12 ಕೆರೆ ನಿರ್ಮಾಣ, 600 ಎಕರೆ ಪ್ರದೇಶದಲ್ಲಿ ಅರಣ್ಯ ಪುನರುಜ್ಜೀವನ: ಜಲತಜ್ಞ ಚನ್ನಬಸಪ್ಪ ಕೊಂಬಳಿ ಸಾಧನೆ

ಹರಿದು ಹೋಗುವ ನೀರನ್ನು ಕೃಷಿ ಭೂಮಿಗಳಲ್ಲಿ ಇಂಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸುವ ಮೂಲಕ ರೈತರ ಮನಗೆದ್ದಿದ್ದಾರೆ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಕಾಕೋಳ ಗ್ರಾಮದ...

Published: 22nd March 2021 01:44 PM  |   Last Updated: 22nd March 2021 01:44 PM   |  A+A-


kombali

ಚನ್ನಬಸಪ್ಪ ಕೊಂಬಳಿ

Posted By : Lingaraj Badiger
Source : UNI

ಹಾವೇರಿ: ಹರಿದು ಹೋಗುವ ನೀರನ್ನು ಕೃಷಿ ಭೂಮಿಗಳಲ್ಲಿ ಇಂಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸುವ ಮೂಲಕ ರೈತರ ಮನಗೆದ್ದಿದ್ದಾರೆ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಕಾಕೋಳ ಗ್ರಾಮದ ಜಲತಜ್ಞ ಚನ್ನಬಸಪ್ಪ ಕೊಂಬಳಿ.

ಚನ್ನಬಸಪ್ಪ ಕೊಂಬಳಿ ಅವರು, ಕೃಷಿ ಪಂಡಿತ ಪ್ರಶಸ್ತಿ –2006, ಶ್ರೀಕೃಷ್ಣದೇವರಾಯ ಪ್ರಶಸ್ತಿ–2007, ಸೃಷ್ಟಿ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿ–2008, ರೈತ ವಿಜ್ಞಾನಿ ರಾಷ್ಟ್ರೀಯ ಪ್ರಶಸ್ತಿ–2010, ಕೃಷಿ–ಋಷಿ–2011, ಸಿರಿಧಾನ್ಯ ಪೋಷಕ, ಸಮಾಜ ಸೇವಾ ರತ್ನ ಸೇರಿ ಹತ್ತು ಹಲವಾರು ಪ್ರಶಸ್ತಿಗಳನ್ನು ತಮ್ಮ‌ ಮುಡಿಗೇರಿಸಿಕೊಂಡಿದ್ದಾರೆ.

ಬರಡಾದ ಕಾಕೋಳ ಗ್ರಾಮದ ಸುಮಾರು 2 ಸಾವಿರ 500 ಎಕರೆ ಪ್ರದೇಶದಲ್ಲಿ ಹರಿದು ಹಳ್ಳ ಸೇರುವ ಮಳೆ ನೀರನ್ನು ಗ್ರಾಮದ 165 ತೆರೆದ ಬಾವಿಗಳಿಗೆ ತಿರುವು ಕಾಲುವೆ ಮುಖಾಂತರ ಮರುಪೂರ್ಣ ಮಾಡಿದ್ದಾರೆ. 

ಗ್ರಾಮದಲ್ಲಿ 12 ಕೆರೆಗಳನ್ನು ನಿರ್ಮಿಸಿ, ಸುಮಾರು 600 ಎಕರೆ ಪ್ರದೇಶದಲ್ಲಿ ಅರಣ್ಯವನ್ನು ಪುನರುಜ್ಜೀವನಗೊಳಿಸಿ, ಗ್ರಾಮದ ಅಂತರ್ಜಲವನ್ನು ಹೆಚ್ಚಿಸಲು ಅವರು ಶ್ರಮಿಸಿದ್ದಾರೆ. ಮಳೆ ನೀರು ಸಂಗ್ರಹ ಪದ್ಧತಿ ಮುಖಾಂತರ ರಾಜ್ಯದ ಸಾವಿರಾರು ಬಾವಿ ಹಾಗೂ ನೂರಾರು ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಅವರು ಶ್ರಮ ವಹಿಸಿದ್ದಾರೆ. 
ಅಲ್ಲದೇ, ಗ್ರಾಮದಲ್ಲಿ ‘ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಘ’ವನ್ನು ಸ್ಥಾಪಿಸಿ, ಸಂಘದ ಅಧ್ಯಕ್ಷರಾಗಿ ಮಣ್ಣು, ನೀರು ಸಂರಕ್ಷಣೆ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಗೋ ಸಂರಕ್ಷಣೆ ಮತ್ತು ದೇಸಿ ಬೀಜಗಳ ಸಂರಕ್ಷಣೆ ಕುರಿತು ರಾಜ್ಯದಾದ್ಯಂತ ಅರಿವು ಮೂಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. 

ಸಾವಯವ ಕೃಷಿ ಪದ್ಧತಿಯನ್ನೇ ಜೀವಾಳವಾಗಿಸಿಕೊಂಡಿರುವ ಕೊಂಬಳಿ ಅವರು ಅಪ್ಪಟ ಪರಿಸರ ಪ್ರೇಮಿ. ಸವಳು ಭೂಮಿಯಲ್ಲಿ ಫಲವತ್ತತೆ ಹೆಚ್ಚಿಸುವ ಬಗೆಯನ್ನು ಅನ್ನದಾತರಿಗೆ ಮಾರ್ಗದರ್ಶನ ಮಾಡುತ್ತಾರೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಜಲಾನಯನ ಇಲಾಖೆ, ಕೃಷಿ ವಿ.ವಿ, ಶಿಕ್ಷಣ ಇಲಾಖೆಗಳ ಮುಖಾಂತರ ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. 

ಅಧಿಕ ಇಳುವರಿ ನೀಡುವ ತಳಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ನೀರಿನ ಗುಣಧರ್ಮಗಳ ಇಳಿಕೆಯಾಗಿದೆ. ಹಳ್ಳ, ಕೆರೆ, ನದಿ ಮತ್ತು ಜಲಾಶಯಗಳಲ್ಲಿ ಹೂಳು ತುಂಬುವಿಕೆ, ನೆರೆಹಾವಳಿ, ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಭೂಮಿ ಸವಳುಗಟ್ಟುವಿಕೆ ಹಾಗೂ ಭೂಮಿಯ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ ಎಂದು ಚನ್ನಬಸಪ್ಪ ಕೊಂಬಳಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ವಿವಿಧ ತಾಂತ್ರಿಕತೆ ಅಳವಡಿಸಿಕೊಂಡು ಭೂಮಿಗೆ ಕೃತಕವಾಗಿ ನೀರು ಇಂಗಿಸ ಬೇಕಾಗಿದೆ. ಏಕೆಂದರೆ ಭೂಮಿಗೆ ಸಹಜವಾಗಿ ನೀರು ಹಿಂಗುವ ಪ್ರಮಾಣ ಕಡಿಮೆಯಾಗುತ್ತಿದ್ದು, ಭೂಮಿ ಸುಟ್ಟ ಇಟ್ಟಿಗೆಯಾಗಿದೆ. ಆಧುನಿಕತೆ ಭರಾಟೆಯಲ್ಲಿ ವಿದ್ಯುತ್‌ ಬಂದ ಮೇಲೆ ಮನೆ– ಮನೆಗೆ ನೀರು ಪೂರೈಕೆಯಾಗುತ್ತಿದೆ. ನೀರನ್ನು ಪೋಲು ಮಾಡುವುದನ್ನು ನಿಲ್ಲಿಸಿ, ಮಿತವಾಗಿ ಬಳಸಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp