ಮೊಬೈಲ್ ಅಂಗಡಿ ಅವಿನಾಶ್ ಕೃಷಿ-ಖುಷಿ: ಅರಣ್ಯ ಆಧಾರಿತ ಕೃಷಿಯಿಂದ ಕಾಡು ಸೃಷ್ಟಿಸುವ ಕನಸು

Published: 25th October 2019 06:04 PM  |   Last Updated: 25th October 2019 06:04 PM   |  A+A-


Avinash

ಅವಿನಾಶ್

Posted By : Prasad SN
Source : RC Network

ಕೊಪ್ಪಳ: ಇವತ್ತು ಬರದ ನಾಡಿನಲ್ಲಿ ಮಿಶ್ರಬೇಸಾಯ, ಅರಣ್ಯ ಆಧಾರಿತ ಕೃಷಿಯತ್ತ ಒಲವು ತೋರಿ ಭರಪೂರ ನುಗ್ಗೆ ಬೆಳೆ ತೆಗೆದು ವಿದೇಶಕ್ಕೂ ರಫ್ತು ಮಾಡಿ ಸಣ್ಣ ರೈತರಲ್ಲೂ ಭರವಸೆ ಮೂಡಿಸಿದ ರೈತನ ಕತೆ ಹೇಳ್ತಿವಿ. ಆ ರೈತ ಯಾರು? ಯಾವ ಊರು ಅಂತ ತಿಳ್ಕೋಬೇಕಾ.. ಬನ್ನಿ ಹಾಗಾದ್ರೆ ಬಿಸಿಲ ನಾಡು ಕೊಪ್ಪಳ ಜಿಲ್ಲೆಗೆ ಹೋಗಿ ಬರೋಣ…

ಇವತ್ತಿನ ಯುವಪೀಳಿಗೆ ಕೃಷಿ ಜೀವನದಿಂದ ವಿಮುಖವಾಗಿ ನಗರ ಜೀವನಕ್ಕೆ ಮುಖ ಮಾಡುವುದು ಜಾಸ್ತಿ. ಆದರೆ ಇಲ್ಲೊಬ್ಬ ಯುವಕ ಪಟ್ಟಣದಲ್ಲೇ ಇದ್ದರೂ ಕೃಷಿ ಮೇಲಿನ ಪ್ರೀತಿಯಿಂದಾಗಿ ಮತ್ತೇ ಹಳ್ಳಿ ಕಡೆಗೆ ಮುಖ ಮಾಡಿದ್ದಾನೆ. ಬಿಕಾಂ ಓದಿ ವ್ಯಾಪಾರ ಮಾಡಿಕೊಂಡಿರೋದಲ್ಲದೇ ದಿನದ ಬಹುಪಾಲು ಸಮಯವನ್ನ ಕೃಷಿಗೆ ಅಂತಾನೇ ಮೀಸಲಿಟ್ಟಿದ್ದಾನೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಅವಿನಾಶ್ ಕೋರಾ ಕಳೆದ ಮೂರು ವರ್ಷಗಳ ಹಿಂದಷ್ಟೇ ಕೃಷಿ ಕಾಯಕ ಆರಂಭಿಸಿದ್ದಾನೆ. ಕೃಷಿ ಅಂದರೆ ಏನು? ಅಂತಾನೇ ಗೊತ್ತಿರದ ಅವಿನಾಶ್ ಇಂದು ಸಣ್ಣ ರೈತರಿಗೆ ಮಾದರಿಯಾಗಿ ಬೆಳೆದಿದ್ದಾನೆ.

2016ಕ್ಕಿಂತ ಮುಂಚೆ ತಾನಾಯಿತು, ಓದಾಯಿತು, ತನ್ನ ಮೊಬೈಲ್ ಶಾಪ್ ಆಯ್ತು ಎಂದುಕೊಂಡವನು, ಅದೊಂದಿನ ಕೊಪ್ಪಳದ ಗವಿಮಠದಲ್ಲಿ ಅರಣ್ಯ ಆಧಾರಿತ ಕೃಷಿ ಕಾರ್ಯಾಗಾರ ಇತ್ತು. ಅಲ್ಲಿಗೆ ಹೋದಾಗ ದೊಡ್ಡಬಳ್ಳಾಪುರದ ಕೃಷಿ ತಜ್ಞ ಎಲ್.ಆರ್.ಎನ್.ರಡ್ಡಿ ಅವರ ಮಾತುಗಳಿಂದ ಪ್ರೇರಿತರಾದ್ರು. ಅವರು ಸಹಜ ಕೃಷಿ, ಸಮಗ್ರ ಕೃಷಿ, ಅರಣ್ಯ ಆಧಾರಿತ ಕೃಷಿ ಬಗ್ಗೆ ಹೇಳುತ್ತಾ ಶೂನ್ಯ ಬಂಡವಾಳದಲ್ಲಿ ಕೃಷಿ ಹೇಗೆ ಮಾಡಬಹುದು ಎಂಬುದನ್ನ ವಿವರಿಸಿದ್ದು ಕೃಷಿ ಬಗ್ಗೆ ಆಸಕ್ತಿ ಮೂಡಲು ಕಾರಣ. ಒಂದೆರಡು ಫಾರ್ಮ್ಗಳಿಗೆ ಹೋಗಿ ಭೇಟಿ ನೀಡಿ ತಿಳಿದುಕೊಂಡ ನಂತರ ಕೃಷಿ ಕಾಯಕಕ್ಕೆ ಮನಸು ಮಾಡಿದ್ರು ಅವಿನಾಶ್. 

ಗವಿಮಠದಲ್ಲಿ ನಡೆದ ಚರ್ಚೆ ಅವಿನಾಶ್ ಅವರ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರಿತ್ತು. ಹಾಗಾಗಿ ಜಾಸ್ತಿ ಸಮಗ್ರ ಕೃಷಿ ಬಗ್ಗೆ ತಿಳಿದುಕೊಂಡ ಅವರು, ಮನೆಯಲ್ಲಿ ಈ ಬಗ್ಗೆ ಹೇಳಿದಾಗ ಎಲ್ರೂ ಬೇಡ ಅಂತಾನೇ ಹೇಳಿದ್ರಂತೆ.. ವ್ಯಾಪಾರಸ್ಥರ ಕುಟುಂಬದನಾದ ನೀನು ವ್ಯಾಪಾರ ಮಾಡಿಕೊಂಡಿರು. ಕೃಷಿ ಮಾಡುತ್ತಿದ್ದವರೇ ಈಗ ವ್ಯಾಪಾರದತ್ತ ಬರುತ್ತಿದ್ದಾರೆ. ನೀನು ಅಲ್ಲಿಗೆ ಹೋದರೆ ಕೈ ಸುಟ್ಟುಕೊಳ್ತಿಯಾ ಅಂದವರೇ ಹೆಚ್ಚು, ಮೂರ್ನಾಲ್ಕು ತಿಂಗಳು ಸುಮ್ಮನಿದ್ದ ಅವಿನಾಶ ಅವರನ್ನು ಕೃಷಿಯ ಸೆಳೆತ ಬಿಡಲಿಲ್ಲ. ಕೊನೆಗೊಂದು ದಿನ ಕೃಷಿಗೆ ಬರಲೇಬೇಕು ಅಂತ ನಿರ್ಧಾರ ಮಾಡಿ ನರಸಾಪುರದಲ್ಲಿ ಜಮೀನು ಖರೀದಿಸಿದರಂತೆ ಅವಿನಾಶ್.

ಜೊತೆಗೆ ಮೊಬೈಲ್ ಶಾಪ್ ಇತ್ತು. ಟಾರ್ಚ್ ಸೇಲ್ ಕೂಡಾ ಮಾಡ್ತಿದ್ದ ಅವಿನಾಶ್ ದಿನನಿತ್ಯ. ಸಾಕಷ್ಟು ಜನ ರೈತರು ಟಾರ್ಚ್ ಖರೀದಿಗೆ ಅಂಗಡಿಗೆ ಬರೋದನ್ನ ಗಮನಿಸಿ, ಈ ಟಾರ್ಚೆ ಯಾಕೆ ಬೇಕು. ಯಾವ ಬೆಳೆ ಬೆಳೆದಿದ್ದಿರಿ. ಹೇಗೆ ಬೆಳೆದಿದ್ದಿರಿ? ಅಂತೆಲ್ಲ ಮಾತನಾಡಿಸೋರು. ರೈತರ ಮಾತುಗಳನ್ನ ಕೇಳಿ ಯಾಕೆ ಕೃಷಿ ಮಾಡಬಾರದು ಅಂತ ಮನೆಯವರ ವಿರೋಧದ ನಡುವೆಯೂ ಒಂದಿನ ಕೃಷಿ ಕೆಲಸ ಆರಂಭಿಸುವ ನಿರ್ಧಾರ ಮಾಡಿದ್ರು.. ಕುಷ್ಟಗಿ ಅಂದರೆ ದಾಳಿಂಬೆ ಬೆಳೆಯುವುದೇ ಹೆಚ್ಚು. ಮೊದಲು ಅವಿನಾಶ್ ತಲೆಯಲ್ಲೂ ಬಂದದ್ದೇ ದಾಳಿಂಬೆ ಬೆಳೆಯಬೇಕು ಎಂಬುದು. 2016ರಲ್ಲಿ ದಾಳಿಂಬೆಗೆ ದಂಡಾಣು ರೋಗ ಬಂದು ನಷ್ಟವಾಗಿದ್ದರಿಂದ ಆ ಯೋಚನೆಯಿಂದ ಹೊರಬಂದು ಪ್ರಭಾವ ಬೀರಿದ್ದ ಅರಣ್ಯ ಆಧಾರಿತ ಕೃಷಿಗೆ ಕೈ ಹಾಕಿದ್ರು.

ಕುಷ್ಟಗಿಯ ಯುವ ರೈತ ಅವಿನಾಶ್ ಕೋರಾ ಸಾಲ-ಸೋಲ ಮಾಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನರಸಾಪುರ ಬಳಿ 10 ಎಕರೆ ಜಮೀನು ಖರೀದಿಸಿದ್ರು. ಅರಣ್ಯ ಆಧಾರಿತ ಕೃಷಿ ಇವರ ಒಲವಾದರೂ ಮೊದಲಿಗೆ ಸಾಕಷ್ಟು ಪೂರ್ವತಯಾರಿಯೊಂದಿಗೆ ಮಿಶ್ರ ಬೆಳೆಗೆ ಕೈ ಹಾಕಿದ್ರು. ಶ್ರೀಗಂಧ, ರಕ್ತಚಂದನ, ನೆರಳೆ, ಹೆಬ್ಬೇವು ಪೇರಲ, ಸೀತಾಫಲದ ಜೊತೆ ಜೊತೆಗೆ ವರ್ಷದೊಳಗೆ ಆದಾಯ ತರುವ ನಿಂಬೆ, ನುಗ್ಗೆ, ಟೊಮೆಟೊ ಮತ್ತಿತರ ಬೆಳೆಗಳನ್ನ ಬೆಳೆದು ಸೈ ಎನಿಸಿಕೊಂಡರು. 

ಕರ್ನಾಟಕವನ್ನ ಗಂಧದ ನಾಡು ಅಂತಾನೇ ಕರಿತೀವಿ. ಗಂಧಕ್ಕೆ ಕರ್ನಾಟಕ ಫೇಮಸ್. ಇಲ್ಲಿನ ಸ್ಯಾಂಡಲ್ಗೆ ವಿದೇಶದಲ್ಲೂ ಬೇಡಿಕೆ ಇದೆ. ಮೊದಲೆಲ್ಲ ಶ್ರೀಗಂಧವನ್ನ ಕೊಪ್ಪಳದಂಥ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಿಲ್ಲ. ಕಳ್ಳಕಾಕರ ಭಯ. ಮೂರ್ನಾಲ್ಕು ವರ್ಷ ಜತನದಿಂದ ಬೆಳೆದು ಆ ಮೇಲೆ ಅದು ಕಳ್ಳರ ಪಾಲಾದರೆ ಏನು ಗತಿ ಎಂಬ ಭಯ ಈ ಭಾಗದ ರಥರಲ್ಲಿತ್ತು.ಕಳ್ಳರ ಕಣ್ಣು ಗಂಧದ ಮೇಲೆ ಬೀಳುತ್ತೆ ಅಂದರೆ ಅದಕ್ಕಿರುವ ಬೆಲೆ ಎಷ್ಟು ಎಂಬುದನ್ನ ಅರ್ಥ ಮಾಡಿಕೊಳ್ಳಬಹುದು. ಗಂಧ ಬೆಳೆಸಿದರೆ ಒಂದು ಎಕರೆ ಭೂಮಿ ಹೊಂದಿದ ಸಾಮಾನ್ಯ ರೈತನೂ ಸಹ ಕೋಟ್ಯಾಧೀಶ ಆಗಬಹುದು ಅಂತಾರೆ ಅವಿನಾಶ್ .

ಶ್ರೀಗಂಧ ಬೆಳೆಯುವುದಕ್ಕಿಂತ ಮುಂಚೆ ಬೆಂಗಳೂರಿನ ಐಡಬ್ಲ್ಯೂಎಸ್ಡಿಗೆ ಹೋಗಿ ಕೃಷಿ ವಿಜ್ಞಾನಿಗಳ ಮೂಲಕ ಶ್ರೀಗಂಧ ಬೆಳೆಯುವದರ ಸಾಧಕ-ಬಾದಕಗಳನ್ನ ಅರಿತುಕೊಂಡ ಇವರು, ಖಚಿತವಾಗಿ ಲಾಭ ಗಳಿಸಬಹುದು ಎಂಬ ಅಂಶ ಮನದಟ್ಟಾದ ಮೇಲೆ ಶ್ರೀಗಂಧ ಸಸಿಗಳನ್ನ ತಂದು ಜಮೀನಿನಲ್ಲಿ ಹಾಕಿದ್ರಂತೆ.. 10 ಎಕರೆ ಜಮೀನಿನಲ್ಲಿ 3 ಸಾವಿರ ಗಂಧದ ಸಸಿಗಳನ್ನ ನೆಟ್ಟಿದ್ದು, ಒಂದು ಗಂಧದ ಗಿಡದಿಂದ ಮತ್ತೊಂದು ಗಂಧದ ಗಿಡಕ್ಕೆ 12 ಫೀಟ್ ಅಂತರ ಿದೆ. ಮದ್ಯದ 12 ಫೀಟ್ ಜಾಗದಲ್ಲಿ ತೋಟಗಾರಿಕಾ ಬೆಳೆಗಳನ್ನ ಬೆಳೆದಿದ್ದಾರೆ ಅವಿನಾಶ್.

ಶ್ರೀಗಂಧ ಪರಾವಲಂಬಿ ಸಸಿ. ಇದಕ್ಕೆ ಬೇರೆ ಗಿಡಗಳ ಅವಶ್ಯಕತೆ ಖಂಡಿತ ಇದೆ. ಹಾಗಾಗಿ ಅಂತರ ಇರುವ ಜಾಗದಲ್ಲಿ ಬೇರೆ ಬೇರೆ ಸಸಿಗಳನ್ನ ಹಾಕಿದ್ದಾರೆ. ಇದು ಕಾಡುಜಾತಿಯ ಗಿಡವಾಗಿದ್ದರಿಂದ ಕೊಪ್ಪಳದಂತ ನೆಲದಲ್ಲೂ ಕಾಡಿನ ಪರಿಸರ ಕಾಣಬೇಕು ಎಂಬ ಮತ್ತೊಂದು ಉದ್ದೇಶದಿಂದ ಶ್ರೀಗಂಧ ಆಯ್ಕೆ ಮಾಡಿಕೊಂಡಿದ್ದಾರೆ. ಸಾಲಿನಿಂದ ಸಾಲಿಗೆ 10 ಫೀಟ್ ಅಂತರ ಕಾಯ್ದುಕೊಂಡಿದ್ದು ಕಸ ಕೀಳಲು ಈ ಜಾಗ ಅನುಕೂಲವಾಗಲಿದೆ.

ವರದಿ: ಬಸವರಾಜ ಕರುಗಲ್

Stay up to date on all the latest ವಿಶೇಷ news with The Kannadaprabha App. Download now
facebook twitter whatsapp