ಗುರುಗ್ರಾಮ್ ನಿಂದ ಬಿಹಾರಕ್ಕೆ ಸೈಕಲ್ ನಲ್ಲಿ 1,200 ಕಿ.ಮೀ ಪ್ರಯಾಣಿಸಿ ತಂದೆಯನ್ನು ಕರೆತಂದ 'ಶ್ರವಣ ಕುಮಾರಿ'

ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು 15 ವರ್ಷದ ಈ ಬಾಲಕಿ ಸಾಧಿಸಿ ತೋರಿಸಿದ್ದಾಳೆ. ಬಿಹಾರದ ಪಾಟ್ನಾ ಸಮೀಪ ದರ್ಬಾಂಗದ ಜ್ಯೋತಿ ಕುಮಾರಿ ಎಂಬಾಕೆ ತನ್ನ ಅನಾರೋಗ್ಯ ತಂದೆಯನ್ನು ಚಿಕಿತ್ಸೆಗೆ ಹರ್ಯಾಣದ ಗುರುಗ್ರಾಮ್ ನಿಂದ ಬಿಹಾರದ ದರ್ಬಾಂಗಗೆ ಸೈಕಲ್ ನಲ್ಲಿ ಕರೆತಂದಿದ್ದಳು.
ತಂದೆ ಮೋಹನ್ ಪಾಸ್ವಾನ್ ಜೊತೆ ಜ್ಯೋತಿ ಕುಮಾರಿ
ತಂದೆ ಮೋಹನ್ ಪಾಸ್ವಾನ್ ಜೊತೆ ಜ್ಯೋತಿ ಕುಮಾರಿ

ಪಾಟ್ನ: ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು 15 ವರ್ಷದ ಈ ಬಾಲಕಿ ಸಾಧಿಸಿ ತೋರಿಸಿದ್ದಾಳೆ. ಬಿಹಾರದ ಪಾಟ್ನಾ ಸಮೀಪ ದರ್ಬಾಂಗದ ಜ್ಯೋತಿ ಕುಮಾರಿ ಎಂಬಾಕೆ ತನ್ನ ಅನಾರೋಗ್ಯ ತಂದೆಯನ್ನು ಚಿಕಿತ್ಸೆಗೆ ಹರ್ಯಾಣದ ಗುರುಗ್ರಾಮ್ ನಿಂದ ಬಿಹಾರದ ದರ್ಬಾಂಗಗೆ ಸೈಕಲ್ ನಲ್ಲಿ ಕರೆತಂದಿದ್ದಳು.

ಕೊರೋನಾ ಲಾಕ್ ಡೌನ್ ನಿಂದಾಗಿ ಇರುವ ಉದ್ಯೋಗವನ್ನು ಕಳೆದುಕೊಂಡು ಹರ್ಯಾಣದಲ್ಲಿ ಕಂಗಾಲಾಗಿ ಸಿಕ್ಕಿಹಾಕಿಕೊಂಡಿದ್ದ ತನ್ನ ತಂದೆಗೆ ಚಿಂತೆ ಏಕೆ ಮಾಡುತ್ತಿ, ನಾನು ಇದ್ದೀನಲ್ಲ ಎಂದು ಸಮಾಧಾನ ಹೇಳಿ 8ನೇ ತರಗತಿಯ ಜ್ಯೋತಿ ಸೈಕಲ್ ನಲ್ಲಿ ತಂದೆಯನ್ನು ಕೂರಿಸಿಕೊಂಡು ದೃಢ ವಿಶ್ವಾಸದಿಂದ ಬಿಹಾರದತ್ತ ಪಯಣ ಬೆಳೆಸಿಯೇ ಬಿಟ್ಟಳು.

''ದೇವರನ್ನು ನೆನೆಸಿಕೊಂಡು ತಂದೆಯನ್ನು ಕರೆದುಕೊಂಡು ಮನೆಯತ್ತ ಪಯಣ ಬೆಳೆಸಿದೆ. ಹರ್ಯಾಣದ ಗುರುಗ್ರಾಮ್ ನಿಂದ ಸಾವಿರಾರು ಕಿಲೋ ಮೀಟರ್ ನ್ನು ಸೈಕಲ್ ನಲ್ಲಿ ತುಳಿದುಕೊಂಡು ಬಂದು ಏಳೇ ದಿನಗಳಲ್ಲಿ ದರ್ಬಾಂಗಾಕ್ಕೆ ತಲುಪಿದೆ. ದಿನಕ್ಕೆ 100ರಿಂದ 150 ಕಿಲೋ ಮೀಟರ್ ಸೈಕಲ್ ತುಳಿದಿದ್ದೇನೆ. ಸೈಕಲ್ ತುಳಿದು ಸುಸ್ತಾದಾಗ ಅಲ್ಲಲ್ಲಿ ನಿಲ್ಲಿಸಿ ಮುಖಕ್ಕೆ ನೀರು ಚಿಮುಕಿಸಿ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದೆ. ಬಿಸ್ಕೆಟ್ ತಿಂದು ನೀರು ಕುಡಿಯುತ್ತಾ, ತಂದೆಗೆ ಸಹ ಕೊಡುತ್ತಾ ಮನೆಗೆ ಸುರಕ್ಷಿತವಾಗಿ ತಲುಪಿದೆ ಎಂದು ಖುಷಿಯಿಂದ ಹೇಳುತ್ತಾಳೆ ಜ್ಯೋತಿ.

ಇದಕ್ಕೆಲ್ಲಾ ತಂದೆ ಮೋಹನ್ ಪಾಸ್ವಾನ್ ನನ್ನ ಮೇಲಿಟ್ಟ ನಂಬಿಕೆಯೇ ಕಾರಣ, ಅವರು ಧೈರ್ಯ ಮಾಡಿ ನನ್ನ ಜೊತೆ ಸೈಕಲ್ ಏರಿ ಬಂದಿದ್ದರಿಂದಲೇ ನನ್ನ ಗುರಿ ತಲುಪಲು ಸಾಧ್ಯವಾಯಿತು. ದಾರಿ ಮಧ್ಯೆ ನಮ್ಮ ಸ್ಥಿತಿ ಕಂಡು ಕೆಲವರು ಆಹಾರ, ನೀರು ಕೊಟ್ಟರು, ಒಂದೆರಡು ದಿನ ನಾನು ಆಹಾರವಿಲ್ಲದೆ ನನ್ನ ತಂದೆಗೆ ಇದ್ದುದನ್ನು ಕೊಟ್ಟು ಕಳೆದಿದ್ದೂ ಇದೆ ಎನ್ನುತ್ತಾಳೆ ಜ್ಯೋತಿ.

ಅಷ್ಟು ದೂರದ ಗುರಗ್ರಾಮ್ ನಿಂದ ಬಂದಿದ್ದರಿಂದ ತಂದೆ-ಮಗಳು ಸದ್ಯ ಕ್ವಾರಂಟೈನ್ ನಲ್ಲಿದ್ದಾರೆ. ಊರಿನಲ್ಲಿ ಶ್ರವಣ ಕುಮಾರಿ ಎಂದು ಫೇಮಸ್ಸಾಗಿದ್ದಾಳೆ. ಈಕೆಯ ವಿಷಯ ತಿಳಿದ ದರ್ಬಾಂಗ ಜಿಲ್ಲಾಧಿಕಾರಿ ಡಾ ತ್ಯಾಗರಾಜನ್ ಎಸ್ ಎಂ ಅಧಿಕಾರಿಯೊಬ್ಬರನ್ನು ಜ್ಯೋತಿ ಕುಮಾರಿ ಮನೆಗೆ ಕಳುಹಿಸಿ ಆಕೆಯ ಮುಂದಿನ ಶಿಕ್ಷಣಕ್ಕೆ ಮತ್ತು ಮನೆಯವರಿಗೆ ಸಾಧ್ಯವಾಗುವ ಎಲ್ಲಾ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com