'ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ' ಎಂದು ಹಾಡುತ್ತಾ ಸಮುದಾಯದ ದನಿಯಾಗಿದ್ದ ಕವಿ ಸಿದ್ದಲಿಂಗಯ್ಯ

"ಇಕ್ರಲಾ ವದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ರೇ ಅಂತಾರೆ, ಓಣೆಗೊಂದ್ ತರ ಗುಡಿ ಕಟ್ಸವ್ರೆ" ಹೀಗೆ ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದವರಿ ಸಿದ್ದಲಿಂಗಯ್ಯ.
ಸಿದ್ದಲಿಂಗಯ್ಯ
ಸಿದ್ದಲಿಂಗಯ್ಯ

"ಇಕ್ರಲಾ ವದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ರೇ ಅಂತಾರೆ, ಓಣೆಗೊಂದ್ ತರ ಗುಡಿ ಕಟ್ಸವ್ರೆ" ಹೀಗೆ ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದವರಿ ಸಿದ್ದಲಿಂಗಯ್ಯ. "ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ" ಎಂಬ ಗೀತೆಯ ಮೂಲಕ ತಮ್ಮಲ್ಲಿನ ಆಕ್ರೋಶವನ್ನು ಹೊರ ಹಾಕಿದ್ದ ಕವಿ, ವಿಮರ್ಶಕ, ಸಾಹಿತಿ  ಇಂದು ನಮ್ಮನ್ನು ಅಗಲಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸುವ ಯಾರಾದರೂ ಇವರ ಸಾಹಿತ್ಯ ಓದದೆ ಮುನ್ನಡೆದರೆ ಅದು ಅನುಚಿತ ಎನ್ನುವಷ್ಟು ಈ ಕವಿ ಜನಪ್ರಿಯವೂ, ಗೌರವಯುತರೂ ಆಗಿದ್ದರು.

ಬಾಲ್ಯ-ಶಿಕ್ಷಣ

1954 ಫೆಬ್ರವರಿ 3 ಎಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದ ದೇವಯ್ಯ, ವೆಂಕಟಮ್ಮ ದಂಪತಿಗಳ ಮಗನಾಗಿ ಜನಿಸಿದ ಸಿದ್ಧಲಿಂಗಯ್ಯನವರ ಬಾಲ್ಯ ಬಡತನದ ಬೇಗೆಯಲ್ಲೇ ಕಳೆದಿತ್ತು.

ಶೋಷಣೆ, ತಾರತಮ್ಯ, ಅನುಭವಿಸುತ್ತಲೇ ಮಾಗಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿ 1974ರಲ್ಲಿ ಬೆಂಗಳೂರು ವಿವಿಯಲ್ಲಿ ಬಿ.ಎ. ಆನರ್ಸ್ (ಐಚ್ಚಿಕ ಕನ್ನಡ ) ಮತ್ತು 1976ರಲ್ಲಿ ಡಿ.ಎಲ್. ನರಸಿಂಹಾಚಾರ್ಯ ಸ್ವರ್ಣ ಪದಕ ಗಳಿಸಿ ಸ್ನಾತಕೋತ್ತರ ಪದವಿ ಪೂರೈಸಿದ್ದರು.

1989ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ರಾಷ್ಟ್ರಕವಿ ಡಾ|| ಜಿ.ಎಸ್.ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ “ಗ್ರಾಮ ದೇವತೆಗಳು” ಪ್ರೌಢಪ್ರಬಂಧ ಮಂಡಿಸಿ ಪಿ.ಎಚ್.ಡಿ.ಪದವಿ ಗಳಿಸಿಕೊಂಡರು.

ವೃತ್ತಿ ಬದುಕು

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸಿದ್ದಲಿಂಗಯ್ಯನವರ ಮಾರ್ಗದರ್ಶನದಲ್ಲಿ 11 ಮಂದಿ ಎಂ.ಫಿಲ್ ಮತ್ತು 8 ಮಂದಿ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರಗಳ ಅಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯ ಬೂಸಾ ಸಾಹಿತ್ಯ ಚಳುವಳಿಯ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿ, ಡಾ|| ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ರಾಮಮನೋಹರ ಲೋಹಿಯಾ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿಗಳಲ್ಲಿ ಸಹ ತೊಡಗಿಸಿಕೊಂಡಿದ್ದರು.

ಸಾಹಿತ್ಯ ಸೃಷ್ಟಿ

ಬೆಂಗಳೂರು ವಿಶ್ವವಿದ್ಯಾಲಯಕ್ಕಾಗಿ ಸಮಕಾಲೀನ ಕನ್ನಡ ಕವಿತೆಗಳು 3 ಮತ್ತು 4ನೆಯ ಸಂಪುಟಗಳನ್ನು ಸಂಪಾದಿಸಿಕೊಟ್ಟಿದ್ದ ಅವರು ೧೯೭೫ ರಲ್ಲಿ ಪ್ರಕಟಿಸಿದ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ  ಅವರನ್ನು ಕಾವ್ಯ ಜಗತ್ತಿಗೆ ಪರಿಚಯಿಸಿಕೊಟ್ಟಿತು. 

‘ಸಾವಿರಾರು ನದಿಗಳು’, ‘ಆಯ್ದ ಕವಿತೆಗಳು’, ‘ಮೆರವಣಿಗೆ’, ‘ಕಪ್ಪು ಕಾಡಿನ ಹಾಡು’ ಮುಂತಾದವು ಅವರು ಪ್ರಮುಖ ಕವನ ಸಂಕಲನಗಳು. ಇವರ “ಊರುಕೇರಿ’ ಆತ್ಮ ಚರಿತ್ರೆ ಸಹ ಅಷ್ತೇ ಪ್ರಸಿದ್ದವಾಗಿದ್ದು ತಮಿಳು ಹಾಗೂ ಇಂಗ್ಲೀಷ್ ಭಾಷೆಗೂ ಅನುವಾದಗೊಂಡಿದೆ ಮಾತ್ರವಲ್ಲದೆ ಇಂಗ್ಲೀಷ್ ಅವತರಣೆಕೆಯನ್ನು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಕಟಿಸಿತ್ತು.

‘ಪಂಚಮ ಮತ್ತು ನೆಲಸಮ’, ‘ಏಕಲವ್ಯ’ ನಾಟಕಗಳು, .‘ಅವತಾರಗಳು’  ಪ್ರಬಂಧ ಕೃತಿ. ‘ಹಕ್ಕಿ ನೋಟ’, ‘ಜನಸಂಸ್ಕೃತಿ’, ‘ ಉರಿಕಂಡಾಯ’ ಎನ್ನುವ ಲೇಖನ ಸಂಗ್ರಹ ಇವರ ಹೆಸರಿನಲ್ಲಿದೆ”.

ಚಿತ್ರಗೀತೆಗಳ ಜಾಡಿನಲ್ಲಿ

ಇನ್ನು ಪುಟ್ಟಣ್ಣ ಕಣಗಾಲರ ನಿರ್ದೇಶನದ ‘ಧರಣೆ ಮಂಡಲು ಮಧ್ಯದೊಳಗೆ’ ಚಿತ್ರಗೀತೆಗಾಗಿ ಇವರಿಗೆ ೧೯೮೩-೮೪ರ ರಾಜ್ಯಪ್ರಶಸ್ತಿ ಪಡೆದಿದ್ದ ಕವಿ ಸಿದ್ದಲಿಂಗಯ್ಯ ಅವರ ‘ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ’ ಬಾ ನಲ್ಲೆ ಮಧುಚಂದ್ರಕೆ ಚಲನಚಿತ್ರದಲ್ಲಿನ ಅತ್ಯಂತ ಜನಪ್ರಿಯ ಚಿತ್ರಗೀತೆಯಾಗಿದೆ.

ಗೌರವ ಸನ್ಮಾನ

ಪಣಜಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನಾಧ್ಯಕ್ಷತೆ, ಬೀದರ್ ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕರ್ನಾಟಕ ರಾಜ್ಯೋತ್ಸ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ|| ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನದ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವ ಅಲ್ಲದೆ  82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಸಹ ಇವರಿಗೆ ಒಲಿದು ಬಂದಿತ್ತು

ರಾಘವೇಂದ್ರ ಅಡಿಗ ಎಚ್ಚೆನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com