ಲಾಕ್ ಡೌನ್ ವೇಳೆ ಲ್ಯಾಬ್ ನಿಂದ ಹೊರಗೂ ವಿದ್ಯಾರ್ಥಿಗಳಿಗೆ ಪ್ರಯೋಗ ಕಲಿಕೆ: ಶಿಕ್ಷಕ ನಾಗರಾಜ್ ಗೆ ರಾಷ್ಟ್ರೀಯ ಪ್ರಶಸ್ತಿ

ಕೋವಿಡ್-19 ಸಂದರ್ಭದಲ್ಲಿ ಲಾಕ್ ಡೌನ್ ನ ಅತಿ ಹೆಚ್ಚಿನ ಪರಿಣಾಮ ವಿದ್ಯಾರ್ಥಿ ಸಮೂಹದ ಮೇಲೆ ಉಂಟಾಗಿತ್ತು. ಆನ್ ಲೈನ್ ಕಲಿಕೆಯಿದ್ದರೂ ಪ್ರೌಢ ಶಾಲೆ, ಅದರಲ್ಲಿಯೂ 10 ನೇ ತರಗತಿ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಪಾಠಗಳು ತಪ್ಪುತ್ತಿವೆ. 
ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ ನಾಗರಾಜ
ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ ನಾಗರಾಜ

ಬೆಂಗಳೂರು: ಕೋವಿಡ್-19 ಸಂದರ್ಭದಲ್ಲಿ ಲಾಕ್ ಡೌನ್ ನ ಅತಿ ಹೆಚ್ಚಿನ ಪರಿಣಾಮ ವಿದ್ಯಾರ್ಥಿ ಸಮೂಹದ ಮೇಲೆ ಉಂಟಾಗಿತ್ತು. ಆನ್ ಲೈನ್ ಕಲಿಕೆಯಿದ್ದರೂ ಪ್ರೌಢ ಶಾಲೆ, ಅದರಲ್ಲಿಯೂ 10 ನೇ ತರಗತಿ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಪಾಠಗಳು ತಪ್ಪುತ್ತಿವೆ. 

ಇಂತಹ ಪರಿಸ್ಥಿತಿಯಲ್ಲಿ ಪ್ರಯೋಗಾಲಯದ ಹೊರಗೂ ವಿದ್ಯಾರ್ಥಿಗಳಿಗೆ ದಿನ ನಿತ್ಯದ ವಸ್ತುಗಳನ್ನೇ ಬಳಸಿಕೊಂಡು ಲ್ಯಾಬ್ ಗೆ ಸಂಬಂಧಿಸಿದ ಪಾಠ ಮಾಡುತ್ತಿದ್ದ ಆದರ್ಶ ಶಿಕ್ಷಕ ನಾಗರಾಜ್ ಅವರನ್ನು ರಾಷ್ಟ್ರೀಯ ಪ್ರಶಸ್ತಿ ಅರಸಿ ಬಂದಿದೆ.

ಬೆಂಗಳೂರಿನ ದೊಡ್ಡಬನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ನಾಗರಾಜ ಸಿಎಂ, ಯೂಟ್ಯೂಬ್ ಮೂಲಕ ಹೆಚ್ಚಿನ ವಿದ್ಯಾರ್ಥಿಗಳಿಗೆ ತಲುಪುವಂತೆ ತರಗತಿಯ ಪಾಠಗಳನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಶಾಲೆಯಲ್ಲಿ ವಸ್ತುಗಳ ಮರುಬಳಕೆ, ಮರುಪ್ರಕ್ರಿಯೆ, ಅತ್ಯಂತ ಗರಿಷ್ಠ ಮಟ್ಟದಲ್ಲಿ ವಸ್ತುಗಳನ್ನು ಬಳಕೆ ಮಾಡುವ ಪದ್ಧತಿಯನ್ನು ಅಳವಡಿಸುವಲ್ಲಿ ನಾಗರಾಜ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಅವರನ್ನು ಶಿಕ್ಷಕರಿಗಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಿಕ್ಷಣ ಸಚಿವಾಲಯದಿಂದ ನೀಡಲಾಗುವ ಈ ಪ್ರಶಸ್ತಿಗೆ 44 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ವಿದ್ಯಾಗಮ ತರಗತಿಗಳಲ್ಲಿಯೂ ನಾಗರಾಜ ಅವರು ದಿನನಿತ್ಯದ ಬಳಕೆ ವಸ್ತುಗಳನ್ನು ಉಪಯೋಗಿಸಿ ಸೂಕ್ಷ್ಮ ಪ್ರಯೋಗಗಳ ಮೂಲಕ ರಸಾಯನಶಾಸ್ತ್ರ ವಿಭಾಗದ ಪ್ರಯೋಗಗಳನ್ನೂ ವಿದ್ಯಾರ್ಥಿಗಳಿಗೆ ಬೋಧಿಸಿದ್ದರು.

"ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿದ್ದಾಗ ಯೂಟ್ಯೂಬ್ ಮೂಲಕ ಹಾಗೂ ರೋಟರಿ, ಎಸ್ ಆರ್ ಎಫ್ ಫೌಂಡೇಷನ್ ಕಲ್ಪಿಸಿದ್ದ ವೇದಿಕೆಗಳ ಮೂಲಕ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪುತ್ತಿದ್ದೆ" ಎಂದು ನಾಗರಾಜ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ. ಈ ವೇದಿಕೆಯಲ್ಲಿ ನಾಗರಾಜ ಅವರೊಂದಿಗೆ 30 ಜನ ಶಿಕ್ಷಕರ ತಂಡ ಫಲಿತಾಂಶ ಉತ್ತಮಗೊಳಿಸುವುದಕ್ಕೆ ಯತ್ನಿಸುತ್ತಿದ್ದ 10 ನೇ ತರಗತಿ ವಿದ್ಯಾರ್ಥಿಗಳಿಗೂ ಬೋಧಿಸಿದ್ದರು.

"ಮಾನವ ಸಂಪನ್ಮೂಲ ಇಲಾಖೆಯಿಂದ ನೀಡಲಾಗಿರುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಉಪಕ್ರಮವನ್ನು ಕೈಗೆತ್ತಿಕೊಳ್ಳಲು ಯತ್ನಿಸಿದ್ದೆ" ಎಂದು ನಾಗರಾಜ ಪತ್ರಿಕೆಗೆ ಹೇಳಿದ್ದಾರೆ

ಪಠ್ಯೇತರವಾಗಿಯೂ ವಿದ್ಯಾರ್ಥಿಗಳಿಗೆ ಹಲವು ವಿಷಯಗಳನ್ನು ಕಲಿಸುವ ಶಿಕ್ಷಕರಾಗಿರುವ ನಾಗರಾಜ, ತಮ್ಮ ಶಾಲೆಯಲ್ಲಿ ಕರಕುಶಲ ತರಗತಿಗಳಲ್ಲಿ ವಸ್ತುಗಳ ಮರುಬಳಕೆ, ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು (ಅನುಪಯುಕ್ತ ಬೆಂಚ್ ಗಳಿಂದ ಪೋಡಿಯಂ ನಿರ್ಮಾಣ ಮಾಡುವುದು, ಹಾಲಿನ ಪ್ಯಾಕ್ ಗಳಲ್ಲಿ ಸಸಿಗಳನ್ನು ಬೆಳೆಯುವುದು) ತಯಾರಿಸುವುದನ್ನೂ ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com