ಕೊಪ್ಪಳ: ರಸ್ತೆ, ಬಸ್ ಇಲ್ಲದ್ದಕ್ಕೆ ಕನ್ಯೆ ಕೊಡ್ತಿಲ್ಲ,ಯುವಕರ ಗೋಳು!

ಈ ಊರಲ್ಲಿ ಹುಡುಗನಿಗೆ ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೂ, ಉತ್ತಮ ಮನೆತನ ಎನ್ನುವ ಹೆಸರಿದ್ದರೂ ಗ್ರಾಮದ ಯುವಕರಿಗೆ ಕನ್ಯೆ ಕೊಡಲ್ಲ

Published: 14th November 2019 04:23 PM  |   Last Updated: 14th November 2019 06:28 PM   |  A+A-


RoadInGanadalaVillage1

ಗಾಣದಾಳ ಗ್ರಾಮದ ತುಂಗಭದ್ರಾ ಕಾಲುವೆ ಮೇಲಿನ ದಾರಿ

Posted By : Nagaraja AB
Source : RC Network

ಕೊಪ್ಪಳ: ಹುಡುಗನಿಗೆ ಕೆಲಸ ಇರದಿದ್ದರೆ, ಮನೆತನ ಸರಿ ಇಲ್ಲದಿದ್ದರೆ ಕನ್ಯೆ ಸಿಗಲ್ಲ ಅನ್ನೋದನ್ನ ಕೇಳಿರ್ತಿವಿ, ನೋಡಿರ್ತಿವಿ. ಆದರೆ ಈ ಊರಲ್ಲಿ ಹುಡುಗನಿಗೆ ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೂ, ಉತ್ತಮ ಮನೆತನ ಎನ್ನುವ ಹೆಸರಿದ್ದರೂ ಗ್ರಾಮದ ಯುವಕರಿಗೆ ಕನ್ಯೆ ಕೊಡಲ್ಲ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಗುಳದಾಳ ಗ್ರಾಮಕ್ಕೆ ಈವರೆಗೂ ರಸ್ತೆ ಸೌಕರ್ಯ, ಬಸ್ ಸಂಪರ್ಕ ಇಲ್ಲದಿರುವುದು!

ಇದು ಅಚ್ಚರಿಯಾದರೂ ನಿಜ. ಗುಳದಾಳ ಗ್ರಾಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರದ ಹನವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ. ಸುಮಾರು 120 ಮನೆ, 650 ಜನಸಂಖ್ಯೆ ಇರುವ ಪುಟ್ಟಗ್ರಾಮ ಗುಳದಾಳ. ಮಸಾರಿ ಕ್ಯಾಂಪ್ ಎಂತಲೂ ಕರೆಯುವ ಈ ಗ್ರಾಮ ಗಂಗಾವತಿ-ಕನಕಗಿರಿ ರಸ್ತೆಯ ಕೆಸರಟ್ಟಿ ರಾಜ್ಯ ಹೆದ್ದಾರಿ ಬಳಿ ಬರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಹೊಂದಿಕೊಂಡಿದೆ. 

ವಿಚಿತ್ರ ಎಂದರೆ ಚುನಾವಣಾ ಸಂದರ್ಭದಲ್ಲಿ ಎದ್ದೋ, ಬಿದ್ದೋ ಗ್ರಾಮಕ್ಕೆ ಬರುವ ರಾಜಕೀಯ ಪಕ್ಷಗಳ ಮುಖಂಡರು ಮತಭಿಕ್ಷೆ ಬೇಡಿ, ಗೆದ್ದ ನಂತರ ಒಮ್ಮೆಯೂ ತಿರುಗಿ ನೋಡಿದ ಉದಾಹರಣೆಗಳಿಲ್ಲ. ತುಂಗಭದ್ರಾ ಎಡದಂಡೆ ಕಾಲುವೆ ನಿರ್ಮಾಣಕ್ಕಿಂತ ಮುಂಚೆ ಗ್ರಾಮಕ್ಕೆ ರಸ್ತೆ ಇತ್ತು. ಅದೇ ರಸ್ತೆಯಲ್ಲಿ ಕಾಲುವೆ ಬಂದಿದ್ದರಿಂದ ಈಗ ಕಾಲುವೆ ಪಕ್ಕದ ಕಾಲುದಾರಿಯೇ ಗ್ರಾಮಸ್ಥರಿಗೆ ರಾಜಮಾರ್ಗದಂತೆ ಭಾಸವಾಗುತ್ತಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ

ಮಳೆಗಾಲದಲ್ಲಂತು ಗ್ರಾಮಕ್ಕಿರುವ ಈ ಏಕೈಕ ರಸ್ತೆಯ ಮೇಲೆ ಜನರು ಓಡಾಡಬೇಕಿರುವುದರಿಂದ ತಗ್ಗು ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡ ನಿದರ್ಶನಗಳಿವೆ. ಇದುವರೆಗೂ ಈ ಗ್ರಾಮ ಬಸ್ ಸಂಪರ್ಕವನ್ನ ಕಂಡಿಲ್ಲ. ರಸ್ತೆನೇ ಇಲ್ಲಅಂದ ಮೇಲೆ ಬಸ್ ಎಲ್ಲಿಯದು? ಅಂತಾರೆ ಗ್ರಾಮಸ್ಥರು

ಸಂಸದ, ಶಾಸಕ, ಜಿಪಂ ಸದಸ್ಯ, ತಾಪಂ ಸದಸ್ಯರಾದಿಯಾಗಿ ಕಂಡಕಂಡ ಜನಪ್ರತಿನಿಧಿಗಳೆಲ್ಲ, ಅಧಿಕಾರಿಗಳೆಲ್ಲ ನಮ್ಮೂರಿಗೆ ರಸ್ತೆ ಕೊಡಿ, ಬಸ್ ಬಿಡಿ ಎಂದು ಮನವಿ ಕೊಟ್ಟದ್ದಾಗಿದೆ. ಅಲವತ್ತುಕೊಂಡದ್ದಾಗಿದೆ, ಪ್ರತಿಭಟನೆಯನ್ನೂ ಮಾಡಿದ್ದಾಗಿದೆ. ನಯಾಪೈಸೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಖಾಜಾಸಾಬ್.

ಇವತ್ತಿನ ಮುಂದುವರಿದ ದಿನಗಳಲ್ಲಿ ಗ್ರಾಮಕ್ಕೆ ರಸ್ತೆ, ಬಸ್ ಸೌಕರ್ಯ ಕಲ್ಪಿಸುವುದು ಯಾವ ಸರಕಾರಕ್ಕೂ ದೊಡ್ಡ ಸಂಗತಿಯೇ ಅಲ್ಲ. ಜನರಿಗೆ ಸವಲತ್ತು ಕಲ್ಪಿಸುವ ಇಚ್ಛಾಶಕ್ತಿ ಸ್ಥಳೀಯ ಜನಪ್ರತಿನಿಧಿಗಳಿಗೆ ಇರಬೇಕು. ಈಗಿನ ಶಾಸಕ ಬಸವರಾಜ ದಢೇಸೂಗೂರು ಅಭಿವೃದ್ಧಿಯತ್ತ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗಾಣದಾಳ ಗ್ರಾಮದ ಅಲಿಸಾಬ್.

ಆರೋಗ್ಯ-ಶಿಕ್ಷಣ-ಮದುವೆಗೆ ಕೊಕ್ಕೆ:
ರಸ್ತೆ ಇಲ್ಲದ್ದರಿಂದ ಗ್ರಾಮದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದನ್ನೇ ಬಿಟ್ಟಿದ್ದಾರೆ. 5ನೇ ತರಗತಿವರೆಗೆ ಮಾತ್ರ ಗ್ರಾಮದಲ್ಲಿ ಶಾಲೆ ಇದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಪಕ್ಕದ ಊರು, ಪಟ್ಟಣಗಳನ್ನೇ ಅವಲಂಬಿಸಬೇಕು. ಹಾಗೊಂದು ವೇಳೆ ಶಾಲಾ-ಕಾಲೇಜಿಗೆ ಸೇರಿಸಿದರೆ ಹೆದ್ದಾರಿಯಿಂದ ಸುಮಾರು 5 ಕಿ.ಮೀ. ನಡೆಯಲೇಬೇಕು. ಆ ರಸ್ತೆ ನಡೆಯಲೂ ಸಹ ಯೋಗ್ಯವಿಲ್ಲ. ಗ್ರಾಮಸ್ಥರಿಗೆ ಅನಾರೋಗ್ಯ ಉಂಟಾದರೆ ಅವರನ್ನೇ ದೇವರೇ ಕಾಪಾಡಬೇಕು. ಆ್ಯಂಬುಲೆನ್ಸ್ ಬಂದರೂ ಸಮರ್ಪಕ ದಾರಿ ಇಲ್ಲದೇ ಸರಿಯಾದ ಸಮಯಕ್ಕೆ ಗ್ರಾಮವನ್ನ ತಲುಪಲಾಗಲ್ಲ, ಹೀಗಾಗಿ ಸುಮಾರು 4-5 ಜನರು ಮೃತಪಟ್ಟ ನಿದರ್ಶನಗಳು ಗ್ರಾಮದಲ್ಲಿವೆ.

ಇಂಥ ಸೌಕರ್ಯವಿಲ್ಲದ ಊರಿನಲ್ಲಿ ಅನೇಕ ಪ್ರತಿಭಾವಂತ ಯುವಕರಿದ್ದಾರೆ. ನಾನಾ ಕಂಪನಿಗಳಲ್ಲಿ ಕೆಲಸ ಮಾಡುವ ಮದುವೆಗಾಗಿ ತಯಾರಿ ನಡೆಸುತ್ತಿರುವ ಯುವಕರು, ಬೇರೆ ಕಡೆ ಕನ್ಯೆ ನೋಡಿ ಬಂದು ಮದುವೆಗೆ ಮುಂದಾಗುತ್ತಿದ್ದಂತೆ. ಹುಡುಗಿ ಕಡೆಯವರು ಹುಡುಗನ ಮನೆತನ ನೋಡಲು ಬಂದಾಗ ಇಲ್ಲಿನ ರಸ್ತೆ ನೋಡಿ, ಕನ್ಯೆ ಕೊಡುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಹೀಗಾಗಿಯೇ ನನ್ನ ಸಹೋದರನ ಮದುವೆ ಮುರಿದು ಬಿತ್ತು ಎನ್ನುತ್ತಾರೆ ಗ್ರಾಮದ ಮಂಜುನಾಥ.ಇನ್ನು ಮುಂದಾದರೂ ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಗಾಣದಾಳ ಯುವಕರ ಗೋಳನ್ನ ಅರಿತು ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ.  ಬಸ್ ಸೌಕರ್ಯ ಕಲ್ಪಿಸಬೇಕಿದೆ.

ವರದಿ: ಬಸವರಾಜ ಕರುಗಲ್
 

Stay up to date on all the latest ವಿಶೇಷ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp