'ಗಾಯನ, ಬಿಡುವಿಲ್ಲದ ಕೆಲಸದ ಮಧ್ಯೆ ನನ್ನ ಮಕ್ಕಳು ದೊಡ್ಡವರಾಗುವುದನ್ನು ನೋಡಲಾಗಲಿಲ್ಲ': ಎಸ್ ಪಿಬಿ ನೋವಿನ ನುಡಿ

ನನ್ನ ಮಕ್ಕಳು ಬೆಳೆದು ದೊಡ್ಡವರಾಗುವುದನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ ಹೀಗೆಂದು ಹೇಳಿ ಪಶ್ಚಾತ್ತಾಪ ಪಟ್ಟುಕೊಂಡಿದ್ದರು ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ಲೋಕದ ದಂತಕಥೆ ಎಸ್ ಪಿ ಬಾಲಸುಬ್ರಹ್ಮಣ್ಯಂ.

Published: 26th September 2020 10:45 AM  |   Last Updated: 26th September 2020 11:19 AM   |  A+A-


SP Balasubrahmanyam

ವೇದಿಕೆಯಲ್ಲಿ ಹಾಡುತ್ತಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ (ಸಂಗ್ರಹ ಚಿತ್ರ)

Posted By : Sumana Upadhyaya
Source : The New Indian Express

ಬೆಂಗಳೂರು: ನನ್ನ ಮಕ್ಕಳು ಬೆಳೆದು ದೊಡ್ಡವರಾಗುವುದನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ ಹೀಗೆಂದು ಹೇಳಿ ಪಶ್ಚಾತ್ತಾಪ ಪಟ್ಟುಕೊಂಡಿದ್ದರು ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ಲೋಕದ ದಂತಕಥೆ ಎಸ್ ಪಿ ಬಾಲಸುಬ್ರಹ್ಮಣ್ಯಂ.

ಎಸ್ ಪಿಬಿಯವರು 2015ರಲ್ಲಿ ತಮ್ಮ ವೃತ್ತಿರಂಗದಲ್ಲಿ ಸುವರ್ಣ ವರ್ಷಗಳನ್ನು ಕಳೆದ ಸಂದರ್ಭದಲ್ಲಿ ತಮ್ಮ ಜೀವನವನ್ನು ಮೆಲುಕು ಹಾಕಿದ್ದರು. ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಮಾತನಾಡಿದ್ದರು. ತೆಲುಗು ಚಿತ್ರ ಶಂಕರಾಭರಣಮ್ ಮತ್ತು 1981ರ ಹಿಂದಿ ಚಿತ್ರ ಏಕ್ ತುಜೆ ಕೆ ಲಿಯೆ ತಮ್ಮ ಗಾಯನ ವೃತ್ತಿಗೆ ಮಹತ್ವದ ತಿರುವು ಕೊಟ್ಟ ಗೀತೆಗಳು ಎಂದು ಹೇಳಿಕೊಂಡಿದ್ದರು.

ತಮ್ಮ ವೃತ್ತಿರಂಗದ ಶಿಖರದಲ್ಲಿ ಎಸ್ ಪಿಬಿಯವರಿಗೆ ಪುರುಸೊತ್ತು ಇಲ್ಲದಷ್ಟು ಕೆಲಸಗಳಿದ್ದವು. ದಿನಕ್ಕೆ 10-15 ಗೀತೆಗಳನ್ನು ಶೆಡ್ಯೂಲ್ ನಲ್ಲಿ ಹಾಡುತ್ತಿದ್ದರಂತೆ. ಒಂದು ಸ್ಟುಡಿಯೊದಿಂದ ಮತ್ತೊಂದು ಸ್ಟುಡಿಯೊಗೆ ಟೊಂಕಕಟ್ಟಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸಹಜವಾಗಿ ಅವರಿಗೆ ಪತ್ನಿ, ಮಕ್ಕಳ ಜೊತೆ ಸಮಯ ಕಳೆಯಲು, ಅವರ ಕಷ್ಟ-ಸುಖ ಆಲಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಮಕ್ಕಳು ಬೆಳೆದು ದೊಡ್ಡವರಾದಾಗ ಅವರ ಬೆಳವಣಿಗೆಯನ್ನು ನೋಡಲು ಸಾಧ್ಯವಾಗಲಿಲ್ಲವಲ್ಲಾ ಎಂಬ ಸಣ್ಣ ಕೊರಗು ಅವರಿಗೆ ಕಾಡಿದ್ದುಂಟು. ಅದು ಬಿಟ್ಟರೆ ಅವರಿಗೆ ಜೀವನದಲ್ಲಿ ಬೇರಾವ ಬೇಸರ, ದುಃಖ ಇರಲಿಲ್ಲ,ವೃತ್ತಿ ಬದುಕಂತೂ ಅದ್ಭುತ.

ನಾನು ತರಬೇತಿ ಪಡೆದ ವೃತ್ತಿಗಾಯಕನಲ್ಲ: 16 ಭಾಷೆಗಳಲ್ಲಿ ಹಾಡಿ ದೇಶಾದ್ಯಂತ ಸಂಗೀತ ರಸಿಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ತಮ್ಮ ಜೀವಿತಾವಧಿಯಲ್ಲಿಯೇ ನೆಲೆನಿಂತರೂ ಎಸ್ ಪಿಬಿಯವರು ವಿನಯದಿಂದ ತಮ್ಮ ಕೊನೆ ಉಸಿರು ಇರುವವರೆಗೂ ಹೇಳುತ್ತಿದ್ದ ಮಾತು ನಾನು ತರಬೇತಿ ಪಡೆದ ವೃತ್ತಿಪರ ಗಾಯಕನಲ್ಲ ಎಂದು. ಈ ವಯಸ್ಸಿನಲ್ಲಿ ಕೂಡ ನನ್ನ ಹಾಡಿಗೆ ಗೌರವ ಕೊಟ್ಟು ಕೆಲಸ ಕೊಡುತ್ತಿದ್ದಾರೆ ಎಂದರೆ ಅದು ದೇವರ ಇಚ್ಛೆ, ಪೂರ್ವಜನ್ಮದ ಸುಕೃತ ಎಂದೇ ಹೇಳಲು ಬಯಸುತ್ತೇನೆ ಎಂದು 5 ವರ್ಷಗಳ ಹಿಂದೆ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಎಸ್ ಪಿಬಿಯವರು ಹೇಳಿದ್ದರು.

ನಾನು 50 ವರ್ಷಗಳನ್ನು ಗಾಯನ, ನಟನೆ ಕ್ಷೇತ್ರದಲ್ಲಿ ಕಳೆದೆ. ಈ ಸಮಯದಲ್ಲಿ ನನ್ನ ಮಕ್ಕಳು ಬೆಳೆದು ದೊಡ್ಡವರಾಗುವುದನ್ನು ನೋಡುವುದಕ್ಕೆ ನನಗೆ ಸಾಧ್ಯವಾಗಲಿಲ್ಲ. ಪ್ರತಿದಿನ ಸರಾಸರಿ 11 ಗಂಟೆ ನಾನು ಕೆಲಸ ಮಾಡುತ್ತಿದ್ದೆ ಎಂದು ನೋವಿನಿಂದ ಒಬ್ಬ ತಂದೆಯಾಗಿ ಎಸ್ ಪಿಬಿ ಹೇಳಿದ್ದರು.

ಮೊದಲು ಹಾಡಿದ್ದು 1966ರಲ್ಲಿ: ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದ ಹರಿಕಥಾ ವಿದ್ವಾಂಸ ಎಸ್ ಪಿ ಸಾಂಬಮೂರ್ತಿ ಮತ್ತು ಶಕುಂತಲಮ್ಮ ದಂಪತಿಗೆ ಜನಿಸಿದ ಎಸ್ ಪಿಬಿ ಸಿನೆಮಾರಂಗದಲ್ಲಿ ಹಾಡಲು ಆರಂಭಿಸಿದ್ದು 1966ರಲ್ಲಿ. ಅದು ತೆಲುಗು ಚಿತ್ರ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಮೂಲಕ. ತಾವು ಮಾಡುವ ಕೆಲಸದ ಮೇಲೆ ಅವರಿಗಿದ್ದ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಗಳಿಂದಾಗಿ ಪ್ರತಿದಿನ ಅವರು ಕೆಲಸದಲ್ಲಿ ಖುಷಿ, ಹೊಸತನ ಕಾಣುತ್ತಿದ್ದರು.

ಬೆಳಗ್ಗೆ 5 ಗಂಟೆಗೆ ಸ್ಟುಡಿಯೊದಲ್ಲಿ ಬಂದು ಹಾಡಬೇಕೆಂದರೆ ಎಸ್ ಪಿಬಿ ಅಷ್ಟು ಹೊತ್ತಿಗೆ ಹಾಜರ್. ಹಾಗೆಂದು ಏಕಾಏಕಿ ತರಾತುರಿಯಿಂದ ಸ್ಡುಡಿಯೊ ರೆಕಾರ್ಡ್ ಮುಂದೆ ಬಂದು ಹಾಡಿದವರಲ್ಲ, ಅದಕ್ಕೆ ಸಾಕಷ್ಟು ಹೋಂವರ್ಕ್ ಮಾಡಿಕೊಂಡು ಬರುತ್ತಿದ್ದರಂತೆ. ನನಗೆ ಹಾಡಿನ ಬಗ್ಗೆ ಸಂಪೂರ್ಣ ಮನದಟ್ಟಾಗಿ ಚೆನ್ನಾಗಿ ಹಾಡಬಲ್ಲೆ ಎಂದು ದೃಢ ಆಗುವವರೆಗೆ ಮೈಕ್ರೊಫೋನ್ ಬಳಿ ಹೋಗುತ್ತಿರಲಿಲ್ಲ, ಹಾಡುವ ಸಂದರ್ಭದಲ್ಲಿ ಶಾರೀರಿಕವಾಗಿ, ಮಾನಸಿಕವಾಗಿ ಸ್ಥಿತಿಗತಿ ಸರಿಯಿಲ್ಲದಿದ್ದರೂ ಹಾಡುತ್ತಿರಲಿಲ್ಲ, ಅದು ಯಾವ ಚಿತ್ರ, ನಿರ್ದೇಶಕರು ದೊಡ್ಡವರೇ ಆಗಿರಲಿ, ಚಿಕ್ಕವರೇ ಆಗಿರಲಿ, ಹಾಡಿಗೆ ನ್ಯಾಯ ಒದಗಿಸುವುದು ನನಗೆ ಮುಖ್ಯ ಎಂದಿದ್ದರು ಎಸ್ ಪಿಬಿ.

ಮಕ್ಕಳ ಜೊತೆ, ಕುಟುಂಬಕ್ಕೆ ಸಮಯ ಮೀಸಲಿಡಲು ಆಗಲಿಲ್ಲ ಎಂದು ಒಂದು ಪಶ್ಚಾತ್ತಾಪ ಪಟ್ಟರೆ ಎಸ್ ಪಿಬಿಯವರಿಗಿದ್ದ ಮತ್ತೊಂದು ಕೊರಗು ತಾವು ಶಾಸ್ತ್ರೀಯ ಸಂಗೀತ ಕಲಿಯಲಿಲ್ಲ ಎಂದು ಮತ್ತು ಎಂಜಿನಿಯರಿಂಗ ಡಿಗ್ರಿ ಪದವಿಯನ್ನು ಪೂರ್ತಿ ಮಾಡಲಿಲ್ಲವೆಂಬುದು.ಶಾಸ್ತ್ರೀಯ ಸಂಗೀತ ಕಲಿಯದಿದ್ದುದು ಒಂದು ರೀತಿಯಲ್ಲಿ ವರವಾಯಿತು, ಶಾಸ್ತ್ರೀಯ ಸಂಗೀತ ಕಲಿತಿದ್ದರೆ ಚಿತ್ರಗೀತೆಗಳನ್ನು ಹಾಡುತ್ತಿರಲಿಲ್ಲವೇನೊ ಎಂದು ಕೂಡ ಬಾಲಸುಬ್ರಹ್ಮಣ್ಯಂ ಹೇಳಿದ್ದರು.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಹಸ್ರ ಗೀತೆಗಳನ್ನು ಹಾಡಿದ್ದ ಎಸ್ ಪಿಬಿಯವರಿಗೆ ಮೊಹಮ್ಮದ್ ರಫಿಯವರು ಯಾವಾಗಲೂ ಅಚ್ಚುಮೆಚ್ಚಿನ ಗಾಯಕ. ಎಲ್ಲರಿಗಿಂತ ಹೆಚ್ಚಾಗಿ ಮೊಹಮ್ಮದ್ ರಫಿಯವರಿಂದಲೇ ಸಾಕಷ್ಟು ಕಲಿತೆ ಎನ್ನುತ್ತಿದ್ದರು.

ಜೀವನದಲ್ಲಿ ಏನು ಆಸೆ ಉಳಿದಿದೆ ಎಂದು ಸಂದರ್ಶಕರು ಕೇಳಿದ್ದಾಗ, ಏನೂ ಇಲ್ಲ, ನನಗೆ ದೇವರು ಎಲ್ಲ ಕೊಟ್ಟಿದ್ದಾನೆ, ಅನೇಕ ಸವಾಲುಗಳನ್ನು ಎದುರಿಸಲು ಧೈರ್ಯ, ಸಾಮರ್ಥ್ಯ ನೀಡಿದ್ದಾನೆ. ಇನ್ನು ನನಗೆ ಹೆಚ್ಚಿನ ಆಸೆ, ಆಕಾಂಕ್ಷೆಗಳಿಲ್ಲ, ನಟನಾಗಿ, ಡಬ್ಬಿಂಗ್ ಕಲಾವಿದನಾಗಿ ಸಹ ಕೆಲಸ ಮಾಡಿದ್ದೇನೆ ಎಂದಿದ್ದರು.

ಜೀವನ ನಿಮಗೆ ಏನು ಕಲಿಸಿಕೊಟ್ಟಿತು ಎಂದು ಕೇಳಿದಾಗ, ಆದಷ್ಟು ಸರಳವಾಗಿರಿ, ಜೀವನದಲ್ಲಿ ವಿಷಯಗಳನ್ನು,ಎದುರಾಗುವ ಸಂಗತಿಗಳನ್ನು ಜಟಿಲ, ಇನ್ನಷ್ಟು ಕಠಿಣ ಮಾಡಿಕೊಳ್ಳಬೇಡಿ, ಸರಿಯಾದ ದಿಕ್ಕಿನಲ್ಲಿ ಸಾಗಿದರೆ ನಿಮಗೆ ಅರ್ಹತೆಯಿರುವುದೆಲ್ಲವೂ ನಿಮಗೆ ಜೀವನದಲ್ಲಿ ಸಿಗುತ್ತದೆ ಎಂಬುದನ್ನು ಕಲಿತಿದ್ದೇನೆ ಎಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಹೇಳಿದ್ದರು.

Stay up to date on all the latest ವಿಶೇಷ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp