ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಪರಿಚಯ, ಸಾಧನೆ- ಸನ್ಮಾನಗಳು 

ಕನ್ನಡದ ನಿಘಂಟು ತಜ್ಞ, ಸಂಶೋಧಕ, ಶಬ್ದ ಬ್ರಹ್ಮ, ನುಡಿ ಗಾರುಡಿಗ, ಅಕ್ಷರ ಬ್ರಹ್ಮ, ನಡೆದಾಡುವ ನಿಘಂಟು ಎಂದೇ ಜನಪ್ರಿಯರಾಗಿರುವ ಪದ್ಮಶ್ರೀ ಪುರಸ್ಕೃತ ಪ್ರೊ. ಜಿ. ವೆಂಕಟಸುಬ್ಬಯ್ಯ ಕಳೆದ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು.

Published: 19th April 2021 09:34 AM  |   Last Updated: 19th April 2021 06:26 PM   |  A+A-


Prof G Venkatasubbaiah

ಪ್ರೊ ಜಿ ವೆಂಕಟಸುಬ್ಬಯ್ಯ

Posted By : Sumana Upadhyaya
Source : Online Desk

ಬೆಂಗಳೂರು: ಕನ್ನಡದ ನಿಘಂಟು ತಜ್ಞ, ಸಂಶೋಧಕ, ಶಬ್ದ ಬ್ರಹ್ಮ, ನುಡಿ ಗಾರುಡಿಗ, ಅಕ್ಷರ ಬ್ರಹ್ಮ, ನಡೆದಾಡುವ ನಿಘಂಟು ಎಂದೇ ಜನಪ್ರಿಯರಾಗಿರುವ ಪದ್ಮಶ್ರೀ ಪುರಸ್ಕೃತ ಪ್ರೊ. ಜಿ. ವೆಂಕಟಸುಬ್ಬಯ್ಯ ಸೋಮವಾರ ನಸುಕಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು.

ಪ್ರೊ.ಜಿ.ವಿಯವರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಬದುಕಿನುದ್ದಕ್ಕೂ ಲವಲವಿಕೆ, ಹುರುಪಿನಿಂದ ಇದ್ದ ಅವರ ಅಗಲಿಕೆ ಕನ್ನಡಿಗರನ್ನು, ಸಾಹಿತ್ಯ ಪ್ರಿಯರನ್ನು ದುಃಖಕ್ಕೀಡುಮಾಡಿದೆ.

ಪರಿಚಯ: ಗಂಜಮ್ ವೆಂಕಟಸುಬ್ಬಯ್ಯ ಪ್ರೊ.ಜಿ.ವೆಂಕಟಸುಬ್ಬಯ್ಯ ಎಂದೇ ಜನಪ್ರಿಯ. ಇವರು ಹುಟ್ಟಿದ್ದು 1913ರ ಆಗಸ್ಟ್ 23ರಂದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಮ್ ಗ್ರಾಮದಲ್ಲಿ. ಅವರ ತಂದೆ ಗಂಜಮ್ ತಿಮ್ಮಯ್ಯ ಖ್ಯಾತ ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಇದರಿಂದಾಗಿಯೇ ಬಾಲಕನಾಗಿದ್ದಾಗಲೇ ವೆಂಕಟಸುಬ್ಬಯ್ಯನವರಿಗೆ ಸಾಹಿತ್ಯದಲ್ಲಿ ಒಲವು ಬೆಳೆಯಿತು, ವೆಂಕಟಸುಬ್ಬಯ್ಯನವರ ಪೋಷಕರಿಗೆ 8 ಮಂದಿ ಮಕ್ಕಳು.

ತಂದೆ ಸರ್ಕಾರಿ ಉದ್ಯೋಗದಲ್ಲಿದ್ದ ಕಾರಣ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆಯಾಗುತ್ತಿದ್ದರು.ಹೀಗಾಗಿ ವೆಂಕಟಸುಬ್ಬಯ್ಯನವರು ಪ್ರಾಥಮಿಕ ಶಿಕ್ಷಣವನ್ನು ಬನ್ನೂರು ಮತ್ತು ಮಧುಗಿರಿಯಲ್ಲಿ ಪೂರೈಸಿದರು.

1930ರ ದಶಕದ ಆರಂಭದ ವೇಳೆಗೆ, ವೆಂಕಟಸುಬ್ಬಯ್ಯ ಅವರ ಕುಟುಂಬವು ಮೈಸೂರು ನಗರಕ್ಕೆ ಸ್ಥಳಾಂತರಗೊಂಡಿತು. ಇಲ್ಲಿ ವೆಂಕಟಸುಬ್ಬಯ್ಯ ಇಲ್ಲಿ ಮೈಸೂರಿನ ಯುವರಾಜ ಕಾಲೇಜಿಗೆ ಸೇರಿದರು, ಕೆ.ವಿ.ಪುಟ್ಟಪ್ಪ (ಕುವೆಂಪು) ಅವರ ಪ್ರಭಾವಕ್ಕೆ ಒಳಗಾದರು. ನಂತರ ವೆಂಕಟಸುಬ್ಬಯ್ಯ ಅವರು ತಮ್ಮ ಕಲಾ ಪದವಿ ಪಡೆಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು. ಅಲ್ಲಿ ಅವರು ಆಯ್ಕೆಮಾಡಿದ್ದ ವಿಷಯ ಪ್ರಾಚೀನ ಇತಿಹಾಸ, ಸಂಸ್ಕೃತ ಮತ್ತು ಹಳೆಯ ಕನ್ನಡವಾಗಿತ್ತು.

ಪಂಪ ಭರತವನ್ನು ಟಿ.ಎಸ್. ವೆಂಕಣ್ಣಯ್ಯ, ಸಂಪಾದಕೀಯ ವಿಜ್ಞಾನವನ್ನು ಡಿ.ಎಲ್.ನರಸಿಂಹಾಚಾರ್, ಕಾವ್ಯಾಮಿಮಾಂಸೆಯನ್ನು ಟಿ.ಎನ್. ಶ್ರೀಕಾಂತಯ್ಯ ಮತ್ತು ಕರ್ನಾಟಕ ಇತಿಹಾಸವನ್ನು ಎಸ್.ಶ್ರೀಕಾಂತ ಶಾಸ್ತ್ರಿ ಅವರಂತಹ ವಿದ್ವಾಂಸರಿಂದ ಕಲಿಯುವ ಯೋಗ ವೆಂಕಟಸುಬ್ಬಯ್ಯನವರಿಗೆ ಸಿಕ್ಕಿತ್ತು.

ಇಂದಿಗೂ ಕನ್ನಡ ವ್ಯಾಕರಣ, ಶಬ್ದ ಭಂಡಾರ, ಶಬ್ದಕೋಶಕ್ಕೆ ವೆಂಕಟಸುಬ್ಬಯ್ಯನವರು ಬರೆದ ಪುಸ್ತಕಗಳನ್ನು ಅನುಸರಿಸುವವರು ಅನೇಕ ಮಂದಿ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಪ್ರೊ.ಜಿ ವೆಂಕಟಸುಬ್ಬಯ್ಯ ಅವರು ಸುಮಾರು 70 ಪುಸ್ತಕಗಳನ್ನು, 14 ನಿಘಂಟುಗಳನ್ನು ಪ್ರಕಟಗೊಳಿಸಿದ್ದಾರೆ‌.

ಸಾಧನೆಗಳು: ಪ್ರೊ ಜಿ ವಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಂಗಾರದ ಪದಕದೊಂದಿಗೆ ಎಂಎ ಪದವಿ ಪೂರ್ಣಗೊಳಿಸಿದ್ದರು. ಬಿ.ಟಿ. ಪದವಿ ಪೂರ್ಣಗೊಳಿಸಿ ನಂತರ ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಆರಂಭಗೊಳಿಸಿ, ನಂತರ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕೃತಿಗಳು: ನಿಘಂಟು ಪರಿವಾರ, ಅಕ್ರೂರ ಚರಿತ್ರೆ, ಇಗೊ ಕನ್ನಡ, ಗತಿ ಪ್ರಜ್ಞೆ, ಕನ್ನಡವನ್ನು ಉಳಿಸಿ ಬೆಳೆಸಿದವರು, ಅನುಕಲ್ಪನೆ, ಕರ್ಣ ಕರ್ಣಾಮೃತ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 

ಪ್ರಶಸ್ತಿಗಳು: ಭಾಷಾ ಸಮ್ಮಾನ್ ಪ್ರಶಸ್ತಿ, ವಿದ್ಯಾಲಂಕಾರ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾಯಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿಗಳು ಪ್ರೊ ಜಿವಿಯವರಿಗೆ ಸಂದಿವೆ. 

ಹಿಂದಿ ಭಾಷೆ ಹೇರಿಕೆ ಮಾಡಬಾರದು: ಹಿಂದಿ ಭಾಷೆಯನ್ನು ಬೇರೆಯವರ ಮೇಲೆ ವಿಧಿಸಬಾರದು. ಅದನ್ನು ಹೇರಿದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಪ್ರತಿಯೊಂದು ಭಾಷೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರೊ.ವೆಂಕಟಸುಬ್ಬಯ್ಯನವರು ಹೇಳುತ್ತಿದ್ದರು. 

Stay up to date on all the latest ವಿಶೇಷ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp