ಕೊರೊನಾ ಭೀತಿ ನಡುವೆಯೂ ಸಗಣಿಯಲ್ಲಿ ಹೊಡೆದಾಡಿ ಹಬ್ಬ ಮಾಡಿದ ತಮಿಳುನಾಡು ಕನ್ನಡಿಗರು!

ಕೊರೊನಾ ಭೀತಿ  ನಡುವೆಯೂ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಸಾಂಪ್ರದಾಯಿಕ ಗೊರೆ ಹಬ್ಬವನ್ನು ಸಡಗರ, ಶ್ರದ್ಧೆಯಿಂದ ಮಂಗಳವಾರ ಆಚರಿಸಿದರು.

Published: 18th November 2020 12:00 PM  |   Last Updated: 18th November 2020 12:03 PM   |  A+A-


gore habba

ಗೋರೆ ಹಬ್ಬ ಆಚರಿಸುತ್ತಿರುವ ಜನತೆ

Posted By : Manjula VN
Source : RC Network

ಚಾಮರಾಜನಗರ: ಕೊರೊನಾ ಭೀತಿ  ನಡುವೆಯೂ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಸಾಂಪ್ರದಾಯಿಕ ಗೊರೆ ಹಬ್ಬವನ್ನು ಸಡಗರ, ಶ್ರದ್ಧೆಯಿಂದ ಮಂಗಳವಾರ ಆಚರಿಸಿದರು.

ಸಗಣಿಯನ್ನು ಕೈಯಲ್ಲಿ ಹಿಡಿದರೇ ಹಲವರಿಗೆ ಇರಿಸುಮರುಸಾಗಲಿದೆ. ಆದರೆ, ಇವರು, ಸಗಣಿಯ ಗುಡ್ಡದಲ್ಲೇ ಹೊರಲಾಡಿ, ಎರಚಾಡಿಕೊಳ್ಳುತ್ತಾರೆ. ಗ್ರಾಮದ ಸಹಬಾಳ್ವೆಯನ್ನು ಬೆಸೆಯುವ ಈ ವಿಶಿಷ್ಟ ಆಚರಣೆಯ ಗೊರೆ ಹಬ್ಬಕ್ಕೆ ಕೊರೊನಾ ಕಾಟದ ನಡುವೆಯೂ ಸಾವಿರಾರು ಮಂದಿ ಸಾಕ್ಷಿಯಾದರು. 

ಪ್ರತಿವರ್ಷದ ದೀಪಾವಳಿಯ ಬಲಿಪಾಡ್ಯಮಿ ಮಾರನೇದಿನ  ಈ ನಡೆಯುವ ಈ ಆಚರಣೆ ಪರಸ್ಪರ  ಸಹಬಾಳ್ವೆ ಬೆಸೆಯುತ್ತಾ ಬಂದಿದ್ದು, ಜಾತಿ ಬೇಧದ ಮನೋಭಾವ ಇಲ್ಲದೇ ಗ್ರಾಮದ ಪ್ರತಿಯೊಬ್ಬರಿಂದ ಸಗಣಿ ಶೇಖರಿಸಿ ಬಳಿಕ ಎರಚಾಡಲಿದ್ದಾರೆ‌.  

ದೀಪಾವಳಿ ಹಬ್ಬ ಬರುವುದನ್ನೇ ಕಾಯುವ ಇಲ್ಲಿನ ಯುವಕರು ಎಲ್ಲಿಲ್ಲದ  ಹುಮ್ಮಸ್ಸಿನಿಂದ ಸಗಣಿ ಎರಚಾಡುವ ಮೂಲಕ ಸಂಭ್ರಮಿಸುತ್ತಾರೆ.  

ವರ್ಷದಿಂದ ವರ್ಷಕ್ಕೆ  ಈ ಹಬ್ಬ ಪ್ರಸಿದ್ಧಿಯಾಗುತ್ತಿದ್ದು, ಸಗಣಿ ಎರೆಚಾಟ ಕಂಡ ಬೇರ ಊರಿನವರು ಪುಳಕಿತರಾದರು‌‌. ಮಧ್ಯಾಹ್ನ ಕ್ಕೆ ಪ್ರಾರಂಭವಾಗಿ  ಸುಮಾರು  ಒಂದುವರೆ  ತಾಸುಗಳ ಕಾಲ ನೂರಾರು ಯುವಕರು- ಹಿರಿಯರು  ದಪ್ಪ ದಪ್ಪ ಸಗಣಿ ಉಂಡೆ ಕಟ್ಟಿ  ಪರಸ್ಪರ ಹೊಡೆದಾಡುವ ಮೂಲಕ  ತಮ್ಮ ಶಕ್ತಿ  ಪ್ರದರ್ಶಿಸಿದರು.   

ಆಚರಣೆಯ ಹಿನ್ನೆಲೆ: 
ಗ್ರಾಮದ ಬೀರೇಶ್ವರ ಸ್ವಾಮಿಯ ಇಷ್ಟಾರ್ಥವಾಗಿ ಈ ಗೊರೆಹಬ್ಬವನ್ನು  ಆಚರಿಸಲಾಗುತ್ತಿದ್ದು ನೂರಾರು ವರ್ಷಗಳ ಇತಿಹಾಸವಿದೆ. ಹಿರಿಯರ ಪ್ರಕಾರ ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ದೇಶದಿಂದ ದೇವರ ಗುಡ್ಡನೊಬ್ಬ ಬಂದಿದ್ದ, ಅವನು ಸತ್ತ ಮೇಲೆ ಅವನ ಜೋಳಿಗೆ,  ಬೆತ್ತ, ಎಲ್ಲವನ್ನು ತಿಪ್ಪೆ ಗುಂಡಿಗೆ ಬಿಸಾಕಿದರಂತೆ. ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿ ಬಳಿಗೆ ಎತ್ತಿನ ಗಾಡಿಯೊಂದು ಹೋದಾಗ ಲಿಂಗವೊಂದು ಕಾಣಿಸಿಕೊಂಡಿತು.  ಗಾಡಿಯ ಚಕ್ರ ಲಿಂಗದ ಮೇಲೆ ಹರಿದಾಗ ಅದರಿಂದ ರಕ್ತ ಬಂದಿತಂತೆ. ಆಗ  ಗ್ರಾಮದ ಮುಖಂಡರ ಕನಸಿನಲ್ಲಿ ದೇವರ ಗುಡ್ಡಪ್ಪ  ಕಾಣಿಸಿಕೊಂಡು  ದೀಪಾವಳಿ ಹಬ್ಬವಾದ ಮರುದಿನವೇ ಗೊರೆಹಬ್ಬ ಮಾಡುವಂತೆ ಹೇಳಿತು ಎಂಬ  ಪ್ರತೀತಿ ಇದೆ.  

ಈ ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿಯಲ್ಲೇ ಈಗಿನ ಬೀರಪ್ಪನ ದೇವಸ್ಥಾನ ಕಟ್ಟಿ ಗೊರೆಹಬ್ಬವನ್ನು ಆಚರಿಸಲಾಗುತ್ತಿದೆ.  

ಹಬ್ಬ ಆರಂಭಕ್ಕೂ ಮುನ್ನ ಕೆರೆಯಂಗಳದಲ್ಲಿ ಕತ್ತೆಯನ್ನು  ತೊಳೆದು  ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಗಣಿ ಎರಚಾಡುವ ಬೀರಪ್ಪನ ಗುಡಿವರಗೆ ಕರೆ ತರಲಾಗುತ್ತದೆ. ನಂತರ ಕತ್ತೆಯನ್ನು ತೊಳೆಯಲಾಗಿದ್ದ ಕೆರೆಯಲ್ಲಿ ಎಲ್ಲರು ಸ್ನಾನ ಮಾಡಿಕೊಂಡು ಊರಿಗೆ ಬರುವಾಗ ಚಾಡಿಕೋರನನ್ನು  ಹಿಯ್ಯಾಳಿಸುತ್ತಾ, ಊರ ಗೌಡನನ್ನು ಅಶ್ಲೀಲ ಶಬ್ದಗಳಿಂದ ಬೈಯುತ್ತಾ ಸಂಭ್ರಮಿಸಿ ಕೇಕೆ ಹಾಕುವುದು ನಡೆದುಕೊಂಡ ಬಂದ ರೂಢಿಯಾಗಿದೆ.

ಗೊರೆಹಬ್ಬ ಆಚರಿಸಿ ಬೀರೇಶ್ವರನನ್ನು ಬೇಡಿಕೊಂಡರೆ ಒಳಿತಾಗಲಿದೆ ಎಂಬುದು ಜನರ ನಂಬಿಕೆಯಾಗಿದೆ. ತಮ್ಮ ಗ್ರಾಮದಲ್ಲಿ ಚಾಡಿಕೋರ ಇರಬಾರದು, ಸಹೋದರತೆ-ಸಹಬಾಳ್ವೆ ಹಸಿರಾಗಿರಲೆಂಬ ರೂಪಕವಿರುವ ಈ ಹಬ್ಬ ನಿಜಕ್ಕೂ ಒಂದು ವಿಶಿಷ್ಟವೇ ಸರಿ.

ವರದಿ: ಗುಳಿಪುರ ನಂದೀಶ. ಎಂ

Stay up to date on all the latest ವಿಶೇಷ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp