ರೈತ ಪರ ಆಲೋಚನೆ: ಮಂಗಳೂರು ಬಾಲಕನ ಆವಿಷ್ಕಾರಕ್ಕೆ ಪ್ರಧಾನಿ ಮೋದಿ ಶ್ಲಾಘನೆ
ದೇಶದ ಅಭಿವೃದ್ಧಿಗೆ ಕೃಷಿ ಆಧುನೀಕರಣವು ಅತ್ಯಂತ ಮುಖ್ಯವಾಗಿದ್ದು, ಇದನ್ನು ಸಣ್ಣ ವಯಸ್ಸಿನಲ್ಲಿಯೇ ಅರ್ಥ ಮಾಡಿಕೊಂಡು ಕೃಷಿಗೆ ತಂತ್ರಜ್ಞಾನದ ಜೋಡಣೆ ಮಾಡುತ್ತಿರುವ ಮಂಗಳೂರು ಬಾಲಕನ ಆವಿಷ್ಕಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವಲು ಶ್ಲಾಘಿಸಿದ್ದಾರೆ.
Published: 26th January 2021 08:23 AM | Last Updated: 27th January 2021 12:51 PM | A+A A-

ರಾಕೇಸ್ ಕೃಷ್ಣ. ಕೆ
ಮಂಗಳೂರು: ದೇಶದ ಅಭಿವೃದ್ಧಿಗೆ ಕೃಷಿ ಆಧುನೀಕರಣವು ಅತ್ಯಂತ ಮುಖ್ಯವಾಗಿದ್ದು, ಇದನ್ನು ಸಣ್ಣ ವಯಸ್ಸಿನಲ್ಲಿಯೇ ಅರ್ಥ ಮಾಡಿಕೊಂಡು ಕೃಷಿಗೆ ತಂತ್ರಜ್ಞಾನದ ಜೋಡಣೆ ಮಾಡುತ್ತಿರುವ ಮಂಗಳೂರು ಬಾಲಕನ ಆವಿಷ್ಕಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವಲು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ನಲ್ಲಿ ರಾಕೇಶ್ನೊಂದಿಗೆ ವರ್ಚುವಲ್ ಮೂಲಕ ಪ್ರಧಾನಿ ಮೋದಿಯವರು ಸಂವಾದ ನಡೆಸಿದರು.
ಈ ವೇಳೆ ಸಂಶೋಧಿಸಿದ ತಂತ್ರಜ್ಞಾನದ ಬಗ್ಗೆ ಮಾಹಿತಿ ಬಾಲಕ ಪಡೆದುಕೊಂಡರು. ಇದೊಂದು ಉತ್ತಮ ಸಂಶೋಧನೆಯಾಗಿದ್ದು, ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವಲ್ಲಿ ಪೂರಕವಾಗಲಿದೆ ಎಂದು ಪ್ರಧಾನಿ ಹೇಳಿದರು.
‘ಯಶಸ್ಸು ನಿಮ್ಮದಾಗಲಿ. ದೇಶದ ರೈತರ ನೆರವಿಗಾಗಿ ನಿಮ್ಮನ್ನು ಪ್ರೋತ್ಸಾಹಿಸಿದ ತಂದೆ–ತಾಯಿ ಮತ್ತು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಜ್ಞಾನದ ವಿದ್ಯಾರ್ಥಿಯಾಗಿ ಕೃಷಿ ಬಗ್ಗೆ ಯೋಚಿಸುತ್ತಿರುವುದು ಖುಷಿ ನೀಡಿದೆ’ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ರಾಕೇಶ್ ಕೃಷ್ಣ ಅವರಿಗೆ ಸೀಡೋಗ್ರಾಫರ್ ಎನ್ನುವ ಬೀಜ ಬಿತ್ತನೆಯ ಕೃಷಿ ಯಂತ್ರ ಸಂಶೋಧನೆಗೆ ಪ್ರಶಸ್ತಿ ಸಂದಿದೆ. 7ನೇ ತರಗತಿಯಿಂದ ಆವಿಷ್ಕಾರ ಆರಂಭಿಸಿದ ರಾಕೇಶ್ ಕೃಷ್ಣ, ಕೃಷಿ ಬಿತ್ತನಾ ಯಂತ್ರದಲ್ಲಿ ಮಲ್ಟಿಪಲ್ ಆಪರೇಟಿಂಗ್ ಸಿಸ್ಟಮ್ ಆವಿಷ್ಕಾರ ಮಾಡಿದ್ದಾನೆ.
ಪ್ರಸ್ತುತ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ರಾಕೇಶ್ ಕೃಷ್ಣ ಅವರು ಪುತ್ತೂರಿನ ಬನ್ನೂರಿನ ಕೃಷಿಕ ರವಿಶಂಕರ್ ಹಾಗೂ ಡಾ.ದುರ್ಗಾರತ್ನ ಅವರ ಪುತ್ರನಾಗಿದ್ದಾನೆ. ರಾಕೇಶ್ ತನ್ನ ಸಾಧನೆಗೆ ತನ್ನ ಅಕ್ಕ ರಶ್ಮಿ ಮಾರ್ಗದರ್ಶನವೇ ಸ್ಫೂರ್ತಿ ಎಂದಿದ್ದಾನೆ. ಅಲ್ಲದೆ ಪ್ರಧಾನಿ ಮೋದಿಯವರೊಂದಿಗೆ ಸಂವಾದ ನಡೆಸಿದ ಈ ದಿನ ನನ್ನ ಪಾಲಿನ ಅವಿಸ್ಮರಣೀಯ ಕ್ಷಣ ಎಂದು ಪ್ರತಿಕ್ರಿಯಿಸಿದ್ದಾನೆ.