ಹೆಣ್ಣು ಮಕ್ಕಳ ಕೈಯಲ್ಲಿ ಕುಂಟೆ ಎಳೆಸಿದ್ದ ರೈತನಿಗೆ ಎತ್ತುಗಳ ನೀಡಿ ಮಾನವೀಯತೆ ಮೆರೆದ ಕಾಂಗ್ರೆಸ್ ಮುಖಂಡ!

ಎತ್ತುಗಳಿಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳ ಕೈಯಲ್ಲಿ ಕುಂಟೆ ಎಳೆಸಿದ್ದ ರೈತನಿಗೆ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‍ಸಿ ನಾಗರಾಜ್ ಛಬ್ಬಿ ಅ ಎತ್ತುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ.
ಜಮೀನು ಹದಗೊಳಿಸುತ್ತಿರವ ಕಲ್ಲಪ್ಪ ಅವರ ಪುತ್ರಿಯರು
ಜಮೀನು ಹದಗೊಳಿಸುತ್ತಿರವ ಕಲ್ಲಪ್ಪ ಅವರ ಪುತ್ರಿಯರು

ಹುಬ್ಬಳ್ಳಿ: ಎತ್ತುಗಳಿಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳ ಕೈಯಲ್ಲಿ ಕುಂಟೆ ಎಳೆಸಿದ್ದ ರೈತನಿಗೆ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‍ಸಿ ನಾಗರಾಜ್ ಛಬ್ಬಿ ಅ ಎತ್ತುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ. 

ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಕಲ್ಲಪ್ಪ ಜಾವೂರ (43) ಎಂಬುವರಿಗೆ ಎತ್ತುಗಳನ್ನು ಸಿದ್ದಾರೂಢ ಮಠದ ಆವರಣದಲ್ಲಿ ವಿತರಣೆ ಮಾಡುವ ಮೂಲಕ ನಾಗರಾಜ್ ಛಬ್ಬಿ ಅವರು ಮಾನವೀಯತೆ ಮೆರೆದಿದ್ದಾರೆ. 

ಎತ್ತುಗಳು ಇಲ್ಲದ ಕಾರಣಕ್ಕೆ ಕಲ್ಲಪ್ಪ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಗಲ ಮೇಲೆ ಕುಂಟೆ ಹಾಕಿ ಹೊಲವನ್ನು ಹರಗಿ ಜಮೀನು ಹದಗೊಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಆರೋಗ್ಯ ಸಮಸ್ಯೆ ಎದುರಾಗಿ ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದೆ. ಆರೋಗ್ಯ ಸುಧಾರಿಸಿದ ಬಳಿಕ ಜಮೀನು ಹದಗೊಳಿಸಲು ನಿರ್ಧರಿಸಿದ್ದೆ. ಆದರೆ, ನಮ್ಮ ಬಳಿ ಎತ್ತುಗಳಿರಲಿಲ್ಲ. ಕುಂಟೆ ಎಳೆಯಲು ನನ್ನ ಇಬ್ಬರು ಹೆಣ್ಣುಮಕ್ಕಳಾದ ಮೇಘಾ ಹಾಗೂ ಸಾಕ್ಷಿ ಮುಂದೆ ಬಂದಿದ್ದರು. ಬೇರಾವುದೇ ದಾರಿಯಿಲ್ಲದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಕೈಯಲ್ಲಿ ಕುಂಟೆ ಎಳೆಸಿದ್ದೆ ಎಂದು ಕಲ್ಲಪ್ಪ ಅವರು ಹೇಳಿದ್ದಾರೆ. 

ಕಲ್ಲಪ್ಪ ಅವರ ಹಿರಿಯ ಪುತ್ರಿ ಮೇಘಾ ಅವರು ಹುಬ್ಬಳ್ಳಿಯಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಮಾಡುತ್ತಿದ್ದಾರೆ. ಇನ್ನು ಕಿರಿಯ ಪುತ್ರಿ ಸಾಕ್ಷಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಮೂರನೇ ಪುತ್ರಿ ಸರಳ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಪುತ್ರಿಯರ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಸಂಪಾದನೆ ಮಾಡಲು ಕಲ್ಲಪ್ಪ ಅವರು ಬಯಸಿದ್ದಾರೆ. 

ನನ್ನೊಂದಿಗೆ ಕೈಜೋಡಿಸಿ ನನ್ನ ಮಕ್ಕಳು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಪುತ್ರಿಯರು ಕುಂಟೆ ಎಳೆಯುತ್ತಿದ್ದರೆ, ನಾನು ಬಿತ್ತನೆ ಮಾಡುತ್ತಿದ್ದೆ ಎಂದು ಕಲ್ಲಪ್ಪ ಅವರು ಹೇಳಿದ್ದಾರೆ. 

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ವಿಡಿಯೋ ಕಂಡ ಮಾಜಿ ಎಂಎಲ್'ಸಿ ನಾಗರಾಜ್ ಛಬ್ಬಿ ಅವರು, ರೈತನ ಕುಟುಂಬಕ್ಕೆ ಎತ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 

ಇದು ನನ್ನ ಗಮನಕ್ಕೆ ಬಂದಿತ್ತು. ಕೃಷಿಕನಿಗೆ ಎತ್ತುಗಳನ್ನು ಕೊಡಿಸಬೇಕೆಂದು ನಿರ್ಧಾರ ಮಾಡಿ ಕಾರ್ಯಕರ್ತರ ಮೂಲಕ ಕಲ್ಲಪ್ಪನಿಗೆ ತಿಳಿಸಲಾಯಿತು. ಅದಕ್ಕೆ ಅವರ ಕುಟುಂಬದವರು ಸಹಮತ ವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ ಸಿದ್ದಾರೂಢರ ಸನ್ನಿದಾನದಲ್ಲಿ ಎತ್ತುಗಳನ್ನು ಕೊಡಬೇಕೆಂದು ಸಂಕಲ್ಪ ಮಾಡಿಕೊಳ್ಳಲಾಗಿತ್ತು. ಅದರಂತೆ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಅವರ ಮೂಲಕ ರೈತನಿಗೆ ಎತ್ತುಗಳನ್ನ ಕೊಡುಗೆ ನೀಡಲಾಗಿದೆ ಎಂದು ಮಾಜಿ ಶಾಸಕ ನಾಗರಾಜ್ ಛಬ್ಬಿ ತಿಳಿಸಿದ್ದಾರೆ.

ಹಲವಾರು ಉದ್ದೇಶಗಳಿಗೆ ರಾಜಕೀಯ ನಾಯಕರು ಹಣ ಖರ್ಚು ಮಾಡುತ್ತಾರೆ. ಅಗತ್ಯವಿರುವ ಕುಟುಂಬಕ್ಕೆ ಸಣ್ಣ ಮೊತ್ತವನ್ನು ಖರ್ಚು ಮಾಡಿದರೆ, ಹಲವರು ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com