ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಹೊಟ್ಟೆ ತುಂಬಿದವರಿಗೇ ಉಣಿಸಹೊರಟಿದೆಯೇ ಸರ್ಕಾರ? 

ಭಾರತ ಕೃಷಿ ಕ್ಷೇತ್ರದಲ್ಲಿ ಸಾಧನೆಗೈಯಲು ಕರ್ನಾಟಕದ ಯೋಗದಾನವೂ ಬಹಳಷ್ಟಿದೆ. ಆದರೆ ಇಂದು ಒಂದೆಡೆ ಬಹುತೇಕ ಜನರು ಕೃಷಿ ಕ್ಷೇತ್ರದಿಂದ ಸೇವಾ ಕ್ಷೇತ್ರಗಳತ್ತ ಹೊರಳಿ ನಗರಕ್ಕೆ ಸೇರಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಲಾಭಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಒಂದು ಕಾಲದಲ್ಲಿ ಭಾರತಕ್ಕೆ ಕೃಷಿ ಪ್ರಧಾನ ರಾಷ್ಟ್ರವೆಂಬ ಹೆಸರಿತ್ತು. ರೈತ ಭಾರತದ ಬೆನ್ನೆಲುಬು ಎಂಬ ಮಾತು ಸಾಕಷ್ಟು ಪ್ರಚಲಿತದಲ್ಲಿತ್ತು. ದೇಶದ ಪ್ರಮುಖ ಆದಾಯ ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟ ಚಟುವಟಿಕೆಗಳಿಂದ ಬರುತಿತ್ತು. ಸ್ವಾತಂತ್ರ್ಯೋತ್ತರದಿಂದಲೂ ಆದಯಕ್ಕೆ ಕೃಷಿಯನ್ನೇ ಅವಲಂಬಿಸಿದ್ದ ಭಾರತ ಸ್ವಾತಂತ್ರ್ಯಾನಂತರ ಕೃಷಿ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲನ್ನು ನೆಟ್ಟು ಇಡೀ ಪ್ರಪಂಚವನ್ನೇ ಬೆರಗುಗೊಳಿಸಿತ್ತು. 1960ರ ಕಾಲದಲ್ಲಿ ಶುರುವಾದ ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ಹಳದಿ ಕ್ರಾಂತಿ ಮತ್ತು ನೀಲಿ ಕ್ರಾಂತಿಗಳಿಂದ ತೀರಾ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲು ಸಾಧ್ಯವಾಯಿತು. ಇದು ದೇಶದ ಜಿಡಿಪಿ ಹಾಗೂ ರಫ್ತಿನ ಪ್ರಮಾಣವನ್ನು ಹೆಚ್ಚಿಸಿತು. ಇದೇ ಕಾಲಘಟ್ಟದಲ್ಲಿ ಹಾಲು, ಗೇರುಬೀಜ, ತೆಂಗಿನಕಾಯಿ, ಚಹಾ ಹಾಗೂ ಕೆಲವು ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಇಡೀ ವಿಶ್ವದಲ್ಲೇ ಪ್ರಥಮ ಸ್ಥಾನವನ್ನೂ, ಗೋಧಿ, ಸಕ್ಕರೆ ಹಾಗೂ ಮೀನುಗಾರಿಕೆಯಲ್ಲಿ ಎರಡನೆಯ ಸ್ಥಾನವನ್ನೂ ಹಾಗೂ ತಂಭಾಕು ಹಾಗೂ ಭತ್ತದ ಉತ್ಪಾದನೆಯಲ್ಲಿ ಮೂರನೆಯ ಸ್ಥಾನದಲ್ಲಿತ್ತು. 

ಇಡೀ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಕೃಷಿ ಭೂಮಿ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ. ಇಲ್ಲಿನ ಹವಾಮಾನ ಕೃಷಿ ಚಟುವಟಿಕೆಗಳನ್ನು ನಡೆಸಲು ಹೇಳಿ ಮಾಡಿಸಿದಂತಿದೆ. ಆದರೆ ಇಂದು ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿ ಉಳಿದಿಲ್ಲ. 1960ರ ಕಾಲಘಟ್ಟದಲ್ಲಿ ದೇಶದ ವಾರ್ಷಿಕ ಆದಾಯದ ಶೇಕಡಾ.  44ರಷ್ಟು ಭಾಗ ಕೃಷಿ ಚಟುವಟಿಕೆಗಳಿಂದಲೇ ಬರುತ್ತಿತ್ತು. ಆದರೆ ಇಂದು ಕೃಷಿ ಕ್ಷೇತ್ರದಿಂದ ಶೇ. 20ರಷ್ಟೇ ಆದಾಯ ದೇಶಕ್ಕೆ ಬರುತ್ತಿದೆ. ಕೃಷಿ ಕ್ಷೇತ್ರದತ್ತ ಸರ್ಕಾರದ ನಿರ್ಲಕ್ಷದ ಕ್ರಮ ಇದಕ್ಕೆ ಪ್ರಮುಖ ಕಾರಣ. ಕೃಷಿ ಸಾಲ ಮತ್ತು ಸಾಲ ಮನ್ನಾದ ವಿಚಾರದಲ್ಲಿ ಸರ್ಕಾರಗಳ ಅಸಮರ್ಥ ನಿರ್ಧಾರ, ಹವಾಮಾನ ವೈಪರಿತ್ಯದ ಸಮಸ್ಯೆಗಳು ರೈತರನ್ನು ಕಾಡುತ್ತಿದ್ದರೆ ಆರ್ಥಿಕ ಉದಾರೀಕರಣದಿಂದಾಗಿ ಉಂಟಾದ ನಗರೀಕರಣ ಹಾಗೂ ಕೈಗಾರೀಕರಣಗಳು ಕೃಷಿ ಕ್ಷೇತ್ರದಲ್ಲಿರುವ ಬಹುತೇಕರನ್ನು ತಮ್ಮೆಡೆಗೆ ಸೆಳೆದುಕೊಂಡವು. 

ಭಾರತ ಕೃಷಿ ಕ್ಷೇತ್ರದಲ್ಲಿ ಸಾಧನೆಗೈಯಲು ಕರ್ನಾಟಕದ ಯೋಗದಾನವೂ ಬಹಳಷ್ಟಿದೆ. ಆದರೆ ಇಂದು ಒಂದೆಡೆ ಬಹುತೇಕ ಜನರು ಕೃಷಿ ಕ್ಷೇತ್ರದಿಂದ ಸೇವಾ ಕ್ಷೇತ್ರಗಳತ್ತ ಹೊರಳಿ ನಗರಕ್ಕೆ ಸೇರಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಲಾಭಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸರ್ಕಾರ ಕೃಷಿಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡುತ್ತಿದೆ. 

ಕರ್ನಾಟಕದಲ್ಲಿಂದು ಬಹಳಷ್ಟು ಕೃಷಿಕರು ಒಂದು ತುಂಡು ಭೂಮಿಯ ಮಾಲಿಕರಾಗಿದ್ದುಕೊಂಡು ನೆಮ್ಮದಿಯಾಗಿ ಸಾಗುವಳಿ ಮಾಡಿಕೊಂಡಿದ್ದರೆ ಅದಕ್ಕೆ ಪ್ರಮುಖ ಕಾರಣ 1950-60 ರ ಕಾಲಘಟ್ಟದಲ್ಲಿ ಕರ್ನಾಟಕದಾದ್ಯಂತ ನಡೆದ ಭೂ ಸುಧಾರಣಾ ಚಳುವಳಿಗಳು. ಉಳುವವನೇ ಹೊಲದೊಡೆಯ ಎಂಬ ಘೋಷಣೆಯನ್ನು ಕೂಗುತ್ತಾ ಅದೆಷ್ಟೋ ಜನ ಚಳುವಳಿಯಲ್ಲಿ ಭಾಗವಹಿಸಿದ್ದರು. ಕಾಗೋಡು ತಿಮ್ಮಪ್ಪ, ದೇವರಾಜ್ ಅರಸ್, ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪರಂತಹ ಮಹಾನುಭಾವರು ಚಳುವಳಿಯಲ್ಲಿ ದನಿಯೆತ್ತಿದ್ದರು. ಇದರ ಪರಿಣಾಮ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂತು. ಅಲ್ಲಿಯ ವರೆಗೂ ಕರ್ನಾಟಕದಲ್ಲಿ ಭೂಮಿಯ ಕುರಿತಾದ ವ್ಯಾಜ್ಯಗಳಿಗೆ ಬಾಂಬೆ ಒಕ್ಕಲು ಕಾಯ್ದೆ, ಮದ್ರಾಸ್ ಒಕ್ಕಲು ಕಾಯ್ದೆ, ಮೈಸೂರು ಒಕ್ಕಲು ಕಾಯ್ದೆ ಹಾಗೂ ಹೈದ್ರಾಬಾದ್ ಒಕ್ಕಲು ಕಾಯ್ದೆಗಳಂತಹ ಹಲವಾರು ಕಾನೂನುಗಳನ್ನು ಅವಲಂಬಿಸಬೇಕಿತ್ತು. ಆದರೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಇವೆಲ್ಲಾ ಕಾಯ್ದೆಗಳನ್ನೊಳಗೊಂಡ ಒಂದು ವಿಸ್ತೃತ ಕಾಯ್ದೆಯಾಗಿ ಹೊರಹೊಮ್ಮಿತು. ಇಂದು ಕರ್ನಾಟಕ ಕೈಗಾರೀಕರಣ ಹಾಗೂ ಕೃಷಿಯಲ್ಲಿ ಸಮರ್ಥವಾಗಿ ಹಾಗೂ ಸಮತೋಲಿತವಾಗಿ ಕಾರ್ಯನಿರ್ವಹಿಸುತ್ತಾ ಆರ್ಥಿಕ ವ್ಯವಸ್ಥೆಯನ್ನು ನಡೆಸುತ್ತಿದ್ದರೆ ಅದಕ್ಕೆ ಭೂ ಸುಧಾರಣಾ ಕಾಯ್ದೆಯ ಕೊಡುಗೆಯೂ ಇದೆ. ನಗರೀಕರಣದಿಂದಾಗಿ ಸಾಕಷ್ಟು ಕೃಷಿ ಭೂಮಿ ನಾಶವಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಭೂಮಿಯ ರಕ್ಷಣೆ ಮಾಡುತ್ತಿತ್ತು. 

ಕರ್ನಾಟಕ ಸರ್ಕಾರ ಇತ್ತೀಚೆಗೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರಲ್ಲಿ ತಿದ್ದುಪಡಿಯನ್ನು ತರಲು ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕಾಯ್ದೆಯಲ್ಲಿ ತರಲಾಗುವ ತಿದ್ದುಪಡಿ ಕೃಷಿ ಭೂಮಿಯನ್ನು ಖರೀದಿಸಲು ಕೃಷಿಯೇತರ ವ್ಯಕ್ತಿಗಳಿಗೂ ಅವಕಾಶವನ್ನು ಕಲ್ಪಿಸುತ್ತದೆ. ಹಾಗೂ ಭೂಮಿ ಖರೀದಿ ಮಾಡಲು ಒಬ್ಬ ವ್ಯಕ್ತಿಗಿದ್ದ ಮಿತಿಯನ್ನು ತಿದ್ದುಪಡಿಯ ಮೂಲಕ ಹೆಚ್ಚಿಸಲಾಗಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಲ್ಲಿದ್ದ ಸೆಕ್ಷನ್ 63 (a), 79 (a), (b) ಆನಿಂ (c) ಗಳು ತಿದ್ದುಪಡಿಗೆ ತಯಾರಾಗಿವೆ. ಸೆಕ್ಷನ್ 63 (a) ಪ್ರಕಾರ ಐದು ಜನ ಸದಸ್ಯರಿರುವ ಕುಟುಂಬಕ್ಕೆ ಭೂಮಿ ಖರೀದಿಸಲು ಹತ್ತು ಎಕರೆಯಗಳ ಮಿತಿಯಿತ್ತು ಅದನ್ನೀಗ ಎಪ್ಪತ್ತು ಎಕರೆಗೆ ಹೆಚ್ಚಿಸಲಾಗಿದೆ. ಐದಕ್ಕಿಂತಲೂ ಹೆಚ್ಚಿನ ಸದಸ್ಯರಿರುವ ಕುಟುಂಬಕ್ಕೆ ಭೂಮಿ ಖರೀದಿಸಲು ಇಪ್ಪತ್ತು ಎಕರೆಗಳ ಮಿತಿಯಿತ್ತು. ಅದನ್ನೀಗ ನಲ್ವತ್ತು ಎಕರೆಗಳಿಗೆ ಹೆಚ್ಚಿಸಲಾಗಿದೆ. 

ಸೆಕ್ಷನ್ 79 (a) ಪ್ರಕಾರ ಯಾವುದೇ ವ್ಯಕ್ತಿಯ ವಾರ್ಷಿಕ ಆದಾಯ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಆದಾಯಕ್ಕಿಂತ ಹೆಚ್ಚಿದ್ದರೆ ಆ ವ್ಯಕ್ತಿಗೆ ಕೃಷಿ ಭೂಮಿ ಖರೀದಿಸಲು ಅವಕಾಶವಿರಲಿಲ್ಲ. 79(b) ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಹಾಗೂ ಸೇವಾ ಸಂಘಗಳು, ಕಂಪನಿ, ಸಹಕಾರ ಸಂಘಗಳಂತಹ ಸಂಸ್ಥೆಗಳು ಕೃಷಿ ಭೂಮಿ ಖರೀದಿಸುವುದನ್ನು ನಿರ್ಬಂಧಿಸಿತ್ತು. ಸೆಕ್ಷನ್ 79(c) ಮೇಲೆ ತಿಳಿಸಿದ ಸಂಘ-ಸಂಸ್ಥೆಗಳು ಕೃಷಿ ಭೂಮಿ ಖರೀದಿಸಿದರೆ ಅವರಿಗೆ ನಿಗದಿಯಾದ ದಂಡ ಮತ್ತು ಶಿಕ್ಷೆಗಳಿಗೆ ಸಂಬಂಧಪಟ್ಟಿತ್ತು. ಆದರೀಗ ಸರ್ಕಾರ ಈ ಸೆಕ್ಷನ್ನುಗಳನ್ನೇ ತೆಗೆದುಹಾಕುವ ಮೂಲಕ ಸುಮಾರು ೧೦೮ ಎಕರೆಗಳ ವರೆಗೆ ಕೃಷಿ ಭೂಮಿ ಖರೀದಿಸಲು ಅನುಮತಿ ನೀಡಿದೆ. 
    
ಕೃಷಿಯೇತರ ವ್ಯಕ್ತಿಗಳು ಕೃಷಿಭೂಮಿಯನ್ನು ಖರೀದಿಸಲು ಭಾರತದ ಯಾವ ರಾಜ್ಯಗಳಲ್ಲೂ ಅವಕಾಶವನ್ನು ನೀಡಿಲ್ಲ. ಅವಕಾಶವಿದ್ದರೂ ಅದಕ್ಕೆ ಕೆಲವು ಮಿತಿಗಳಿವೆ. ಐಟಿ-ಬಿಟಿ ಕ್ಷೇತ್ರದಲ್ಲಿರುವವರಿಗೆ ಕೃಷಿ ಭೂಮಿಯನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಕೆಲ ಸೆಕ್ಷನ್ನುಗಳು ಅಡೆತಡೆಯಾಗಿದ್ದವು. ಇದರಿಂದಾಗಿ ಅವರು ಬೇರೆ ರಾಜ್ಯಗಳಲ್ಲಿ ಭೂಮಿಯನ್ನು ಖರೀದಿಸಬೇಕಾಗಿತ್ತು. ಈ ತಿದ್ದುಪಡಿಯನ್ನು ಮಾಡುವ ಮೂಲಕ ಯಾರು ಬೇಕಾದರೂ ಕೃಷಿ ಕ್ಷೇತ್ರಕ್ಕೆ ಬರಬಹುದಾಗಿದೆ. ರಾಜ್ಯದಲ್ಲಿ ಸುಮಾರು 11.79 ಲಕ್ಷ ಹೆಕ್ಟೆರ್ ಭೂಮಿ ಯಾವುದೇ ಕೃಷಿ ಚಟುವಟಿಕೆಗಳು ನಡೆಯದೇ ಪಾಳುಬಿದ್ದಿದೆ. ಹೀಗೆ ಹಾಳುಬಿದ್ದಿರುವ ಭೂಮಿಯನ್ನು ಉಪಯೋಗಿಸಲು ಹಾಗೂ ಕೃಷಿ ಆಸಕ್ತರಿಗೆ ಭೂಮಿಯನ್ನು ಖರೀದಿಸಲು ಹೀಗೊಂದು ತಿದ್ದುಪಡಿ ಮಾಡುವ ಅವಶ್ಯಕತೆಯಿತ್ತು ಹಾಗೂ ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಬಹಳಷ್ಟು ಲಾಭ ಬರಲಿದೆಯೆಂಬುದು ಸರ್ಕಾರದ ವಾದ. 

ಸಾಲದ ಸುಳಿಯಲ್ಲಿ ಸಿಕ್ಕು ಆತ್ಯಹತ್ಯೆಗೆ ಶರಣಾದ ರೈತರಿಗೆ ಲೆಕ್ಕವೇ ಇಲ್ಲ. ರಾಜ್ಯದಲ್ಲಿ ಸಾಕಷ್ಟು ರೈತರು ಸಾಲದ ಸಮಸ್ಯೆಗಳಿಂದ ಬಳಲುತ್ತಿರುವಾಗ ಹೆಚ್ಚಿನ ಮೌಲ್ಯಕ್ಕೆ ಭೂಮಿಯನ್ನು ಖರೀದಿಸುವವರು ಸಿಕ್ಕಾಗ ಅವರು ಅನಿವಾರ್ಯವಾಗಿ ಕೃಷಿ ಭೂಮಿಯನ್ನು ಮಾರಾಟ ಮಾಡಬೇಕಾಗುತ್ತದೆ. ಐಟಿ-ಬಿಟಿ ಕ್ಷೇತ್ರದಲ್ಲಿರುವವರಿಗೆ ಭೂಮಿಯನ್ನು ಮಾರಾಟ ಮಾಡಿದಾಗ ರೈತರ ಕೈಯಲ್ಲಿ ತಕ್ಷಣಕ್ಕೆ ಹಣ ಬರಬಹುದು ನಿಜ. ಆದರೆ ಆ ಹಣ ಎಲ್ಲಿಯ ತನಕ ರೈತನ ಕೈಯಲ್ಲುಳಿದೀತು? ಕೃಷಿಯನ್ನೇ ನಂಬಿಕೊಂಡಿರುವ ಬಡರೈತ ಕೃಷಿ ಭೂಮಿಯನ್ನು ಮಾರಾಟ ಮಾಡಿದರೆ ತನ್ನ ಜೀವನ ನಿರ್ವಹಣೆಯನ್ನು ಮಾಡಲು ಏನು ಕೆಲಸ ಮಾಡಿಯಾನು? ಈ ತಿದ್ದುಪಡಿಯಿಂದ ರಾಜ್ಯದ ಖಜಾನೆಗೆ ತಕ್ಷಣದ ಲಾಭ ಬರಬಹುದು ಆದರೆ ಈ ಲಾಭ ಸಾರ್ವಕಾಲಿಕ ಎಂದು ಹೇಳಲು ಹೇಗೆ ಸಾಧ್ಯ? ದುಡ್ಡಿರುವ ಕಾರ್ಪೊರೆಟ್ ಗಳು ಎಷ್ಟು ಬೇಕಾದರೂ ಭೂಮಿಯನ್ನು ಖರೀದಿಸಿ ಭೂ ಮಾಲೀಕರಾದರೆ ಹಣವುಳ್ಳವರು ಮತ್ತಷ್ಟು ಧನವಂತರಾಗಿ ಬಡವರು ಇನ್ನಷ್ಟು ಬಡವರಾಗುತ್ತಾರೆ. ಇದು ವರ್ಗತಾರತಮ್ಯಕ್ಕೆ ಎಡೆ ಮಾಡಿಕೊಡುವುದಲ್ಲದೇ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿ ಮಾಡಹೊರತೀರುವ ಈ ತಿದ್ದುಪಡಿ ನಗರೀಕರಣಕ್ಕೆ ದಾರಿಮಾಡಿಕೊಡುತ್ತದೆ. ಗ್ರಾಮೀಣ ಪ್ರದೇಶವನ್ನು ನಾಶ ಮಾಡುತ್ತದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗವಾಗುವುದರಲ್ಲಿ ಸಂಶಯವಿಲ್ಲ. ಭೂ ಸುಧಾರಣಾ ಕಾಯ್ದೆಯ ಮುಖ್ಯ ಉದ್ದೇಶವೇ ಕೃಷಿ ಭೂಮಿಯ ರಕ್ಷಣೆಯನ್ನು ಮಾಡುವುದು ಆದರೆ ಈ ತಿದ್ದುಪಡಿ ಅದರ ಉದ್ದೇಶಕ್ಕೇ ವಿರುದ್ಧವಾಗಿದೆ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ವಿರುದ್ದವಾಗಿದ್ದು ಇದು ಜಾರಿಗೆ ಬಂದರೆ ಆರ್ಥಿಕ ಚಟುವಟಿಕೆಗಳೇ ಬುಡಮೇಲಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಇಡೀ ವ್ಯವಸ್ಥೆಯೇ ಬಂಡವಾಳಶಾಹಿಗಳ ಕೈಸೇರುತ್ತದೆ. 

ಅಪನಗದೀಕರಣ, ಜಿಎಸ್ ಟಿಯ ಭಾರವನ್ನು ಹೊರಲಾರದೇ ದೇಶದ ಆರ್ಥಿಕತೆ ತತ್ತರಿಸುತ್ತಿರುವ ಹೊತ್ತಿಗೆ ಸರಿಯಾಗಿ ಕೊರೋನಾವೈರಸ್ ನಿಂದಾಗಿ ಲಾಕ್ ಡೌನ್ ಹೇರಿ ಭಾರತದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಮಧ್ಯಮ ವರ್ಗದವರು ಬಡವರಾಗುತ್ತಿದ್ದರೆ ಬಡವರು ಹೊಟ್ಟೆಗೆ ಹಿಟ್ಟಿಲ್ಲದೇ ಒದ್ದಾಡುವಂತಾಗಿದೆ. ಎಷ್ಟೋ ಕುಟುಂಬಗಳಿಗೆ ದಿನದ ಒಂದು ಹೊತ್ತಿನ ಊಟವೂ ಸಿಗಲಾರದ ಪರಿಸ್ಥಿತಿಯಿದೆ. ಇಂತಹ ಸಮಯದಲ್ಲಿ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿ ಕೃಷಿ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ. ಜನರ ಜೀವವುಳಿಸಿ ಹೊಟ್ಟೆ ತುಂಬಲು ದಾರಿ ತೋರಿಸಬೇಕಾದ ಸರ್ಕಾರವೇ ಬಂಡವಾಳ ಶಾಹಿಗಳ ಹೊಟ್ಟೆ ತುಂಬುತ್ತಿದೆ. ಹೀಗೆಯೇ ಮುಂದುವರೆದರೆ ಹೊಟ್ಟೆತುಂಬಿದ ಬಂಡವಾಳಶಾಹಿಗಳ ಹೊಟ್ಟೆ ಮತ್ತಷ್ಟು ದೊಡ್ಡದಾಗುತ್ತದೆ ಮತ್ತುಳಿದವರು ಹಸಿವಿನಲ್ಲಿ ನರಳಾಡಬೇಕಾಗುತ್ತದೆ!
                
 -ಮುದ್ದು ತೀರ್ಥಹಳ್ಳಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com