ವಿಶ್ವ ಶೌಚಾಲಯ ದಿನ: ರಾಜ್ಯದ ಗ್ರಾಮೀಣ ಭಾಗದಲ್ಲಿ ಋತುಚಕ್ರ ನಿರ್ವಹಣೆಗೆ ವಿಶೇಷ ಜಾಗೃತಿ

ರಾಜ್ಯದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆರೋಗ್ಯಪೂರ್ಣ ವಿಧಾನಗಳ ಮೂಲಕ ಋತುಚಕ್ರ ನಿರ್ವಹಣೆಗಾಗಿ ವಿಶೇಷ ಜಾಗೃತಿ ಅಭಿಯಾನ ನಡೆಸಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆರೋಗ್ಯಪೂರ್ಣ ವಿಧಾನಗಳ ಮೂಲಕ ಋತುಚಕ್ರ ನಿರ್ವಹಣೆಗಾಗಿ ವಿಶೇಷ ಜಾಗೃತಿ ಅಭಿಯಾನ ನಡೆಸಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ.

ಇಂದು ವಿಶ್ವ ಶೌಚಾಲಯ ದಿನ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೌಚಾಲಯ ನಿರ್ಮಾಣ, ಬಳಕೆ ಜತೆ ಜತೆಯಲ್ಲೇ ಮಹಿಳೆಯರ ಋತುಚಕ್ರ ನಿರ್ವಹಣೆ, ಶುಚಿತ್ವಕ್ಕೆ ವಿಶೇಷ ಗಮನಹರಿಸುವಂತೆ ಮಹಿಳೆಯರಲ್ಲಿ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ.

ಋತುಚಕ್ರದಿಂದ ಆಗುವ ಅನಾರೋಗ್ಯ ಸಮಸ್ಯೆಗಳು, ಉತ್ತಮ ಅಭ್ಯಾಸಗಳು, ಮಹಿಳೆಯರ ವೈಯಕ್ತಿಕ ಸ್ವಚ್ಛತೆ, ಋತುಚಕ್ರವನ್ನು ಸಾಮಾಜಿಕ ಸಮಸ್ಯೆಯಾಗಿ ನೋಡುವುದರ ವಿರುದ್ಧ ಜಾಗೃತಿ ಮೂಡಿಸಲು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ,  ಕಾರ್ಯಯೋಜನೆ ರೂಪಿಸಿದೆ.

ಜತೆಗೆ ಗ್ರಾಮೀಣ ಭಾಗದಲ್ಲಿ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಆಂದೋಲನ, ಸಮುದಾಯ ಶೌಚಾಲಯ ಅಭಿಯಾನ, ಸಾಮಾಜಿಕ ವಿಶೇಷ ಆಂದೋಲನ, ನೀರು ಮತ್ತು ನೈರ್ಮಲ್ಯ ಆಂದೋಲನ, ಗಂದಗಿ ಮುಕ್ತ ಭಾರತ್, ಸ್ವಚ್ಛೋತ್ಸವ- ನಿತ್ಯೋತ್ಸವ ಆಂದೋಲನ ಸ್ವಚ್ಛತಾ ಪಕ್ವಾಡಗಳಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ.

ಗ್ರಾಮಾಂತರ ಭಾಗದಲ್ಲಿ ಸ್ವಚ್ಛತೆಗಾಗಿ ಗ್ರಾಮೀಣ ನೈರ್ಮಲ್ಯ ನೀತಿ ಜಾರಿಗೊಳಿಸಿದ್ದು, ಇದಕ್ಕಾಗಿ ಸೂಕ್ತ ಕಾರ್ಯತಂತ್ರ ರೂಪಿಸಲಾಗಿದೆ. ಸಾರ್ವಜನಿಕ ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯಾರ್ಥಪಡಿಸಲು ಪರಿಹಾರ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಈ ಮೂಲಕ ತ್ಯಾಜ್ಯ ಮುಕ್ತ ಗ್ರಾಮೀಣ ಕರ್ನಾಟಕವನ್ನಾಗಿ ರೂಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

ಈ ವರ್ಷ ಗ್ರಾಮೀಣ ಪ್ರದೇಶದಲ್ಲಿ ಒಂದು ಲಕ್ಷ ಗೃಹ ಶೌಚಾಲಯ, ಒಂದು ಸಾವಿರ ಸಮುದಾಯ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಈವರೆಗೆ ಸುಮಾರು ೧೧೬೦ ಸಮುದಾಯ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯದ ೬೦೦೨ ಗ್ರಾ.ಪಂಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ, ರಾಜ್ಯದ ೪೪೬೪ ಗ್ರಾಮ ಪಂಚಾಯಿತಿಗಳಲ್ಲಿ ದ್ರವ ತ್ಯಾಜ್ಯ (ಬೂದು ನೀರು) ನಿರ್ವಹಣೆ ಮಾಡಲು ೧೧೭೩ ಕೋಟಿ ರೂ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಗೆ ಅನುದಾನದಡಿ ೨೦೫ ಕೋಟಿ ಬಿಡುಗಡೆ ಮಾಡಲಾಗಿದೆ

ರಾಜ್ಯದಲ್ಲಿ ನೂರು ಮಲ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಪ್ರಾಯೋಗಿಕವಾಗಿ ೧೬ ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

ಗ್ರಾಮೀಣ ಬಸ್ ನಿಲ್ದಾಣಗಳಲ್ಲಿ ಶ್ರವ್ಯ ಮಾಧ್ಯಮದ ಪ್ರಚಾರ, ಕೋವಿಡ್-೨೦೧೯ ಸೋಂಕು ನಿಯಂತ್ರಣಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ಶುಚೀಕರಣ ಮತ್ತು ಸುರಕ್ಷತಾ ಕ್ರಮಗಳ ಪಾಲನೆ, ಗೋಡ ಬರಹ, ಗುಂಪು ಸಭೆ, ಪ್ರಚಾರ ಫಲಕಗಳ ಅಳವಡಿಕೆ, ಮೇಳಗಳ ಆಯೋಜನೆ, ಬೀದಿ ನಾಟಕ ಮತ್ತು ಜಾಗೃತಿ ಜಾಥಗಳ ಆಯೋಜನೆ, ಆಟೋ ಮೂಲಕ ಪ್ರಚಾರ. ಮನೆ-ಮನೆ ಭೇಟಿ ಮಾಡಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಸಹ ಜಾರಿಗೆ ತರಲಾಗುತ್ತಿದೆ.

ವಿಶೇಷ ವರದಿ: ವಿ. ನಂಜುಂಡಪ್ಪ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com