ್ಣ ವಯಸ್ಸಿನಲ್ಲಿಯೇ 350 ಕ್ಕೂ ಹೆಚ್ಚು ಪ್ರಶಸ್ತಿಗಳು, ಭಾರತ ಯೋಗ ನಿಧಿ ಸೇರಿದಂತೆ 18 ಕ್ಕೂ ಹೆಚ್ಚು ಟೈಟಲ್ ಅವಾರ್ಡ್ ಗಳು ಇವರನ್ನು ಅರಸಿ ಬಂದಿರುವುದು ಸಮೀಕ್ಷೆ ಯೋಗ ಸಾಧನೆಗೆ ನಿದರ್ಶನ.
Stay up to date on all the latest ವಿಶೇಷ news with The Kannadaprabha App. Download now
facebook twitter whatsapp