ಆದರ್ಶ ಮಹಿಳೆ ಎಂದರೆ ಯಾರು?
ಮತ್ತೊಂದು ಸಲ ಅಂತಾರಾಷ್ಟ್ರೀಯ ಮಹಿಳಾ ದಿನ ಬಂದಿದೆ. ಈ ದಿನ ಮಹಿಳೆಯರ ಬಗ್ಗೆ, ಸಮಾಜದಲ್ಲಿ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಗುಣಗಾನ ಮಾಡುವುದು, ಅವರನ್ನು ಗುರುತಿಸಿ ಸನ್ಮಾನಿಸುವುದು, ಅವರ ಜೀವನದ ಕಥೆಗಳನ್ನು ಹೇಳುವುದು, ಕೇಳುವುದು ಇತ್ಯಾದಿಗಳು ಸಾಗುತ್ತಿರುತ್ತವೆ.
Published: 07th March 2021 10:58 PM | Last Updated: 08th March 2021 12:46 PM | A+A A-

ಸಾಂದರ್ಭಿಕ ಚಿತ್ರ
ಮತ್ತೊಂದು ಸಲ ಅಂತಾರಾಷ್ಟ್ರೀಯ ಮಹಿಳಾ ದಿನ ಬಂದಿದೆ. ಈ ದಿನ ಮಹಿಳೆಯರ ಬಗ್ಗೆ, ಸಮಾಜದಲ್ಲಿ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಗುಣಗಾನ ಮಾಡುವುದು, ಅವರನ್ನು ಗುರುತಿಸಿ ಸನ್ಮಾನಿಸುವುದು, ಅವರ ಜೀವನದ ಕಥೆಗಳನ್ನು ಹೇಳುವುದು, ಕೇಳುವುದು ಇತ್ಯಾದಿಗಳು ಸಾಗುತ್ತಿರುತ್ತವೆ.
ಹಾಗಾದರೆ ಸಾಧನೆ ಮಾಡಬೇಕೆಂದರೆ, ಜೀವನದಲ್ಲಿ ಮುಂದೆ ಬರಬೇಕೆಂದರೆ ಎಂತಹ ಮಹಿಳೆಯರನ್ನು ನೋಡಿ ಕಲಿಯಬೇಕು, ಯಾವ ಮಹಿಳೆಯನ್ನು ಅನುಸರಿಸಬೇಕು ಎಂದು ಸಾಮಾನ್ಯ ಮಹಿಳೆ ಅಥವಾ ಯುವತಿ ಯೋಚಿಸುವುದು ಸಹಜ. ಈ ದೇಶದ ಪ್ರಧಾನ ಮಂತ್ರಿಯಾದ ಇಂದಿರಾ ಗಾಂಧಿ, ಇಂದಿನ ಹಣಕಾಸು ಮಂತ್ರಿಯಾದ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿಯಾದ ಹಲವು ರಾಜಕೀಯ ಕ್ಷೇತ್ರದ ಮಹಿಳೆಯರೇ, ಅಥವಾ ಕ್ರೀಡೆ, ಕಲೆ, ಸಾಹಿತ್ಯ, ಸಿನೆಮಾ ಇತ್ಯಾದಿಗಳಲ್ಲಿ ಹೆಸರು ಮಾಡಿದ ಮಹಿಳೆಯರು ನಮಗೆ ಆದರ್ಶರೇ ಎಂಬ ಪ್ರಶ್ನೆ ಮೂಡುವುದು ಸಹಜ.
ಇತ್ತೀಚೆಗೆ ಒಬ್ಬ ಗಣ್ಯ ಮಹಿಳೆ, ಕಲಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು ಹೀಗೆ ಹೇಳಿದ್ದರು. ''ನಮ್ಮ ಮನೆಗೆ ಒಬ್ಬಳು ಕೆಲಸಕ್ಕೆ ಬರುತ್ತಾಳೆ, ಆಕೆಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ, ಗಂಡ ತೊರೆದಿದ್ದಾನೆ, ಅವಳ ಜೀವನದಲ್ಲಿ ಒಂದಷ್ಟು ಸಮಸ್ಯೆಗಳಿವೆ, ಈ ಸಮಸ್ಯೆಗಳ ಮಧ್ಯೆ ಅವುಗಳನ್ನೆಲ್ಲಾ ಎದುರಿಸಿ ತನ್ನ ಇಬ್ಬರು ಮಕ್ಕಳನ್ನು ಸಾಕಿಕೊಂಡಿ ತನ್ನ ಹೊಟ್ಟೆ ಹೊರೆಯಲು ಆಕೆ ಮಾಡುವ ಪ್ರಯತ್ನವಿದೆಯಲ್ಲಾ, ಆಕೆಗೆ ಜೀವನ ಮಾಡಬೇಕು ಎಂಬ ಉತ್ಸಾಹವಿದೆಯಲ್ಲಾ ಅದಕ್ಕೆ ಶಹಬ್ಬಾಸ್ ಎನ್ನಬೇಕು, ಆಕೆಯನ್ನು ನೋಡಿ ನಾನು ನಿತ್ಯ ಸಾಕಷ್ಟು ಕಲಿಯುತ್ತೇನೆ'' ಎಂದರು.
ಹೌದಲ್ಲವೇ, ಸಮಾಜದಲ್ಲಿ ಮುಂದೆ ಬರಬೇಕು, ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಿ ಹೇಗೆ ಜೀವನ ಮಾಡಬೇಕು ಎಂದು ತಿಳಿಯಲು ಈ ದೇಶದ ಅಥವಾ ಪ್ರಪಂಚದ ಯಾವುದೋ ಮಹಾನ್ ಸಾಧಕ ಮಹಿಳೆಯರ ಜೀವನಗಾಥೆ, ಯಶೋಗಾಥೆ ಕೇಳಬೇಕಾಗಿಲ್ಲ, ಓದಬೇಕಾಗಿಲ್ಲ. ನಮ್ಮ ಸುತ್ತಮುತ್ತಲೇ ನಮ್ಮ ಮೇಲೆ ಪ್ರಭಾವ ಬೀರಬಹುದಾದ, ಅವರ ಜೀವನವನ್ನು ನೋಡಿ ಕಲಿಯಬಹುದಾದ ಸಾಕಷ್ಟು ಮಹಿಳೆಯರಿದ್ದಾರೆ, ಅವರು ನಮ್ಮ ಕುಟುಂಬದಲ್ಲಿ ಇರಬಹುದು, ಸಂಬಂಧಿಕರು ಆಗಿರಬಹುದು, ಮನೆಗೆಲಸಕ್ಕೆ ಬರುವ ಮಹಿಳೆಯಾಗಿರಬಹುದು, ನಮ್ಮ ನೆರೆಹೊರೆಯವರಿರಬಹುದು. ಒಬ್ಬ ಸಾಮಾನ್ಯ ಮಹಿಳೆ ತನ್ನ ನಿತ್ಯದ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು, ಜಂಜಾಟಗಳನ್ನು ಎದುರಿಸಿ ನಗುನಗುತ್ತಾ ಶಕ್ತಿಮೀರಿ ದುಡಿದು ಕುಟುಂಬವನ್ನು ಹೊರೆಯುವುದಿದೆಯಲ್ಲಾ ಅವರಿಗಿಂತ ದೊಡ್ಡ ದಾರಿದೀಪ ಮಹಿಳೆ ಬೇರೊಬ್ಬರಿಲ್ಲ.
ಕಚೇರಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುವ ಮಹಿಳೆಯನ್ನು ಮಾತನಾಡಿಸಿ ಮಕ್ಕಳು ಎಷ್ಟು ಮಂದಿ ಶಾಲೆಗೆ ಹೋಗುತ್ತಾರೆಯೇ ಎಂದು ಕೇಳಿದಾಗ ಇಲ್ಲ ಪುಟ್ಟ ಮಕ್ಕಳು, ಮನೆಯಲ್ಲಿದ್ದಾರೆ, ಶಾಲೆಗೆ ಸೇರಿಸಬೇಕು ಎಂದಳು. ಗಂಡ ಏನು ಮಾಡುವುದು ಎಂದಾಗ ಏನೂ ಇಲ್ಲ, ಮೂರು ಹೊತ್ತು ಕುಡಿದು ಬೊಬ್ಬೆ ಹಾಕುತ್ತಾ ಮನೆಯಲ್ಲಿರುತ್ತಾನೆ, ಕೆಲಸಕ್ಕೆ ಹೋಗುವುದಿಲ್ಲ, ನಾನೊಬ್ಬಳೇ ದುಡಿದು ಮಕ್ಕಳನ್ನು ಸಾಕಬೇಕು ಎಂದಳು.
ನಿಜಕ್ಕೂ ಇಂತಹ ಮಹಿಳೆಯರು ಯಾರಿಗೇನು ಕಮ್ಮಿ ಹೇಳಿ, ಮನೆಯಲ್ಲಿ ಹತ್ತಾರು ಸಮಸ್ಯೆಗಳಿದ್ದರೂ ನೋವನ್ನು ಹೊರಗೆ ತೋರಿಸಿಕೊಳ್ಳದೆ ಬೆಳ್ಳಂಬೆಳಗ್ಗೆ ದುಡಿಯಲು ಬಂದು ಕೆಲಸವನ್ನು ಸಾಧ್ಯವಾದಷ್ಟು ಅಚ್ಚುಕಟ್ಟಾಗಿ ಮಾಡಿ ಸಂಪಾದನೆ ಮಾಡಿ ಜೀವನ ಮಾಡಿ ತೋರಿಸಬೇಕೆಂದು ಇರುವ ಮನಸ್ಸು ಇದೆಯಲ್ಲಾ ಇಂಥವರಲ್ಲವೇ ಆದರ್ಶ ಮಹಿಳೆಯರು.
ಆದರ್ಶ ಮಹಿಳೆಯೆಂದರೆ ವಿದ್ಯೆ, ದೊಡ್ಡ ದೊಡ್ಡ ಡಿಗ್ರಿ, ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಬರುವ ಉದ್ಯೋಗ ಬೇಕಾಗಿದ್ದಲ್ಲ. ಅವಿದ್ಯಾವಂತ ಮಹಿಳೆಯರಿಗೆ ಸಹ ಬದುಕುವ ಕಲೆ ಗೊತ್ತಿರುತ್ತದೆ. ಇಂತಹ ಮಹಿಳೆಯರನ್ನು ನೋಡಿಯೇ ನಾವು ಕಲಿಯೋಣ, ಮುಂದುವರಿಯೋಣ.