ರಕ್ತದಾನಿಯ ಶತಕದ ಕನಸು,ಜೀವ ಉಳಿಸುವ ಮನಸು: 63ನೇ ಬಾರಿ ರಕ್ತದಾನ ಮಾಡಿ ಮಾದರಿಯಾದ ಲಕ್ಷ್ಮೀಕಾಂತ್!

ಇಂದು ವಿಶ್ವ ರಕ್ತದಾನಿಗಳ ದಿನ. ಕೊಪ್ಪಳ ಜಿಲ್ಲೆಯಲ್ಲಿ ಈ ದಿನದ ಸ್ಪೆಷಲ್ ಸೆಲೆಬ್ರಿಟಿ ಎಂದರೆ ಲಕ್ಷ್ಮಿಕಾಂತ್ ಗುಡಿ. ಜೀವ ಉಳಿಸುವ ತುಡಿತದಲ್ಲಿರುವ ಅವರು ಸದಾ ಸೆಲೆಬ್ರಿಟಿಯೇ. ಈ ದಿನ ಬಂತೆಂದರೆ ಸಾಕು,ಎಲ್ಲರ ಕಣ್ಮುಂದೆ ಅವರ ಚಿತ್ರ ಕಾಣುತ್ತದೆ. ಹಲವು ಬಾರಿ ಅವರು ರಕ್ತದಾನ ಮಾಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ರಕ್ತದಾನಿ ಲಕ್ಷ್ಮೀಕಾಂತ್ ಗುಡಿ
ರಕ್ತದಾನಿ ಲಕ್ಷ್ಮೀಕಾಂತ್ ಗುಡಿ

ಕೊಪ್ಪಳ: ಇಂದು ವಿಶ್ವ ರಕ್ತದಾನಿಗಳ ದಿನ. ಕೊಪ್ಪಳ ಜಿಲ್ಲೆಯಲ್ಲಿ ಈ ದಿನದ ಸ್ಪೆಷಲ್ ಸೆಲೆಬ್ರಿಟಿ ಎಂದರೆ ಲಕ್ಷ್ಮಿಕಾಂತ್ ಗುಡಿ. ಜೀವ ಉಳಿಸುವ ತುಡಿತದಲ್ಲಿರುವ ಅವರು ಸದಾ ಸೆಲೆಬ್ರಿಟಿಯೇ. ಈ ದಿನ ಬಂತೆಂದರೆ ಸಾಕು,ಎಲ್ಲರ ಕಣ್ಮುಂದೆ ಅವರ ಚಿತ್ರ ಕಾಣುತ್ತದೆ. ಹಲವು ಬಾರಿ ಅವರು ರಕ್ತದಾನ ಮಾಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.

ಮೂಲತಃ ಇವರು ಸೈಕಲ್ ಉದ್ಯಮಿ. ಆದರೆ ಸಮಾಜಮುಖಿ ಕಾರ್ಯ ಇವರ ಹವ್ಯಾಸ. ಲಕ್ಷ್ಮಿಕಾಂತ್ ಗುಡಿ ತಮ್ಮ 18ನೇ ವಯಸ್ಸಿನಲ್ಲಿ ಮೊದಲು ರಕ್ತದಾನ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ರಕ್ತದಾನ ಮಾಡುತ್ತಿದ್ದಾರೆ. ಇದರ ಹಿಂದೆ ಒಂದು ಕರುಣಾಜನಕ ಕಥೆ ಇದೆ.

ಇವರು ಮೊದಲ ಬಾರಿ ರಕ್ತದಾನ ಮಾಡಿದ್ದು ಇವರ ಸ್ನೇಹಿತನ ಅಣ್ಣನಿಗೆ. ಆಗ ರಕ್ತದಾನ ಮಾಡುವ ಬಗ್ಗೆ ಅಷ್ಟು ಗಂಭೀರವಾಗಿಲ್ಲದ ಇವರು, ಸ್ನೇಹಿತನ ಅಣ್ಣನ ಹಾಗೂ ಇವರ ರಕ್ತದ ಗುಂಪು ಒಂದೇ ಆಗಿದ್ದರಿಂದ ರಕ್ತದಾನ ಮಾಡಲು ಒಪ್ಪಿದ್ದರು. ಆಗ ಆಸ್ಪತ್ರೆಯಲ್ಲಿ ಇವರ ಪಕ್ಕದಲ್ಲಿದ್ದ ಗಾಯಾಳುವೊಬ್ಬರು ರಕ್ತ ಸಿಗದ ಕಾರಣದಿಂದಲೇ ಅಸು ನೀಗಿದರು. ಅದನ್ನು ಕಣ್ಣಾರೆ ಕಂಡ ಇವರು ಅಂದಿನಿಂದ ನಿರಂತರವಾಗಿ ರಕ್ತದಾನ ಮಾಡುತ್ತಲೇ ಬಂದಿದ್ದಾರೆ.

ಮೊದಲು ಆರು ತಿಂಗಳಿಗೆ ಒಮ್ಮೆ ಒಬ್ಬ ವ್ಯಕ್ತಿ ರಕ್ತದಾನ ಮಾಡಬೇಕಿತ್ತು. ಆನಂತರ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಗೊತ್ತಾದಾಗ ಪ್ರತಿ ಮೂರು ತಿಂಗಳಿಗೊಮ್ಮೆ ಯಾರಾದರೂ ರಕ್ತದ ಅವಶ್ಯಕತೆ ಇರುವವರು ಇವರನ್ನು ಸಂಪರ್ಕಿಸಿದರೆ ಯಾವುದೇ ಫಲಾಪೇಕ್ಷೆ ಬಯಸದೇ ರಕ್ತದಾನ ಮಾಡಿ ಜೀವ ಉಳಿಸಿದ ಸಾರ್ಥಕಭಾವ ಮೆರೆಯುತ್ತಾರೆ. ಒಂದೊಮ್ಮೆ ಯಾರೂ ಸಂಪರ್ಕಿಸಿದಿದ್ದರೆ ಸ್ವತಃ ಇವರೇ ರಕ್ತಭಂಡಾರಕ್ಕೆ ರಕ್ತದಾನ ಮಾಡುತ್ತಾರೆ. 2020ರ ಜೂನ್ 14ರಂದು ಲಕ್ಷ್ಮೀಕಾಂತ್ ಗುಡಿ 63ನೇ ಬಾರಿ ರಕ್ತದಾನ ಮಾಡಿ, ಚಿಕ್ಕವಯಸ್ಸಿನಲ್ಲೇ ಹೆಚ್ಚು ಬಾರಿ ರಕ್ತದಾನ ಮಾಡಿದ ಹಿರಿಮೆ ಗಳಿಸಿದ್ದಾರೆ.

ಇವರ ರಕ್ತದಾನದ, ಜೀವ ಉಳಿಸುವ ಹಂಬಲ ಇಷ್ಟಕ್ಕೆ ನಿಲ್ಲಲ್ಲ. ಮೂರು ತಿಂಗಳಳೊಳಗೆ ಯಾರಾದರೂ ರಕ್ತಕ್ಕಾಗಿ ಸಂಪರ್ಕಿಸಿದರೆ ಅವರನ್ನು ನಿರಾಶರನ್ನಾಗಿಸಬಾರದು ಎಂದು ರಕ್ತದಾನಿಗಳ ಕೂಟ ಕಟ್ಟಿಕೊಂಡಿದ್ದಾರೆ. ಸಮಾನಮನಸ್ಕರ ಕೂಟ ಕಟ್ಟಿಕೊಂಡಿರುವ ಇವರು ಅಪಘಾತದಲ್ಲಿ ಗಾಯಗೊಂಡವರು, ಗರ್ಭಿಣಿಯರು ಯಾರೇ ರೋಗಿಗಳು ರಕ್ತಕ್ಕೆ ಸಂಪರ್ಕಿಸಿದರೆ ತಕ್ಷಣವೇ ಇವರ ಕೂಟ ಕಾರ್ಯಪ್ರವೃತ್ತವಾಗುತ್ತದೆ. ಗುಡಿಯವರ ಸಮಾಜಮುಖಿ ಕಾರ್ಯದಿಂದ ಪ್ರೇರಣೆ ಪಡೆದ ಅವರ ಪತ್ನಿ ಸಹ ಇಂದು ಮುರನೇ ಬಾರಿ ರಕ್ತದಾನ ಮಾಡಿ ಶ್ರೇಷ್ಠತೆ ಮೆರೆದಿದ್ದಾರೆ.

ಗುಡಿಯವರ ಸಮಾಜಮುಖಿ ಕಾರ್ಯ ಕಂಡು ಅನೇಕ ಸಂಘ-ಸಂಸ್ಥೆಗಳು ಇವರನ್ನು ಸತ್ಕರಿಸಿವೆ. ಹಲವು ಪ್ರಶಸ್ತಿ-ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ರಕ್ತದಾನ ಮಾಡುತ್ತಿರುವುದು ಪ್ರಚಾರಕ್ಕಲ್ಲ. ಜೀವ ಉಳಿಸುವ ಹಂಬಲಕ್ಕಾಗಿ ಈಗಾಗಲೇ 63 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನದಲ್ಲಿ ಶತಕ ಗಳಿಸುವ ಕನಸಿದೆ. ನೂರನೇ ಬಾರಿ ರಕ್ತದಾನ ಮಾಡಿದಾಗ ನೂರು ಉಳಿಸಿರುವ ಖುಷಿ ನನ್ನದು. ಆಸಕ್ತರು ನಮ್ಮ ರಕ್ತದಾನಿಗಳ ಕೂಟ ಸೇರಿ, ಜೀವ ಉಳಿಸುವ ಕಾರ್ಯಕ್ಕೆ ಕೈ ಜೋಡಿಸಿ ಎನ್ನುತ್ತಾರೆ ಲಕ್ಷ್ಮೀಕಾಂತ್ ಗುಡಿ. ಇವರನ್ನು ಸಂಪರ್ಕಿಸುವವರು ಮೊಬೈಲ್ ಸಂಖ್ಯೆ 99865 76162ಕ್ಕೆ ಕರೆ ಮಾಡಬಹುದು.

ಎಲ್ಲ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ. ಹನಿ ರಕ್ತಕ್ಕೆ ಜೀವ ಉಳಿಸುವ ಶಕ್ತಿ ಇದೆ. ಹೀಗೇ ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಅನೇಕ ಜೀವ ಉಳಿಸಿದ ಲಕ್ಷ್ಮೀಕಾಂತ್ ಗುಡಿ ಯುವಕರಿಗೆ ನಿಜಕ್ಕೂ ಪ್ರೇರಣೆ ಎಂದು ಅವರ ಸ್ನೇಹಿತ ರಾಜೇಶ್ ಯಾವಗಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವರದಿ-ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com