ವೈದ್ಯಲೋಕಕ್ಕೆ ಅಚ್ಚರಿ: 8 ವರ್ಷದ ಬಾಲಕನ ಬಾಯಿಯೊಳಗಿದ್ದ ಮೆದುಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದ ಬೆಂಗಳೂರು ವೈದ್ಯರು
ಇದು ವೈದ್ಯಲೋಕಕ್ಕೆ ಅಪರೂಪದ ಪ್ರಕರಣ. ಮೂಗಿನ ಎನ್ಸೆಫಲೋಸೆಲೆ ಎಂಬ ವಿಚಿತ್ರ ಕಾಯಿಲೆಯಿಂದ 8 ವರ್ಷದ ಬಾಲಕ ನರಳುತ್ತಿದ್ದ. ಅದರಿಂದಾಗಿ ಅವನ ಮೆದುಳು ಮೂಗಿನ ಕೋಶದಲ್ಲಿ ಸಣ್ಣ ಬಿರುಕಿನಲ್ಲಿ ಬೆಳೆದಿತ್ತು.
Published: 03rd April 2021 09:29 AM | Last Updated: 03rd April 2021 02:29 PM | A+A A-

ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ
ಬೆಂಗಳೂರು: ಇದು ವೈದ್ಯಲೋಕಕ್ಕೆ ಅಪರೂಪದ ಪ್ರಕರಣ. ಮೂಗಿನ ಎನ್ಸೆಫಲೋಸೆಲೆ ಎಂಬ ವಿಚಿತ್ರ ಕಾಯಿಲೆಯಿಂದ 8 ವರ್ಷದ ಬಾಲಕ ನರಳುತ್ತಿದ್ದ. ಅದರಿಂದಾಗಿ ಅವನ ಮೆದುಳು ಮೂಗಿನ ಕೋಶದಲ್ಲಿ ಸಣ್ಣ ಬಿರುಕಿನಲ್ಲಿ ಬೆಳೆದಿತ್ತು.
ಎನ್ಸೆಫಲೋಸೆಲೆ ಎಂಬುದು ಅಪರೂಪದ ಜನ್ಮಜಾತ ಶಿಶುವಿನಲ್ಲಿ ಕಂಡುಬರುವ ಕಾಯಿಲೆಯಾಗಿದ್ದು, ಅಲ್ಲಿ ಮಗುವಿನ ತಲೆಬುರುಡೆಯ ಮೂಳೆಗಳು ತಾಯಿಯ ಗರ್ಭಾಶಯದಲ್ಲಿ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಮೆದುಳಿನ ಅಂಗಾಂಶ ಮತ್ತು ಸೆರೆಬ್ರೊಸ್ಪೈನಲ್ ದ್ರವವು ತಲೆಯಿಂದ ಚೀಲದಂತಹ ರಚನೆಯಲ್ಲಿ ಚಾಚಿಕೊಂಡಿರುತ್ತದೆ ಮತ್ತು ರೋಗಿಗೆ ಮೆದುಳಿನ ಸೋಂಕಿನ ದೊಡ್ಡ ಅಪಾಯವನ್ನುಂಟುಮಾಡುತ್ತದೆ.
ಹೀಗೆ ಈ ಬಾಲಕನಿಗೆ ಮೆದುಳಿನ ಸಮಸ್ಯೆ ವರ್ಷಗಟ್ಟಲೆ ಕಾಡುತ್ತಿತ್ತು. ಮಗುವಿನ ಬಾಯಿಯೊಳಗೆ ಮೆದುಳಿನ ಭಾಗವೊಂದು ನೇತಾಡುತ್ತಿರುವುದನ್ನು ಅಸಹಾಯಕರಂತೆ ಪೋಷಕರು ಪ್ರತಿದಿನ ನೋಡುತ್ತಾ ಕಣ್ಣೀರು ಹಾಕುತ್ತಿದ್ದರು. ಇದರಿಂದ ಈ ಬಾಲಕನಿಗೆ ದೃಷ್ಟಿದೋಷವೂ ಉಂಟಾಗಿತ್ತು. ಮುಖ ಮತ್ತು ಮೂಗನ್ನು ವಿರೂಪಗೊಳಿಸಿತ್ತು. ಸೀಳು ತುಟಿ ಸಮಸ್ಯೆ ಕೂಡ ಇತ್ತು.
ತಮ್ಮ ಮಗನನ್ನು ಕರೆದುಕೊಂಡು ಪೋಷಕರು ಹಲವು ಆಸ್ಪತ್ರೆಗಳನ್ನು ಎಡತಾಕಿದ್ದರು, ಹಲವು ವೈದ್ಯರಿಗೆ ತೋರಿಸಿದ್ದರು. ಆತನನ್ನು ಪರೀಕ್ಷೆ ಮಾಡಿದ ವೈದ್ಯರು ಆತ ಬದುಕುಳಿಯುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಕೊನೆಗೆ ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರು ಆರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು.
ಇದು ಒಂದು ಸಂಕೀರ್ಣ ಪ್ರಕರಣವಾಗಿದ್ದು, ಇದನ್ನು ಎರಡು ಹಂತಗಳಲ್ಲಿ ನಿರ್ವಹಿಸಬೇಕಾಗಿತ್ತು ಎಂದು ಬೆಂಗಳೂರಿನ ಆಸ್ಟರ್, ಮುಖ್ಯ ಸಲಹಾ ವೈದ್ಯ, ನರಶಸ್ತ್ರ ಚಿಕಿತ್ಸಕ ಮತ್ತು ನರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರವಿ ಗೋಪಾಲ್ ವರ್ಮಾ ಹೇಳಿದ್ದಾರೆ. ಮಗು ಅವರಿಗೆ ಸೀಳು ತುಟಿ, ಸೀಳು ಅಂಗುಳ ಮತ್ತು ಬಾಯಿಯೊಳಗೆ ಊತ ಬರುವ ಸಮಸ್ಯೆಯಿತ್ತು. ಮಗುವಿನ ಬಾಯಿಯೊಳಗೆ ಸುರಿಯುವ ದ್ರವ ವಾಸನೆ ಬರುತ್ತಿತ್ತು ಎಂದು ವಿವರಿಸುತ್ತಾರೆ.
ಮಗುವಿನ ಮೆದುಳು ಬಾಯಿಯೊಳಗೆ ಚೀಲದಂತೆ ನೇತಾಡುತ್ತಿತ್ತು. ಮೆದುಳು ಮತ್ತು ಕಣ್ಣುಗಳ ನಡುವೆ ಮೂಳೆಯಿರಲಿಲ್ಲ. ಮೆದುಳಿನ ಚಟುವಟಿಕೆ ಮೇಲೆ ಇದು ಯಾವುದೇ ಅಡ್ಡಪರಿಣಾಮ ಬೀರದಿದ್ದರೂ ಎನ್ಸೆಫಲೊಸೆಲೆ ದ್ರವ ಹೊರಗೆ ಬೀಳುವ ಹಾಗಿತ್ತು. ಇದರಿಂದ ಸೋಂಕು ಉಂಟಾಗುತ್ತಿತ್ತು, ಇದು ಮಗುವಿನ ಜೀವಕ್ಕೆ ಯಾವತ್ತಿಗೂ ಅಪಾಯವೇ ಎಂದು ಡಾ ವರ್ಮ ಹೇಳುತ್ತಾರೆ.
ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅವನ ತಲೆಬುರುಡೆ ತೆರೆದು ಮೆದುಳನ್ನು ಮೂಗಿನಿಂದ ಹಿಂದಕ್ಕೆ ಮೆದುಳಿಗೆ ತಂದರು.. ಸಾಮಾನ್ಯ ಮೆದುಳು ನೇತಾಡುವುದರಿಂದ ಪ್ರತ್ಯೇಕಿಸಿದರು. ನಂತರ ಕೃತಕ ಮೂಳೆಯನ್ನು ಕಣ್ಣು ಮತ್ತು ಮತ್ತೊಂದು ಮೂಳೆಯ ಮಧ್ಯೆ ಇಟ್ಟು ಮೂಗಿನ ಹೊಳ್ಳೆಗೆ ಮತ್ತೆ ಮೆದುಳು ನೇತಾಡದಂತೆ ಶಸ್ತ್ರಚಿಕಿತ್ಸೆ ಮೂಲಕ ಮಾಡಿದರು.
ಮುಂದಿನ ಹಂತದಲ್ಲಿ, ಬಾಲಕನ ಸೀಳು ತುಟಿಯನ್ನು ಸರಿಪಡಿಸಿ ಸ್ಪೀಚ್ ಥೆರಪಿಗೆ ಒಳಪಡಿಸಿದರು. ಇನ್ನು ಮೂರು ತಿಂಗಳಲ್ಲಿ ಸೀಳುತುಟಿಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾನೆ.