ಮೈಸೂರು ಮೂಲದ ಔಷಧ ಕಂಪನಿ ಉದ್ಯೋಗಿಯಿಂದ ಜಗತ್ತಿನ ಅತಿ ಚಿಕ್ಕ ಎಲೆಕ್ಟ್ರಿಕ್ ಬೈಕ್ ತಯಾರಿಕೆ!

ಔಷಧ ಕಂಪನಿಯ ಉದ್ಯೋಗಿಗೆ ಯಂತ್ರಗಳ ಮೇಲಿರುವ ಆಸಕ್ತಿಯ ಫಲಿತವಾಗಿ ಜಗತ್ತಿನ ಅತಿ ಚಿಕ್ಕ, ಸವಾರಿ ಮಾಡಬಹುದಾದ ಎಲೆಕ್ಟ್ರಿಕ್ ಬೈಕ್ ತಯಾರಾಗಿದೆ.
ಜಗತ್ತಿನ ಅತಿ ಚಿಕ್ಕ ಎಲೆಕ್ಟ್ರಿಕ್ ಬೈಕ್ ನೊಂದಿಗೆ ತಯಾರಕ ಸಂತೋಷ್
ಜಗತ್ತಿನ ಅತಿ ಚಿಕ್ಕ ಎಲೆಕ್ಟ್ರಿಕ್ ಬೈಕ್ ನೊಂದಿಗೆ ತಯಾರಕ ಸಂತೋಷ್

ಮೈಸೂರು: ಔಷಧ ಕಂಪನಿಯ ಉದ್ಯೋಗಿಗೆ ಯಂತ್ರಗಳ ಮೇಲಿರುವ ಆಸಕ್ತಿಯ ಫಲಿತವಾಗಿ ಜಗತ್ತಿನ ಅತಿ ಚಿಕ್ಕ, ಸವಾರಿ ಮಾಡಬಹುದಾದ ಎಲೆಕ್ಟ್ರಿಕ್ ಬೈಕ್ ತಯಾರಾಗಿದೆ. 

ಮೈಸೂರು ಮೂಲದ ಸಂತೋಷ್ ಮೂಷಿಕ್ ಕೆ3 ಎಂಬ ಅತಿ ಸಣ್ಣ ಎಲೆಕ್ಟ್ರಿಕ್ ಬೈಕ್ ನ್ನು ತಯಾರಿಸಿದ್ದು, ಈ ಸಾಧನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿದೆ.

ಬೈಕ್ ಗಳಿಗೆ ಹೊಸತನವನ್ನು ತರುವುದಕ್ಕಾಗಿಯೇ ಖ್ಯಾತಿ ಪಡೆದಿರುವ ಸಂತೋಷ್, ಅವರು ಹೊಸದಾಗಿ ತಯಾರಿಸಿರುವ ಮೂಷಿಕ್ ಕೆ3 ಎಲೆಕ್ಟ್ರಿಕ್ ವಾಹನ 145 ಎಂಎಂ (ಪೆನ್ಸಿಲ್ ಗಿಂತಲೂ ಕಡಿಮೆ) ಇದ್ದು 130 ಎಂಎಂ ವ್ಹೀಲ್ ಬೇಸ್ ನ್ನು ಹೊಂದಿದ್ದು 2.5 ಕೆ.ಜಿ ಇದೆ. ಆದರೆ 65 ಕೆ.ಜಿ ವರೆಗೂ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ನಿಸ್ತಾರ್ಕ್ಯನ್ನು ಅಭಿವೃದ್ಧಿಪಡಿಸಿದ್ದಕ್ಕೆ ಮಾನ್ಯತೆ ಪಡೆದಿರುವ ಸಂತೋಷ್, ಈ ಆಸಕ್ತಿದಾಯಕ ಯೋಜನೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮೂರು ವರ್ಷಗಳ ಕಾಲ ಶ್ರಮಿಸಿರುವುದಾಗಿ ಹೇಳಿದ್ದಾರೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಕಟ್ಟುನಿಟ್ಟಾದ ಆರ್ಥಿಕ ಚೌಕಟ್ಟು ಜವಾಬ್ದಾರಿಗಳೊಂದಿಗೆ ಬೆಳೆದ ಸಂತೋಷ್ ಗೆ ಇಂಜಿನಿಯರಿಂಗ್ ವ್ಯಾಸಂಗ ಸಾಧ್ಯವಾಗಲಿಲ್ಲ. ಆದರೆ ಯಂತ್ರಗಳು, ಮೋಟಾರ್ ಸೈಕಲ್ ಗಳೆಡೆಗಿನ ಆಸಕ್ತಿ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಡಿಪ್ಲೊಮಾ ಪೂರ್ಣಗೊಳಿಸಿ ಗ್ಯಾರೇಜ್ ನಲ್ಲಿ ಎರಡು ವರ್ಷಗಳ ಕಾಲ ಬೇಸಿಕ್ಸ್ ನ್ನು ಕಲಿತುಕೊಂಡ ಸಂತೋಷ್, ನಂತರದ ದಿನಗಳಲ್ಲಿ ಯಂತ್ರಗಳೊಂದಿಗೆ ಪ್ರಯೋಗಗಳನ್ನು ನಡೆಸಲು ಮುಂದಾದರು.

ಯಂತ್ರಗಳೆಡೆಗೆ ಅವರಿಗಿದ್ದ ಆಸಕ್ತಿ ತಮ್ಮ ಮೊದಲ ಬೈಕ್ ಮೂಷಿಕ್-1 ನ್ನು 2009 ರಲ್ಲಿ ಅಭಿವೃದ್ಧಿಪಡಿಸುವಂತೆ ಮಾಡಿತು. 30.5 ಸೆಂಟೀಮೀಟರ್ ಉದ್ದ (ವ್ಹೀಲ್ ಬೇಸ್) 10.2 ಸೆಂಟೀಮೀಟರ್ ಅಗಲ ಹಾಗೂ 33 ಸೆಂಟೀಮೀಟರ್ ಎತ್ತರವಿದ್ದ ಮೂಷಿಕ್-1 24 ವೋಲ್ಟ್ ಡಿ.ಸಿ ಮೋಟರ್ ನ ಸಾಮರ್ಥ್ಯದೊಂದಿಗೆ ಪ್ರತಿ ಗಂಟೆಗೆ 15 ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

ಈ ಬೈಕ್ ನ್ನು ಅಭಿವೃದ್ಧಿಪಡಿಸಿದ್ದಕ್ಕೆ ಸಂತೋಷ್ ಅವರ ಸಾಧನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗಳಲ್ಲಿ ದಾಖಲಾಯ್ತು.

ಈ ಯಶಸ್ಸಿನಿಂದ ಉತ್ತೇಜಿತಗೊಂಡ ಸಂತೋಷ್ ನಂತದ ದಿನಗಳಲ್ಲಿ ಇನ್ನೂ ಸಣ್ಣದಾದ ಬೈಕ್ ಗಳನ್ನು ಅಭಿವೃದ್ಧಿಪಡಿಸಿದರು ಈ ಮೂಲಕ ಸಾಕಷ್ಟು ಖ್ಯಾತಿಯನ್ನೂ ಸಂತೋಷ್ ಗಳಿಸಿದರು.

ಮೈಸೂರಿನಲ್ಲಿ ಖಾಸಗಿ ಫಾರ್ಮಾ ಸಂಸ್ಥೆಯ ಉದ್ಯೋಗಿಯಾಗಿದ್ದರೂ ಸಹ ತಾಂತ್ರಿಕ ವಿಷಯಗಳ ಮೇಲೆ ಪ್ರಯೋಗ ಮಾಡುವ ಸಂತೋಷ್ ತಮ್ಮ ಆವಿಷ್ಕಾರದ ಬಗ್ಗೆ ಮಾತನಾಡಿದ್ದು,  ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂಬುದನ್ನು ಸಾಬೀತುಪಡಿಸುವ ಹೆಬ್ಬಯಕೆ ಹೊಂದಿದ್ದಾರೆ. ತಮ್ಮ ಕನಸಿಗೆ ಬೆಂಬಲ ನೀಡುತ್ತಿರುವ ತಾವು ಕಾರ್ಯನಿರ್ವಹಿಸುತ್ತಿರುವ ರೆಕಿಟ್ ಬೆನ್‌ಕಿಸರ್ ಸಂಸ್ಥೆಗೆ, ಸ್ನೇಹಿತರಿಗೆ ಸಂತೋಷ್ ಧನ್ಯವಾದ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com