280 ಅಡಿ ಅಗಲ, 300 ಅಡಿ ಉದ್ದ, 161 ಅಡಿ ಎತ್ತರ: ವಿಶ್ವದ 3ನೇ ಅತಿದೊಡ್ಡ ಹಿಂದೂ ದೇವಾಲಯವಾಗಲಿದೆ ಅಯೋಧ್ಯೆ ರಾಮ ಮಂದಿರ!

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ.
ರಾಮ ದೇವಾಲಯದ ವಿನ್ಯಾಸ
ರಾಮ ದೇವಾಲಯದ ವಿನ್ಯಾಸ

ಲಖನೌ: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಇದಾಗಲೇ ತಯಾರಾಗಿದ್ದ ದೇವಾಲಯದ ನೀಲನಕ್ಷೆ ಗಾತ್ರ ಮತ್ತು ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ಶ್ರೀ ರಾಮ ಜನ್ಮಭೂಮಿ  ತೀರ್ಥ ಕ್ಷೇತ್ರ ಟ್ರಸ್ಟ್ ಒಪ್ಪಿಗೆ ಸೂಚಿಸಿದ ಕಾರಣ ಅಯೋಧ್ಯೆಯ ಪ್ರಸ್ತಾವಿತ ರಾಮ ದೇವಾಲಯವು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದೆನಿಸಲಿದೆ.

ಏತನ್ಮಧ್ಯೆ, ‘ಭೂಮಿ ಪೂಜೆ’  ದಿನಾಂಕವನ್ನು ನಿಗದಿಪಡಿಸುವುದರೊಂದಿಗೆ, ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಪ್ರಾರಂಭವಾಗಿದೆ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ಲಕ್ನೋ ಚಾಪ್ಟರ್ ಮಂಗಳವಾರ ದೇವಾಲಯದ ಟ್ರಸ್ಟ್ ಮುಖ್ಯಸ್ಥ ಮಹಂತ್ ನರ್ತ್ಯಗೋಪಾಲ್ ದಾಸ್ ಅವರಿಗೆ ಸುಮಾರು 34 ಕೆಜಿ ತೂಕದ ಇಟ್ಟಿಗೆಗಳನ್ನು ಕೊಡುಗೆಯಾಗಿ ನೀಡಿತು. ಮತ್ತೊಂದೆಡೆ ರಂಜಾಲ್ ಟ್ರಸ್ಟ್ 21,000 ರೂ.ಗಳ ಚೆಕ್ ಅನ್ನು ದೇವಾಲಯದ ಟ್ರಸ್ಟ್‌ಗೆ ಹಸ್ತಾಂತರಿಸಿತು.

ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಾಪುರ ಅವರ ಪುತ್ರರಾದ ವಾಸ್ತುಶಿಲ್ಪಿಗಳಾದ ನಿಖಿಲ್ ಸೋಮಾಪುರರ ಹಾಗೂ ಆಶಿಶ್ ಸೋಮಾಪುರ  ಅವರು ದೇವಾಲಯದ ಮಾರ್ಪಡಿಸಿದ ವಿನ್ಯಾಸವನ್ನು ರಚಿಸಲಿದ್ದಾರೆ. ದರೆ, ಮೂಲ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಎಂದು ದೇವಾಲಯದ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನರ್ತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ.

ದೇವಾಲಯದ ವಿನ್ಯಾಸದಲ್ಲಿ ಸೂಚಿಸಲಾದ ಮಾರ್ಪಾಡಿನ ಪ್ರಕಾರ, ಅದರ ಅಗಲವನ್ನು 140 ಅಡಿಗಳಿಂದ 270- 280 ಅಡಿಗಳಿಗೆ ಹೆಚ್ಚಿಸುವ ಸಾಧ್ಯತೆಯಿದೆ. ಉದ್ದ 268 ರಿಂದ 280-300 ಅಡಿಗಳಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಇದಲ್ಲದೆ, ಮೂಲದಲ್ಲಿ ಪ್ರಸ್ತಾಪಿಸಲಾದ 128 ಅಡಿಗಳಿಂದ ಎತ್ತರವನ್ನು 161 ಅಡಿಗಳಿಗೆ ಏರಿಸಲಾಗುವುದು.ನೂತನವಾಗಿ ಸೂಚಿಸಿದ ಮಾರ್ಪಾಡಿನ ನಂತರ, ದೇವಾಲಯವು ಮೂಲತಃ ಪ್ರಸ್ತಾಪಿಸಲಾದ ಎರಡು ಮಹಡಿಗಳಿಗೆ ಬದಲಾಗಿ ಮೂರು ಅಂತಸ್ತಿನ ರಚನೆಯಾಗಲಿದೆ. ಒಟ್ಟಾರೆ ದೇವಾಲಯದ ಪ್ರದೇಶದ್ವಾರದ ಸಂಖ್ಯೆಯೂ ಹೆಚ್ಚಲಿದೆ. ರಾಮಜನ್ಮಭೂಮಿ  ಸಂಕೀರ್ಣದ ಒಟ್ಟಾರೆ ವಿಸ್ತೀರ್ಣವನ್ನು 70 ಎಕರೆಗಳಿಂದ 100-120 ಎಕರೆಗೆ ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಹೊಸ ಪ್ರಸ್ತಾವಿತ ರಚನೆಗೆ ಟ್ರಸ್ಟ್ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

ದೇವಾಲಯದ ಹೊಸ ವಿನ್ಯಾಸದ ಪ್ರಕಾರ, ಈಗ ಇದನ್ನು 76,000-84,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವುದು ಆದರೆ ಮೂಲದಲ್ಲಿ ಇದರ ವ್ಯಾಪ್ತಿ 37,590 ಚದರ ಅಡಿ ಎಂದಿತ್ತು.ಗಾತ್ರ ಮತ್ತು ವಿನ್ಯಾಸದಲ್ಲಿನ ಹೊಸ ಮಾರ್ಪಾಡುಗಳ ಪ್ರಕಾರ ದೇವಾಲಯವನ್ನು ನಿರ್ಮಿಸಿದರೆ, ಸಿದ್ಧ ದೇವಾಲಯವು ವಿಶ್ವದ ಅಗ್ರ ಮೂರು ದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿ ಮೂಡಿಬರಲಿದೆ.  ಇತರ ಎರಡು ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯ ಸಂಕೀರ್ಣ(401 ಎಕರೆ ಪ್ರದೇಶ), ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ (155 ಎಕರೆ ಪ್ರದೇಶ) ಆಗಿದೆ.

ಪ್ರಸ್ತಾವಿತ ಬದಲಾವಣೆಗಳ ನಂತರ, ರಾಮ ದೇವಾಲಯ ಸಂಕೀರ್ಣವು 100 ರಿಂದ 120 ಎಕರೆ ಪ್ರದೇಶದಲ್ಲಿ ಇರುತ್ತದೆ. ವಿನ್ಯಾಸದಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ, ಈಗ ಹೊಸ ವಿನ್ಯಾಸವು ರಚನೆಯಲ್ಲಿನ ಮೂಲ ಮೂರು ಗುಮ್ಮಟಗಳ ಬದಲಿಗೆ ಐದು ಗುಮ್ಮಟಗಳನ್ನು ಹೊಂದಲಿದೆ. ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ನಾಗರ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗುವುದು.

ವಿಎಚ್‌ಪಿ ಪ್ರಾದೇಶಿಕ ವಕ್ತಾರ ಶರದ್ ಶರ್ಮಾ ಅವರ ಪ್ರಕಾರ, ಈಗಿರುವ ರಾಮ ದೇವಾಲಯದ ಮಾದರಿಯನ್ನು ವಿಎಚ್‌ಪಿ ಪ್ರಸ್ತಾವನೆಯ ಮೇರೆಗೆ ಚಂದ್ರಕಾಂತ್ ಸೋಮಾಪುರ 1983 ರಲ್ಲಿ ಸಿದ್ಧಪಡಿಸಿದರು. ಟ್ರಸ್ಟ್, ಸಂತರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯದ ಮೂಲ ಮಾದರಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಒಪ್ಪಿದೆ. ರಾಮ ಜನ್ಮಭೂಮಿ  ಕ್ಯಾಂಪಸ್‌ನಲ್ಲಿರುವ ಒಂಬತ್ತು ದೇವಾಲಯಗಳನ್ನು ನೆಲಸಮ ಮಾಡಲು ಟ್ರಸ್ಟ್ ಒಪ್ಪಿಗೆ ನೀಡಿದೆ. ಈ ದೇವಾಲಯಗಳಿಂದ ದೇವತೆ ಮೂರ್ತಿಗಳನ್ನು ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com