ಎಲ್ಲಾ ಬಡ ಮಕ್ಕಳಿಗಾಗಿ: ಕೆಬಿಸಿಯಲ್ಲಿ 12.5 ಲಕ್ಷ ರೂ. ಗೆದ್ದು ಅನಾರೋಗ್ಯ ಪೀಡಿತ ಮಕ್ಕಳಿಗೆ ಆಶಾಕಿರಣವಾದ ಉಡುಪಿ ಕಲಾವಿದ
ಹಬ್ಬದ ದಿನಗಳಲ್ಲಿ ವೇಷಧಾರಿಯಾಗಿ ಸಂಗ್ರಹಿಸಿದ ಹಣವನ್ನು ಬಡ ಹಾಗೂ ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡಿ ನೆರವು ನೀಡುತ್ತಿದ್ದ ರವಿ ಕಟಪಾಡಿ ಅವರು ಖಾಸಗಿ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರೂ.12.5 ಲಕ್ಷ ಗೆದ್ದು ಬಡ ಮಕ್ಕಳಿಕೆ ಆಶಾಕಿರಣವಾಗಿದ್ದಾರೆ.
Published: 17th January 2021 09:35 AM | Last Updated: 18th January 2021 01:55 PM | A+A A-

ಕೆಬಿಸಿಯಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ರವಿ ಕಟಪಾಡಿ
ಉಡುಪಿ: ಹಬ್ಬದ ದಿನಗಳಲ್ಲಿ ವೇಷಧಾರಿಯಾಗಿ ಸಂಗ್ರಹಿಸಿದ ಹಣವನ್ನು ಬಡ ಹಾಗೂ ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡಿ ನೆರವು ನೀಡುತ್ತಿದ್ದ ರವಿ ಕಟಪಾಡಿ ಅವರು ಖಾಸಗಿ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ರೂ.12.5 ಲಕ್ಷ ಗೆದ್ದು ಬಡ ಮಕ್ಕಳಿಕೆ ಆಶಾಕಿರಣವಾಗಿದ್ದಾರೆ.
ಕಳೆದ 7 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿ ದಿನದಂದು ವಿಶಿಷ್ಠವಾಗಿ ವೇಶ ಧರಿಸುತ್ತಿರುವ ಉಡುಪಿ ಮೂಲದ ರವಿ ಕಟಪಾಡಿ (36)ಯವರು ಇಲ್ಲಿಂದ ಬಂದಿದ್ದ ಸುಮಾರು ರೂ.55 ಲಕ್ಷ ಹಣವನ್ನು ಬಡ ಹಾಗೂ ಅನಾರೋಗ್ಯ ಪೀಡಿತ 28 ಮಕ್ಕಳಿಗೆ ನೀಡಿ ನೆರವಾಗಿದ್ದರು. ಇವರ ನಿಸ್ವಾರ್ಥ ಸೇವೆ ಸಾಕಷ್ಟು ಜನರ ಮನ ಗೆದ್ದಿದ್ದು. ಇದನ್ನು ಗಮನಿಸಿರುವ ಕೆಬಿಸಿ ಕಾರ್ಯಕ್ರಮ ಆಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕಟಪಾಡಿಯವರಿಗೆ ಅವಕಾಶ ನೀಡಿದ್ದಾರೆ.
ಬಡ ಮಕ್ಕಳಿಗೆ ನೀಡಲಾಗಿದ್ದ ನೆರವನ್ನು ಯಾರೋ ಗಮನಿಸಿದ್ದಾರೆ. ಬಳಿಕ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಿಂದ ನನಗೆ ಕರೆ ಬಂದಿತ್ತು, ಆರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದೆ. ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ಕುಳಿತುಕೊಳ್ಳಬೇಕೆಂಬ ಭಯವಿತ್ತು. ಆದರೆ, ನನ್ನ ಸ್ನೇಹಿತರು ಹಾಗೂ ಆಪ್ತರು ನನ್ನ ಮನವೊಲಿಸಿದರು. ಬಳಿಕ ಕಾರ್ಯಕ್ರಮ ಆಯೋಜಕರು ಜನವರಿ 12ಕ್ಕೆ ಮುಂಬೈಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು ಎಂದು ಕಟಪಾಡಿಯವರು ಹೇಳಿದ್ದಾರೆ.
ಮುಂಬೈಗೆ ತೆರಳುವುದಕ್ಕೂ ಮುನ್ನ ಕಟಪಾಡಿಯಲ್ಲಿಯೇ ಜನವರಿ 7,8 ಮತ್ತು 9 ರಂದು ಪ್ರೋಮೋ ಶೂಟಿಂಗ್ ನಡೆಸಲಾಗಿತ್ತು. ಜನವರಿ 15 ರಂದು ಕಾರ್ಯಕ್ರಮ ಪ್ರಸಾರವಾಗಿದೆ ಎಂದು ತಿಳಿಸಿದ್ದಾರೆ.
‘ನನಗೆ ನೀಡಿದ ಸಮಯದಲ್ಲಿ ನಾನು ಏಳು ಪ್ರಶ್ನೆಗಳಿಗೆ ಉತ್ತರ ನೀಡಿದೆ. ನನ್ನ ಜೊತೆ ಇನ್ನೊಬ್ಬರು ಸಾಧಕ ಮಹಿಳೆ ಕೂಡ ಪಾಲ್ಗೊಂಡಿದ್ದರು. ನಾವಿಬ್ಬರು ಜೊತೆಯಾಗಿ ಆಡಿ ಒಟ್ಟು 25ಲಕ್ಷ ರೂ. ಗಳಿಸಿದೆವು. ಅದರಲ್ಲಿ ಸಮಪಾಲು ಮಾಡಿ ನಮಗೆ ತಲಾ 12.5ಲಕ್ಷ ರೂ. ಹಣವನ್ನು ಹಂಚಿಕೆ ಮಾಡಿದ್ದಾರೆ’ ಎಂದು ರವಿ ಕಟಪಾಡಿ ಮಾಹಿತಿ ನೀಡಿದ್ದಾರೆ.
ತುಳು ಮಾತನಾಡಿ ಕನ್ನಡಿಗರ ಮನ ಗೆದ್ದ ಬಿಗ್ ಬಿ
ಅಮಿತಾಬ್ ಬಚ್ಚನ್ ನನ್ನ ಕಣ್ಣ ಮುಂದೆ ಬಂದು ನಿಂತಾಗ ನನಗೆ ಕಣ್ಣಲ್ಲಿ ನೀರು ಬಂತು. ಎಷ್ಟೋ ಮಂದಿ ಅವರನ್ನು ನೋಡಲು ಹಾತೋರಿಯುತ್ತಿರುವಾಗ ನನಗೆ ಈ ಅವಕಾಶ ಸಿಕ್ಕಿರುವುದು ಮರೆಯಲಾಗದ ಘಟನೆ ಎಂದು ರವಿ ಕಟಪಾಡಿ ಹೇಳಿದ್ದಾರೆ.
‘ನೀವು ನನಗಿಂತ ದೊಡ್ಡ ಕಲಾವಿದ. ನೀವು ಮಾಡುವ ಕೆಲಸ ಎಲ್ಲಗಿಂತ ಮಿಗಿಲು. ಇದನ್ನು ನಿಲ್ಲಿಸದೆ ಮುಂದುವರೆಸಿ’ ಎಂದು ಬಚ್ಚನ್ ನನಗೆ ಹಿತ ನುಡಿದರು ಎಂದು ಅವರು ಹೇಳಿದರು.
ಹಾಟ್ ಸೀಟ್ನಲ್ಲಿ ಕುಳಿತು ಅಮಿತಾಬ್ ಬಚ್ಚನ್ ಅವರಲ್ಲಿ ನಮ್ಮ ತುಳು ಭಾಷೆಯನ್ನು ಮಾತನಾಡಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕೆ ಅವರು ಒಪ್ಪಿ, ನಾನು ಹೇಳಿದಂತೆ ‘ಉಡುಪಿ ಬೊಕ್ಕ ಕುಡ್ಲದ ಮಾತಾ ಜನಕುಲೆಗ್ ಮೊಕೆದ ನಮಸ್ಕಾರ’ ಎಂದು ಹೇಳಿದರು. ಇದರಿಂದ ನನಗೆ ತುಂಬಾ ಖುಷಿವಾಯಿತು ಎಂದು ರವಿ ಕಟಪಾಡಿ ತಿಳಿಸಿದರು.