ಮೂರು ಎಕರೆಯಲ್ಲಿ 60ಕ್ಕೂ ಹೆಚ್ಚು ಬೆಳೆ: ಕೃಷಿ ಆಸಕ್ತರಿಗೆ ಹನುಮಂತಪ್ಪ ಮಡ್ಲೂರ್ ಸ್ಫೂರ್ತಿ

ಕಳೆದ ಹತ್ತಾರು ವರ್ಷಗಳಿಂದ ಕೇವಲ ಮೂರೆ ಮೂರು ಎಕರೆ ಭೂಮಿಯಲ್ಲಿ ೬೦ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಾ, ಮಿಶ್ರ ಬೇಸಾಯ ಪದ್ಧತಿಯಿಂದ ರಾಜ್ಯದ ಸಾವಿರಾರು ರೈತರ ಗಮನ ಸೆಳೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಭತ್ತದ ಕಾಶಿ ಬನವಾಸಿಯ ಹನುಮಂತಪ್ಪ ಮಡ್ಲೂರು.

Published: 22nd October 2019 06:30 PM  |   Last Updated: 22nd October 2019 06:30 PM   |  A+A-


Hanumanthappa Mudlur

ಹನುಮಂತಪ್ಪ ಮಡ್ಲೂರು

Posted By : Vishwanath S
Source : RC Network

ಶಿರಸಿ: ಹೋಯ್ ಸ್ವಾಮಿ... ನಂಗೆ ಹತ್ತಾರು ಎಕರೆ ಹೊಲ ಇಲ್ರಿ. ನೀವ್ ಕಣ್ಣಳತೆಯ್ಯಾಗ ನನ್ ಹೊಲದ ಉದ್ದಗಲ ಅಂದಾಜ್ ಮಾಡಬಹುದು. ಆದ್ರೆ, ತುಂಡು ಭೂಮಿಲ್ಲಿ ಬೆಳೆದ ಬೆಳೆಗಳ ಸಂಖ್ಯೆ ಎಣಿಸಾಕೆ ನಿಮ್ಮಿಂದಾಗಲ್ರಿ...! ತೊಟ್ಟುಡುಗೆ ಮಣ್ಣಾಗೊತನ್ಕ ದುಡಿತಿನಿ, ಫಲಾಫಲ ಮಳೆರಾಯನಿಗೆ ಬಿಡ್ತೀನಿ...

ಹೀಗಂತ, ಕಳೆದ ಹತ್ತಾರು ವರ್ಷಗಳಿಂದ ಕೇವಲ ಮೂರೆ ಮೂರು ಎಕರೆ ಭೂಮಿಯಲ್ಲಿ ೬೦ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಾ, ಮಿಶ್ರ ಬೇಸಾಯ ಪದ್ಧತಿಯಿಂದ ರಾಜ್ಯದ ಸಾವಿರಾರು ರೈತರ ಗಮನ ಸೆಳೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಭತ್ತದ ಕಾಶಿ ಬನವಾಸಿಯ ಹನುಮಂತಪ್ಪ ಮಡ್ಲೂರು ಅನಿಸಿಕೆ ಹಂಚಿಕೊಳ್ಳುತ್ತಾರೆ.100%

ಮೂಲತಃ ಹಾವೇರಿ ಜಿಲ್ಲೆಯ ಮಡ್ಲೂರಿನ ಹನುಮಂತಪ್ಪ, ಮೂವತ್ತು ವರ್ಷಗಳ ಕೆಳಗೆ ಕನ್ನಡದ ಪ್ರಥಮ ರಾಜಧಾನಿ ಬನವಾಸಿಗೆ ಕೂಲಿ ಕೆಲಸಕ್ಕಾಗಿ ಆಗಮಿಸಿ ಗೌಡರೊಬ್ಬರ ಮನೆಯಲ್ಲಿ ಹೊತ್ತಿನ ತುತ್ತು ಊಟಕ್ಕೆಂದು ಆಳಾಗಿ ದುಡಿಯುತ್ತಾರೆ. ನಂತರದಲ್ಲಿ ಗೌಡರಿಂದಲೆ ಪಡೆದ ಮೂರು ಎಕರೆ ಭೂಮಿಯಲ್ಲಿ ರಾಸಾಯನಿಕ ಬಳಕೆಯಿಲ್ಲದೆ ಮಿಶ್ರ ಬೆಳೆಯ ಬಿತ್ತನೆಯಿಂದ ನಾಲ್ಕೆ ತಿಂಗಳಲ್ಲಿ ೨ಲಕ್ಷಕ್ಕೂ ಹೆಚ್ಚು ಲಾಭಗಳಿಸುವ ಕೃಷಿ ಸಾಧಕನ ಸಾಧನೆಯ ಸಂಪೂರ್ಣ ಚಿತ್ರಣವಿದಾಗಿದೆ.

ಅಚ್ಚುಕಟ್ಟಿನ ಕಾರ್ಯ...
ಬನವಾಸಿಯಿಂದ ಸೊರಬ ರಸ್ತೆಯಲ್ಲಿ ಮೂರು ಕಿ.ಮೀ ಅಂತರದಲ್ಲಿನ ಹಳ್ಳಿಕೊಪ್ಪದ ಬಳಿಯಲ್ಲಿನ ಹನುಮಂತಪ್ಪ ಮಡ್ಲೂರ್ ಅವರ ೩ಎಕರೆ ಗದ್ದೆಯಲ್ಲಿ ೬೦ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆಗಾಲ ಆರಂಭದ ವೇಳೆಗೆ ಭೂಮಿಯನ್ನು ಹದಗೊಳಿಸಿ ವರ್ಷಗಳಿಂದ ಜೋಪಾನವಾಗಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಗ್ರಹಿಸಿಟ್ಟ ರಾಸಾಯನಿಕ ರಹಿತ ಬೀಜಗಳನ್ನು ಒಂದಿಂಚು ಭೂಮಿಯನ್ನೂ ಖಾಲಿ ಬಿಡಬಾರದೆಂಬ ಯೋಚನೆಯಲ್ಲಿ ತಮ್ಮದೆ ಶೈಲಿಯಲ್ಲಿ ಬಿತ್ತನೆ ಮಾಡುತ್ತಾರೆ. ಓಡಾಡಲೆಂದು ೪ಅಡಿಯ ಸ್ಥಳ ಬಿಟ್ಟು ಇನ್ನುಳಿದೆಲ್ಲ ಜಾಗದಲ್ಲಿ ಯಾಂತ್ರಿಕತೆಯ ಸಹಾಯವಿಲ್ಲದೆ, ಎತ್ತು, ನೊಗ ಬಳಸದೆ ೬೦ಕ್ಕೂ ಹೆಚ್ಚು ಬೆಳೆ ತೆಗೆಯುವ ಕಾರ್ಯ ಸಾಹಸಮಯ ಕಾರ್ಯವೆ ಸರಿ.

ಬಗೆಬಗೆಯ ಬೆಳೆಗಳು ಒಂದೆಡೆಯಲ್ಲಿ...
ಗದ್ದೆಯಲ್ಲಿ ಓಡಾಡಲೆಂದು ಬಿಟ್ಟ ಕಾಲು ದಾರಿಯ ಬದಿಯಲ್ಲಿ ಶ್ರಾವಣ ಮಾಸದ ಬಹು ಬೇಡಿಕೆಯ ೧೫ಕ್ಕೂ ಹೆಚ್ಚು ಜಾತೀಯ ೫೦೦ಡೇರೆ ಗಿಡಗಳು, ವಿಭಿನ್ನ ಬಣ್ಣಗಳ ಗುಲಾಬಿ, ದಾಸವಾಳ, ಸಂಪಿಗೆ, ಮಲ್ಲಿಗೆ ಹೂ ಗಿಡಗಳು ಗದ್ದೆಯ ಅಂದವನ್ನು ಹೆಚ್ಚಿಸಿವೆ. ಟೊಮೇಟೊ, ಬೆಂಡೆ, ಬದನೆ, ಸವತೆ, ಸೋಡಿಗೆ, ಅವರೆ, ಮೀಟರ್ ಸವತೆ ಸೇರಿದಂತೆ ೨೦ಕ್ಕೂ ಹೆಚ್ಚು ಬಗೆ ಬಗೆಯ ತರಕಾರಿಗಳು, ಜೋಳ, ಶುಂಠಿ, ಶೇಂಗಾ, ಹತ್ತಿ, ಕರಿ ಹಾಗೂ ಬಿಳಿ ಎಳ್ಳು, ನವಣೆ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಹತ್ತಾರು ಬಗೆಯ ಧಾನ್ಯಗಳು ಮಡ್ಲೂರ ಅವರ ಗದ್ದೆಯಲ್ಲಿ ಬಿತ್ತನೆಯಾಗಿವೆ.

ನೀರಾವರಿ ಭೂಮಿಯಲ್ಲ...
 ಲಕ್ಷಾಂತರ ರುಪಾಯಿಗಳನ್ನು ನೀರಾವರಿಗೆಂದು ವ್ಯಯಿಸಿ ಕೈಸುಟ್ಟುಕೊಂಡ ಅದೆಷ್ಟೋ ರೈತರ ಸಾಗುವಳಿ ಭೂಮಿಗಳೀಗ ಬರಡು ಭೂಮಿಯಾಗಿ ಪರಿವರ್ತನೆಗೊಂಡಿದೆ. ಆದರೆ ಹನುಮಂತಪ್ಪ ಮಡ್ಲೂರು ಮಾತ್ರ ಈವರೆಗೂ ನೀರಾವರಿ ಕುರಿತಂತೆ ತಲೆಕೆಡಿಸಿಕೊಂಡಿಲ್ಲ. ಕೇವಲ ಮಳೆಯನ್ನೆ ಆಧರಿಸಿ ೬೦ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುವ ಇವರು ಈವರೆಗೂ ಭೂಮಿಯ ಅಂತರಾಳವ ಬಗೆದು (ಬೋರವೆಲ್) ನೀರನ್ನು ಹೊರ ತರುವ ಕಾರ್ಯಕ್ಕೆ ಕೈಹಾಕಿಲ್ಲ. 

ಬಿದ್ದ ಮಳೆ ನೀರನ್ನು ಗದ್ದೆಯಲ್ಲಿ ಇಂಗಿಸಿದರೆ ಬಿತ್ತನೆ ಮಾಡಿದ ಬೆಳೆಗಳಿಗೆ ಯಾವುದೇ ತೊಂದರೆಯಾಗೊಲ್ಲ ಎಂಬುದನ್ನು ಮನಗೊಂಡು ಹತ್ತಿ, ಜೋಳ, ಶೇಂಗಾ ಬೆಳೆಗಳಿಗೆ ಎರಡನೆ ಬಾರಿ ಮಣ್ಣೇರಿಸಿ ಕೊಡುವಾಗ ಗಿಡದ ಬುಡದಲ್ಲಿ ಸಣ್ಣ ಸಣ್ಣ ಹೊಂಡಗಳನ್ನು ತೋಡುತ್ತಾರೆ. ಹೊಂಡಗಳಲ್ಲಿ ಸಂಗ್ರಹವಾದ ಮಳೆ ನೀರು ಭೂಮಿಯಲ್ಲಿ ಇಂಗಿದರೆ ನಂತರದ ೧೫ದಿನಗಳ ಕಾಲ ನೀರಿನ ಅವಶ್ಯಕತೆ ಇರುವದಿಲ್ಲವೆಂದು ಹನುಮಂತಪ್ಪ ಅಭಿಪ್ರಾಯಪಡುತ್ತಾರೆ.

ಮಡದಿಯ ಸಾಥ್...
ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿರುತ್ತಾಳೆ ಎಂಬಂತೆ ಹನುಮಂತಪ್ಪನವರ ಸಾಧನೆಯ ಬೆನ್ನೆಲುಬಂತೆ ಅವರ ಮಡದಿಯೂ ಸಹ ಹೊಲದಲ್ಲಿ ಬೆಳೆದ ತಾಜಾ ಹೂ ಹಾಗೂ ಕ್ವಿಂಟಲ್ ಪ್ರಮಾಣಗಳ ತರಕಾರಿಗಳನ್ನು ಪ್ರತಿನಿತ್ಯ ಬಸ್‌ಗಳಲ್ಲಿ ಹತ್ತಿರದ ಶಿರಸಿ, ದಾಸನಕೊಪ್ಪ, ಸೊರಬಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ನಾವು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳಿಗೆ ಕಡಿಮೆ ದರದಲ್ಲಿ ಏಕೆ ನೀಡಬೇಕು...? ನಾವೆ ಪೇಟೆಯಲ್ಲಿ ಕುಳಿತು ಮಾರಾಟ ಮಾಡುವದರಿಂದ ಲಾಭಾಂಶವೂ ಹೆಚ್ಚು ದೊರೆಯುತ್ತದೆ ಎಂದು ಹನುಮಂತಪ್ಪ ಹೇಳುತ್ತಾರೆ. ತಾಜಾ ಹಾಗೂ ಕಳೆನಾಶಕ ಸಿಂಪಡಿಸದ ತರಕಾರಿ ಕೊಂಡೊಯ್ಯಲೆಂದೆ ಪ್ರತಿನಿತ್ಯ ನೂರಾರು ಗ್ರಾಹಕರು ಕಾದು ನಿಲ್ಲುತ್ತಾರಂತೆ..!

100%

ಹೈನೋಧ್ಯಮಕ್ಕೂ ಸೈ...
ಮಡ್ಲೂರು ಕುಟುಂಬಸ್ಥರ ದುಡಿಮೆ ಪ್ರತಿನಿತ್ಯ ಮುಂಜಾನೆ ೬.೩೦ರಿಂದ ಆರಂಭವಾಗಿ ಸಂಜೆ ೬.೩೦ರವರೆಗೆ ಹೊಲದಲ್ಲಿ ನಡೆಯುತ್ತದೆ. ಈ ಮಧ್ಯೆಯೆ ಹೈನೋಧ್ಯಮದತ್ತವೂ ಗಮನ ಹರಿಸುವ ಹನುಮಂತಪ್ಪ ಎರಡು ಎಚ್.ಎಫ್ ತಳಿಯ ಆಕಳು ಸಾಕಿದ್ದಾರೆ. ಹೊಲದ ಕಳೆ ಗಿಡ, ಜೋಳದ ದಂಟು, ಜೋಳದ ಸಿಪ್ಪೆಗಳನ್ನು ಮೇವಿಗಾಗಿ ಬಳಕೆ ಮಾಡುತ್ತಾ ಪ್ರತಿನಿತ್ಯ ೨೨ಲೀ. ಹಾಲನ್ನು ಡೇರಿಗೆ ನೀಡುತ್ತಾರೆ.

ಮಿಶ್ರ ಕೃಷಿ ಪದ್ಧತಿಯಿಂದ ಈಗಾಗಲೆ ಹತ್ತಾರು ಪ್ರಶಸ್ತಿಗಳು ಹನುಮಂತಪ್ಪ ಮಡ್ಲೂರ್ ಅವರ ಮುಡಿಗೇರಿವೆ. ರಾಜ್ಯಮಟ್ಟದ ಬಾಗಲಕೋಟೆ ಶ್ರೇಷ್ಠ ಕೃಷಿಕ ಪ್ರಶಸ್ತಿ, ಕೃಷಿ ಭೀಮ, ಸ್ವರ್ಣವಲ್ಲೀ ಸಂಸ್ಥಾನ ಕೊಡಮಾಡುವ ಉತ್ತಮ ಕೃಷಿಕ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಕೃಷಿ ಸಾಧಕ ಪ್ರಶಸ್ತಿಗಳು ಲಭ್ಯವಾಗಿದೆ. ಇಂತಹ ಅಪರೂಪದ ಸಾಧಕನ ಸಾಧನೆಯನ್ನು ಕಣ್ತುಂಬಿಕೊಳ್ಳಲು ನೀವೂ ಸಹ ಮಡ್ಲೂರ ಹೊಲಕ್ಕೆ ಭೇಟಿ ನೀಡಬಹುದು. ಭೇಟಿಗೂ ಮುನ್ನ ಒಮ್ಮೆ ಕರೆ ಮಾಡಿ (೭೩೫೩೦೦೮೭೩೩ - ಹನುಮಂತಪ್ಪ ಮಡ್ಲೂರು) ಬರುವದಾಗಿ ತಿಳಿಸಿದರೆ ದುಡಿಯುವ ಮಂದಿಗೆ ಅನುಕೂಲವಾದಿತು. 

ವರದಿ: ಎಚ್.ಕೆ.ಪಿ

Stay up to date on all the latest ವಿಶೇಷ news with The Kannadaprabha App. Download now
facebook twitter whatsapp