ಮೈಸೂರು: ನಿವೃತ್ತಿ ನಂತರವೂ ಕೋವಿಡ್ ಸೋಂಕಿತರಿಗೆ ನೆರವಾಗಲು ಸೇವೆಗೆ ಮರಳಿದ 66 ವರ್ಷದ ನರ್ಸ್!

ನಮ್ಮ ಮಧ್ಯೆ ಅದೆಷ್ಟೋ ಜನ ಸಹೃದಯಿಗಳು ಇರುತ್ತಾರೆ. ಬೇರೊಬ್ಬರ ಬಾಳಿಗೆ ಬೆಳಕಾಗಲು ಬಯಸುವ ಇವರು, ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ.
ಚಾಮರಾಜನಗರ ಹಾನೂರು ತಾಲೂಕಿನಲ್ಲಿ ಸೋಂಕಿತ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸುತ್ತಿರುವ ನರ್ಸ್ ಗೀತಾ
ಚಾಮರಾಜನಗರ ಹಾನೂರು ತಾಲೂಕಿನಲ್ಲಿ ಸೋಂಕಿತ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸುತ್ತಿರುವ ನರ್ಸ್ ಗೀತಾ

ಮೈಸೂರು: ನಮ್ಮ ಮಧ್ಯೆ ಅದೆಷ್ಟೋ ಜನ ಸಹೃದಯಿಗಳು ಇರುತ್ತಾರೆ. ಬೇರೊಬ್ಬರ ಬಾಳಿಗೆ ಬೆಳಕಾಗಲು ಬಯಸುವ ಇವರು, ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ವಿಶೇಷ ಗೌರವ ಹಾಗೂ ಸ್ಥಾನವಿದೆ. ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕವಂತೂ ವೈದ್ಯಕೀಯ ಸಿಬ್ಬಂದಿಗಳಿಗೆ ಬೇಡಿಕೆಗಳು ಹೆಚ್ಚಾಗಿದೆ. 

ಮೈಸೂರಿನ 66 ವರ್ಷದ ನರ್ಸ್ ಒಬ್ಬರು ನಿವೃತ್ತಿ ಪಡೆದಿದ್ದರೂ, ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲು ಮರಳಿ ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. 

ಚಾಮರಾಜನಗರ ಜಿಲ್ಲೆಯ ಹಾನೂರು ತಾಲೂಕಿನ ಕೊಳ್ಳೇಗಾಲದ ನಿವಾಸಿಯಾಗಿರುವ ಗೀತಾ ಅವರು ನಿವೃತ್ತಿ ಬಳಿಕವೂ ಕೋವಿಡ್ ಸೋಂಕಿತರಿಗೆ ನೆರವು ನೀಡಿ ಇತರರಿಗೆ ಪ್ರೇರಣೆ ನೀಡುತ್ತಿದ್ದಾರೆ. 

ನನಗೆ ಪರಿಚಯವಿದ್ದ ಇಬ್ಬರು ವ್ಯಕ್ತಿಗಳು ಸೂಕ್ತ ಸಮಯಕ್ಕೆ ಆಕ್ಸಿಜನ್ ಸಿಗದ ಕಾರಣ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಸೋಂಕಿತರಿಗೆ ಸಹಾಯ ಮಾಡುವ ಮನಸ್ಸು ಮಾಡಿದ್ದೆ. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸೋಂಕಿತರಿಗೆ ಆಕ್ಸಿಜನ್ ಸಾಂಧ್ರಕಗಳನ್ನು ಸೋಂಕಿತರಿಗೆ ನೀಡುತ್ತಿದೆ ಎಂದು ನನ್ನ ಸಹೋದರ ಮಾಹಿತಿ ನೀಡಿದ್ದ. ಬಳಿಕ ನಾನೂ ಕೂಡ ಆ ತಂಡದ ಜೊತೆಗೆ ಕೈಜೋಡಿಸಿ ನೆರವಿನ ಕಾರ್ಯ ಆರಂಭಿಸಿದ್ದೆ. ಆರ್ಥಿಕವಾಗಿ ಸಹಾಯ ಮಾಡಲು ನನಗೆ ಸಾಧ್ಯವಾಗಿಲ್ಲ. ಆದರೆ, ವೃತ್ತಿ ಮೂಲಕವಾದರೂ ಸಹಾಯ ಮಾಡಬಹುದು ಎಂದೆನಿಸಿತು. ಹೀಗಾಗಿ ಈ ಮೂಲಕ ನಾನು ಮರಳಿ ಸೇವೆ ಅರಂಭಿಸಿದ್ದೇನೆಂದು ಗೀತಾ ಅವರು ಹೇಳಿದ್ದಾರೆ. 

ಎ.ಎಸ್. ಗೀತಾ
ಎ.ಎಸ್. ಗೀತಾ

ಗೀತಾ ಅವರು ಇದೀಗ ತಮ್ಮ ಮನೆಯನ್ನೇ ಆಮ್ಲಜನಕ ಸಾಂದ್ರಕಗಳ ಬ್ಯಾಂಕ್ ಆಗಿ ಪರಿವರ್ತಿಸಿದ್ದು, ಸಂಕಷ್ಟದಲ್ಲಿರುವ ಜನರಿಂದ ದೂರವಾಣಿ ಕರೆ ಬಂದ ಕೂಡಲೇ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಿಬ್ಬಂದಿಗಳೊಂದಿಗೆ ಕುಗ್ರಾಮಗಳಿಗೆ ತೆರಳಿ ಸಹಾಯ ಮಾಡುತ್ತಿದ್ದಾರೆ. 

ಕೊರೋನಾ ಸೋಂಕಿನ ಭಯವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸವಾಲುಗಳು ಹಾಗೂ ಅಪಾಯಗಳ ಬಗ್ಗೆ ನನಗೆ ತಿಳಿದಿದೆ. ಹೀಗಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುತ್ತೇನೆಂದಿದ್ದಾರೆ. 

ನಮ್ಮ ಮನೆಯಲ್ಲಿರುವವರೆಲ್ಲರೂ ಹಿರಿಯ ನಾಗರೀಕರಾಗಿದ್ದಾರೆ. ನನ್ನ ತಾಯಿಗೆ 96 ವರ್ಷ ವಯಸ್ಸಾಗಿದ್ದು, ನನ್ನೊಂದಿಗೆ ವಾಸವಿದ್ದಾರೆ. ನನಗೂ ಭಯವಿದೆ. ಆದರೆ, ಅದನ್ನು ಬದಿಗೊತ್ತಿ ಸೇವೆ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ. 

ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಮುಖ್ಯ ಕಾರ್ಯತಂತ್ರ ಅಧಿಕಾರಿ ಎಸ್.ಪ್ರವೀಣ್ ಕುಮಾರ್ ಅವರು, ಗೀತಾ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. 

ಗೀತಾ ಅವರ ಈ ಸೇವೆ ಇತರರಿಗೆ ಪ್ರೇರಣೆಯಾಗಿದೆ. ಗೀತಾ ಅವರಂತಹ ಲೆಕ್ಕವಿಲ್ಲದಷ್ಟು ವಾರಿಯರ್ ಗಳ ಪ್ರಯತ್ನಗಳಿಂದ ಮಾತ್ರ ಈ ಹೋರಾಟ ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com