ಉಡುಪಿ: ಕನ್ನಡ ಲಿಪಿಯಲ್ಲಿರುವ ಕಾಳಾವರ ಶಾಸನದಲ್ಲಿ ಕನ್ನಡ, ಸಂಸ್ಕೃತ ಪದಗಳು!
ಎರಡು ವರ್ಷಗಳ ಹಿಂದೆ ಉಡುಪಿಯ ಸ್ಥಳೀಯ ಇತಿಹಾಸಕಾರರು ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಸುಬ್ರಮಣ್ಯ ದೇವಾಲಯದ ಬಳಿ ವಿಜಯನಗರದ ದೊರೆ ಎರಡನೇ ದೇವರಾಯನ ಶಾಸನವನ್ನು ಕಂಡುಹಿಡಿದಿದ್ದರು. ಆದಾಗ್ಯೂ, ಪತ್ತೆಯಾದ ಶಾಸನಗಳ ಕಾಲಾನುಕ್ರಮದ ಬಗ್ಗೆ ಅಸ್ಪಷ್ಟತೆ ಇತ್ತು.
Published: 02nd January 2021 01:23 PM | Last Updated: 02nd January 2021 01:59 PM | A+A A-

ಕಾಳಾವರ ಶಾಸನ
ಉಡುಪಿ: ಎರಡು ವರ್ಷಗಳ ಹಿಂದೆ ಉಡುಪಿಯ ಸ್ಥಳೀಯ ಇತಿಹಾಸಕಾರರು ಕುಂದಾಪುರ ತಾಲೂಕಿನ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಸುಬ್ರಮಣ್ಯ ದೇವಾಲಯದ ಬಳಿ ವಿಜಯನಗರದ ದೊರೆ ಎರಡನೇ ದೇವರಾಯನ ಶಾಸನವನ್ನು ಕಂಡುಹಿಡಿದಿದ್ದರು. ಆದಾಗ್ಯೂ, ಪತ್ತೆಯಾದ ಶಾಸನಗಳ ಕಾಲಾನುಕ್ರಮದ ಬಗ್ಗೆ ಅಸ್ಪಷ್ಟತೆ ಇತ್ತು.
ಇದೀಗ ಇತಿಹಾಸ ಉಪನ್ಯಾಸಕನಾಗಿ ಕೆಲಸ ಮಾಡಿರುವ ಸಂಶೋಧನಾ ವಿದ್ಯಾರ್ಥಿ ಶೃತೇಶ್ ಆಚಾರ್ಯ ಮೂಡುಬೆಲ್ಲೆ ಶಾಸನವನ್ನು ಮರು ಅಧ್ಯಯನ ಮಾಡುವುದರ ಮೂಲಕ ಅದರಲ್ಲಿನ ಕೆಲವೊಂದು ಮಹತ್ವದ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ. 37 ಸಾಲುಗಳನ್ನು ಹೊಂದಿರುವ ಈ ಶಾಸನವನ್ನು ಪ್ರಸ್ತುತ ದೇವಾಲಯದ ಪ್ರಾಕಾರದ ಗೋಡೆಯ ಬಳಿ ನಿಲ್ಲಿಸಲಾಗಿದೆ.
ಶಾಸನವನ್ನು ಅಧ್ಯಯನ ದೃಷ್ಟಿಯಿಂದ ಮರು ಪರಿಶೀಲನೆಗೆ ಒಳಪಡಿಸಿದಾಗ ಶಕವರುಷ 1361ನೆಯ ವರ್ತಮಾ ಸಿದ್ದಾರ್ಥಿ ಸಂವತ್ಸರದ ಕಾರ್ತಿ ಸು 5 ಲೂ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಈ ಮೊದಲು ಅಧ್ಯಯನ ಮಾಡಿದ್ದ ವಿದ್ವಾಂಸರು ಶಕವರುಷ 1360ನೆಯ ವರ್ತಮಾನ ಸಿದ್ಧಾರ್ಥಿ ಸಂವತ್ಸರದ ಕಾರ್ತಿಕ ಸು5 ಲೂ ಎಂದು ತಪ್ಪಾಗಿ ಓದಿದ್ದಾರೆ. (ಶಾಸನದ ಕಾಲ ಶಕವರುಷ 1360 ಎಂದಾದರೆ ಅದು ಕಾಳಾಯುಕ್ತಿ ಸಂವತ್ಸವರಕ್ಕೆ ಸರಿ ಹೊಂದುತ್ತದೆ. ಆದರೆ. ಈ ಶಾಸನ ವಾಸ್ತವವಾಗಿ ವರ್ತಮಾನ ಸಿದ್ದಾರ್ಥಿ ಸಂವತ್ಸರದ್ದಾಗಿದೆ)
ಶಾಸನದಲ್ಲಿ ತೆಲುಗು ಪದಗಳು ಇಲ್ಲದಿರುವುದನ್ನು ಶೃತೇಶ್ ಗಮನಿಸಿದ್ದಾರೆ. ಶಾಸನದ ಮರು ಅಧ್ಯಯನ ಸಂದರ್ಭದಲ್ಲಿ ಈ ಶಾಸನ 14ನೇ ಶತಮಾನದ ಕನ್ನಡ ಲಿಪಿಯಲ್ಲಿದ್ದು, ಕನ್ನಡ ಮತ್ತು ಸಂಸ್ಕೃತ ಭಾಷೆಯನ್ನು ಒಳಗೊಂಡಿದೆ ಎಂದು ಶೃತೇಶ್ ಹೇಳಿದ್ದಾರೆ.
ಈ ಹಿಂದೆ ಶಾಸವನ್ನು ಓದಿದ್ದ ವಿದ್ವಾಂಸರು, ‘ನರಸಿಂಗಡನಾಮ ಅರಮನೆ ಮದಿದಾ ಧರ್ಮ’ ಎಂಬ ಶಾಸನದ ಕೊನೆಯ ವಾಕ್ಯವನ್ನು ‘ನರಸಿಂಗಿಡಿನಾ ಮಾ-ರಾ - ಮದಿದಾ ಧರ್ಮ’ ಎಂದು ತಪ್ಪಾಗಿ ಓದಿದ್ದಾರೆ. ಈ ಶಾಸನದ ಮರು ಅಧ್ಯಯನದಿಂದ ಹಿಂದಿನ ತಪ್ಪುಗಳನ್ನು ಸರಿಪಡಿಸಿ, ನಿಖರವಾದ ಐತಿಹಾಸಿಕ ಮಾಹಿತಿಯನ್ನು ದಾಖಲಿಸಲು ಸಹಾಯಕವಾಗಿದೆ ಎಂದು ಶ್ರುತೇಶ್ ತಿಳಿಸಿದ್ದಾರೆ.