ತಿರುಪತಿ ತಿಮ್ಮಪ್ಪನ ಬಳಿ ಚಿನ್ನದ ಸಂಪತ್ತು ಎಷ್ಟಿದೆ ಗೊತ್ತೇ?

ಜಗತ್ತಿನ ಶ್ರೀಮಂತ ಹಿಂದೂ ದೇವಾಲಯ ತಿರುಪತಿ ದೇವಾಲಯದಲ್ಲಿ ಅಗಾಧ ಪ್ರಮಾಣದ ಚಿನ್ನವಿದೆ ...
ತಿರುಪತಿ ದೇವಾಲಯ
ತಿರುಪತಿ ದೇವಾಲಯ
ಹೈದರಾಬಾದ್: ಜಗತ್ತಿನ ಶ್ರೀಮಂತ ಹಿಂದೂ ದೇವಾಲಯ ತಿರುಪತಿಯಲ್ಲಿ ಅಗಾಧ ಪ್ರಮಾಣದಲ್ಲಿ ಚಿನ್ನದ ಸಂಪತ್ತು ಇದೆ ಎಂದು ಹೇಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಅದು ಎಷ್ಟಿದೆ ಎಂದರೆ ನೀವು ಹೌಹಾರುವುದು ಖಂಡಿತ.
ಆಂಧ್ರ ಪ್ರದೇಶದ ತಿರುಪತಿಯ ವಿಶ್ವವಿಖ್ಯಾತ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ವ್ಯವಹಾರಗಳು ಮತ್ತು ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್(ಟಿಟಿಡಿ) 7 ಸಾವಿರದ 235 ಕೆಜಿ ತೂಕದ ಚಿನ್ನವನ್ನು ಎರಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿವಿಧ ಚಿನ್ನದ ಠೇವಣಿ ಯೋಜನೆಗಳಡಿ ಠೇವಣಿಯಿರಿಸಿದೆ ಎಂದು ತಿಳಿದುಬಂದಿದೆ.
ತಿರುಪತಿ ದೇವಸ್ಥಾನ ಮಂಡಳಿ ತನ್ನ ಖಜಾನೆಯಲ್ಲಿ 1,934 ಕೆಜಿ ಚಿನ್ನವನ್ನು ಹೊಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಮೂರು ವರ್ಷಗಳ ಅವಧಿಗೆ ದೇವಸ್ಥಾನದ ಚಿನ್ನ ಠೇವಣಿಯಿರಿಸಿದ್ದ ಅವಧಿ ಮುಗಿದಿದ್ದರಿಂದ ಬ್ಯಾಂಕಿನಿಂದ 1,381 ಕೆಜಿ ಚಿನ್ನ ತಿರುಪತಿಗೆ ವಾಪಸ್ಸು ಬಂದಿದೆ.
ಈ ಚಿನ್ನವನ್ನು ಯಾವ ಬ್ಯಾಂಕಿನಲ್ಲಿ ಇನ್ನು ಇರಿಸುವುದು ಎಂಬ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಇನ್ನೂ ನಿರ್ಧಾರ ಮಾಡಿಲ್ಲ. ಹಲವು ಚಿನ್ನದ ಠೇವಣಿ ಯೋಜನೆಗಳನ್ನು ಪರಿಶೀಲಿಸಿದ ನಂತರ ಯಾವುದರಲ್ಲಿ ಹೂಡಿಕೆ ಮಾಡಿದರೆ ಉತ್ತಮ ಬಡ್ಡಿ ಸಿಗಬಹುದೆಂದು ಎಂಬ ಲೆಕ್ಕ ಹಾಕುತ್ತಿದೆಯಂತೆ. ಟಿಟಿಡಿ ಖಜಾನೆಯಲ್ಲಿರುವ ಉಳಿದ 553ಕೆಜಿ ಚಿನ್ನ ಭಕ್ತಾದಿಗಳು ಹರಕೆಯ ರೂಪದಲ್ಲಿ ನೀಡಿರುವ ಸಣ್ಣಪುಟ್ಟ ಜ್ಯುವೆಲ್ಲರಿಗಳಾಗಿವೆ.
ಸಾಮಾನ್ಯವಾಗಿ ದೇವಸ್ಥಾನದಲ್ಲಿರುವ ಚಿನ್ನದ ಬಗ್ಗೆ ವಿವಾದ ಹುಟ್ಟಿಕೊಳ್ಳಬಾರದೆಂದು ಆಡಳಿತ ಮಂಡಳಿ ಎಲ್ಲೂ ಮಾಹಿತಿ ಬಿಟ್ಟುಕೊಡುತ್ತಿರಲಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಿಂದಾಗಿ ಕಳೆದ ತಿಂಗಳು ತಮಿಳುನಾಡಿನಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು 1,381 ಕೆಜಿ ಚಿನ್ನವನ್ನು ಪರಿಶೀಲಿಸಿದ ನಂತರ ಈ ಎಲ್ಲಾ ವಿಚಾರ ಬೆಳಕಿಗೆ ಬಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಟ್ರಕ್ ನಲ್ಲಿ ಕಳೆದ ತಿಂಗಳು ಏಪ್ರಿಲ್ 17ರಂದು ಚೆನ್ನೈ ಶಾಖೆಯಿಂದ ತಿರುಪತಿಗೆ ಚಿನ್ನವನ್ನು ವರ್ಗಾಯಿಸುವಾಗ ತಿರುವಲ್ಲೂರು ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳು ತಪಾಸಣೆಗೆಂದು ವಾಹನವನ್ನು ತಡೆದು ನಿಲ್ಲಿಸಿದ್ದರು. ಆಗ ಅದು ತಿರುಪತಿಗೆ ಸೇರಿದ ಚಿನ್ನ ಎಂದು ಗೊತ್ತಾಗಿದೆ.
ಆರಂಭದಲ್ಲಿ ವಶಪಡಿಸಿಕೊಂಡ ಚಿನ್ನ ತಮ್ಮದೆಂದು ಒಪ್ಪಿಕೊಳ್ಳಲು ಟಿಟಿಡಿ ನಿರಾಕರಿಸಿತ್ತು. ಚಿನ್ನ ದೇವಸ್ಥಾನಕ್ಕೆ ಮರಳಿ ಬರುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿಗೇ ಗೊತ್ತಿಲ್ಲ ಎಂದು ಆರೋಪ ಕೇಳಿಬಂದ ಮೇಲೆ ತನ್ನನ್ನು ಸಮರ್ಥಿಸಿಕೊಂಡಿದ್ದ ಟಿಟಿಡಿ, ದೇವಸ್ಥಾನದ ಖಜಾನೆಗೆ ಮರಳುವವರೆಗೆ ಅದು ತನ್ನ ಚಿನ್ನವೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು.
ತಿರುಪತಿ ದೇವಸ್ಥಾನದ ಚಿನ್ನವೆಂದು ಪಂಜಾಬ್ ನ್ಯಾಷನಲ್ ಬ್ಯಾಂಕು ಆದಾಯ ತೆರಿಗೆ ಇಲಾಖೆಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಎರಡು ದಿನಗಳ ನಂತರವಷ್ಟೇ ಚಿನ್ನ ತಿರುಪತಿಯ ಖಜಾನೆಗೆ ತಲುಪಿದ್ದು.
ಚಿನ್ನವನ್ನು ಬ್ಯಾಂಕ್ ನಿಂದ ಬಿಡಿಸಿ ಟ್ರಕ್ ನಲ್ಲಿ ವರ್ಗಾಯಿಸುವಾಗ ಆದ ಲೋಪದೋಷಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ ವಿ ಸುಬ್ರಹ್ಮಣ್ಯಂ ಆದೇಶ ನೀಡಿದ ನಂತರ ತಿರುಪತಿ ದೇವಸ್ಥಾನ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಗಲ್ ಎಲ್ಲಾ ವಿವರಗಳನ್ನು ನೀಡಿದ್ದರು. ಇದರಿಂದ ದೇವಸ್ಥಾನದಲ್ಲಿನ ಚಿನ್ನದ ಬಗ್ಗೆ ಮಾಹಿತಿ ಸಿಕ್ಕಿದೆ.
ಬಾಲಾಜಿ ದೇವಸ್ಥಾನ ಎಂದು ಸಹ ಕರೆಯಲ್ಪಡುವ ತಿರುಪತಿಯಿಂದ 2016ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1,311 ಕೆಜಿ ಚಿನ್ನವನ್ನು ಠೇವಣಿ ಇರಿಸಿದ್ದರೆ, ಅದಕ್ಕೆ 70 ಕೆಜಿ ಚಿನ್ನ ಬಡ್ಡಿ ಸೇರಿಸಿ ಈ ವರ್ಷ ಬ್ಯಾಂಕ್ ಹಿಂತಿರುಗಿಸಿತು.
ಇನ್ನು ದೇವಸ್ಥಾನದ 5,387 ಕೆಜಿ ಚಿನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮತ್ತು 1,938 ಕೆಜಿ ಚಿನ್ನ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ಠೇವಣಿಯಿದೆ. ಕಳೆದ ಎರಡು ದಶಕಗಳಲ್ಲಿ ಟಿಟಿಡಿ ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಚಿನ್ನವನ್ನು ಠೇವಣಿಯಿಡುತ್ತಾ ಬಂದಿದೆ.
ರಿಸರ್ವ್ ಬ್ಯಾಂಕ್ 2015ರಲ್ಲಿ ಚಿನ್ನದ ಹಣಗಳಿಕೆ ಯೋಜನೆ ಜಾರಿ ತಂದ ನಂತರ ಚಿನ್ನದ ರೂಪದಲ್ಲಿಯೇ ಬಡ್ಡಿ ನೀಡಲಾಗುವುದು ಎಂದು ಘೋಷಣೆಯಾದ ನಂತರವಷ್ಟೇ ಟಿಟಿಡಿ ಅನೇಕ ಸಾರ್ವಜನಿಕ ಬ್ಯಾಂಕುಗಳಲ್ಲಿ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿ ಯೋಜನೆಗಳಡಿಯಲ್ಲಿ ಚಿನ್ನವನ್ನು ಠೇವಣಿಯಿಡುತ್ತಾ ಬಂದಿದೆ.
ವಿಶ್ವವಿಖ್ಯಾತ ತಿರುಪತಿ ದೇವಸ್ಥಾನ ಕ್ರಿಸ್ತಶಕ 300ರಲ್ಲಿ ನಿರ್ಮಾಣವಾಗಿದ್ದು ಎಂದು ಹೇಳಲಾಗುತ್ತಿದ್ದು ಪ್ರತಿದಿನ ಇಲ್ಲಿಗೆ ಸುಮಾರು 50 ಸಾವಿರದಿಂದ 1 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಇನ್ನು ವಿಶೇಷ ಹಬ್ಬಹರಿದಿನಗಳಲ್ಲಿ, ವಾರ್ಷಿಕ ಬ್ರಹ್ಮೋತ್ಸವಗಳ ಸಂದರ್ಭಗಳಲ್ಲಿ ಭಕ್ತಾದಿಗಳ ಸಂಖ್ಯೆ 4ರಿಂದ 5 ಲಕ್ಷಕ್ಕೆ ಏರಿಕೆಯಾಗುತ್ತದೆ.
ಹೀಗೆ ಬರುವ ಭಕ್ತರು ತಮ್ಮ ಹರಕೆ ಮತ್ತು ಭಕ್ತಿಯನ್ನು ತಮ್ಮ ಶಕ್ತಾನುಸಾರ ಹಣ, ಚಿನ್ನ, ಬೆಳ್ಳಿ ರೂಪದಲ್ಲಿ ಮಾತ್ರವಲ್ಲದೆ ಆಸ್ತಿ ಸ್ವತ್ತು ಮತ್ತು ಡಿಮ್ಯಾಟ್ ಷೇರುಗಳ ರೂಪದಲ್ಲಿ ಸಹ ವೆಂಕಟೇಶ್ವರನಿಗೆ ಅರ್ಪಿಸುವುದುಂಟು.
ತಿರುಪತಿಗೆ ಬರುವ ಹರಕೆಗಳಲ್ಲಿ ಪ್ರತಿವರ್ಷ ಸಾವಿರದಿಂದ 1,200 ಕೋಟಿ ರೂಪಾಯಿಗಳವರೆಗೆ ಹುಂಡಿ ಹಣದ ರೂಪದಲ್ಲಿ ಬರುತ್ತದೆಯಂತೆ. 2019-20ರಲ್ಲಿ ತಿರುಪತಿ ದೇವಸ್ಥಾನಕ್ಕೆ ಸುಮಾರು 3,116 ಕೋಟಿ ರೂಪಾಯಿ ಆದಾಯ ಬಂದಿದ್ದು, ಅದರಲ್ಲಿ 1,231 ಕೋಟಿ ರೂಪಾಯಿ ಹರಕೆಗಳಿಂದ ಮತ್ತು 846 ಕೋಟಿ ರೂಪಾಯಿ ವಿವಿಧ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಠೇವಣಿಯಿರಿಸಿದ ಹಣದಿಂದ ಬಂದ ಬಡ್ಡಿಯ ಮೊತ್ತವಾಗಿದೆ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ದೇವಸ್ಥಾನದ ಆಡಳಿತ ಮಂಡಳಿ ವಿವಿಧ ಬ್ಯಾಂಕುಗಳಲ್ಲಿ 12 ಸಾವಿರ ಕೋಟಿ ರೂಪಾಯಿಗೂ ಅಧಿಕ ನಿಶ್ಚಿತ ಠೇವಣಿಯಿರಿಸಿದೆ. ವಾರ್ಷಿಕವಾಗಿ ಚಿನ್ನದ ಠೇವಣಿಯಿಂದ 100 ಕೆಜಿಯಷ್ಟು ಬಡ್ಡಿ ಚಿನ್ನ ಸಿಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com