ದಿವಂಗತ ನಟ ಅಂಬರೀಶ್‌ಗಾಗಿ ದೇವಾಲಯ ನಿರ್ಮಿಸಿದ ಗ್ರಾಮಸ್ಥರು!

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಅಂಬರೀಶ್ ಅವರ ಫೋಟೋ ಇಟ್ಟು ಪೂಜೆಸಲಾಗುತ್ತಿದೆ. 
ಅಂಬಿ ಅಮರ ದೇವಾಲಯ
ಅಂಬಿ ಅಮರ ದೇವಾಲಯ

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಷ್ ಭೌತಿಕವಾಗಿ ನಮ್ಮನ್ನು ಅಗಲಿ ಎರಡು ವರ್ಷ ಆಗಿದ್ದರೂ ಜನಮಾನಸದಲ್ಲಿ ಅವರು ಎಂದಿಗೂ ಚಿರಸ್ಥಾಯಿಯಾಗಿದ್ದಾರೆ. ಅವರ ಮೇಲಿನ ಪ್ರೀತಿ, ಅಭಿಮಾನ ಜನರಲ್ಲಿ ಹಾಗೆಯೇ ಇದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಅಂಬರೀಶ್ ಅವರ ಫೋಟೋ ಇಟ್ಟು ಪೂಜೆಸಲಾಗುತ್ತಿದೆ. 

ಅಲ್ಲದೇ, 8 ಲಕ್ಷ ರೂ.  ನಿಧಿ ಸಂಗ್ರಹದ ಮೂಲಕ  'ಅಂಬಿ ಅಮರ' ದೇವಾಲಯ ನಿರ್ಮಿಸುವ ಮೂಲಕ ಮೆಚ್ಚಿನ ನಟನಿಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದ್ದು, ಅವರ ಎರಡನೇ ಪುಣ್ಯ ಸ್ಮರಣೆ ದಿನವಾದ ನವೆಂಬರ್ 24 ರಂದು ಅನಾವರಣ ಮಾಡಲಾಗುತ್ತಿದೆ.

''ನಾನು ಮಾತ್ರವಲ್ಲ, ನನ್ನ ತಂದೆ, ಗ್ರಾಮದಲ್ಲಿರುವ ಎಲ್ಲಾ ಸಂಬಂಧಿಕರು ಅಂಬರೀಶ್ ಅವರ ಅಭಿಮಾನಿಗಳು. ಅವರು ನಮ್ಮ ಹಳ್ಳಿಯಲ್ಲಿ ಮಾಡಿದ ಜನಪರ ಕಾರ್ಯಗಳಿಂದ ಜನರ ಜೀವನ ಬದಲಾಗಿದ್ದು, ದೇವರಂತೆ ನಂಬಿಕೆ ಇಡಲಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಅಂಬಿ ಫೋಟೋವಿದೆ. ಗ್ರಾಮಸ್ಥರು, ಅಭಿಮಾನಿಗಳಗಳ ಪ್ರಯತ್ನದಿಂದ ಇದೀಗ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೊಟ್ಟೆಗೌಡನದೊಡ್ಡಿ ನಿವಾಸಿ ಸಿದ್ದೇಶ್ ಸಂತಸ ವ್ಯಕ್ತಪಡಿಸಿದರು.

ಅಂಬರೀಶ್ ಅಣ್ಣಾನ ಮೇಲೆ ಅಪಾರ ಪ್ರೀತಿಯಿಂದಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ. ಅಂಬರೀಶ್ ಅವರ ಸಮಾಧಿ ಸ್ಥಳದಿಂದ ತಂದ ಚಿತಾಭಸ್ಮವನ್ನು ಇಲ್ಲಿಟ್ಟು ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ, ಸ್ವಯಂ ಪ್ರೇರಣೆಯಿಂದ ಈ ಕಾರ್ಯವನ್ನು ಮಾಡಿದ್ದೇವೆ ಎಂದು ಅಖಿಲ ಕರ್ನಾಟಕ ಡಾ. ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗೇಶ್ ತಿಳಿಸಿದ್ದಾರೆ.

ದೇವಾಲಯ ನಿರ್ಮಾಣ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ,   ಅಂಬರೀಶ್ ಅವರ ಮೇಲಿನ ಅಭಿಮಾನಿಗಳ ಅಭಿಮಾನವನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ. ಅವರು ಗಳಿಸಿದ ಪ್ರೀತಿಯನ್ನು ಅಭಿಷೇಕ್ ಹಾಗೂ ನನಗೆ ರವಾನಿಸಿದ್ದಾರೆ. ಅವರು ಅದ್ಬುತ ವ್ಯಕ್ತಿ, ಶತಕೋಟಿಗಳಲ್ಲಿ ಒಬ್ಬರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com