ಸಂಪ್ರದಾಯ ಬದಿಗೊತ್ತಿ ಹೆಣ್ಣು-ಗಂಡು ಮಕ್ಕಳಿಬ್ಬರಿಗೂ ಉಪನಯನ ಮಾಡಿಸಿದ ಪೋಷಕರು!

ನಾವೆಲ್ಲ ಲಿಂಗ ತಾರತಮ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ ಜೀವನದಲ್ಲಿ ಅಳವಡಿಸಿಕೊಳ್ಳುವವರು ...
ಮಕ್ಕಳ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ದಂಪತಿ
ಮಕ್ಕಳ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ದಂಪತಿ
ಬೆಂಗಳೂರು: ಲಿಂಗ ತಾರತಮ್ಯದ ಬಗ್ಗೆ ನಾವೆಲ್ಲಾ ಮಾತನಾಡುತ್ತೇವೆ. ಆದರೆ ವಾಸ್ತವವಾಗಿ ಜೀವನದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಕಾಣುವವರು ಕಡಿಮೆ ಮಂದಿ. ಬೆಂಗಳೂರಿನ ವಕೀಲೆಯೊಬ್ಬರು ಸಮಾಜದ ಎಲ್ಲಾ ಸಂಪ್ರದಾಯಗಳನ್ನು ಬದಿಗೊತ್ತಿ ತಮ್ಮ ಅವಳಿ ಮಕ್ಕಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಬ್ರಹ್ಮೋಪದೇಶ ಮಾಡಿಸಿದ್ದಾರೆ.
ಹಿಂದೂ ಧರ್ಮದ ಬ್ರಾಹ್ಮಣ ಪಂಗಡದಲ್ಲಿ ಗಂಡು ಮಕ್ಕಳಿಗೆ ಉಪನಯನ ಸಂಸ್ಕಾರ ಮಾಡುವ ಪದ್ಧತಿಯಿದೆ. ಅಡ್ವೊಕೇಟ್ ಕ್ಷಮ ನರಗುಂದ ಮತ್ತು ಅವರ ಪತಿ ಉದ್ಯಮಿ ವೈವಸ್ವತ ತಮ್ಮ ಅವಳಿ ಮಕ್ಕಳಾದ ಸಂವಿತಾ ಬಾನಾವತಿ ಮತ್ತು ಅಸ್ಮಿತಾ ಬಾಲಾವತಿಯವರಿಗೆ ಒಟ್ಟಿಗೆ ಬ್ರಹ್ಮೋಪದೇಶ ಮಾಡಿದ್ದಾರೆ. ಈ ಮಕ್ಕಳಿಗೆ ಇನ್ನೊಂದೆರಡು ವಾರ ಕಳೆದರೆ 8 ವರ್ಷ ತುಂಬುತ್ತದೆ.
ಹೆಣ್ಣು ಮಕ್ಕಳಿಗೆ ಸಹ ಉಪನಯನ ಮಾಡುವುದು ಹಿಂದೂ ಧರ್ಮದ ಶಾಸ್ತ್ರದಲ್ಲಿದೆ. ಆ ಬಗ್ಗೆ ನಾನು ಓದಿದ್ದೇನೆ. ನಾವು ವೇದ, ಶಾಸ್ತ್ರಗಳ ತಜ್ಞರು, ಪಂಡಿತರ ಸಲಹೆ ಪಡೆದು ನಮ್ಮ ಮಗಳಿಗೆ ಸಹ ಜನಿವಾರ ಹಾಕಲು ನಿರ್ಧರಿಸಿದೆವು. ಈ ಸಂಪ್ರದಾಯ ಪುರಾಣಗಳಲ್ಲಿತ್ತು. ಅದರ ಪ್ರಕಾರ ನಾವು ಈ ಆಚರಣೆ ಮಾಡಿದೆವು ಎನ್ನುತ್ತಾರೆ ಅಡ್ವೊಕೇಟ್ ಕ್ಷಮಾ.
ಈ ಸಂಪ್ರದಾಯ ಮಾಡಿದಾಗ ಸಹಜವಾಗಿ ಸಂಬಂಧಿಕರು ಮತ್ತು ಸ್ನೇಹಿತರಿಂದ ದಂಪತಿಗೆ ಪ್ರಶ್ನೆಗಳು ಎದುರಾಗಿದ್ದವಂತೆ. ಯಾಕಿದು, ಹೇಗೆ ಮಗಳಿಗೆ ಉಪನಯನ ಮಾಡುತ್ತೀರಿ ಎಂದು ಕೇಳಿದ್ದರಂತೆ. ಹೇಗೆ ಕಾರ್ಯಕ್ರಮ ಮಾಡುತ್ತಾರೆ ಎಂದು ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಸಹ ಕುತೂಹಲವಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com