ವಿರಾಮದ ಸಮಯದಲ್ಲಿ ಬಡ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವ ಬೆಂಗಳೂರಿನ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ!

ನಮ್ಮ ನಿತ್ಯಜೀವನದಲ್ಲಿ ಕಂಡುಬರುವ, ನಮ್ಮ ಜೀವನದಲ್ಲಿ ಹಾದುಹೋಗುವ ಕೆಲವು ವ್ಯಕ್ತಿಗಳು ನಮ್ಮ ಮೇಲೆ ಸ್ಪೂರ್ತಿ, ಉತ್ಸಾಹ ತುಂಬುತ್ತಾರೆ, ಪ್ರಭಾವ ಬೀರುತ್ತಾರೆ. ಅಂಥವರಲ್ಲಿ ಬೆಂಗಳೂರಿನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ಜಡೆರ್ಮನ್ನವರ್ ಒಬ್ಬರು.
ಮಕ್ಕಳೊಂದಿಗೆ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ
ಮಕ್ಕಳೊಂದಿಗೆ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ

ಬೆಂಗಳೂರು: ನಮ್ಮ ನಿತ್ಯಜೀವನದಲ್ಲಿ ಕಂಡುಬರುವ, ಹಾದುಹೋಗುವ ಕೆಲವು ವ್ಯಕ್ತಿಗಳು ನಮ್ಮ ಮೇಲೆ ಸ್ಪೂರ್ತಿ, ಉತ್ಸಾಹ ತುಂಬುತ್ತಾರೆ, ಪ್ರಭಾವ ಬೀರುತ್ತಾರೆ. ಅಂಥವರಲ್ಲಿ ಬೆಂಗಳೂರಿನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ಜಡೆರ್ಮನ್ನವರ್ ಒಬ್ಬರು.

ಸಾಮಾನ್ಯವಾಗಿ ಪೊಲೀಸರೆಂದರೆ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳು ಏನು ಹೇಳಿ? ಖಾಕಿ ಯೂನಿಫಾರ್ಮ್, ಕೈಯಲ್ಲಿ ಕೋಲು, ಅವರ ಗತ್ತು, ಘನತೆ, ಗಾಂಭೀರ್ಯ, ಸಾಮಾನ್ಯ ನಾಗರಿಕರು ಪೊಲೀಸರಿಂದ ಅಂತರ ಕಾಯ್ದುಕೊಳ್ಳುವುದೇ ಹೆಚ್ಚು. ಹಲವರಿಗೆ ಪೊಲೀಸರೆಂದರೆ ಭಯ. 

ಈ ಕೋವಿಡ್ ಸಮಯದಲ್ಲಿ ಪೊಲೀಸರಿಗೆ ನಿರಂತರವಾಗಿ ಕೆಲಸಗಳಿರುತ್ತದೆ. ಕೋವಿಡ್-19 ನಿಯಮಗಳನ್ನು ಜನರು ಪಾಲಿಸುತ್ತಿದ್ದಾರೆಯೇ ಎಂದು ನೋಡಿಕೊಳ್ಳುವುದು, ನಾಗರಿಕರಿಗೆ ರಕ್ಷಣೆ ನೀಡುವುದು ಇತ್ಯಾದಿ. ಹಲವು ಮಂದಿ ಬಡವರು, ನಿರ್ಗತಿಕರು, ದೀನದಲಿತರು ಕೋವಿಡ್-19 ಸಮಯದಲ್ಲಿ ತೀವ್ರ ದುಸ್ಥಿತಿಗೆ ಹೋಗಿದ್ದಾರೆ.

ಈ ವರ್ಷ ಶಾಲೆಗಳು ಇನ್ನೂ ಆರಂಭಗೊಂಡಿಲ್ಲ. ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮೂಲಕ ತರಗತಿಗಳು ನಡೆಯುತ್ತಿವೆ. ಶ್ರೀಮಂತ ಪೋಷಕರ ಮಕ್ಕಳು ಗ್ಯಾಜೆಟ್ ಗಳ ಮೂಲಕ ಮನೆಯಲ್ಲಿ ಆರಾಮಾಗಿ ಕುಳಿತು ತರಗತಿಗಳನ್ನು ಆಲಿಸುತ್ತಿದ್ದಾರೆ. ಆದರೆ ಬಡಬಗ್ಗರ ಮಕ್ಕಳು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು, ಅಂಥವರ ಬದುಕಿಗೆ ಕೊಂಚ ಬೆಳಕಾಗಿ ಕಾಣುತ್ತಾರೆ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ. ಇವರು ಮಾಡುತ್ತಿರುವ ಕೆಲಸ ಅತ್ಯಂತ ಪ್ರಶಂಸನೀಯ.

ಕೊಳಗೇರಿ ಪ್ರದೇಶದಿಂದ ಬಂದು ಕಷ್ಟಪಟ್ಟು ಓದಿ ಪೊಲೀಸ್ ಆದ ಶಾಂತಪ್ಪ ಅವರಿಗೆ ಜೀವನ ಸಾಕಷ್ಟು ಕಲಿಸಿಕೊಟ್ಟಿದೆ. ಮಕ್ಕಳಿಗೆ ಮೂಲಭೂತ ಶಿಕ್ಷಣ ಎಷ್ಟು ಮುಖ್ಯ ಎನ್ನುವುದು ಅವರಿಗೆ ಮನದಟ್ಟಾಗಿದೆ. ಹೀಗಾಗಿ ಅವರು ತಮ್ಮ ಕೆಲಸದ ವಿರಾಮದ ಅವಧಿಯಲ್ಲಿ ಕೊಳಗೇರಿ ಪ್ರದೇಶದ ನಿರ್ಗತಿಕ, ಬಡ ಮಕ್ಕಳಿಗೆ ಪಾಠ ಮಾಡುತ್ತಾರೆ.

ಶ್ರೀಮಂತ ಮಕ್ಕಳಿಗೆ ಆನ್ ಲೈನ್ ನಲ್ಲಿ ಈ ಕೋವಿಡ್ ಸಾಂಕ್ರಾಮಿಕ ಮಧ್ಯೆ ಶಿಕ್ಷಣ ಸಿಗುತ್ತಿದೆ, ಆದರೆ ಈ ಬಡ ಮಕ್ಕಳಿಗೆ ಅತ್ತ ಆನ್ ಲೈನ್ ಶಿಕ್ಷಣವೂ ಇಲ್ಲ, ಇತ್ತ ಶಾಲೆಯೂ ಇಲ್ಲ, ಇವರು ಶಿಕ್ಷಣದಿಂದ ವಂಚಿತರಾಗಬಾರದೆಂದು ನಾನು ಹೋಗಿ ನನ್ನಿಂದಾದಷ್ಟು ಮಕ್ಕಳಿಗೆ ಹೇಳಿ ಕೊಡುತ್ತೇನೆ ಎನ್ನುತ್ತಾರೆ ಶಾಂತಪ್ಪ. ಶಾಂತಪ್ಪ ಅವರು ಮಕ್ಕಳಿಗೆ ವೇದ ಗಣಿತ, ಸಾಮಾನ್ಯ ಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣ ಹೀಗೆ ಪ್ರಮುಖವಾಗಿ ಮೂರು ವಿಷಯಗಳನ್ನು ಹೇಳಿಕೊಡುತ್ತಾರೆ. ಸುಮಾರು 50 ಮಕ್ಕಳು ಇವರ ಬಳಿ ಕಲಿಯುತ್ತಿದ್ದಾರೆ.

ಸಬ್ ಇನ್ಸ್ ಪೆಕ್ಟರ್ ಶಾಂತಪ್ಪನಂಥವರು ನಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಪೊಲೀಸರೆಂದರೆ ಹೃದಯಹೀನರು ಎಂಬ ಭಾವನೆಯನ್ನು ಇಂಥವರು ಹೊಡೆದೋಡಿಸುತ್ತಾರೆ, ಶಾಂತಪ್ಪ ಅವರು ಯುವಜನತೆಗೆ ಮಾರ್ಗದರ್ಶಕರು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳುತ್ತಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಶಾಂತಪ್ಪನವರ ಕೆಲಸ ನಮಗೆಲ್ಲರಿಗೂ ಬಹಳ ಇಷ್ಟವಾಗಿದೆ. ಅವರಿಗೆ ನಮ್ಮ ಇಲಾಖೆಯಿಂದ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com