ಹಿನ್ನೋಟ 2020:  ಹವಾಮಾನ ವಿಪತ್ತುಗಳಿಂದ ಭಾರತದಲ್ಲಿ 10 ಬಿಲಿಯನ್ $ ನಷ್ಟ; 2000ಕ್ಕೂ ಹೆಚ್ಚು ಜೀವ ಹಾನಿ!

ಭಾರತದಲ್ಲಿ ಉಂಟಾಗಿದ್ದ ಪ್ರವಾಹಗಳು, ಚಂಡಮಾರುತಗಳು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ನಷ್ಟ ಉಂಟುಮಾಡಿದ 5 ನೇ ಹವಾಮಾನ ವಿಪತ್ತಾಗಿದೆ. 
2020 ರ ಹವಾಮಾನ ವಿಪತ್ತುಗಳಿಂದ ಭಾರತದಲ್ಲಿ 10 ಬಿಲಿಯನ್ $ ನಷ್ಟ; 2000ಕ್ಕೂ ಹೆಚ್ಚು ಜೀವ ಹಾನಿ!
2020 ರ ಹವಾಮಾನ ವಿಪತ್ತುಗಳಿಂದ ಭಾರತದಲ್ಲಿ 10 ಬಿಲಿಯನ್ $ ನಷ್ಟ; 2000ಕ್ಕೂ ಹೆಚ್ಚು ಜೀವ ಹಾನಿ!

ನವದೆಹಲಿ: ಭಾರತದಲ್ಲಿ ಉಂಟಾಗಿದ್ದ ಪ್ರವಾಹಗಳು, ಚಂಡಮಾರುತಗಳು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ನಷ್ಟ ಉಂಟುಮಾಡಿದ 5 ನೇ ಹವಾಮಾನ ವಿಪತ್ತಾಗಿದೆ. 

ಈ ವಿಪತ್ತಿನಿಂದಾಗಿ ದೇಶದಲ್ಲಿ 10 ಬಿಲಿಯನ್ ಡಾಲರ್ ನಷ್ಟ ಉಂಟಾಗಿದ್ದು, 2000 ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ ಎನ್ನುತ್ತಿದೆ ಜಾಗತಿಕ ಮಟ್ಟದ ಎನ್ ಜಿಒ ಕ್ರಿಶ್ಚಿಯನ್ ಏಡ್ ನ ವರದಿ. 

ಜಾಗತಿಕ ಮಟ್ಟದಲ್ಲಿ 2020 ರಲ್ಲಿ ಅತಿ ಹೆಚ್ಚು ಹಾನಿಗೀಡುಮಾಡಿದ 15 ಹವಾಮಾನ ವಿಪತ್ತುಗಳ ಬಗ್ಗೆ ಅಧ್ಯಯನ ನಡೆಸಿರುವ ಈ ಎನ್ ಜಿಒ ಜೀವ (The Cost: A Year of Climate Breakdown) ಎಂಬ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಭಾರತದಲ್ಲಿ ಉಂಟಾದ ವಿಪತ್ತುಗಳು ಹಾಗೂ ಅದರಿಂದ ಉಂಟಾದ ಜೀವನ-ಜೀವ ಹಾನಿಗಳ ಬಗ್ಗೆಯೂ ಅಂಕಿ-ಅಂಶಗಳನ್ನು ನೀಡಲಾಗಿದ್ದು ಜೂನ್-ಅಕ್ಟೋಬರ್ ತಿಂಗಳಲ್ಲಿ ಉಂಟಾದ ಪ್ರವಾಹದಲ್ಲಿ 2,067 ಮಂದಿ ಕಳೆದುಕೊಂಡಿದ್ದಾರೆ. 

ಭಾರತವೂ ಸೇರಿದಂತೆ ಬಂಗಾಳ ಕೊಲ್ಲಿ ಪ್ರದೇಶದ ರಾಷ್ಟ್ರಗಳಿಗೆ ಅಪ್ಪಳಿಸಿದ್ದ ಅಂಫಾನ್ ಚಂಡಮಾರುತವೊಂದರಿಂದಲೇ 13 ಬಿಲಿಯನ್ ಡಾಲರ್ ನಷ್ಟು ಆರ್ಥಿಕ ಪರಿಣಾಮ ಬೀರಿದ್ದು, 4.9 ಮಿಲಿಯನ್ ಜನರನ್ನು ಸ್ಥಳಾಂತರಗೊಳ್ಳುವಂತೆ ಮಾಡಿತ್ತು. ಇದು 2020 ರಲ್ಲಿ ಜಗತ್ತಿನ ಯಾವುದೇ ಪ್ರದೇಶದಲ್ಲಿ ತೀವ್ರ ಹವಾಮಾನ ಘಟನೆಯಿಂದ ಸಂಭವಿಸಿದ ಅತಿ ಹೆಚ್ಚು ಪ್ರಮಾಣದ ಸ್ಥಳಾಂತರವಾಗಿದೆ ಎಂದು ವರದಿ ತಿಳಿಸಿದೆ. 

ಜೂನ್-ಅಕ್ಟೋಬರ್ ನಲ್ಲಿ ಭಾರತ ಎದುರಿಸಿದ ಪ್ರವಾಹ 2020 ರಲ್ಲಿ ಸಂಭವಿಸಿದ ಜಗತ್ತಿನ ಎರಡನೇ ಅತಿ ದೊಡ್ಡ ವಿಪತ್ತಾಗಿದ್ದು, 4 ದಶಲಕ್ಷ ಮಂದಿಯ ಮೇಲೆ ಪರಿಣಾಮ ಬೀರಿದ್ದು, ಆರ್ಥಿಕವಾಗಿ ಭಾರಿ ದೊಡ್ದ ಹೊಡೆತವನ್ನೇ ನೀಡಿತು ಎಂದು ವರದಿ ಹೇಳಿದೆ. 

ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರೋಲಜಿಯಯ ಹವಾಮಾನ ವಿಜ್ಞಾನಿ ಡಾ. ರಾಕ್ಸಿ ಮ್ಯಾಥ್ಯೂ ಕೋಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಹಿಂದೂ ಮಹಾಸಾಗರಕ್ಕೆ ಸಂಬಂಧಿಸಿದಂತೆ 2020 ಅಸಾಧಾರಣ ತಾಪಮಾನ ದಾಖಲಾಗಿದ್ದ ವರ್ಷವಾಗಿತ್ತು. ಈ ವರ್ಷ ಅರೇಬಿಯನ್ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ 30°C-33°C ತಾಪಮಾನ ದಾಖಲಾಗಿದೆ. ಈ ರೀತಿಯ ಹೆಚ್ಚಿನ ತಾಪಮಾನಗಳು ಸಮುದ್ರದ ಶಾಖ ತರಂಗಗಳ ಗುಣಲಕ್ಷಣಗಳನ್ನು ಹೊಂದಿದ್ದು, ಮುಂಗಾರು ಪೂರ್ವ ಚಂಡಮಾರುತಗಳಾದ ಅಮ್ಫಾನ್ ಮತ್ತು ನಿಸರ್ಗಗಳ ಕ್ಷಿಪ್ರ ತೀವ್ರತೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. 

ಹವಾಮಾನ ಬದಲಾವಣೆಯಿಂದಾಗಿ ಒಟ್ಟಾರೆ 9 ತೀವ್ರ ಪ್ರಾಕೃತಿಕ ಘಟನೆಗಳು ಸಂಭವಿಸಿದ್ದು, ಪ್ರತಿಯೊಂದರಿಂದ 5 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತಲೂ ಹೆಚ್ಚು ಹಾನಿ ಸಂಭವಿಸಿದೆ ಎಂದಿದೆ ಈ ವರದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com