ಸೋಲಾರ್ ನಿಂದ ಬೀದಿ ವ್ಯಾಪಾರಿಗಳ ಬದುಕು ಬೆಳಗಿದ ಬೆಂಗಳೂರು ಯುವಕ...!

ದೀಪಾವಳಿ ಬಂತೆಂದ್ದರೆ ಸಾಕು ಸಾವಿರಾರು ರೂಪಾಯಿ ಕೊಟ್ಟು ಪಟಾಕಿ ತಂದು, ಅವುಗಳನ್ನು ಮನೆಯ ಮುಂದೆ ಗಂಟೆಗಟ್ಟಲೆ ಹಚ್ಚಿ, ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ಉಂಟು ಮಾಡುವ ಲಕ್ಷಾಂತರ ಯುವಕರಿದ್ದಾರೆ....
ಸೋಲಾರ್ ದೀಪ ನೀಡುತ್ತಿರುವ ಆಕರ್ಷ್
ಸೋಲಾರ್ ದೀಪ ನೀಡುತ್ತಿರುವ ಆಕರ್ಷ್

ಬೆಂಗಳೂರು: ದೀಪಾವಳಿ ಬಂತೆಂದ್ದರೆ ಸಾಕು ಸಾವಿರಾರು ರೂಪಾಯಿ ಕೊಟ್ಟು ಪಟಾಕಿ ತಂದು, ಅವುಗಳನ್ನು ಮನೆಯ ಮುಂದೆ ಗಂಟೆಗಟ್ಟಲೆ ಹಚ್ಚಿ, ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ಉಂಟು ಮಾಡುವ ಲಕ್ಷಾಂತರ ಯುವಕರಿದ್ದಾರೆ. ಆದರೆ 30 ವರ್ಷದ ಆಕರ್ಷ್ ಶಾಮನೂರ್ ಎಂಬ ಯುವಕ ಬೆಳಕಿನ ಹಬ್ಬದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಬಾಳು ಬೆಳಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರು ರಾತ್ರಿಯಾದರೆ ಬೀದಿ ದೀಪಗಳಿಂದ ಝಗಮಗಿಸುತ್ತದೆ. ಆದರೆ ಮಾರುಕಟ್ಟೆಯ ಯಾವುದೋ ಮೂಲೆಯಲ್ಲಿ ಮತ್ತು ಕೆಲವು ಬಡಾವಣೆಗಳಲ್ಲಿ ಇನ್ನೂ ಬೀದಿ ದೀಪದ ಬೆಳಕು ಬಂದಿಲ್ಲ. ಅಲ್ಲಿ ಹೂವಿಟ್ಟುಕೊಂಡು, ತರಕಾರಿಯನ್ನು ಗುಡ್ಡೆ ಹಾಕಿಕೊಂಡು, ಹಣ್ಣುಗಳನ್ನು ಮುಂದಿಟ್ಟುಕೊಂಡು, ಖರೀದಿಗೆ ಬರುವವರ ದಾರಿಯನ್ನೇ ಕಾಯುವ ಜೀವಗಳು ಸಾಕಷ್ಟಿರುತ್ತವೆ. ಆಕರ್ಷ್ ಅವರು ಸಮಾನ ಮನಸ್ಕ್ ಸ್ನೇಹಿತರ ಜೊತೆ ಸೇರಿ ಅಂತಹ ಜೀವಗಳಿಗೆ ಸೋಲಾರ್ ದೀಪ ನೀಡುವ ಮೂಲಕ ಅವರ ಬಾಳು ಬೆಳಗುತ್ತಿದ್ದಾರೆ.

ಆಕರ್ಷ್ ಹಾಗೂ ಆತನ ಸ್ನೇಹಿತರು ಕಳೆದ ಮೂರು ವರ್ಷಗಳಿಂದ ಪ್ರತಿ ದೀಪಾವಳಿಗೂ ಬೀದಿ ವ್ಯಾಪಾರಿಗಳಿಗೆ ಸೋಲಾರ್ ದೀಪ ನೀಡುತ್ತಾ ಬಂದಿದ್ದಾರೆ. ಈ ಸೋಲಾರ್ ದೀಪ 10 ಗಂಟೆಗಳ ಕಾಲ ಉರಿಯುತ್ತದೆ. ಕ್ರೌಡ್ ಫಂಡಿಂಗ್ ಮೂಲಕ ಮೊದಲ ಬಾರಿಗೆ ಜಯನಗರದ ಬೀದಿ ವ್ಯಾಪಾರಿಗಳಿಗೆ ಸೋಲಾರ್ ದೀಪ ನೀಡಿದ್ದೆ ಎಂದು ಆಕರ್ಷ್ ನೆನಪಿಸಿಕೊಳ್ಳುತ್ತಾರೆ.

ಈ ದೀಪಾವಳಿಗೆ ನನ್ನ ಮಾನವೀಯ ಹಣತೆಗೆ ಹಲವು ಜನ ಕೈಜೋಡಿಸಿದ್ದಾರೆ. ನನಗೆ ಪಟಾಕಿ ಅಂದರೆ ಅಲರ್ಜಿ ಮತ್ತು ನನ್ನ ಹಾಗೆ ಹಲವು ಜನ ಪಟಾಕಿ ಮುಕ್ತ ದೀಪಾವಳಿ ಆಚರಿಸಲು ಬಯಸುತ್ತಿದ್ದಾರೆ. ಅವರು ಪಟಾಕಿ ಖರೀದಿಸುವ ಹಣವನ್ನು ನಮಗೆ ನೀಡಿದರೆ ಅದನ್ನು ಬೀದಿ ವ್ಯಾಪಾರಿಗಳಿಗೆ ಸೋಲಾರ್ ಲ್ಯಾಂಪ್ ನೀಡಲು ಬಳಸಲಾಗುವುದು ಎನ್ನುತ್ತಾರೆ.

ಈ ಮುಂಚೆ ನಾವು 1,500 ಬೆಲೆ ಬಾಳುವ ಒಂದು ಸೋಲಾರ್ ಲ್ಯಾಂಪ್ ಅನ್ನು ಬೀದಿ ಬದಿ ವ್ಯಾಪಾರಿಗಳಿಗೆ ನೀಡುತ್ತಿದ್ದೇವೆ. ಈಗ ಪ್ರತಿ ವ್ಯಾಪಾರಿಗೆ ಎರಡು ಸೋಲಾರ್ ಲ್ಯಾಂಪ್ ನೀಡುತ್ತಿದ್ದೇವೆ. ಇದುವರೆಗೆ ನಾವು ಒಟ್ಟು 250 ಸೋಲಾರ್ ಲ್ಯಾಂಪ್ ವಿತರಿಸಿದ್ದೇವೆ ಎಂದು ಆಕರ್ಷ್ ಶ್ಯಾಮನೂರ್ ಅವರು ತಿಳಿಸಿದ್ದಾರೆ.

ಪ್ರತಿ ಬಾರಿ ನಾನು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೀದಿ ವ್ಯಾಪಾರಿಗಳು ಕತ್ತಲಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೆ. ಆಗ ಅವರಿಗೆ ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ಈ ವಿಚಾರ ಬಂತು. ಅಂದಿನಿಂದ ಪ್ರತಿ ದೀಪಾವಳಿಗೆ ಸೋಲಾರ್ ದೀಪ ನೀಡುವ ಮೂಲಕ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದೇನೆ ಎನ್ನುತ್ತಾರೆ ಆಕರ್ಷ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com