5 ದಶಕ 40 ಸಾವಿರ ಹಾಡುಗಳು! ಗೀತೆಗಳಲ್ಲಿ ಎಸ್‍ಪಿಬಿ ಅಜರಾಮರ

ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ ಸಂಕ್ಷಿಪ್ತವಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ, ಬಹುಶಃ ಇವರ ಹೆಸರು ಕೇಳದ ಭಾರತೀಯ ಸಂಗೀತ ಪ್ರೇಮಿಗಳು ಇರಲಿಕ್ಕಿಲ್ಲವೇನೊ? ಸಂಗೀತ ದಿಗ್ಗಜರು, ಸಹ ಗಾಯಕರ ಬಾಯಲ್ಲಿ ಬಾಲು, ಬಾಲು ಸರ್, ಬಾಲುಗಾರು ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.

Published: 25th September 2020 02:25 PM  |   Last Updated: 25th September 2020 11:57 PM   |  A+A-


S P Balasubrahmanyam(File photo)

ಎಸ್ ಪಿ ಬಾಲಸುಬ್ರಹ್ಮಣ್ಯಂ(ಸಂಗ್ರಹ ಚಿತ್ರ)

Posted By : Sumana Upadhyaya
Source : UNI

ಚೆನ್ನೈ: ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ ಸಂಕ್ಷಿಪ್ತವಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ, ಬಹುಶಃ ಇವರ ಹೆಸರು ಕೇಳದ ಭಾರತೀಯ ಸಂಗೀತ ಪ್ರೇಮಿಗಳು ಇರಲಿಕ್ಕಿಲ್ಲವೇನೊ? ಸಂಗೀತ ದಿಗ್ಗಜರು, ಸಹ ಗಾಯಕರ ಬಾಯಲ್ಲಿ ಬಾಲು, ಬಾಲು ಸರ್, ಬಾಲುಗಾರು ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.

ಕಳೆದ ತಿಂಗಳು ಆಗಸ್ಟ್ 5ರಂದು ಕೊರೋನಾ ಪಾಸಿಟಿವ್ ಬಂದು ಚೆನ್ನೈಯ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನುರಿತ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದರು. ಆಗಾಗ ಅವರ ಆರೋಗ್ಯದಲ್ಲಿ ಒಂದಷ್ಟು ಚೇತರಿಕೆ ಕಂಡುಬರುತ್ತಿತ್ತು. ಕೊರೋನಾ ಗೆದ್ದಿದ್ದರು, ಆದರೆ ಸಾವನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರದ್ದು. ಎಸ್ ಪಿ ಜನಿಸಿದ್ದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ 1946ರ ಜೂನ್ 4ರಂದು. ಅವರು ಮೊತ್ತಮೊದಲಿಗೆ ಸಿನೆಮಾದಲ್ಲಿ ಹಾಡಿದ್ದು 1966ರಲ್ಲಿ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲುಗು ಚಿತ್ರದಲ್ಲಿ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಭಾಷೆ, ಗಡಿಯನ್ನು ಮೀರಿದ ಕಲಾವಿದರಾಗಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡರು. ಹಿಂದಿ ಭಾಷೆಗೆ ಅವರು 1980 ಮತ್ತು 1990ರ ದಶಕದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಏಕ್ ತುಜೆ ಕೆ ಲಿಯೆಗೆ ಹಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಗೆದ್ದರು.

ಶಿಸ್ತುಬದ್ಧ ಶಾಸ್ತ್ರೀಯ ಸಂಗೀತವೇ ಕಲಿಯದ ಮಹಾನ್ ಗಾಯಕ: ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಶಾಸ್ತ್ರೀಯ ಸಂಗೀತವನ್ನು ಔಪಚಾರಿಕವಾಗಿ ಕಲಿತಿರಲೇ ಇಲ್ಲ ತಮ್ಮ ಬದುಕಿನಲ್ಲಿ ಎಂದರೆ ಅಚ್ಚರಿಯಾದರೂ ಸತ್ಯ. ತೆಲುಗು ಚಿತ್ರ ಶಂಕರಾಭರಣ ಅವರ ಹಾಡು ಬಹಳ ಜನಪ್ರಿಯ, ತೆಲುಗಿನಲ್ಲಿ ಅವರು ಹಾಡಿರುವ ಲಿಂಗಾಷ್ಟಕಂ, ಬಿಲ್ವಾಷ್ಟಕಂ ಸಂಗೀತ ಆಲ್ಬಂಗಳನ್ನು ಹಾಡಿ ಭಜಿಸುವವರು ಇಂದಿಗೂ ಅದೆಷ್ಟೋ ಮಂದಿ. ಇವುಗಳಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಶವಿದೆ.

ಹಿನ್ನೆಲೆ ಗಾಯನ ಜೊತೆ ಬಣ್ಣ ಹಚ್ಚಿದ್ದ ಎಸ್ ಪಿಬಿ: ಎಸ್ ಪಿಬಿಯವರು ಸಕಲ ಕಲಾ ವಲ್ಲಭ ಒಂದರ್ಥದಲ್ಲಿ, ಕೇವಲ ಗಾಯನಕ್ಕೆ, ನಾಯಕ ನಟರಿಗೆ ಹಾಡಿಗೆ ಧ್ವನಿಯಾಗಿದ್ದು ಮಾತ್ರವಲ್ಲ, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 40ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಪ್ತಸ್ವರಗಳು ಮೇಳೈಸಿದ ಸಂಗೀತ ದೇಶ, ಭಾಷೆಗಳ ಗಡಿಯನ್ನು ಮೀರಿದ ಕಲೆ. ಭಾಷೆ ಯಾವುದಾದರೇನು ಮಿಡಿವ ಭಾವನೆ ಮುಖ್ಯ ಎಂದವರಲ್ಲಿ ಎಸ್‍ ಪಿ ಬಾಲಸುಬ್ರಹ್ಮಣ್ಯಂ ಕೂಡ ಒಬ್ಬರು.

ಅಂತೆಯೇ ದಕ್ಷಿಣದ ಕನ್ನಡ, ತೆಲುಗು, ತಮಿಳು, ಮಲಯಾಳಂ ಗೀತೆಗಳೇ ಅಲ್ಲದೆ, ಬಾಲಿವುಡ್ ಗೆ ಕಾಲಿಟ್ಟು ಹಿಂದಿಯ ಹಾಡುಗಳಿಗೂ ದನಿಯಾಗಿ ಅಲ್ಲಿನ ಕಲಾವಿದರ ಹುಬ್ಬೇರುವಂತೆ ಮಾಡಿದವರು.

ಗಾಯನ ಮಾತ್ರವಲ್ಲದೆ ಸಂಗೀತ ಸಂಯೋಜಕರಾಗಿ,ನಿರ್ಮಾಪಕರಾಗಿ, ನಟರಾಗಿಯೂ ತಮ್ಮ ಬಹುಮುಖ ಪ್ರತಿಭೆಯನ್ನು ಮೆರೆದ ಎಸ್‍ಪಿಬಿ ದೂರದರ್ಶನದಲ್ಲಿ ಒಂದು ದಶಕಗಳ ಕಾಲ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ನಡೆಸಿಕೊಟ್ಟಿದ್ದಲ್ಲದೆ, ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ನೀಡಿ ಅನೇಕ ಎಳೆಯ ಪ್ರತಿಭೆಗಳಿಗೆ ಉತ್ತೇಜನ, ಮಾರ್ಗದರ್ಶನ ನೈಜ ಸಾಂಸ್ಕೃತಿಕ ರಾಯಭಾರಿ.

ಸಂಗೀತ ಸಾಧನೆಗೆ ತಂದೆಯ ಹರಿಕಥೆಯೇ ಸ್ಫೂರ್ತಿ:

ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಬಾಲಸುಬ್ರಹ್ಮಣ್ಯಂ ಅವರಿಗೆ ತಂದೆಯ ಹರಿಕಥೆಯೇ ಸ್ಫೂರ್ತಿ ನೀಡಿತ್ತು. ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸ್ವರಗಳನ್ನು ಹೃದಯದಲ್ಲಿ ತುಂಬಿಕೊಳ್ಳುತ್ತಿದ್ದ ಅವರು ಸುಪ್ರಸಿದ್ಧರಾದ ನಂತರದಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಸಿಸಿದ್ದರು. ಈ ಕುರಿತು ಹಲವು ಸಂದರ್ಶನಗಳಲ್ಲಿ ಬಾಲು ಹೇಳಿಕೊಂಡಿದ್ದರು.

ಬಾಲಸುಬ್ರಹ್ಮಣ್ಯಂ ಅವರು 1966ರಲ್ಲಿ ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾಗಿ ಅವರಿಂದ ಮೆಚ್ಚುಗೆ ಪಡೆದರು. ಇದಾದ ಬಳಿಕ ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಇಲ್ಲಿಂದ ಸತತ 5 ದಶಕಗಳ ಕಾಲ ಸಪ್ತಸ್ವರಗಳ ರಥದಲ್ಲಿ ವಿರಾಜಿಸಿದರು.

ಒಂದೇ ದಿನ 19ಕ್ಕೂ ಹಾಡುಗಳಿಗೆ ದನಿ!
ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರಾಗಿದ್ದ ಕಾಲದಲ್ಲಿಯೇ ಚಿತ್ರರಂಗ ಪ್ರವೇಶಿಸಿದ ಬಾಲು, ಈ ಎಲ್ಲ ಲ್ಲ ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು.

ಕನ್ನಡ, ಹಿಂದಿ, ತಮಿಳು ಚಿತ್ರಗಳಿಗಾಗಿ ಒಂದೇ ದಿನ 18 ರಿಂದ 19 ಹಾಡುಗಳನ್ನು ಹಾಡಿದ ಹಿರಿಮೆ ಅವರದು.
ವಿಷ್ಣುವರ್ಧನ್, ಶ್ರೀನಾಥ್, ರವಿಚಂದ್ರನ್. . .ಹೀಗೆ ಯಾರೇ ಇರಲಿ.. . .ಗೀತೆಗಳಿಗೆ ಅಭಿನಯಿಸುತ್ತಿದ್ದರೆ ಸ್ವತಃ ಅವರೇ ಹಾಡುತ್ತಿದ್ದಾರೇನೋ ಎನಿಸುವಷ್ಟರ ಮಟ್ಟಿಗೆ ಎಸ್‍ಪಿಗೆ ಗಾಯನವಿರುತ್ತಿತ್ತು.

ಹಾವಿನ ದ್ವೇಷ ಹನ್ನೆರಡು ವರುಷ ಎಂದು ಎಸ್. ಪಿ. ಹಾಡಿದಾಗ ವಿಷ್ಣುವರ್ಧನ್ ರಾಮಾಚಾರಿಯಾಗಿಬಿಟ್ಟರು. ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ ಶ್ರೀನಾಥ್ ಗರಿಗೆದರಿಬಿಟ್ಟರು. ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು. ನಲಿವಾ ಗುಲಾಬಿ ಹೂವೆ ಎಂದು ಶಂಕರ್ ಭಾವಸ್ಥರಾದರು. ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿಯಾಗಿದ್ದರು ಬಾಲು.

ಹಿಂದಿಯಲ್ಲಿ ಏಕ್ ದೂಜೇ ಕೆ ಲಿಯೇ ಬಂದಾಗ ಬಾಲು ಹಿಂದಿ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು. ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಬಾಲು ಬೆನ್ನೆಲುಬಾಗಿದ್ದರು. ಆದಾಗ್ಯೂ ಹಿಂದಿ ಚಿತ್ರರಂಗದಲ್ಲಿ ಅವರಿಗೆ ನಿರೀಕ್ಷಿಸಿದಷ್ಟು ಅವಕಾಶ ಸಿಗಲಿಲ್ಲವೆಂಬುದೂ ಅಷ್ಟೇ ಸತ್ಯ ಸಂಗತಿ. ಒಂದು ವೇಳೆ ಆ ಬಗೆಯ ಅವಕಾಶ ಸಿಕ್ಕಿದ್ದಿದ್ದರೆ 60 ರಿಂದ 70 ಸಾವಿರ ಹಾಡುಗಳನ್ನು ಹಾಡಿಬಿಡುತ್ತಿದ್ದರೇನೋ.?

ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಕನ್ನಡಿಗರಿಗೆ ನನ್ನ ಮೇಲೆ ಏಕಿಷ್ಟು ಪ್ರೀತಿ?
ಸರಿ ಸುಮಾರು 10 ತಿಂಗಳ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ಎಸ್‍ ಪಿ ಬಾಲಸುಬ್ರಹ್ಮಣ್ಯಂ "ಕನ್ನಡಿಗರಿಗೆ ನನ್ನ ಮೇಲೆ ಏಕಿಷ್ಟು ಪ್ರೀತಿ? ಅವರು ನೀಡಿರುವ ಈ ಪ್ರೀತಿಯ ಋಣ ತೀರಿಸುವುದಾದರೂ ಹೇಗೆ" ಎಂದು ಉದ್ಗರಿಸಿದ್ದರು.
ಅಂದು ರಸಸಂಜೆಯೊಂದರಲ್ಲಿ ಕಾರ್ಯಕ್ರಮ ನಡೆಸಿಕೊಡಲು ಆಗಮಿಸಿದ್ದ ಅವರು, ಕನ್ನಡಿಗರು ಯಾವಾಗ ಕರೆದರೂ ಬಂದು ಹಾಡುತ್ತೇನೆ ಎಂದಿದ್ದರು.

ಮಹತ್ಸಾದನೆ, ಪ್ರಶಸ್ತಿಗಳ ಪಟ್ಟಿ
ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾದವರು. 112 ಚಿತ್ರಗಳಲ್ಲಿ ಅಭಿನಯಿಸಿದವರು. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮಭೂಷಣ ಪುರಸ್ಕೃತ. 25 ಬಾರಿ ಆಂಧ್ರಪ್ರದೇಶ ಸರ್ಕಾರದ 'ನಂದಿ' ಪ್ರಶಸ್ತಿ ಹಾಗೂ ಹಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಗಳಿಗೆ ಭಾಜನರಾಗಿದ್ದಾರೆ.

Stay up to date on all the latest ವಿಶೇಷ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp