ನೋಟ್ ಬುಕ್ ಖರೀದಿಸಲು ಮಾವಿನ ತೋರಣ ಮಾರುತ್ತಿದ್ದ ಬಾಲಕ: ಮಾನವೀಯತೆ ಮೆರೆದ ಹುಬ್ಬಳ್ಳಿ ಸಂಚಾರಿ ಪೊಲೀಸ್

ನೋಟ್ ಬುಕ್ ಖರೀದಿಸುವ ಸಲುವಾಗಿ ಮಾವಿನ ತೋರಣ ಮಾರುತ್ತಿದ್ದ ಹುಬ್ಬಳ್ಳಿಯ  ಬಾಲಕನಿಗೆ ಸಂಚಾರಿ ಠಾಣೆ ಪೊಲೀಸರೊಬ್ಬರು ಸಹಾಯ ಮಾಡಿದ್ದಾರೆ.
ಬಾಲಕನ ವಿದ್ಯಾಭ್ಯಾಸಕ್ಕೆ ಪೊಲೀಸ್ ಸಹಾಯ
ಬಾಲಕನ ವಿದ್ಯಾಭ್ಯಾಸಕ್ಕೆ ಪೊಲೀಸ್ ಸಹಾಯ

ಹುಬ್ಬಳ್ಳಿ: ನೋಟ್ ಬುಕ್ ಖರೀದಿಸುವ ಸಲುವಾಗಿ ಮಾವಿನ ತೋರಣ ಮಾರುತ್ತಿದ್ದ ಹುಬ್ಬಳ್ಳಿಯ  ಬಾಲಕನಿಗೆ ಸಂಚಾರಿ ಠಾಣೆ ಪೊಲೀಸರೊಬ್ಬರು ಸಹಾಯ ಮಾಡಿದ್ದಾರೆ.

ತಾಡಸಿಕೊಪ್ಪ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಕುಮಾರ  ವಿಜಯದಶಮಿಯ ದಿನದಂದು ಮಾವಿನ ತಳಿರು ಮಾರಾಟ ಮಾಡಿ, ಪುಸ್ತಕವನ್ನ ಖರೀದಿ ಮಾಡಲು ಮುಂದಾಗಿದ್ದ. ಈ ವಿಷಯವನ್ನ ಅರಿತುಕೊಂಡ ಪೂರ್ವ ಸಂಚಾರಿ ಠಾಣೆಯ ಪೊಲೀಸ ಶಂಭು ರೆಡ್ಡಿ, ಬಾಲಕನಿಗೆ ತಾವೇ ಮುಂದಾಗಿ ಆತನಿಗೆ ಬೇಕಾದ ಎಲ್ಲ ಪುಸ್ತಕಗಳನ್ನ ಕೊಡಿಸಿದ್ದಾರೆ.

ಕೊರೋನಾ ಕಾರಣದಿಂದಾಗಿ ಕುಮಾರನ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಹಬ್ಬದ ಸಮಯದಲ್ಲಿ ಮಾವಿನ ತೋರಣ ಮಾರಾಟ ಮಾಡಿ ತನ್ನ ಶಾಲೆಯ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಮುಂದಾಗಿದ್ದ.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರನಿಗೆ ಸರ್ಕಾರದಿಂದಲೇ ಪಠ್ಯ ಪುಸ್ತಕ ದೊರೆಯುತ್ತದೆ, ಆದರೆ ಅದಕ್ಕೆ ನೋಟ್ ಬುಕ್ ಮತ್ತು ಇತರೆ ವಸ್ತುಗಳನ್ನು ವಿದ್ಯಾರ್ಥಿಗಳೇ ಖರೀದಿಸಬೇಕಾಗುತ್ತದೆ, ಕುಮಾರನಿಗೆ ಬೇಕಾದ ಈ ಹಣ ನೀಡಲು ಕುಟುಂಬಸ್ಥರಿಗೆ ಸಾಧ್ಯವಾಗದ ಕಾರಣ ಮಾವಿನ ತೋರಣ ಮಾರಾಟ ಮಾಡಲು ಮುಂದಾಗಿದ್ದ. ಹುಬ್ಬಳ್ಳಿಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಮಾರಾಟ ಮಾಡಲು ಕುಳಿತಿದ್ದ, ಈ ವೇಳೆ ಅಲ್ಲಿಗೆ ಆಗಮಸಿದ ಹುಬ್ಬಳ್ಳಿ ಸಂಚಾರಿ ಪೊಲೀಸ್ ಶಂಭು ರೆಡ್ಡಿ ಆತನನ್ನು ವಿಚಾರಿಸಿದ್ದಾರೆ.

ಬಾಲಕ ಮತ್ತು ಆತನ ಚಿಕ್ಕಮ್ಮ ತಮ್ಮ ಕಷ್ಟವನ್ನು ಶಂಭು ರೆಡ್ಡಿ ಅವರ ಬಳಿ ಹೇಳಿದ್ದಾರೆ. ಇದನ್ನು ಕೇಳಿದ ಶಂಭು ಅವರು ಬಾಲಕನನ್ನು ಪಕ್ಕದಲ್ಲಿದ್ದ ಬುಕ್ ಅಂಗಡಿಗೆ ಕರೆದೊಯ್ದು ಅಲ್ಲಿ ಆತನಿಗೆ ಅಗತ್ಯವಿದ್ದ ಎಲ್ಲಾ ನೋಟ್ ಬುಕ್ ಮತ್ತು ಪೆನ್ ಗಳನ್ನು ಒಂದು ವರ್ಷಕ್ಕಾಗುವಷ್ಟು ಕೊಡಿಸಿದ್ದಾರೆ. ಇದರಿಂದ ಸಂತಸಗೊಂಡ ಬಾಲಕ ಅಲ್ಲಿಂದ ತೆರಳಿದ್ದಾನೆ.

ಕುಮಾರ ಪುಸ್ತಕ ಪಡೆದು ಹಸನ್ಮುಖಿಯಾಗಿ ಪೊಲೀಸ್ ಶಂಭು ರೆಡ್ಡಿ ಅವರಿಗೆ ಧನ್ಯವಾದ ತಿಳಿಸಿ ಮುನ್ನಡೆದ. ವಿಜಯದಶಮಿಯ ದಿನದಂದು ಮಾಡಿದ ಸಹಾಯವನ್ನ ಸ್ಮರಿಸಿಕೊಳ್ಳುತ್ತಲೇ ಶಂಭು ರೆಡ್ಡಿ ಮತ್ತೆ ಕರ್ತವ್ಯಕ್ಕೆ ಹಾಜರಾದರು. ನಿನ್ನ ಸ್ನೇಹಿತರ ಬಳಿ ಇರುವ ಮೊಬೈಲ್ ಫೋನಿನಲ್ಲಿ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುವಂತೆ ಕುಮಾರನಿಗೆ ಶಂಭು ರೆಡ್ಡಿ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com