ಕೀರ್ತಿ, ಪ್ರಚಾರದಿಂದ ಸದಾ ದೂರವಿದ್ದ ಖ್ಯಾತ ವಿಜ್ಞಾನಿ 'ರೊದ್ದಂ ನರಸಿಂಹ'

ಪ್ರಾಮಾಣಿಕತೆ, ಕಡುನಿಷ್ಠೆ, ಅಧ್ಯಯನ ಶೀಲತೆ ಮತ್ತು ರಾಷ್ಟ್ರ ಪ್ರೇಮಕ್ಕೆ ಆದರ್ಶದಂತಿದ್ದ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹವರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಲೇಖನ ಬರೆಯುತ್ತಿದ್ದೇನೆ.

Published: 15th December 2020 03:17 PM  |   Last Updated: 15th December 2020 03:58 PM   |  A+A-


Roddam Narasimha

ರೊದ್ದಂ ನರಸಿಂಹ

UNI

ಬೆಂಗಳೂರು: ಪ್ರಾಮಾಣಿಕತೆ, ಕಡುನಿಷ್ಠೆ, ಅಧ್ಯಯನ ಶೀಲತೆ ಮತ್ತು ರಾಷ್ಟ್ರ ಪ್ರೇಮಕ್ಕೆ ಆದರ್ಶದಂತಿದ್ದ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹವರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಲೇಖನ ಬರೆಯುತ್ತಿದ್ದೇನೆ.
 
ಇದೀಗ ನಮ್ಮನ್ನಗಲಿದ ರೊದ್ದಂ ನರಸಿಂಹ ಪ್ರಚಾರ ಜಗತ್ತಿನಿಂದ ಬಹುದೂರ. ಶ್ರದ್ಧಾಪೂರ್ಣ ವಿಜ್ಞಾನಿ. ವಿಶ್ವವಿಖ್ಯಾತರಾದರೂ ಮಾಧ್ಯಮದಲ್ಲಿ ಅತಿ ಕಡಿಮೆ, ಕೈ ಬೆರಳಣಿಯಷ್ಟು ಪತ್ರಕರ್ತರಿಗೆ ಮಾತ್ರ ಇವರು ಪರಿಚಿತರಾಗಿದ್ದರು ಎಂದರೆ ಅಚ್ಚರಿಯೆನಿಸಬಹುದು.

ರಾಷ್ಟ್ರ ಕವಿ ಕುವೆಂಪು ಅವರ ಮಾತು ರೊದ್ದಂ ನರಸಿಂಹಂಗೆ ಅನ್ವಯಿಸುವ ಗುಣವಿಶೇಷಣ. ತೊಲಗಾಚೆ ಕೀರ್ತಿಖನಿ... ಎಂದರೆ ಕುವೆಂಪು ಬದುಕಿನುದ್ದಕ್ಕೂ ಕೀರ್ತಿ ಪ್ರಚಾರಗಳನ್ನು ದೂರವಿಟ್ಟಿದ್ದರು. ಪ್ರೊ. ನರಸಿಂಹ ಅವರು ಅವರು ಅಚ್ಚಕನ್ನಡಿಗರು ಎಂದು ಕನ್ನಡ ನಾಡಿನ ಬಹುಮಂದಿಗೆ ತಿಳಿದದ್ದೇ.

ಹಾಗೆಂದ ಮಾತ್ರಕ್ಕೆ ಮಾಧ್ಯಮವನ್ನು ನಮ್ಮ ಈ ಮಹಾನ್ ವಿಜ್ಞಾನಿ ದೂರ ಇಟ್ಟಿದ್ದರು ಎಂದು ಅರ್ಥವಲ್ಲ. ವಿಜ್ಞಾನ ಪ್ರಯೋಗಗಳ ಬಗೆಗೆ ಪ್ರಶ್ನಿಸುವಾಗ ವರದಿಗಾರ ಅಂತಹ ವಿಷಯವನ್ನು ಕುರಿತು ಕನಿಷ್ಠ ಪ್ರಮಾಣದಲ್ಲಿಯಾದರೂ ಪೂರ್ವ ಸಿದ್ಧತೆ-ಹೋಂ ವರ್ಕ್ ಮಾಡಲಿ ಎನ್ನುವ ವೈಜ್ಞಾನಿಕ ಮನೋಭಾವ ರೊದ್ದಂ ನರಸಿಂಹರಲ್ಲಿತ್ತು. ಅಂತೆಯೇ ಜನಸಾಮಾನ್ಯರಿಗೆ ಮನದಟ್ಟಾಗುವಂತೆ ವಿಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ನವಿರಾಗಿ ವಿವರಿಸುತ್ತಿದ್ದ ಜ್ಞಾನ ಔದಾರ್ಯ ಇವರದು. ಪ್ರೊ. ರೊದ್ದಂರ ವ್ಯಾಖ್ಯಾನ ಮತ್ತು ನಿರ್ಣಯ ವಾಯುಚಲನೆ ವಿಜ್ಞಾನದ ವೇದವ್ಯಾಖ್ಯೆದಂತೆ ಇರುತ್ತಿತ್ತು. ಭಾರತದ ಉಪಖಂಡದ ಮೂಲೆ ಮೋಡಗಳ ಚಲನೆಯ ಸೂಕ್ಷ್ಮಾತಿ ಸೂಕ್ಷ್ಮ ಅಂಶಗಳನ್ನು ಅಭ್ಯಸಿಸಲು ಅಹರ್ನಿಶಿ ಅವರು ನಡೆಸಿದ ಪ್ರಯೋಗಗಳು ಮತ್ತು ಸಿದ್ಧಾಂತ ಇಂದಿಗೂ ಅಂತಿಮ-ಇಂಗ್ಲೀಷ್ ನಲ್ಲಿ ಹೇಳುವಂತೆ ultimate- ಆಗಿರುತ್ತಿತ್ತು.

ಹಾಗೊಮ್ಮೆ ವರದಿಗಾರ ತಮ್ಮ ವಿವರಣೆಯನ್ನು ಅಸರ್ಮಪಕವಾಗಿ ಇಲ್ಲವೇ ತಪ್ಪಾಗಿ ಅರ್ಥೈಸಿಕೊಂಡಲ್ಲಿ ಆಯಾ ಪತ್ರಿಕರ ಅಥವಾ ಚಾಲನೆಗಳಿಗೆ ಮುದ್ದಾಂ ಫೋನು ಮಾಡಿ ತಿದ್ದುಪಡಿಗೆ ಅನುಮಾಡಿಕೊಡುತ್ತಿದ್ದರು ಪ್ರೊ.ರೊದ್ದಂ. ಸತ್ಯನಿಷ್ಠುರರಾದ ಈ ವಿಜ್ಞಾನಿಯನ್ನು ಕಂಡರೆ ಮಾಧ್ಯಮಕ್ಕೂ ಭಯವಿತ್ತು. ಇದೇ ರೀತಿ ಪ್ರಚಾರಕ್ಕೆ ಮೀಸಲಾಗುವ ವಿಜ್ಞಾನಿಗಳು ರೊದ್ದಂ ರವರ ಬಳಿ ಹೋಗಲು ಹಿಂಜರಿದದ್ದೂ ಉಂಟು.

ಪ್ರೊ. ಧವನ್ ರ ಶಿಷ್ಯ:
ವಿಶ್ವ ವಿಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ. ಸತೀಶ್ ಧವನ್ನರಿಗೆ ರೊದ್ದಂ ನರಸಿಂಹರ ವೈಜ್ಞಾನಿಕ ಅನ್ವೇಷಣೆ ಮತ್ತು ನಿರ್ಣಯಗಳ ಬಗೆಗೆ ಅಪಾರ ನಂಬಿಕೆ ಮತ್ತು ಭರವಸೆ. 'ತೇಜಸ್' ಲಘುವಿಮಾನಗಳ ರಚನೆ ಮತ್ತು ಸಂಯೋಜನೆಗೆ ಪ್ರೊ. ರೊದ್ದಂ ರವರ ಹೆಸರನ್ನು ಸೂಚಿಸಿದವರೇ ಧವನ್ ಎಂದು ಹೇಳುವುದುಂಟು. ಉಪಗ್ರಹಗಳ ಸಂಯೋಜಿತ ಅಭಿವೃದ್ಧಿ ಪ್ರಯೋಗಗಳ ಹಂತದಲ್ಲಿ ಆಕಾಶವಾಣಿಯ ವರದಿಗಾರನಾಗಿದ್ದ ನನಗೆ ಮತ್ತು ಯುಎನ್ಐ ವರದಿಗಾರ ಫಡ್ನೀಸ್ ಅವರಿಗೆ ಪ್ರೊ. ಧವನ್ ರ ಮೂಲಕ ರೊದ್ದಂ ನರಸಿಂಹರು ಪರಿಚಯವಾದದ್ದು ನಮ್ಮೆಲ್ಲರ ಸೌಭಾಗ್ಯ. ಕನ್ನಡದಲ್ಲಿ ಇನ್ಸ್ಯಾಟ್ ಉಡಾವಣೆಯ ಬಹುಕ್ಲಿಷ್ಟ ಇಂಗ್ಲಿಷ್ ಪದಗಳಿಗೆ ಸರಿಸಮನಾದ ಕನ್ನಡ ಪರ್ಯಾಯ ಪದಗಳನ್ನು ಹುಡುಕಲು ತಡಬಡಿಸುತ್ತಿದ್ದ ನನ್ನ ನೆರವಿಗೆ ಬಂದ ವಿಜ್ಞಾನಿ ಇವರು. ಇಸ್ರೋ ಸಂಸ್ಥೆಯ ವಿಜ್ಞಾನಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ದಿ. ಕೃಷ್ಣಮೂರ್ತಿ ಶ್ರೀ ಹರಿಕೋಟ ಉಡ್ಡಯನ ಕ್ಷೇತ್ರದಲ್ಲಿ ವಿಜ್ಞಾನಿ ಕನ್ನಡ ಕುರಿತು ಪುಟ್ಟ ಸಂವಾದ -ಸಮ್ಮೇಳನ ನಡೆಸುತ್ತಿದ್ದುದನ್ನು ನಾನು ಎಂದಿಗೂ ಮರೆಯಲಾರೆ.
ಅಂದಿನ ರಕ್ಷಣಾ ವಿಷಯಗಳ ತಜ್ಞ ವರದಿಗಾರ ಸೋಮನಾಥ ಸಪ್ರು ಮತ್ತು ಪ್ರೊ. ರೊದ್ದಂ ನರಸಿಂಹರ ನಡುವೆ ನಡೆಯುತ್ತಿದ್ದ ಪ್ರಶ್ನೋತ್ತರಗಳು ನನ್ನಂತಹ ಸಾಮಾನ್ಯ ವರದಿಗಾರನಿಗೆ ಪುನಶ್ಚರಣ ತರಗತಿಗಳಂತಾಗುತ್ತಿತ್ತು.

ಪ್ರೊ. ರೊದ್ದಂ ಕನಸುಗಳು:
ರೊದ್ದಂ ನರಸಿಂಹರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ) ಮತ್ತು ರಾಷ್ಟ್ರೀಯ ವಿಜ್ಞಾನ ವಿಷಯಗಳ ಉನ್ನತ ಅಧ್ಯಯನ ಕೇಂದ್ರದ( ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್) ಬಗ್ಗೆ ಅಪಾರ ಅಭಿಮಾನ. 1980-90 ಮತ್ತು ನವಯುಗದ ಅಡಿಯಲ್ಲಿ ವಿದ್ಯಾರ್ಥಿಗಳು ಮೂಲಭೂತ ವಿಜ್ಞಾನ ವಿಷಯಗಳ ಅಧ್ಯಯನವನ್ನು ಅಸಡ್ಡೆ ಮಾಡುತ್ತಿದ್ದುದರ ಬಗೆಗೆ ಅಪಾರವಾಗಿ ನೊಂದ ವಿಜ್ಞಾನಿ ಇವರು. ಭಾರತದ ವಿಜ್ಞಾನ ಕ್ಷೇತ್ರ ವಿಕಸಿತಗೊಂಡು ಜನಸಾಮಾನ್ಯರಿಗೆ ವೈಜ್ಞಾನಿಕ ಪ್ರಯೋಗಗಳು ಹಾಗೂ ಸಂಶೋಧನೆಯ ಫಲ ಸಿಗಬೇಕಾದರೆ ಫಂಡಮೆಂಟಲ್ ಸೈನ್ಸ್ ಅಧ್ಯಯನ ವ್ಯಾಪಕವಾಗಿ ಸ್ಥಿರಗೊಳ್ಳಬೇಕು ಎಂಬುದು ಪ್ರೊ. ರೊದ್ದಂರ ವಾದ. ಇದೇ ರೀತಿ ನಿರ್ಣಾಯಕ ಹಂತದ ಪ್ರಯೋಗಗಳನ್ನು ನಡೆಸುವ ವಿಜ್ಞಾನಿಗಳಿಗೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಆರ್ಥಿಕ ಸೌಲಭ್ಯ ಇದ್ದಲ್ಲಿ ಮಾತ್ರ ರಾಷ್ಟ್ರದ ಪ್ರಗತಿಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿದ ವಿಜ್ಞಾನಿ (ಬಹುಶಃ ಏಕೈಕ ಎಂದರೂ ತಪ್ಪಿಲ್ಲ) ಪ್ರೊ. ರೊದ್ದಂ ನರಸಿಂಹ. ವಿಧಿವಶರಾದ ಪ್ರೊ. ರೊದ್ದಂ ನರಸಿಂಹಗೆ ನಾಡಿನ ಜನತೆ ಶ್ರದ್ಧಾಂಜಲಿ ಅರ್ಪಿಸುತ್ತಿದೆ.

- ಶೇಷಣ್ಣ, ಮಾಧ್ಯಮ ತಜ್ಞರು


Stay up to date on all the latest ವಿಶೇಷ news
Poll
Priyanka Gandhi

ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭವಿಷ್ಯ ಸುಧಾರಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp