ಮಿಶ್ರ ವ್ಯವಸಾಯ, ಕೈ ತುಂಬಾ ಆದಾಯ..ಶ್ರೀನಾಥ್ ಕೃಷಿಯಲ್ಲಿ ಎಲ್ಲವೂ ಶೂನ್ಯ

ಬರದ ನಾಡಿನಲ್ಲಿ ಶೂನ್ಯ ಬಂಡವಾಳದಲ್ಲಿ ಮಿಶ್ರಬೇಸಾಯ, ಅರಣ್ಯ ಆಧಾರಿತ ಕೃಷಿಯತ್ತ ಒಲವು ತೋರಿ ಭರಪೂರ ಸಾವಯವ ದಾಳಿಂಬೆ, ನಿಂಬೆ, ವಿವಿಧ ತರಕಾರಿ ಬೆಳೆದು ಸಣ್ಣ ರೈತರಲ್ಲೂ ಭರವಸೆ ಮೂಡಿಸಿದ ರೈತನ ಕತೆ ಹೇಳ್ತಿವಿ.

Published: 29th November 2019 01:32 PM  |   Last Updated: 29th November 2019 01:32 PM   |  A+A-


Srinanth

ರೈತ ಶ್ರೀನಾಥ್

Posted By : Shilpa D
Source : RC Network

ಕೊಪ್ಪಳ: ಬರದ ನಾಡಿನಲ್ಲಿ ಶೂನ್ಯ ಬಂಡವಾಳದಲ್ಲಿ ಮಿಶ್ರಬೇಸಾಯ, ಅರಣ್ಯ ಆಧಾರಿತ ಕೃಷಿಯತ್ತ ಒಲವು ತೋರಿ ಭರಪೂರ ಸಾವಯವ ದಾಳಿಂಬೆ, ನಿಂಬೆ, ವಿವಿಧ ತರಕಾರಿ ಬೆಳೆದು ಸಣ್ಣ ರೈತರಲ್ಲೂ ಭರವಸೆ ಮೂಡಿಸಿದ ರೈತನ ಕತೆ ಹೇಳ್ತಿವಿ. ಆ ರೈತ ಯಾರು? ಯಾವ ಊರು ಅಂತ ತಿಳ್ಕೋಬೇಕಾ.. ಬನ್ನಿ ಹಾಗಾದ್ರೆ ಬಿಸಿಲ ನಾಡು ಕೊಪ್ಪಳ ಜಿಲ್ಲೆಗೆ ಹೋಗಿ ಬರೋಣ…

ತಮ್ಮ ಮನೆಯ ಮುಂದಿರುವ ಜಾಗದಲ್ಲಿ ಅರಣ್ಯವೇ ಇದೆಯೇನೋ ಎನ್ನುವಂತೆ ಶೂನ್ಯಬಂಡವಾಳದಲ್ಲಿ ಹಲವು ತರಕಾರಿ, ಹಣ್ಣು-ಹಂಪಲು ಬೆಳೆದು ಬಿಡುವಿದ್ದಾಗ ತೋಟದಲ್ಲಿ ಭೂಮಿ ತಾಯಿ ಸೇವೆ ಮಾಡುವ ಇವರು ಶ್ರೀನಾಥ್ ತೂನಾ. ಇವತ್ತಿನ ಯುವಪೀಳಿಗೆ ಕೃಷಿ ಜೀವನದಿಂದ ವಿಮುಖವಾಗಿ ನಗರ ಜೀವನಕ್ಕೆ ಮುಖ ಮಾಡುವುದು ಜಾಸ್ತಿ. ಆದರೆ ಇವರು ದೂರದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಾ, ಸಹಜಕೃಷಿಯತ್ತ ಒಲವು ತೋರಿ ಯಶಸ್ವಿಯಾಗಿದ್ದಾರೆ. ಬಿಕಾಂ ಓದಿರೋ ಶ್ರೀನಾಥ್, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಸಲಾಪುರದಲ್ಲಿ ಕಳೆದ ಮೂರು ವರ್ಷಗಳ ಹಿಂದಷ್ಟೇ ಕೃಷಿ ಕಾಯಕ ಆರಂಭಿಸಿದ್ದಾನೆ. ಕೃಷಿ ಅಂದರೆ ಏನು? ಅಂತಾನೇ ಗೊತ್ತಿರದ ಶ್ರೀನಾಥ್ ಇಂದು ಸಣ್ಣ ರೈತರಿಗೆ ಮಾದರಿಯಾಗಿ ಬೆಳೆದಿದ್ದಾನೆ.

2016ಕ್ಕಿಂತ ಮುಂಚೆ ತಾನಾಯಿತು, ಕಂಪನಿಯ ಉದ್ಯೋಗವಾಯ್ತು ಎಂದುಕೊಂಡಿದ್ದ ಶ್ರೀನಾಥ್, ಅದೊಂದಿನ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿ ಮಾಡುವುದು ಹೇಗೆ ಎಂಬುದನ್ನ ತಿಳಿದುಕೊಂಡರು. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಮೂಲದ ಇವರಿಗೆ ಚಿಕ್ಕಂದಿನಿಂದಲೇ ಕೃಷಿ ಬಗ್ಗೆ ಒಲವಿತ್ತು. ಆದರೆ ಕೃಷಿಪದ್ಧತಿಗಳ ಬಗ್ಗೆ ಅಳುಕಿತ್ತು. ಪಾಳೆಕರ್ ತಿಳಿಸಿದ ಕೃಷಿ ಪದ್ಧತಿ ಅರಿತ ಮೇಲೆ ಮುಸಲಾಪುರ ಬಳಿ ಮೂರೂವರೆ ಎಕರೆ ಜಮೀನು ಖರೀದಿಸಿ, ತೋಟಗಾರಿಕೆ ಆರಂಭಿಸಿದರು. ಅದೂ ಯಾವುದೇ ರಾಸಾಯನಿಕ ಬಳಸದೇ…

ಸುಭಾಷ್ ಪಾಳೆಕರ್ ಅವರ ಕೃಷಿ ಪದ್ಧತಿ ಶ್ರೀನಾಥ್ ಅವರ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರಿತ್ತು. ಹಾಗಾಗಿ ಜಾಸ್ತಿ ಸಮಗ್ರ ಕೃಷಿ ಬಗ್ಗೆ ತಿಳಿದುಕೊಂಡ ಅವರು, ಮನೆಯಲ್ಲಿ ಈ ಬಗ್ಗೆ ಹೇಳಿದಾಗ ಪ್ರೋತ್ಸಾಹದ ಮಾತುಗಳೇನೂ ಸಿಕ್ಕವಷ್ಟೇ. ಕೃಷಿ ಮಾಡುತ್ತಿದ್ದವರೇ ಈಗ ವ್ಯಾಪಾರದತ್ತ ಬರುತ್ತಿದ್ದಾರೆ. ನೀನು ಅಲ್ಲಿಗೆ ಹೋದರೆ ಕೈ ಸುಟ್ಟುಕೊಳ್ಳದಂತೆ ಎಚ್ಚರ ವಹಿಸಬೇಕು. ನೀನು ಬೆಂಗಳೂರಿನಲ್ಲಿ ಇರ್ತಿಯಾ. ಕೊಪ್ಪಳದಲ್ಲಿ ಭೂಮಿ ಖರೀದಿಸಿ ಕೃಷಿ ಮಾಡೋದು ನಿನ್ನಿಂದ ಸಾಧ್ಯಾನಾ? ಎನ್ನುವ ಮಾತುಗಳು ಶ್ರೀನಾಥ್ ಅವರನ್ನ ಮತ್ತಷ್ಟೂ ಛಲ ಹುಟ್ಟುವಂತೆ ಮಾಡಿದವು. ಧೃತಿಗೆಡದೇ ಕೃಷಿಯ ಬಗ್ಗೆ ಸಾಕಷ್ಟು ತಿಳಿದುಕೊಂಡು ಮುಸಲಾಪುರದಲ್ಲಿ ಜಮೀನು ಖರೀದಿಸಿ ಸಸಿಗಳನ್ನ ಮಗುವಿನಂತೆ ಬೆಳೆಸಿದರು.

ಜುಲೈ 2017ರಲ್ಲಿ ಜಮೀನಿನಲ್ಲಿ ಪ್ಲಾಂಟೇಷನ್ ಮಾಡಲು ಪ್ಲ್ಯಾನ್ ಮಾಡಿದ ಶ್ರೀನಾಥ್ ಅವರಿಗೆ ಸುಭಾಷ್ ಪಾಳೆಕರ್ ಅವರ ಸೆಷನ್ ಹಾಜರಾಗುವ ಅವಕಾಶ ಒದಗಿ ಬಂತು. ಅವರನ್ನ ಭೇಟಿ ಮಾಡಿ ಶೂನ್ಯ ಬಂಡವಾಳ ಕೃಷಿ ಮಾಡುವ ಕುರಿತು ಇಂಗಿತ ವ್ಯಕ್ತಪಡಿಸಿದ ಶ್ರೀನಾಥ್ ಅವರಿಗೆ ಪಾಳೇಕರ್ ಮಾಡಲ್‍ವೊಂದರ ಸಲಹೆ ನೀಡಿದರು. ಆ ಸಲಹೆ ಪ್ರಕಾರವೇ ಕೃಷಿ ಆರಂಭಿಸಿದ ಶ್ರೀನಾಥ್ ಇವತ್ತು ರಾಸಾಯನಿಕ ಮುಕ್ತ ಹಣ್ಣು-ಹಂಪಲುಗಳನ್ನ ಬೆಳೆದಿದ್ದಾರೆ. ಒಬ್ಬ ಖಾಸಗಿ ಕಂಪನಿ ಉದ್ಯೋಗಿ ಹೇಗೆ ಕೃಷಿ ಕಡೆಗೆ ಸೆಳೆತ ಹೊಂದಿದ್ದ ಅಂತ ಗೊತ್ತಾಯ್ತಲ್ವಾ?. 

ಮುಸಲಾಪುರದ ಶ್ರೀನಾಥ್ ಮಾಡಿದ್ರೆ ಕೃಷಿ ಸಲುವಾಗಿ ಜಮೀನು ಖರೀದಿಸುವ ಬದಲು ಯಾವುದಾದರೂ ಎಸಿ ರೋಂನಲ್ಲಿ ಕುಳಿತು, ಕಾರಿನಲ್ಲಿ ಓಡಾಡಿಕೊಂಡು ಇರಬದಹುದಿತ್ತು. ಆದರೆ ಇವರ ಮನಸು ಶೂನ್ಯ ಬಂಡವಾಳ ಕೃಷಿಯ ಕಡೆಗೆ ವಾಲಿತ್ತು. ಅಂತೆಯೇ ಇವರು ಕೃಷಿ ಚಟುವಟಿಕೆಗೆ ಕೈ ಹಾಕಿದ್ರು. ಶ್ರೀನಾಥ್, ಸಾಲ-ಸೋಲ ಮಾಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಸಲಾಪುರ ಬಳಿ ಮೂರೂವರೆ ಎಕರೆ ಜಮೀನು ಖರೀದಿಸಿದ್ರು. ಅರಣ್ಯ ಆಧಾರಿತ ಕೃಷಿ ಇವರ ಒಲವಾದರೂ ಮೊದಲಿಗೆ ಸಾಕಷ್ಟು ಪೂರ್ವತಯಾರಿಯೊಂದಿಗೆ ಮಿಶ್ರ ಬೆಳೆಗೆ ಕೈ ಹಾಕಿದ್ರು. ನೆರಳೆ, ಹೆಬ್ಬೇವು ಪೇರಲ, ಸೀತಾಫಲದ ಜೊತೆ ಜೊತೆಗೆ ವರ್ಷದೊಳಗೆ ಆದಾಯ ತರುವ ನಿಂಬೆ, ನುಗ್ಗೆ, ಟೊಮೆಟೊ, ಮೆಣಸು ಮತ್ತಿತರ ಬೆಳೆಗಳನ್ನ ಬೆಳೆದು ಸೈ ಎನಿಸಿಕೊಂಡರು. 

24 ಬೈ 24 ಮಾಡೆಲ್‍ನಲ್ಲಿ ನಿಂಬು ಮತ್ತು ಮಾವು ಬೆಳೆದ ಶ್ರೀನಾಥ್, ದಾಳೀಂಬೆ ಮತ್ತು ಸಿಲ್ವರ್ ಓಕ್‍ ಬೆಳೆಯನ್ನ 12ಅಡಿ ಅಂತರದಲ್ಲಿ ಬೆಳೆಯಲು ಆರಂಭಿಸಿದರು. ಇದಕ್ಕೆ ಬೇರೆ ಗಿಡಗಳ ಅವಶ್ಯಕತೆ ಖಂಡಿತ ಇದೆ. ಹಾಗಾಗಿ ಅಂತರ ಇರುವ ಜಾಗದಲ್ಲಿ ಬೇರೆ ಬೇರೆ ಸಸಿಗಳನ್ನ ಹಾಕಿದ್ದಾರೆ. ಇದು ಕಾಡುಜಾತಿಯ ಗಿಡವಾಗಿದ್ದರಿಂದ ಕೊಪ್ಪಳದಂಥ ನೆಲದಲ್ಲೂ ಕಾಡಿನ ಪರಿಸರ ಇರಲಿ ಎಂದು ಕಂಡ ಕನಸನ್ನ ಸಾಕಾರಗೊಳಿಸಿದ್ದಾರೆ. ಸಾಲಿನಿಂದ ಸಾಲಿಗೆ 12 ಫೀಟ್ ಅಂತರ ಕಾಯ್ದುಕೊಂಡಿದ್ದು ಕಸ ಕೀಳಲು ಈ ಜಾಗ ಅನುಕೂಲವಾಗಲಿದೆ.

ವಿವಿಧ ಬೆಳೆಗೆ ಪೂರಕವಾಗುವಂತೆ ಸೀತಾಫಲವನ್ನ ಬೆಳೆದಿರುವ ಶ್ರೀನಾಥ್, ಸೀತಾಫಲ ಸಸಿ ಬೆಳೆಯಲು ಒಂದು ಕಾರಣ ಇಟ್ಟುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಬರಗಾಲದ ನೆಲ. ಬರಗಾಲದಲ್ಲೂ ಬದುಕುವಂಥ ಸಸಿ ಎಂದರೆ ಸೀತಾಫಲ. ಇದು ಸಹ ಕಾಡುಜಾತಿಯ ಸಸಿ. ಗುಡ್ಡಗಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಹಾಗೆಯೇ ಒಂದು ನಿಂಬು ಗಿಡದ ಸುತ್ತ ನಾಲ್ಕು ಮಾವಿನ ಗಿಡಗಳನ್ನು ಹಾಕಲಾಗಿದೆ. ಸುತ್ತಲೂ 6ಅಡಿ ಅಂತರವಿದೆ. ಜೊತೆಗೆ 12 ಅಡಿ ಅಂತರದಲ್ಲಿ ಜಿಗ್‍ಜಾಗ್‍ ಮಾಡೆಲ್‍ನಲ್ಲಿ ದಾಳಿಂಬೆ ಮತ್ತು ಸಿಲ್ವರ್ ಓಕ್ ಬೆಳೆಯಲಾಗಿದೆ.ನೇರಳೆಯನ್ನೂ ಸಹ ಆಯ್ಕೆ ಮಾಡಿಕೊಂಡಿರುವ ಇವರು ತಮ್ಮ ಜಮೀನಿನಲ್ಲಿ ಸುಮಾರು 100ಕ್ಕೂ ಅಧಿಕ ಜಂಬೂ ನೇರಳೆ ಸಸಿಗಳನ್ನ, 600ಕ್ಕೂಅಧಿಕ ದಾಳಿಂಬೆ ಸಸಿಗಳನ್ನ ಬೆಳೆದಿದ್ದಾರೆ. ಕಾಡುಸಸಿಗಳಿಗೆ ಜಾಸ್ತಿ ನೀರಿನ ಅಗತ್ಯ ಇರಲ್ಲ. 

ಕ್ಯಾಶ್ ಕ್ರಾಪ್ ಆಗಿರುವ ನೇರಳೆ ಸಹಜವಾಗಿಯೇ ಬೆಳೆಯುತ್ತದೆ. ಇದಕ್ಕೆ ಯಾವುದೇ ರಾಸಾಯನಿಕ ಸಿಂಪರಣೆ ಆಗತ್ಯ ಇಲ್ಲ. ನಾಲ್ಕೈದು ವರ್ಷ ತಾಳ್ಮೆ ಇರಬೇಕು. ಈ ಪ್ರದೇಶದಲ್ಲಿ ಬೀಳುವ ಅಲ್ಪಪ್ರಮಾಣದ ಮಳೆ ನೀರೇ ಸಾಕು. ಸದ್ಯ ನೇರಳೆ ಹಣ್ಣಿಗೆ ಜಾಸ್ತಿ ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಉತ್ತಮ ಇಳುವರಿಯ ನಿರೀಕ್ಷೆ ಶ್ರೀನಾಥ್ ಅವರದ್ದು. ಈ ಭಾಗದಲ್ಲಿ ನೀರಿನ ಮೂಲ ತುಂಬಾನೇ ಕಡಿಮೆ. ಹಾಗಾಗಿ ಸದ್ಯ ಇರೋ ಎರಡು ಬೊರ್‍ವೆಲ್‍ ಮೂಲಕ ಹನಿ ನೀರಾವರಿ ಮೂಲಕ ಈ ಎಲ್ಲ ಬೆಳೆಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ.ಕೃಷಿಹೊಂಡ ಇಲ್ಲದಿದ್ದರೂ ಜಮೀನಿನಲ್ಲೇ ಇರೋ ಬೋರ್‍ವೆಲ್‍ ನೀರನ್ನ ಸಂಗ್ರಹಿಸಿ ಹನಿ ನೀರಾವರಿಗೆ ಬಳಸ್ತಿರೋ ಅವಿನಾಶ್, ಹೊಲದಲ್ಲಿ ಬೆಳೆ ಹಾಕಿ ಮನೆಯಲ್ಲಿ ಹೋಗಿ ಕುಳಿತರೆ ಯವ ಪ್ರಯೋಜನವೂ ಇಲ್ಲ. ಪ್ರತಿ ಸಸಿಯನ್ನೂ ಮಕ್ಕಳಂತೆ ಲಾಲನೆ-ಪಾಲನೆ ಮಾಡಿದಾಗ ಮಾತ್ರ ಅವು ಫಲ ಕೊಡುತ್ತವೆ. ಅದನ್ನ ಬಿಟ್ಟು ಸೋಮಾರಿತನ ಮಾಡಿಕೊಂಡು ಬೆಳೆಹಾನಿಯಾದ ಮೇಲೆ ಆತ್ಮಹತ್ಯೆ ಮಾಡಿಕೊಂಡರೆ ಏನು ಲಾಭ. ಆತ್ಮಹತ್ಯೆ ಅನ್ನುವ ಪದ ರೈತರ ಬಳಿ ಸುಳಿಯಲೇ ಬಾರದು. ಜಗತ್ತಿಗೆ ಅನ್ನ ಕೊಡುವ ಅನ್ನದಾತ ಜೀವ ಕಳೆದುಕೊಂಡರೆ ಅದೆಂಥ ಸಾಧನೆ. ಒಂದು ಎಕರೆ ಜಮೀನಿದ್ದರೂ ಸಾಕು. ಅರಣ್ಯ ಕೃಷಿ ಮಾಡಿ. ಮಕ್ಕಳು ಹೆತ್ತವರನ್ನ ಪೋಷಿಸುತ್ತಾರೊ? ಇಲ್ಲವೋ? ಗೊತ್ತಿಲ್ಲ ಆದರೆ ಗಿಡಮರಗಳು ಖಂಡಿತವಾಗಿ ರೈತರನ್ನ ಸಾಕುತ್ತವೆ ಎಂದು ತಮ್ಮ ಬೆಳೆಯ ಬಗ್ಗೆ ಹೇಳ್ತಾನೇ ರೈತರಿಗೂ ಒಂದೆರಡು ಕಿವಿ ಮಾತುಗಳನ್ನ ಹೇಳಿದ್ರು ಶ್ರೀನಾಥ್.

ಇಷ್ಟೆಲ್ಲ ಬೆಳೆಗಳ ನಡುವೆ ನಿಂಬೆಸಸಿಗಳನ್ನು ಹಚ್ಚಿರುವ ಶ್ರೀನಾಥ್ ಮರು ವರ್ಷದಿಂದಲೇ ಆದಾಯ ಗಳಿಸುತ್ತಿದ್ದಾರೆ. ಸುಮಾರು 200 ನಿಂಬೆ ಸಸಿಗಳ ಪೈಕಿ ವರ್ಷಕ್ಕೆ ಕನಿಷ್ಠ ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಸದ್ಯ ಸ್ಥಳೀಯ ಮಾರುಕಟ್ಟೆಗೆ ಸಾಕಾಗುವಷ್ಟು ನಿಂಬೆ ಬರ್ತಿದೆ. ಮುಂದೆ ಪ್ರಮಾಣ ಜಾಸ್ತಿಯಾದ ಬಳಿಕ ನಿಂಬೆಯನ್ನ ಬೇರೆಡೆಗೂ ರಫ್ತು ಮಾಡುವ ಆಲೋಚನೆ ಇದೆ. ಹಾಗೆನೇ ಹೆಬ್ಬೇವು, ಸಿಲ್ವರ್ ಓಕ್‍ಗೆ ಫ್ಲೈವುಡ್ ಮಾರುಕಟ್ಟೆಯಲ್ಲಿ ಇದಕ್ಕೆ ಜಾಸ್ತಿ ಬೇಡಿಕೆ. ಆದರೆ ರೈತರು ಇದಕ್ಕೆ ಬೆಲೆ ಇಲ್ಲ ಅಂತ 8-10 ವರ್ಷಗಳಿಗೂ ಮುಂಚೆಯೇ ಕತ್ತರಿಸುತ್ತಿದ್ದಾರೆ. ಹಾಗಾಗಿ ಬೆಲೆ ಬರ್ತಿಲ್ಲ. ಮೊದಲೆಲ್ಲ ಫರ್ನಿಚರ್ ಅಲ್ಲೊಂದು, ಇಲ್ಲೊಂದು ಇರ್ತಿತ್ತು. ಈಗ ಎಲ್ಲೆಡೆ ಫರ್ನಿಚರ್ ಕಾಣುತ್ತಿದ್ದೇವೆ. ಫ್ಲೈವುಡ್‍ಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಹಾಗಾಗಿ ಸಿಲ್ವರ್‍ ಓಕ್‍ ಲಾಭ ಕೊಡುತ್ತೆ ಅಂತಾರೆ ಶ್ರೀನಾಥ್.

ಅರಣ್ಯ ಆಧಾರಿತ ಕೃಷಿ ಮಾಡಬೇಕೆಂದ್ರೆ ಜಾಸ್ತಿ ಹಣ ಬೇಕಾಗದಿರಬಹುದು. ಆದರೆ ಸಾಕಷ್ಟು ತಾಳ್ಮೆ ಬೇಕು. ರೈತರು ಪೇರಲ, ನೇರಳೆ, ನಿಂಬೆ ಈ ಥರದ ಬೆಳೆಗಳ ಜೊತೆಗೆ ನುಗ್ಗೆ, ತರಕಾರಿ ಮತ್ತಿತರ ಮಿಶ್ರಬೆಳೆಗಳನ್ನೂ ಬೆಳೆಯಬಹುದು. ಆದರೆ ಮಣ್ಣು ಸ್ಪಂದಿಸುವಂತಿರಬೇಕು. ತೋಟಗಾರಿಕಾ ಬೆಳೆದರೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ ಎಂಬ ತಪ್ಪುಕಲ್ಪನೆ ಸಾಕಷ್ಟು ರೈತರಲ್ಲಿದೆ. ಕಡಿಮೆ ಭೂಮಿಯಲ್ಲಿ, ಕಡಿಮೆ ಬಂಡವಾಳದಲ್ಲಿ ತೋಟಗಾರಿಕಾ ಬೆಳೆಯನ್ನ ಬೆಳೆಯಬಹುದು  ಎನ್ನುತ್ತಾರೆ ಶ್ರೀನಾಥ್
--------------


ರೈತನ ಸಂಪರ್ಕ ವಿವರ:

ಶ್ರೀನಾಥ್ ತೂನಾ

ಸಾ/ಮುಸಲಾಪುರ, ತಾ/ಗಂಗಾವತಿ ಜಿ/ಕೊಪ್ಪಳ.

ಮೊಬೈಲ್: 96633 13051


ವರದಿ-ಬಸವರಾಜ ಕರುಗಲ್, ಕೊಪ್ಪಳ.

Stay up to date on all the latest ವಿಶೇಷ news with The Kannadaprabha App. Download now
facebook twitter whatsapp