ಹಳ್ಳಿಗಾಡಿನ ಅಭಿವೃದ್ಧಿಯ ಕನಸು ಹೊತ್ತು ಅಮೆರಿಕ ತೊರೆದು ತನ್ನ ಗ್ರಾಮಕ್ಕೆ ವಾಪಸ್ ಬಂದ ಸಾಫ್ಟ್ ವೇರ್ ಎಂಜಿನೀಯರ್!
ಅಮೆರಿಕಾದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಸಾಫ್ಟವೇರ್ ಎಂಜಿನಿಯರ್ ಮಹಿಳೆಯೊಬ್ಬರು ಗ್ರಾಮಾಭಿವೃದ್ಧಿಯ ಕನಸು ಹೊತ್ತು ಅಲ್ಲಿನ ಟೆಕ್ಕಿ ಹುದ್ದೆಗೆ ರಾಜೀನಾಮೆ ನೀಡಿ ದಾವಣಗೆರೆಯ ಹಳ್ಳಿಗೆ ವಾಪಾಸಾಗಿದ್ದಾರೆ.
Published: 13th February 2021 10:33 AM | Last Updated: 13th February 2021 12:57 PM | A+A A-

ಸ್ವಾತಿ ತಿಪ್ಪೇಸ್ವಾಮಿ
ದಾವಣಗೆರೆ: ಅಮೆರಿಕಾದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಸಾಫ್ಟವೇರ್ ಎಂಜಿನಿಯರ್ ಮಹಿಳೆಯೊಬ್ಬರು ಗ್ರಾಮಾಭಿವೃದ್ಧಿಯ ಕನಸು ಹೊತ್ತು ಅಲ್ಲಿನ ಟೆಕ್ಕಿ ಹುದ್ದೆಗೆ ರಾಜೀನಾಮೆ ನೀಡಿ ದಾವಣಗೆರೆಯ ಹಳ್ಳಿಗೆ ವಾಪಾಸಾಗಿದ್ದಾರೆ.
ದಾವಣಗೆರೆ ತಾಲ್ಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ, ವಿದೇಶದಲ್ಲಿನ ಪ್ರತಿಷ್ಠಿತ ಹುದ್ದೆ ತ್ಯಜಿಸಿ ಗ್ರಾಮೀಣ ಅಭಿವೃದ್ಧಿಯ ಕನಸು ಹೊತ್ತು ತನ್ನ ಪೂರ್ವಜರ ಹಳ್ಳಿಯತ್ತ ಧಾವಿಸಿರುವ ಅವರ ನಡೆ ಮಾದರಿಯಾಗಿದೆ.
ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಇ. ಪದವೀಧರೆಯಾಗಿರುವ ಬೆಂಗಳೂರು ನಗರದ ನಿವಾಸಿ ಸ್ವಾತಿ ತಿಪ್ಪೇಸ್ವಾಮಿ, ಅಮೆರಿಕದಲ್ಲಿ ಐದು ವರ್ಷ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಮಾಜಸೇವೆ ಮಾಡುವ ತುಡಿತದೊಂದಿಗೆ ವಿದೇಶ ದಲ್ಲಿನ ಲಾಭದಾಯಕ ಹುದ್ದೆ ತೊರೆದು ಪೂರ್ವಜರ ಸ್ವಗ್ರಾಮ ತಾಲ್ಲೂಕಿನ ಸೊಕ್ಕೆ ಗ್ರಾಮಕ್ಕೆ ಹಿಂದಿರುಗಿದ್ದರು.
ಇದೇ ಸಮಯದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾಗಿ, ಚುನಾವಣೆಗೂ ಸ್ಪರ್ಧಿಸಿದರು. ಉನ್ನತ ಶಿಕ್ಷಣ ಪಡೆದ ಸ್ವಾತಿ ಅವರನ್ನು ತಾಲ್ಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು.
ನಂತರ ಸೊಕ್ಕೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಳ್ಳಿಗಳ ಜನ ಹಾಗೂ ಸ್ಥಳೀಯ ಶಾಸಕ ಎಸ್.ವಿ. ರಾಮಚಂದ್ರ ಅವರ ಸಹಕಾರದಿಂದ ಸ್ವಾತಿ ತಿಪ್ಪೇಸ್ವಾಮಿ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ವ್ಯಾಪ್ತಿಯ ಮೂರು ಹಳ್ಳಿಗಳಲ್ಲಿ ಮೂಲ ಸೌಲಭ್ಯ ಸೇರಿದಂತೆ ಡಿಜಿಟಲ್ ಗ್ರಂಥಾಲಯ, ಮನೆ ಮನೆಗೆ ಶುದ್ಧ ಕುಡಿಯುವ ನೀರು, ಒಳ ಚರಂಡಿ, ಮಹಿಳೆಯರ ಸಬಲೀಕರಣ, ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ, ನಿವೇಶನ ರಹಿತರಿಗೆ ಸೂರು ಕಲ್ಪಿಸುವ ಕನಸು ಹೊತ್ತಿದ್ದಾರೆ. ದೇಶ, ವಿದೇಶಗಳಲ್ಲಿ ನಗರಳಲ್ಲಿನ ಮೂಲ ಸೌಲಭ್ಯಗಳನ್ನು ಕಂಡಿದ್ದ ನನಗೆ ಗ್ರಾಮೀಣ ಭಾಗದಲ್ಲೂ ಈ ಸವಲತ್ತುಗಳನ್ನು ಕಲ್ಪಿಸುವ ಉದ್ದೇಶ ಪಂಚಾಯಿತಿ ರಾಜಕೀಯಕ್ಕೆ ಧುಮುಕಲು ಪ್ರೇರೇಪಿಸಿತು ಎಂದು ಸ್ವಾತಿ ಹೇಳಿದ್ದಾರೆ.
ಸೊಕ್ಕೆ ಗ್ರಾಪಂ ಅಧ್ಯಕ್ಷೆ, ಟೆಕ್ಕಿ ಸ್ವಾತಿ ತಿಪ್ಪೇಸ್ವಾಮಿ ಅವರು ತಲೆಮಾರಿನ ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದಾರೆ. ಸ್ವಾತಿ ತಂದೆ ತಿಪ್ಪೇಸ್ವಾಮಿ ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ವಿಕ ಎದುರು ಹಂಚಿಕೊಳ್ಳುತ್ತಾ ಬ್ರಿಟಿಷರ್ ಆಡಳಿತಾವಧಿಯಲ್ಲಿ ನಮ್ಮ ತಾತ ತಿಪ್ಪಯ್ಯ ಸೊಕ್ಕೆ ಗ್ರಾಮದಲ್ಲಿ 1920-1931ರ ಅವಧಿಯಲ್ಲಿ ಕಂದಾಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವಾತಿ ಅವರಿಗೆ ಇಬ್ಬರು ಮಕ್ಕಳಿದ್ದು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಸ್ವಾತಿ, ಚುನಾವಣೆಗಾಗಿ ನಾನು ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ ಎಂದು ಹೇಳಿದ್ದಾರೆ.