ನಿಜವಾದ 'ಆತ್ಮನಿರ್ಭರ ಭಾರತ': ಲಂಚ ನೀಡಲು ಒಪ್ಪದೆ, ಇಂದು ರೈತನಾಗಿ ಲಕ್ಷ ಲಕ್ಷ ಗಳಿಸುತ್ತಿರುವ ಬೆಳಗಾವಿ ಯುವಕ!

16 ಸಾವಿರ ರುಪಾಯಿ ಸಂಬಳಕ್ಕಾಗಿ 16 ಲಕ್ಷ ಲಂಚ ನೀಡಲು ಒಪ್ಪದ ಬೆಳಗಾವಿ ಯುವಕನೊರ್ವ ಇದ್ದ ಜಮೀನಿನಲ್ಲೇ ಸಾಂಪ್ರದಾಯಿಕ ವಿಧಾನ ಅಳವಡಿಸಿಕೊಂಡು ಇಂದು ಯಶಸ್ವಿ ಕೃಷಿಕನಾಗಿ ಬೆಳೆದಿದ್ದಾರೆ.
ಸತೀಶ್ ಶಿಡಗೌಡರ್
ಸತೀಶ್ ಶಿಡಗೌಡರ್

ಬೆಳಗಾವಿ: 16 ಸಾವಿರ ರುಪಾಯಿ ಸಂಬಳಕ್ಕಾಗಿ 16 ಲಕ್ಷ ಲಂಚ ನೀಡಲು ಒಪ್ಪದ ಬೆಳಗಾವಿ ಯುವಕನೊರ್ವ ಇದ್ದ ಜಮೀನಿನಲ್ಲೇ ಸಾಂಪ್ರದಾಯಿಕ ವಿಧಾನ ಅಳವಡಿಸಿಕೊಂಡು ಇಂದು ಯಶಸ್ವಿ ಕೃಷಿಕನಾಗಿ ಬೆಳೆದಿದ್ದಾರೆ. 

ಡಬಲ್ ಡಿಗ್ರಿ ಹೊಂದಿರುವ ಹುಕ್ಕೇರಿ ತಾಲ್ಲೂಕಿನ ಶಿರೂರ್ ಗ್ರಾಮದ 38 ವರ್ಷದ ಸತೀಶ್ ಶಿಡಗೌಡರ್ ಗೆ ಎಲ್ಲಿ ಬೇಕಾದರೂ ಸುಲಭವಾಗಿ ಕೆಲಸ ಸಿಗುತ್ತಿತ್ತು. ಆದರೆ ಅವರಿಗೆ ಕೆಲಸ ನಿರಾಕರಿಸಲಾಗಿತ್ತು. ಇನ್ನು ಜೀವನೋಪಾಯಕ್ಕಾಗಿ ಬೇರೆ ಏನನ್ನಾದರೂ ಮಾಡಲೇಬೇಕಿತ್ತು. ಅಂದು ನಿರ್ಧಾರ ಮಾಡಿ ಕೃಷಿ ಮಾಡಲು ಮನಸ್ಸು ಮಾಡಿದ್ದರಿಂದ ಇಂದು ಕೃಷಿಕನಾಗಿ ಯಶಸ್ಸು ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯಿಂದ 35 ಕಿ.ಮೀ ದೂರದಲ್ಲಿರುವ ರೈತ ಸತೀಶ್ ಶಿಡಗೌಡರ್ ಇಂದು ಹಾಗಲಕಾಯಿ ತಜ್ಞ ಎಂದು ಜನಪ್ರಿಯರಾಗಿದ್ದಾರೆ. ಗುಣಮಟ್ಟ ಮತ್ತು ಅತ್ಯುತ್ತಮ ಪ್ರಮಾಣದ ತರಕಾರಿಗಳನ್ನು ಬೆಳೆಸುವಲ್ಲಿ ಅವರ ಅದ್ಭುತ ಕೌಶಲ್ಯಗಳಿಂದಾಗಿ ಇಂದು ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. 

1.5 ಎಕರೆ ಜಮೀನಿನಲ್ಲಿ ಸತೀಶ್ ಕೃಷಿ ಮಾಡುತ್ತಿದ್ದಾರೆ. ಇದರೊಂದಿಗೆ ಪ್ರತಿ ತಿಂಗಳು ಲಕ್ಷದವರೆಗೂ ಸಂಪಾದಿಸುತ್ತಿದ್ದಾರೆ. ಇನ್ನು ಯಾರೇ ಸತೀಶ್ ಗೆ ಉದ್ಯೋಗ ನೀಡಿದ್ದರೂ ಇಷ್ಟ ಮಟ್ಟದ ಸಂಬಳ ನೀಡುತ್ತಿರಲಿಲ್ಲವೇನೋ. ಆದರೆ ಭೂತಾಯಿಯನ್ನು ನಂಬಿದ್ದರಿಂದ ಇಂದು ಶ್ರೀಮಂತ ಕೃಷಿಕರಾಗಿದ್ದಾರೆ. ಕಾರಣ ಸತೀಶ್ ಬಳಿ ನಾಲ್ಕು ವಾಹನಗಳು, ಒಂದು ತುಂಡು ಭೂಮಿಯನ್ನು ಹೊಂದಿದ್ದಾರೆ. ಜೊತೆಗೆ ಮನೆಯನ್ನೂ ಕಟ್ಟಿಸಲು ಮುಂದಾಗಿದ್ದಾರೆ. 

ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸತೀಶ್ ಶಿಡಾಗೌಡರ್, “ನಾನು ಶಿಕ್ಷಕನಾಗಲು ಬಯಸಿದ್ದೇನೆ, ಅದಕ್ಕಾಗಿ ನಾನು ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದೆ. ಆದರೆ ತಿಂಗಳಿಗೆ 16,000 ರೂ. ಸಂಬಳದ ಕೆಲಸಕ್ಕೆ ಲಂಚವಾಗಿ 16 ಲಕ್ಷ ರೂ. ನೀಡಬೇಕಿತ್ತು. ನನ್ನ ತಂದೆ ಆ ಕೆಲಸ ಕೊಡಿಸಲು ಮುಂದಾಗಿದ್ದರೂ ಅದಕ್ಕಾಗಿ ಸಾಲ ತೆಗೆದುಕೊಳ್ಳಲು ತೀರ್ಮಾನಿಸಿದ್ದರು. ನನ್ನ ತಂದೆಗೆ ಆ ಕೆಲಸ ಬೇಡ ಎಂದು ಹೇಳಿದ್ದೆ ನಂತರ ಕೃಷಿ ಕ್ಷೇತ್ರದಲ್ಲಿ ನನ್ನ ತಂದೆಗೆ ಸಹಾಯ ಮಾಡಲು ನಿರ್ಧರಿಸಿದೆ ಎಂದು ಸತೀಶ್ ಹೇಳಿದ್ದಾರೆ. 

ನನ್ನ ತಂದೆ ನಾಗಪ್ಪ ಅವರಿಗೆ 69 ವರ್ಷ ವಯಸ್ಸಾಗಿದೆ. ನನ್ನ ತಂದೆ ಮತ್ತು ಚಿಕ್ಕಪ್ಪ ಕಳೆದ 15 ವರ್ಷಗಳಿಂದ ಸಾಂಪ್ರದಾಯಿಕ ರೀತಿಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದರು. ಆದರೆ ಇಳುವರಿ ಮತ್ತು ಗುಣಮಟ್ಟ ಕಳಪೆಯಾಗಿದ್ದರಿಂದ ಅವರ ಬೆಳೆದಿದ್ದ ಬೆಳೆಗೆ ಉತ್ತಮ ಆದಾಯ ಬರುತ್ತಿರಲಿಲ್ಲ. 

2008ರಲ್ಲಿ ಕೃಷಿ ಮಾಡಲು ಮುಂದಾದೆ. ಸರಿಯಾದ ನೀರಿನ ನಿರ್ವಹಣೆಗಾಗಿ ಹನಿ ನೀರಾವರಿ ಅಳವಡಿಸಿಕೊಂಡೆ ಈ ಮೂಲಕ ತೇವಾಂಶವನ್ನು ಕಾಪಾಡಿಕೊಳ್ಳಲು ಪ್ರಯೋಜನವಾಯಿತು. ಕಳೆಗಳ ಬೆಳವಣಿಗೆಯನ್ನು ತಡೆಗಟ್ಟಲು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ನಿಯಮಿತವಾಗಿ ಒದಗಿಸುವುದು ಮತ್ತು ಕೀಟಗಳ ನಿರ್ವಹಣೆಯ ಮೂಲಕ ತರಕಾರಿಗಳನ್ನು ಬೆಳೆಯುವ ಸುಧಾರಿತ ತಂತ್ರಗಳನ್ನು ನಾನು ಆರಿಸಿಕೊಂಡೆ ಎಂದು ಹೇಳಿದ್ದಾರೆ. 

ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ತಿಳಿದುಕೊಂಡೆ ಅದರಂತೆ ಹಾಗಲಕಾಯಿಯನ್ನು ಬೆಳೆಯಲು ಮುಂದಾದೆ. ಇದು ರುಚಿಯಿಂದ ಕಹಿಯಾಗಿರಬಹುದು. ಆದರೆ ನನ್ನ ಬಾಳಿಗೆ ಸಿಹಿಯಾಯಿತು. ಇನ್ನು ಹಾಗಲಕಾಯಿ ಮಧುಮೇಹ, ಕ್ಯಾನ್ಸರ್ ಮತ್ತು ಇನ್ನೂ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಹಾಗಲಕಾಯಿಯನ್ನು ಹೆಚ್ಚು ಸೇವಿಸಲು ಪ್ರಾರಂಭಿಸಿದ್ದಾರೆ. ಅಲ್ಲದೆ ಔಷಧಿಗಳನ್ನು ತಯಾರಿಸಲು ಸಹ ಬಳಸಲಾಗುತ್ತಿದೆ ಎಂದರು.

ಇದನ್ನು ಅನುಸರಿಸಿ, ನಾವು ಒಂದೂವರೆ ಎಕರೆ ಭೂಮಿಯಲ್ಲಿ ತುಂಡುಗಳನ್ನಾಗಿ ಮಾಡಿಕೊಂಡು ವರ್ಷವಿಡೀ ಬೆಳೆಯಲು ಪ್ರಾರಂಭಿಸಿದ್ದೇವೆ. ಒಂದು ಋತುವಿನಲ್ಲಿ ನಾವು ಸುಮಾರು 500 ಕ್ವಿಟಾಲ್ ಕೊಯ್ಲು ಮಾಡುತ್ತೇವೆ.

ಕಳೆದ ವರ್ಷ ಪ್ರತಿ ಟನ್ 48,000 ರೂ.ಗಳಿಗೆ ಮಾರಾಟವಾಗಿತ್ತು. ಆದರೆ ಈ ವರ್ಷ ಪ್ರತಿ ಟನ್‌ಗೆ 35,000 ರೂ.ಗೆ ಮಾರಾಟ ಮಾಡಿದೆ. ಋತುಗಳಲ್ಲಿ ನಾನು ದಿನಕ್ಕೆ ಸುಮಾರು 25,000 ದಿಂದ 35,000 ರೂ.ಗಳನ್ನು ಗಳಿಸುತ್ತಿದ್ದೇನೆ. ಇದು ಯಾವುದೇ ಶಿಕ್ಷಕರ ಸಂಬಳಗಿಂತ ಜಾಸ್ತಿ ಎಂದು ನಗುಮುಖದೊಂದಿಗೆ ಹೇಳಿದರು. 

ನಾನು ಮಗುವಿನಂತೆ ಸಸ್ಯಗಳನ್ನು ನೋಡಿಕೊಳ್ಳುತ್ತೇನೆ, ಇದರಿಂದಾಗಿ ನನಗೆ ಗುಣಮಟ್ಟದ ಇಳುವರಿ ಸಿಗುತ್ತದೆ. ವಿವಿಧ ಜಿಲ್ಲೆಗಳ ಅನೇಕ ಜನರು ನನ್ನ ಹೊಲಕ್ಕೆ ಭೇಟಿ ನೀಡಿ ಕೃಷಿ ವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com