ಉದ್ಯೋಗಿಯನ್ನು ಉದ್ಯೋಗದಾತನನ್ನಾಗಿಸಿದ ಕೊರೋನಾ: ವ್ಯಕ್ತಿಯ ಶ್ರಮಕ್ಕೆ ಮೋದಿ ಮೆಚ್ಚುಗೆ
ಕೊರೋನಾ ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪಾಠ ಕಲಿಸಿದೆ, ಕೆಲವರಿಗೆ ಜೀವನ ದುಸ್ತರವೆನಿಸಲು ಪ್ರಾರಂಭಿಸಿದರೆ, ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ನಂಬಿದವರ ಜೀವನ ಸಕಾರಾತ್ಮಕ ಬದಲಾವಣೆ ಕಂಡಿದೆ.
Published: 02nd March 2021 04:09 PM | Last Updated: 02nd March 2021 04:11 PM | A+A A-

ಎಲ್ ಇಡಿ ಬಲ್ಬ್ ತಯಾರಿಕೆಯಲ್ಲಿ ತೊಡಗಿರುವ ಪ್ರಮೋದ್ ಬೈಥಾ
ಪಾಟ್ನ: ಕೊರೋನಾ ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪಾಠ ಕಲಿಸಿದೆ, ಕೆಲವರಿಗೆ ಜೀವನ ದುಸ್ತರವೆನಿಸಲು ಪ್ರಾರಂಭಿಸಿದರೆ, ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ನಂಬಿದವರ ಜೀವನ ಸಕಾರಾತ್ಮಕ ಬದಲಾವಣೆ ಕಂಡಿದೆ.
ಒಂದು ಕಾಲದಲ್ಲಿ ದೆಹಲಿಯಲ್ಲಿ ಎಲ್ ಇಡಿ ಬಲ್ಬ್ ತಯಾರಿಕಾ ಘಟಕದಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಈಗ ತವರಿನಲ್ಲಿ ಉದ್ಯೋಗದಾತನಾಗಿರುವ ಬಿಹಾರದ ಚಂಪಾರಣ್ ನ 36 ವರ್ಷ ಪ್ರಮೋದ್ ಬೈಥಾ ಮೇಲಿನ ಸಾಲುಗಳಿಗೆ ಜೀವಂತ ಉದಾಹರಣೆ.
ಪ್ರಮೋದ್ ಬೈಥಾ ಓದಿದ್ದು 8 ನೇ ತರಗತಿ, ಜೀವನೋಪಾಯಕ್ಕಾಗಿ 1998 ರಲ್ಲಿ ದೆಹಲಿಗೆ ತೆರಳಿದ ಇವರು, ಎಲ್ ಇಡಿ ಬಲ್ಬ್ ತಯಾರಕ ಫ್ಯಾಕ್ಟರಿಗೆ ತೆರಳಿ ಕಿರಿಯ ತಂತ್ರಜ್ಞನ ಸ್ಥಾನದವರೆಗೂ ಏರಿದರು, ಬಲ್ಬ್ ತಯಾರಿಸುವುದರ ಬಗ್ಗೆ ಅನೇಕ ಸಂಗತಿಗಳನ್ನು ಅರಿತುಕೊಂಡರು. 8,000-12000 ರೂಪಾಯಿಗಳ ವೇತನ ಪಡೆಯುತ್ತಿದ್ದ ಪ್ರಮೋದ್ ಬೈಥಾ ಉದ್ಯೋಗಕ್ಕೆ ಕೊರೋನಾ ಮಾರಕವಾಯಿತು. ಲಾಕ್ ಡೌನ್ ಅವಧಿಯಲ್ಲಿ ಶ್ರಮಿಕ್ ಎಕ್ಸ್ ಪ್ರೆಸ್ ನಲ್ಲಿ ಬಿಹಾರಕ್ಕೆ ಬಂದ ಪ್ರಮೋದ್ ಬೈಥಾ ಕೆಲವು ಕಾಲ ನಿರುದ್ಯೋಗಿಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ವೋಕಲ್ ಫಾರ್ ಲೋಕಲ್ ಅಭಿಯಾನಕ್ಕಾಗಿ ಕರೆ ನೀಡಿದ್ದರಿಂದ ಸ್ಪೂರ್ತಿ ಪಡೆದ ಪ್ರಮೋದ್, ಸ್ಥಳೀಯವಾಗಿ 9 ವಾಟ್ ಗಳ ಎಲ್ ಇಡಿ ಬಲ್ಬ್ ಗಳನ್ನು ತಯಾರಿಸಲು ನಿರ್ಧರಿಸಿದರು.
"ಉತ್ಪಾದನಾ ಘಟಕ ಪ್ರಾರಂಭಿಸುವುದು ಮಕ್ಕಳ ಆಟವಲ್ಲ, ಕಷ್ಟಪಟ್ಟು 40,000 ರೂಪಾಯಿಗಳನ್ನು ಸಂಗ್ರಜಿಸಿ ದೆಹಲಿಯಿಂದ ಕಚ್ಚಾ ವಸ್ತುಗಳನ್ನು ತರಿಸಿದೆ. ನನ್ನ ಪತ್ನಿ ಸಂಜು ದೇವಿ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿರುವ ಪುತ್ರ ಧೀರಜ್ ಕುಮಾರ್ ಜೊತೆಗೂಡಿ ಎಲ್ ಇಡಿ ಬಲ್ಬ್ ಗಳನ್ನು ತಯಾರಿಸುವುದಕ್ಕೆ ಪ್ರಾರಂಭಿಸಿದೆ, ಜೊತೆಗೂಡಿ ಪ್ರತಿ ಬಲ್ಬ್ ಗೆ 11 ರೂಪಾಯಿಗಳಂತೆ 800 ಬಲ್ಬ್ ಗಳನ್ನು ತಯಾರಿಸಿದೆವು" ಎನ್ನುತ್ತಾರೆ ಪ್ರಮೋದ್
ಬೇಡಿಕೆ ಹೆಚ್ಚಿದಂತೆಲ್ಲಾ, ಹೆಚ್ಚು ಕಚ್ಚಾ ವಸ್ತುಗಳನ್ನು ತರಿಸಿ ಸ್ಥಳೀಯರಿಗೆ ಔಪಚಾರಿಕ ತರಬೇತಿ ನೀಡುವ ಮೂಲಕ ಬಲ್ಬ್ ತಯಾರಿಕಾ ಘಟಕದಲ್ಲಿ ಉದ್ಯೋಗ ನೀಡಿದರು. ಈಗ ಪ್ರಮೋದ್ ನಡೆಸುತ್ತಿರುವ ಬಲ್ಬ್ ತಯಾರಿಕ ಘಟಕದಲ್ಲಿ 8 ಮಂದಿ ಉದ್ಯೋಗಿಗಳಿದ್ದಾರೆ, ಮುಂದಿನ ದಿನಗಳಲ್ಲಿ ಈ ಬಲ್ಬ್ ಗಳಿಗೆ ವಿಶಾಲ್ ಬಲ್ಬ್ ಎಂಬ ಹೆಸರು ನಾಮಕಾರಣ ಮಾಡಬೆಕೆಂಬ ಉದ್ದೇಶವಿದೆ ಎಂದು ಪ್ರಮೋದ್ ಹೇಳಿದ್ದಾರೆ.
ಚಂಪಾರಣ್ ಜಿಲ್ಲೆಯೊಂದರಲ್ಲೇ 10000 ಎಲ್ ಇಡಿ ಬಲ್ಬ್ ಗಳಿಗೆ ಬೇಡಿಕೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ನನ್ನ ಉದ್ಯಮವನ್ನು ವಿಸ್ತರಿಸಲು ಆರ್ಥಿಕ ನೆರವಿನ ಅಗತ್ಯವಿದೆ. "ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ನನ್ನ ಸಾಧನೆ ಬಗ್ಗೆ ಮಾತನಾಡಿದ್ದು ಉತ್ತೇಜನಕಾರಿ, ಇದರಿಂದ ನಾನು ಹೆಚ್ಚು ಉತ್ಸಾಹಗೊಂಡಿದ್ದೇನೆ, ಪ್ರಧಾನಿ ಮೋದಿ ಸಿಎಂ ನಿತೀಶ್ ಕುಮಾರ್ ಆರ್ಥಿಕ ನೆರವಿಗೆ ಸಹಾಯ ಮಾದಬಹುದೆಂಬ ನಿರೀಕ್ಷೆ ಇದೆ". ಎನ್ನುತ್ತಾರೆ ಪ್ರಮೋದ್.