ಕಂಬಳ ಓಟ: ಉಡುಪಿಯ ಬೈಂದೂರಿನ ವಿಶ್ವನಾಥ್ ದೇವಾಡಿಗ ಹೊಸ ದಾಖಲೆ!
ಕರಾವಳಿಯ ಜನಪದ ಕ್ರೀಡೆ ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ ಗಳಲ್ಲಿ 100 ಮೀಟಲ್ ಓಡಿ ಹೊಸ ದಾಖಲೆ ನಿರ್ಮಿಸಿದೆ.
Published: 12th February 2021 10:32 AM | Last Updated: 12th February 2021 01:08 PM | A+A A-

ವಿಶ್ವನಾಥ್ ದೇವಾಡಿಗ
ಮಂಗಳೂರು: ಕರಾವಳಿಯ ಜನಪದ ಕ್ರೀಡೆ ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ ಗಳಲ್ಲಿ 100 ಮೀಟಲ್ ಓಡಿ ಹೊಸ ದಾಖಲೆ ನಿರ್ಮಿಸಿದೆ.
ಮಂಗಳೂರಿನ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಕಂಬಳ ಏರ್ಪಡಿಸಲಾಗಿತ್ತು. ಬೈಂದೂರಿನ ವಿಶ್ವನಾಥ್ ದೇವಾಡಿಗ (23) ಓಡಿಸಿದ ಕೋಣಗಳು 9.15 ಸೆಕೆಂಡ್ಗಳಲ್ಲಿ 100 ಮೀಟರ್ ಓಡಿವೆ.
ಕಂಬಳದ ಉಸೇನ್ ಬೋಲ್ಟ್ ಎಂದು ಖ್ಯಾತರಾಗಿದ್ದ ಶ್ರೀನಿವಾಸ್ ಗೌಡರು ಕಳೆದ ವರ್ಷ 9.55 ಸೆಕೆಂಡ್ನಲ್ಲಿ ದಾಖಲೆ ಮಾಡಿದ್ದರು. ಈ ಬಾರಿ ವಿಶ್ವನಾಥ್, ಶ್ರೀನಿವಾಸ ಗೌಡರ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಈ ದಾಖಲೆ ನಿರ್ಮಿಸಲು ನನ್ನ ಜೊತೆಗಿದ್ದವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ವಿಶ್ವನಾಥ್ ಅವರು ಹೇಳಿದ್ದಾರೆ.
ಇದೇ ವೇಳೆ ಕೆಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಕಂಬಳ ಉತ್ಸಾಹಿಯಾಗಿರುವ ಕಾರ್ಕಳದ ಮಾಲಾ ಗ್ರಾಮದ ಕರುಣಾಚಾರಿ ಅವರನ್ನು ನೆನೆದಿರುವ ವಿಶ್ವನಾಥ್ ಅವರು, ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲಾ ಮಾಲಾದಲ್ಲಿರುವ ಕರುಣಾಚಾರಿ ಅವರ ಮನೆಗೆ ತೆರಳುತ್ತಿದ್ದೆ.
ಬೈಂದೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 130- 150 ಕಿ.ಮೀ ಪ್ರಯಾಣಿಸಬೇಕಿತ್ತು. ಹೀಗಾಗಿ ನಾನು ಶುಕ್ರವಾರ ಸಂಜೆಯವರೆಗೆ ಅರ್ಧದಷ್ಟು ದೂರ ತೆರಳಿ, ರಾತ್ರಿಯಿಡೀ ಕರುಣಾಚಾರಿ ಅವರ ಮನೆಯಲ್ಲಿಯೇ ಇರುತ್ತಿದ್ದೆ. ಕಂಬಳದಲ್ಲಿ ಸ್ಪರ್ಧಿಸಲು ಶನಿವಾರ ಮುಂಜಾನೆ ಪ್ರಯಾಣ ಪುನರಾರಂಭಿಸುತ್ತಿದ್ದೆ.
ಚಿಕ್ಕವನಿದ್ದಾಗಿನಿಂದಲೂ ನಾನು ಕಂಬಳವನ್ನು ನೋಡುತ್ತಿದ್ದೆ. 2013ರಲ್ಲಿ ನಡೆದಿದ್ದ ಸ್ಪರ್ಧೆ ನನಗೆ ಪ್ರೇರಣೆ ನೀಡಿತ್ತು. ಎಸ್ಎಸ್ಎಲ್'ಸಿ ಮುಗಿದ ಬಳಿಕ ಮುಂಬೈ ಕ್ಯಾಂಟೀನ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಸಿಟಿ ಜೀವನಶೈಲಿ ನನಗೆ ಇಷ್ಟವಿಲ್ಲ. ನನ್ನ ಪೋಷಕರು ಮತ್ತು ಒಡಹುಟ್ಟಿದವರಂತೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದುಕೊಂಡಿದ್ದೇನೆ. ಮನೆಗೆ ಬಂದಾಗಲೆಲ್ಲಾ ಕೋಣಗಳನ್ನು ಬೆಳೆಸಲು ಆರಂಭಿಸಿದ್ದೆ. ಸುರೇಶ್ ಕಡಿನಾಟಾರ್ ಮತ್ತು ವೆಂಕಟ್ ಪೂಜಾರಿ ಅವರು ನನಗೆ ಪ್ರೇರಣೆಯಾಗಿದ್ದಾರೆ. ಕಳೆದ 7 ವರ್ಷಗಳಿಂದ ನಾನು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆಂದು ತಿಳಿಸಿದ್ದಾರೆ.
ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟಪುಷ್ಟವಾಗಿ ಆರೈಕೆ ಮಾಡಿ ಸಾಕಿ, ಬೆಳೆಸಿದ ಕೋಣವನ್ನು ಕ್ರೀಡೆಗಾಗಿ ಸಿದ್ಧಗೊಳಿಸಿರುತ್ತಾರೆ. ಈ ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಹಗಲಿರುಳು ದುಡಿದ ರೈತರು ಮನರಂಜನೆಗಾಗಿ ಮೊದಲಿಗೆ ಪ್ರಾರಂಭಿಸಿದ ಸ್ಪರ್ಧೆ ಇದು. ನಂತರ ಜಾನಪದ ಕ್ರೀಡೆಯಾಗಿ ಜನಪ್ರಿಯವಾಗಿದೆ. ಸ್ಪರ್ಧೆಯಲ್ಲಿ ಓಡುವ ಕೋಣಗಳ ಜೊತೆಗೆ ಓಡಿಸುವ ಸಾರಥಿಯ ಪಾತ್ರವೂ ಮಹತ್ವದ್ದಾಗಿದೆ.