ಭಾರತದ ಶಾಸ್ತ್ರೀಯ ಸಂಗೀತದ ಅತಿದೊಡ್ಡ ಮತ್ತೊಂದು ಧ್ವನಿ 'ಪಂಡಿತ್ ಜಸ್ ರಾಜ್'

ಭಾರತದ ಶಾಸ್ತ್ರೀಯ ಸಂಗೀತ ಲೋಕದ ಮತ್ತೊಂದು ಕೊಂಡಿ ಕಳಚಿದೆ. ಪಂಡಿತ್ ಜಸ್ ರಾಜ್  ನ್ಯೂಜೆರ್ಸಿಯ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಎಂಟು ದಶಕಗಳ ಕಾಲ ತಮ್ಮ ಧ್ವನಿಯಿಂದ ರಂಜಿಸಿದ ಸಂಗೀತ ದಿಗ್ಗಜನ ಸ್ವರ ನಿಂತಿದೆ.
ಪಂಡಿತ್ ಜಸ್ ರಾಜ್
ಪಂಡಿತ್ ಜಸ್ ರಾಜ್

ಭಾರತದ ಶಾಸ್ತ್ರೀಯ ಸಂಗೀತ ಲೋಕದ ಮತ್ತೊಂದು ಕೊಂಡಿ ಕಳಚಿದೆ. ಪಂಡಿತ್ ಜಸ್ ರಾಜ್  ನ್ಯೂಜೆರ್ಸಿಯ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಎಂಟು ದಶಕಗಳ ಕಾಲ ತಮ್ಮ ಧ್ವನಿಯಿಂದ ರಂಜಿಸಿದ ಸಂಗೀತ ದಿಗ್ಗಜನ ಸ್ವರ ನಿಂತಿದೆ.

ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ತನ್ನ ಪುಟ್ಟ ಗ್ರಹಕ್ಕೆ ಜಸ್ ರಾಜ್ ಹೆಸರನ್ನಿಟ್ಟಿತ್ತು. ಅದಕ್ಕೂ ಮೊದಲು ಈ ಗೌರವ ಅಮಡಿಯಸ್ ಮೊಝರ್ಟ್, ಲುಡ್ವಿಗ್ ವಾನ್ ಬೀತೊವೆನ್, ಲುಸಿಯಾನೊ ಪವರೊಟ್ಟಿ ಅವರಿಗೆ ಮಾತ್ರ ಸಂದಿತ್ತು. ಭಾರತದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರನಿಗೆ ಸಿಕ್ಕಿದ ಮೊದಲ ಗೌರವ ಇದಾಗಿತ್ತು.

ಮೆವಟಿ ಘರಾನಾ ಶೈಲಿಯಲ್ಲಿ ಹಾಡುತ್ತಿದ್ದ ಜಸ್ ರಾಜ್ ಬಡೆ ಗುಲಾಂ ಆಲಿ ಖಾನ್, ಎಂ ಎಸ್ ಸುಬ್ಬಲಕ್ಷ್ಮಿ, ಭೀಮ್ ಸೇನ್ ಜೋಷಿ ಅಂತವರ ಪರಂಪರೆಗೆ ಸೇರಿದವರು.ಖಯಾಲ್ ಮಿಶ್ರಿತ ತುಮ್ಲಿ ಮೂಲಕ ಹರ್ಯಾಣ ಮೂಲದ ಜಸ್ ರಾಜ್ ಸಂಗೀತ ಎಲ್ಲರಿಗೂ ಸಿಗುವಂತೆ ಮಾಡಿದ್ದರು.

ಜಸ್ ರಾಜ್ ಅವರು ಕೆಲವೊಮ್ಮೆ ಮಧ್ಯರಾತ್ರಿ ಎದ್ದು ಬಂದೀಶ್, ಅಬಿರಿ ತೋಡಿ, ಪಟ್ ದೀಪ್ಕಿ ಗಳ ರಾಗ ಸಂಯೋಜನೆ ಮಾಡುತ್ತಿದ್ದರಂತೆ, ಜುಗಲ್ ಬಂದ್, ಜಸ್ ರಂಗಿ ಹೊಸ ರಾಗಗಳನ್ನು ಸಹ ಪರಿಚಯಿಸಿದ್ದರು.

ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ಪಂಡಿತ್ ಜಸ್ ರಾಜ್ ಪವೇಲಿ ಸಂಗೀತದಂತಹ ಅರೆ ಶಾಸ್ತ್ರೀಯ ಸಂಗೀತವನ್ನು ಪ್ರಚುರಪಡಿಸಿದ್ದರು. ತಮ್ಮ ಭಜನೆಗಳ ಮೂಲಕ ಜನರಿಗೆ ಹತ್ತಿರವಾದರು. ಅವರ ಓಂ ನಮೊ ಭಗವತೆ ಶ್ರೀಕೃಷ್ಣನ ಬಗೆಗಿನ ಹಾಡು ಬಹಳ ಜನಪ್ರಿಯ. ಅವರಿಗೆ ಘಜಲ್ ಗಳೆಂದರೆ ಬಹಳ ಅಚ್ಚುಮೆಚ್ಚಾಗಿತ್ತು.

1930ರ ಜನವರಿ 28ರಂದು ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿ ಜನಿಸಿದ ಜಸ್ ರಾಜ್ ಅವರು ಶಾಸ್ತ್ರೀಯ ಸಂಗೀತ ಕಲಿಯಲು, ಒಲಿಯಲು ಕಾರಣ ತಂದೆಯವರಾದ ಪಂಡಿತ್ ಮೊಟಿರಾಮ್, ಸೋದರ ಪಂಡಿತ್ ಮನಿರಾಮ್ ಮಾರ್ಗದರ್ಶನದಲ್ಲಿ ಬೆಳೆದರು.

ಬೇಗಮ್ ಅಖ್ತರ್ ಅವರ ಧ್ವನಿ ಕೇಳಿದ ಪುಟ್ಟ ಬಾಲಕ ಜಸ್ ರಾಜ್ ಗೆ ಮಿಂಚಿನ ಸಂಚಾರವಾದಂತಾಯಿತು. ಆಗ ಜಸ್ ರಾಜ್ ಗೆ 14 ವರ್ಷ ವಯಸ್ಸು. ಹೈದರಾಬಾದ್ ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಹೊಟೇಲೊಂದರಲ್ಲಿ ಬೇಗಂ ಅಖ್ತರ್ ಅವರ ಘಜಲ್ ದೀವಾನ ಬನಾನ ಹೈ ತೊ ದೀವಾನ ಬನಾ ದೆ, ವರ್ನಾ ತಖ್ದೀರ್ ತಮಾಶಾ ನ ಬನಾ ದೆ ಹಾಡು ಬರುತ್ತಿತ್ತಂತೆ. ಆಗಲೆಲ್ಲ ಹಾಡನ್ನು ಕೇಳಲು ಹೊಟೇಲ್ ಮುಂದೆ ಬಾಲಕ ನಿಂತುಬಿಡುತ್ತಿದ್ದನಂತೆ. ಹಾಡು ಕೇಳಲೆಂದೇ ಬಾಲಕ ಆ ಹೊಟೇಲ್ ಗೆ ಹೋಗುತ್ತಿದ್ದರಂತೆ. ನಾನು ಶಾಲೆಯಿಂದ ಹೆಚ್ಚು ಹೊತ್ತು ಹೊಟೇಲ್ ನಲ್ಲಿಯೇ ಕಳೆಯುತ್ತಿದ್ದೆ ಎಂದು ಜಸ್ ರಾಜ್ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಜಸ್ ರಾಜ್ ಮೊದಲ ಬಾರಿ ಸಾರ್ವಜನಿಕ ವೇದಿಕೆಯಲ್ಲಿ ಹಾಡಿದ್ದು ನೇಪಾಳ ದೊರೆ ತ್ರಿಭುವನ್ ಬಿರ್ ಬಿಕ್ರಮ್ ಶಾ ಅವರ ಮುಂದೆ 1952ರಲ್ಲಿ. ಇವರ ಸ್ವರ, ಸಂಗೀತ ಕೇಳಿ ನೇಪಾಳ ದೊರೆ 5 ಸಾವಿರ ಚಿನ್ನದ ನಾಣ್ಯಗಳನ್ನು ಆಗ ನೀಡಿದ್ದರಂತೆ. ಆಗ ನನಗೆ 22 ವರ್ಷವಿರಬಹುದು. ಆ ಚಿನ್ನದ ನಾಣ್ಯಗಳನ್ನು ನೋಡಿ ನಾನು ಅಚ್ಚರಿಯಿಂದ, ಆಘಾತದಿಂದ ಬೆವತು ಹೋದೆ. ತಲೆಸುತ್ತಿದಂತಾಯಿತು ಎಂದು ಕಳೆದ ಜನವರಿಯಲ್ಲಿ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದರು.

ಜಸ್ ರಾಜ್ ತಮ್ಮ ಸಂಗೀತವನ್ನು, ತಪ್ಪು-ಒಪ್ಪುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಸ್ಕೈಪೆಯಂತಹ ಆಧುನಿಕ ತಂತ್ರಜ್ಞಾನದ ಮೂಲಕ ಆನ್ ಲೈನ್ ನಲ್ಲಿ ಸಂಗೀತ ಹೇಳಿಕೊಡುತ್ತಿದ್ದರು. ಹಿಂದಿನ ಕಾಲವೇ ಚೆನ್ನಾಗಿತ್ತು ಈಗ ಕಾಲ ಕೆಟ್ಟುಹೋಗಿದೆ ಎಂದು ಹೇಳುವುದರಲ್ಲಿ ನನಗೆ ನಂಬಿಕೆಯಿಲ್ಲ, ನಾವು ಕಾಲಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗಬೇಕು, ಅದುವೇ ಜೀವನ ಎನ್ನುತ್ತಿದ್ದರು ಜಸ್ ರಾಜ್.

ಜಸ್ ರಾಜ್ ಗೆ ಲತಾ ಮಂಗೇಶ್ಕರ್ ಎಂದರೆ, ಅವರ ಗಾಯನವೆಂದರೆ ಬಹಳ ಇಷ್ಟವಾಗಿತ್ತು. ಆಕೆಯ ರೀತಿ ಮತ್ತೊಬ್ಬರಿಲ್ಲ ಎನ್ನುತ್ತಿದ್ದರು. ಇಂತಿಪ್ಪ ಜಸ್ ರಾಜ್ ವಿವಾಹವಾಗಿದ್ದು ಖ್ಯಾತ ನಿರ್ದೇಶಕ ವಿ ಶಾಂತರಾಮ್ ಅವರ ಮಗಳು ಮಧುರಾ ಎಂಬುವವರವನ್ನು. ಈ ದಂಪತಿಗೆ ಶಾರಂಗ್ ದೇವ್ ಪಂಡಿತ್ ಎಂಬ ಪುತ್ರ ಮತ್ತು ದುರ್ಗಾ ಜಸ್ ರಾಜ್ ಎಂಬ ಮಗಳಿದ್ದಾರೆ. ಇಬ್ಬರೂ ಸಂಗೀತಗಾರರು.

ಜಸ್ ರಾಜ್ ಸಿನೆಮಾದಲ್ಲಿ ಮೊದಲು ಹಾಡಿದ್ದು 1966ರಲ್ಲಿ ವಂದನಾ ಕರೊ ಎಂಬ ಭಜನೆ, ಅದು ರಾಗ ಅಹಿರ್ ಭೈರವಿ, ತಮ್ಮ ಮಾವ ವಿ ಶಾಂತರಾಮ್ ಅವರ ಲಡ್ಕಿ ಸಹ್ಯಾದ್ರಿ ಕಿ ಚಿತ್ರಕ್ಕೆ. ನಂತರ 1975ರಲ್ಲಿ ಬೀರ್ ಬಲ್ ಮೈ ಬ್ರದರ್ ಚಿತ್ರಕ್ಕೆ ಹಾಡಿದ್ದರು. ಅದರಲ್ಲಿ ರಾಗ ಮುಲ್ಕೌನ್ಸ್ ನಲ್ಲಿ ಪಂಡಿತ್ ಭೀಮ್ ಸೇನ್ ಜೋಷಿ ಜೊತೆ ಜುಗಲ್ ಬಂದಿ.

ಪಂಡಿತ್ ಜಸ್ ರಾಜ್ ಕೊನೆಯ ಬಾರಿ ಬಾಲಿವುಡ್ ಚಿತ್ರಕ್ಕೆ ಹಾಡಿದ್ದು 2008ರಲ್ಲಿ, ಅದು ವಿಕ್ರಮ್ ಭಟ್ ಅವರ ಹಾರರ್ ಚಿತ್ರ 1920ಗೆ. ವಾದಾ ತುಮ್ಸೆ ಹೈ ವಾದಾ ಹಾಡನ್ನು ಹಾಡಿದ್ದರು. ಅವರ ಅಹಿರ್ ಭೈರವಿ ರಾಗವನ್ನು ಚಿತ್ರ ನಿರ್ದೇಶಕ ಅಂಗ್ ಲೀ ತಮ್ಮ ಹಾಲಿವುಡ್ ಚಿತ್ರ ಲೈಫ್ ಆಫ್ ಪೈಗೆ ಬಳಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com