ಅಡೆತಡೆ, ಸಮಸ್ಯೆಗಳನ್ನು ಮೀರಿ ಬೆಳೆದು ನಿಂತ ಯುವಕ ಇಂದು ಹಲವು ಪದಕ ವಿಜೇತ ದೇಹದಾರ್ಢ್ಯ ಕುಸ್ತಿಪಟು!

ಮೂರನೆಯ ವಯಸ್ಸಿನಲ್ಲಿ ನಡೆದ ರಸ್ತೆ ಅಪಘಾತದಿಂದ ಶ್ರವಣಶಕ್ತಿಯನ್ನು ಕಳೆದುಕೊಂಡ ರಾಜು, ಪೋಷಕರ ಪ್ರಯತ್ನ ಮತ್ತು ಮಾನಸಿಕ ಧೈರ್ಯ, ಸತತ ಪ್ರಯತ್ನದಿಂದ ದೇಹದಾರ್ಢ್ಯ ಮತ್ತು ತೋಳಿನ ಕುಸ್ತಿಯ ಬಗ್ಗೆ ಗಮನಹರಿಸಿ ರಾಜ್ಯದಲ್ಲಿಯೇ ಬಲಾಢ್ಯ ಕುಸ್ತಿಪಟುವಾಗಿ ಇಂದು ಪ್ರಶಸ್ತಿ ಗಳಿಸಿದ್ದಾರೆ.
ತಮ್ಮ ಕೋಚ್ ಜೊತೆ ಅಭ್ಯಾಸನಿರತ ರಾಜು
ತಮ್ಮ ಕೋಚ್ ಜೊತೆ ಅಭ್ಯಾಸನಿರತ ರಾಜು

ಮೈಸೂರು: ಮೂರನೆಯ ವಯಸ್ಸಿನಲ್ಲಿ ನಡೆದ ರಸ್ತೆ ಅಪಘಾತದಿಂದ ಶ್ರವಣಶಕ್ತಿಯನ್ನು ಕಳೆದುಕೊಂಡರು, ಶ್ರವಣ ದೋಷ ಕಂಡುಬಂದ ನಂತರ ಮಾತಿನ ಸಮಸ್ಯೆಯೂ ಉಂಟಾಯಿತು. ಆದರೆ ಜೀವನದಲ್ಲಿ ದೃತಿಗೆಡಲಿಲ್ಲ. ಪೋಷಕರ ಪ್ರಯತ್ನ ಮತ್ತು ಮಾನಸಿಕ ಧೈರ್ಯ, ಸತತ ಪ್ರಯತ್ನದಿಂದ ದೇಹದಾರ್ಢ್ಯ ಮತ್ತು ತೋಳಿನ ಕುಸ್ತಿಯ ಬಗ್ಗೆ ಗಮನಹರಿಸಿ ರಾಜ್ಯದಲ್ಲಿಯೇ ಬಲಾಢ್ಯ ಕುಸ್ತಿಪಟುವಾಗಿ ಇಂದು ಪ್ರಶಸ್ತಿ ಗಳಿಸಿದ್ದಾರೆ.

ಅವರೇ ರಾಜು ಎಮ್, 33 ವರ್ಷದ ರಾಜು ಜೀವನದಲ್ಲಿ ಎಂದಿಗೂ ಆಶಾವಾದ ಕಳೆದುಕೊಳ್ಳಬಾರದು ಎಂಬ ಮನೋಭಾವ ಇಂದು ಈ ಮಟ್ಟಕ್ಕೆ ಅವರನ್ನು ಬೆಳೆಸಿದೆ. ಬಡವರಾಗಿದ್ದರೂ, ಅವರ ಪೋಷಕರು ರಾಜುವನ್ನು ಮಾತು ಮತ್ತು ಶ್ರವಣ ಚಿಕಿತ್ಸೆಯನ್ನು ಕೊಡಿಸಿ ಯಶಸ್ವಿಯಾದರು, ಅದು ಅವರ ಮೂಲಭೂತ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡಿತು. ಬಾಲ್ಯದಿಂದಲೂ ಆತನ ಶ್ರವಣ ದೋಷದ ಸಮಸ್ಯೆಯಿಂದ ಗೆಳೆಯರ ಗುಂಪಿನೊಂದಿಗೆ ಬೆರೆಯಲು ಸಾಧ್ಯವಾಗುತ್ತಿರಲಿಲ್ಲ. ಸಣ್ಣವನಿದ್ದಾಗ ಕ್ರೀಡಾ ಚಟುವಟಿಕೆಗಳು ಸಹ ನಿಂತುಹೋಗಿದ್ದವು.

"ನಾನು ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ದುರ್ಬಲಗೊಂಡಿದ್ದೆ, ಆದರೆ ದೈಹಿಕವಾಗಿ ಆರೋಗ್ಯವಾಗಿದ್ದೆ. ಹೀಗಿರುವಾಗ ಏನಾದರೂ ಸಾಧಿಸಬೇಕೆಂದು ಮನಸ್ಸಿನಲ್ಲಿ ದೃಢಮಾಡಿಕೊಂಡು ಜಿಮ್ ಗೆ ಸೇರಿದೆ ಎಂದು ರಾಜು ಹೇಳುತ್ತಾರೆ. ಜಿಮ್ ನಲ್ಲಿ ಬೆವರು ಹರಿಸಿ ದೇಹದ ಫಿಟ್ ನೆಸ್, ಸ್ನಾಯು ದಾರ್ಢ್ಯತೆ ಬಗ್ಗೆ ಗಮನ ಹರಿಸಿದರು.

ರಾಜು ಅವರ ತರಬೇತುದಾರ ಮತ್ತು ಮಾರ್ಗದರ್ಶಕರಾದ ಕೆ ವಿಶ್ವನಾಥ್, ಯುವಕನ ಇಂತಹ ಸಮರ್ಪಣೆಯನ್ನು ನೋಡಿ ಸಂತೋಷಪಟ್ಟರು, ಮೈಸೂರು ದಸರಾದಲ್ಲಿ ಆಯೋಜಿಸಿದ ಸ್ಪರ್ಧೆಗಳು ಸೇರಿದಂತೆ ಆರಂಭಿಕ ದಿನಗಳಲ್ಲಿ ಹಲವಾರು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಹಾಯ ಮಾಡಿದರು. ರಾಜು ಸತತ ಪದಕಗಳನ್ನು ಗಳಿಸುತ್ತಾ ಬಂದರು. ಎಲ್ಲರ ಗಮನ ಸೆಳೆದರು, ಬಾಡಿ ಬಿಲ್ಡಿಂಗ್‌ನಲ್ಲಿ ಅಗ್ರಸ್ಥಾನವನ್ನು ಗಳಿಸಿದರು. 

ಕರ್ನಾಟಕ ಆರ್ಮ್ ರೆಸ್ಲಿಂಗ್ ಅಸೋಸಿಯೇಶನ್‌ನ ಕಾರ್ಯದರ್ಶಿ ವಿಶ್ವನಾಥ್, 'ಆರ್ಮ್ ರೆಸ್ಲಿಂಗ್' ಕ್ರೀಡೆಯನ್ನು ಪರಿಚಯಿಸಿದರು ಮತ್ತು 2013 ರವರೆಗೆ ಅವರು ತಮ್ಮ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ಮಾಡಿಸಿದರು.

2013 ರಿಂದ, ಅವರು ಪ್ಯಾರಾ ಅಥ್ಲೆಟಿಕ್ಸ್ ಮತ್ತು ಸಾಮಾನ್ಯ ವರ್ಗದ ಸ್ಪರ್ಧೆಗಳಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದು, ಪ್ರಶಸ್ತಿಗಳನ್ನು ತರುತ್ತಿದ್ದಾರೆ. ಕಳೆದೊಂದು ದಶಕದಿಂದ, ಅವರು 30 ಕ್ಕೂ ಹೆಚ್ಚು ಪದಕಗಳನ್ನು ಮತ್ತು ಹಲವಾರು ಟ್ರೋಫಿಗಳನ್ನು ಗಳಿಸಿದ್ದಾರೆ. ಇವೆಲ್ಲವೂ 2018 ರಲ್ಲಿ ನಡೆದ ರಾಷ್ಟ್ರೀಯ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ನೆರವಾಯಿತು. ರಾಷ್ಟ್ರೀಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನಂತರ, ರಾಜು ಅದೇ ವರ್ಷ ಟರ್ಕಿಯ ಅಂಟಲ್ಯದಲ್ಲಿ ನಡೆದ 21 ನೇ ವಿಶ್ವ ಪ್ಯಾರಾ ಆರ್ಮ್-ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು.

ಅವರ ಸ್ನೇಹಿತರು, ತರಬೇತುದಾರ ಮತ್ತು ಹಿತೈಷಿಗಳು ಸ್ಪರ್ಧೆಗೆ ಟರ್ಕಿಗೆ ಹೋಗಲು ಹಣ ಸಂಗ್ರಹಿಸಿ ನೀಡಿದರು. ಅಲ್ಲಿ ಅವರು ಬೆಳ್ಳಿ ಪದಕವನ್ನು ಪಡೆದರು. 2019 ರಲ್ಲಿ, ಅವರು ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದರು. ಈ ಗೆಲುವಿನಿಂದಾಗಿ ಅವರು 2019-20ರಲ್ಲಿ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ಕಾರಣದಿಂದ ಸ್ಪರ್ಧೆಯನ್ನು ಸ್ಥಗಿತಗೊಳಿಸಲಾಯಿತು.

ಮೈಸೂರಿನ ಬ್ಯಾಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಾಜು, ಕೋವಿಡ್ ಸಾಂಕ್ರಾಮಿಕ ಕಾರಣದಿಂದ ನಿರುದ್ಯೋಗಿಯಾಗಿದ್ದಾರೆ. ಟೂರ್ನಿಗಳು ವಿರಳವಾಗಿರುವ ಪ್ರಸ್ತುತ ಪರಿಸ್ಥಿತಿಯ ಹೊರತಾಗಿಯೂ, ಮುಂಬರುವ ಪಂದ್ಯಾವಳಿಗಳಿಗೆ ಅವರು ಅಭ್ಯಾಸವನ್ನು ಮುಂದುವರಿಸಿದ್ದಾರೆ.

ರಾಜು ಅವರ ಪ್ರಯಾಣ ಕೇವಲ ಸ್ಫೂರ್ತಿದಾಯಕ ಮಾತ್ರವಲ್ಲದೆ ಅವರಂತಹ ಅನೇಕ ಗುಪ್ತ ಪ್ರತಿಭೆಗಳು ದೇಶದಲ್ಲಿ ಇದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ, ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ದುರದೃಷ್ಟವಶಾತ್, ಅಂತಹ ಪ್ರತಿಭೆಗಳನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಶ್ವನಾಥ್ ಹೇಳುತ್ತಾರೆ.

ರಾಜು ಅವರ ಭವಿಷ್ಯದ ಯೋಜನೆಗಳ ಬಗ್ಗೆ ಕೇಳಿದಾಗ, ವಿಶ್ವ ಚಾಂಪಿಯನ್‌ಶಿಪ್ ಗೆಲ್ಲುವುದು ಮತ್ತು ಮಹತ್ವಾಕಾಂಕ್ಷೆಯ ಕುಸ್ತಿಪಟುಗಳಿಗೆ ತರಬೇತಿ ನೀಡುವುದು ಮಾತ್ರ ತನ್ನ ಗುರಿ ಎಂದು ಹೇಳುತ್ತಾರೆ.

  • ಬೆಳ್ಳಿ ಪದಕ 21 ನೇ ವಿಶ್ವ ಪ್ಯಾರಾ ಆರ್ಮ್ ಕುಸ್ತಿ ಚಾಂಪಿಯನ್‌ಶಿಪ್, ಟರ್ಕಿ, 2018
  • ಆರು ಬಾರಿ ವಿಜೇತ, ರಾಜ್ಯ ಮಟ್ಟದ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್
  • ವಿಜೇತ, ಆರ್ಮ್ ಕುಸ್ತಿ ಚಾಂಪಿಯನ್‌ಶಿಪ್, ಐಎಚ್‌ಎಫ್‌ಎಫ್ -2019 ವಿಜೇತ, ಮೈಸೂರು ದಸರಾ ಆರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್
  • ತೆಲಂಗಾಣ ಆರ್ಮ್ ರೆಸ್ಲಿಂಗ್ ಅಸೋಸಿಯೇಶನ್, ಹೈದರಾಬಾದ್ ರಾಷ್ಟ್ರೀಯ ಆರ್ಮ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ವಿಜೇತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com