ದಸರಾ ಗೊಂಬೆ: ಏನಿದರ ಮಹತ್ವ, ಆಚರಣೆ ಹೇಗೆ?

ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಬೊಂಬೆ. ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಜನಪ್ರಿಯ, ಕನ್ನಡದಲ್ಲಿ ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ.

Published: 21st October 2020 11:22 PM  |   Last Updated: 22nd October 2020 03:00 PM   |  A+A-


Rekha Radhakrishna with Dasara Bombe

ತಮ್ಮ ಮನೆಯ ದಸರಾ ಬೊಂಬೆಗಳೊಂದಿಗೆ ರೇಖಾ ರಾಧಾಕೃಷ್ಣ

Posted By : Sumana Upadhyaya
Source : Online Desk

ನಾಡಿನಾದ್ಯಂತ ನವರಾತ್ರಿ ಹಬ್ಬದ ಆಚರಣೆ ಕೊರೋನಾ ಮಧ್ಯೆ ಸಾಂಗವಾಗಿ ಸಾಗುತ್ತಿದೆ. ನವದುರ್ಗೆಯರನ್ನು 9 ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಹೆಂಗಳೆಯರ ಪಾಲಿಗೆ ವಿಶೇಷ. ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಉಡುಗೆ ಧರಿಸಿ ದೇವರ ಪೂಜೆಗೆ ಸಿದ್ದವಾಗುವುದು, ದೇವಿಯನ್ನು ಅಲಂಕಾರ ಮಾಡಿ ಪೂಜೆ ಮಾಡುವುದು, ದೇವಿಗೆ ನೈವೇದ್ಯ ನೀಡುವುದು, ಸಾಯಂಕಾಲ ಮುತ್ತೈದೆ, ಮಕ್ಕಳನ್ನು ಮನೆಗೆ ಕರೆದು ಅರಶಿನ-ಕುಂಕುಮ, ಬಾಗಿನ,ತಿನಿಸು ಕೊಡುವುದು ಹೀಗೆ ಶಾಸ್ತ್ರ, ಸಂಪ್ರದಾಯಗಳು 9 ದಿನಗಳ ಕಾಲ ನೆರವೇರುತ್ತದೆ.

ಗೊಂಬೆ ಹಬ್ಬ: ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಬೊಂಬೆ. ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಜನಪ್ರಿಯ, ಕನ್ನಡದಲ್ಲಿ ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ.

ದಸರಾ ಗೊಂಬೆ ಕೂರಿಸುವ ಪದ್ಧತಿ 18 ನೇ ಶತಮಾನದಿಂದ ಮನೆಮನೆಯಲ್ಲೂ ಜಾರಿಗೆ ಬಂದಿತು ಎನ್ನಬಹುದು.ಇಂದಿನ ಜೀವನ ಕ್ರಮದಲ್ಲಿ ಇದು ಕಡಿಮೆ ಕಾಣಲು ಸಿಗುತ್ತದೆ. ಆದರೆ ಯಾರು ಹಿಂದಿನಿಂದಲೂ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೋ, ಅಂತಹವರ ಮನೆಯಲ್ಲಿ ಈ ಗೊಂಬೆ ಮನೆಯನ್ನು ನೋಡಬಹುದು.

ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ. ಮೈಸೂರು ದಸರಾ ಎಂದು ಜಗತ್ ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಮೈಸೂರು ರಾಜರ ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು. ಗೊಂಬೆ ಕೂರಿಸಲು ಸಾಕಷ್ಟು ತಯಾರಿ ಬೇಕಾಗುತ್ತದೆ. ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯ(ಥೀಮ್) ಇಟ್ಟುಕೊಂಡು ಮನೆಗಳಲ್ಲಿ ಗೊಂಬೆ ಕೂರಿಸುತ್ತಾರೆ, ನಮ್ಮ ದೇಶದ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತದೆ.

ಗೊಂಬೆಗಳನ್ನು ಕೂರಿಸುವ ವಿಧಾನ: ಮನೆಗಳಲ್ಲಿ ಗೊಂಬೆ ಕೂರಿಸುವಾಗ ಸ್ಥಳಾವಕಾಶ ನೋಡಿಕೊಂಡು 3,5,7,9 ಹಂತಗಳಲ್ಲಿ ಕೂರಿಸುತ್ತಾರೆ. ಹೆಚ್ಚು ಗೊಂಬೆಗಳು ಇದ್ದವರು 9 ಹಂತಗಳಲ್ಲಿ ಕೂರಿಸಿದರೆ, ಇನ್ನು ಕೆಲವರು 7 ಹಂತಗಳಲ್ಲಿ, ಕೆಲವರು 5 ಹಂತಗಳಲ್ಲಿ ಕೂರಿಸುತ್ತಾರೆ. ಗೊಂಬೆಗಳನ್ನು ಕೂರಿಸಲು ಮರದ ಸ್ಟ್ಯಾಂಡ್‌ಗಳನ್ನೂ ಬಳಸುತ್ತಾರೆ. ಮರದ ಸ್ಟ್ಯಾಂಡ್ ಇಲ್ಲದಿದ್ದರೆ ಸ್ಟೀಲ್ ಸ್ಟ್ಯಾಂಡ್‌ನ್ನೂ ಬಳಸಬಹುದು. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳು ಇವುಗಳನ್ನಿಟ್ಟು, ಎರಡು, ಮೂರು ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸುತ್ತಾರೆ.

ಇದರಲ್ಲಿ ಮುಖ್ಯವಾಗಿ ಅಷ್ಟಲಕ್ಷ್ಮಿಯರು, ದಶಾವತಾರದ ಬೊಂಬೆಗಳು, ಸೀತಾ ಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಬೊಂಬೆಗಳು, ಶಿವ-ಪಾರ್ವತಿಯರ ಕೈಲಾಸದ ಸೆಟ್ ಹೀಗೆ ಒಂದೊಂದು ಅಂತಸ್ತಿನಲ್ಲಿ ಒಂದೊಂದನ್ನು ಇಟ್ಟು ಅಲಂಕರಿಸುವುದು. ಹಾಗೆಯೇ ಗುರು ಪರಂಪರೆಯ ಎಲ್ಲಾ ಗುರುಗಳನ್ನು ಒಂದು ವಿಭಾಗದಲ್ಲಿ, ಚಾಮುಡೇಶ್ವರಿ ಹಬ್ಬದಲ್ಲಿ ಚಾಮುಂಡೇಶ್ವರಿಯ ವಿಶೇಷತೆಯಿರುವುದರಿಂದ ಆ ದೇವಿಯ ವಿಗ್ರಹವನ್ನು ಮಧ್ಯದಲ್ಲಿರಿಸಿ ಸರಸ್ವತಿ, ಗೌರಿ, ಲಕ್ಷ್ಮಿಯರ ವಿಗ್ರಹಗಳನ್ನಿಟ್ಟು ಪೂಜಿಸುತ್ತಾರೆ.

ಗೊಂಬೆ ಕೂರಿಸುವವರು ಪ್ರತೀ ವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಹಾಗಾಗಿ ಪ್ರತಿಯೊಬ್ಬರು ಹಳೆ ಗೊಂಬೆ ಜೊತೆಗೆ ಹೊಸ ಗೊಂಬೆಯನ್ನು ಕೂರಿಸುತ್ತಾರೆ.

ಇತ್ತೀಚೆಗೆ ಹಳೆ ಸಂಪ್ರದಾಯದ ಬೊಂಬೆಗಳ ಜೊತೆ ಆಧುನಿಕ ಸ್ಪರ್ಶ ನೀಡಲಾಗುತ್ತದೆ. ಮರದ, ಮಣ್ಣಿನ ಗೊಂಬೆ ಜೊತೆಗೆ ಇತ್ತೀಚೆಗೆ ಕಾಗದಗಳಿಂದ ತಯಾರಿಸುವ ಗೊಂಬೆಗಳು ಸಹ ನಾನಾ ಅಲಂಕಾರಗಳಲ್ಲಿ, ವಿವಿಧ ಬಣ್ಣಗಳಲ್ಲಿ ಸಿಗುತ್ತದೆ.

ಪೂಜೆ ಹೇಗೆ: ನವದುರ್ಗೆಯರಲ್ಲಿ ಪ್ರತಿದಿನ ಆಯಾ ದೇವಿಯರ ಕುಂಕುಮಾರ್ಚನೆ ಮಾಡಿ ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಸಂಜೆಯ ವೇಳೆಗೆ ಮುತ್ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು  ಬಾಗಿನ, ತೆಂಗೊಳು, ಚಕ್ಕುಲಿ, ಉಂಡೆ ಹೀಗೆ ಖಾರ, ಸಿಹಿ ತಿಂಡಿಗಳನ್ನು ಕೊಟ್ಟು ಆರತಿ ಮಾಡುವ ಪದ್ಧತಿ ಇದೆ. ಮುತ್ತೈದೆಯರು, ಮಕ್ಕಳು ಒಬ್ಬರು, ಮತ್ತೊಬ್ಬರ ಮನೆಗೆ ಹೋಗುತ್ತಾ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ. ಇದರಿಂದ ನಮ್ಮ ಸಂಪ್ರದಾಯ, ಆಚರಣೆಗಳು ಉಳಿಯುವುದಲ್ಲದೆ ಮುಂದಿನ ಜನಾಂಗಕ್ಕೂ ತೋರಿಸಿಕೊಟ್ಟು ಅವರಲ್ಲಿ ಪ್ರಜ್ಞೆ ಮೂಡಿದಂತಾಗುತ್ತದೆ.

ಮೈಸೂರು ಮೂಲದ ಪ್ರಸ್ತುತ ಬೆಂಗಳೂರಿನ ಸಿಂಗಾಪುರ ಲೇ ಔಟ್ ನಲ್ಲಿ ನೆಲೆಸಿರುವ ರೇಖಾ ರಾಧಾಕೃಷ್ಣ ಅವರು ದಸರಾ ಬೊಂಬೆ ಇಡುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ.

ದಸರಾ ಗೊಂಬೆ ಇಡುವ ಬಗ್ಗೆ ರೇಖಾ ರಾಧಾಕೃಷ್ಣ ಹೀಗೆ ಹೇಳುತ್ತಾರೆ: ನಮ್ಮ ಹಿರಿಯರು ಸೂಚಿಸಿದ ಸಂಪ್ರದಾಯ ರೀತಿಯಲ್ಲಿ ದಸರಾ ಹಬ್ಬವನ್ನು ಪಟ್ಟದ ಬೊಂಬೆಗಳ ಸಮೇತ ಇತರ ದೇವತೆಗಳ ಮತ್ತು ಅರಮನೆಯ ಪರಿಸರ ಕಲ್ಪಿಸುವುದರ ಮೂಲಕ ಪಾಡ್ಯದಿಂದ ಆರಂಭಿಸಿ ದಶಮಿಯ ದಿನ ಮಂಗಳದಲ್ಲಿ ಸುಸಂಪನ್ನವಾಗುವಂತೆ ಆಚರಿಸುತ್ತೇವೆ.

ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಡುವಾಗ ವಧುವಿನ ಮಾತಾ-ಪಿತೃಗಳು ಒಂದು ಜೊತೆ ಪಟ್ಟದ ಬೊಂಬೆಯನ್ನು ಕೊಡುವ ಸಂಪ್ರದಾಯದಂತೆ ಮುಂದಿನ ಬರುವ ವರ್ಷಗಳಲ್ಲಿ ಹಬ್ಬವನ್ನು ಆಚರಿಸಲು ಅನುಮತಿ ಕೊಡುತ್ತಾರೆ. ಅದರಂತೆ ನಾನು ಶ್ರೀ ಚಾಮುಂಡೇಶ್ವರಿಯ ಕೃಪೆಯಿಂದ 1980ರಲ್ಲಿ ಮದುವೆಯಾದಾಗಿನಿಂದ ಇಲ್ಲಿಯ ತನಕ ದಸರಾ ಹಬ್ಬದಲ್ಲಿ ಗೊಂಬೆಗಳನ್ನಿಟ್ಟು ಪೂಜಿಸಿಕೊಂಡು ಬಂದಿದ್ದೇವೆ. ನಾವು ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ ಅದರ ಗುರುತಾಗಿ ಆಯಾ ಕ್ಷೇತ್ರದ ಬೊಂಬೆಗಳನ್ನು ಖರೀದಿಸುತ್ತೇವೆ ಎನ್ನುತ್ತಾರೆ.

ಈ ದಿನಗಳಲ್ಲಿ ನಾವು ದೇವಿ ಮಹಾತ್ಮೆ, ದೇವರ ಸ್ಮರಣೆ, ಶ್ರೀನಿವಾಸ ಕಲ್ಯಾಣ, ಗುರು ಚರಿತ್ರೆ ಮುಂತಾದವುಗಳನ್ನು ಪಾರಾಯಣ ಮಾಡುತ್ತೇವೆ, ವಿಜಯದಶಮಿಯ 10ನೇ ದಿನ ಮಹಾ ಮಂಗಳರಾರತಿ ಮಾಡಿ ದೇವಸ್ಥಾನಕ್ಕೆ ಹೋಗಿ ದೇವರ ದರುಶನ ಮಾಡಿ ಬರುತ್ತೇವೆ ಎಂದರು.

ರೇಖಾ ರಾಧಾಕೃಷ್ಣ ಮತ್ತು ರಾಧಾಕೃಷ್ಣ ದಂಪತಿಯ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಪತಿಯರೊಡನೆ ಆಸ್ಟ್ರೇಲಿಯಾ ದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿದ್ದಾಗ ನವರಾತ್ರಿ ಆಚರಣೆ ಪದ್ಧತಿಯನ್ನು ನೋಡಿ ಅದೇ ರೀತಿ ಅನುಕರಿಸಿ ವಿದೇಶದಲ್ಲಿ ಕೂಡ ಮುಂದುವರಿಸಿರುವುದು ಸಂತಸದ ವಿಷಯ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp