ಬೆಳಗಾವಿಯಲ್ಲಿ ಯಶಸ್ವಿ ಹೃದಯ ಕಸಿ: ಮಿದುಳು ನಿಷ್ಕ್ರಿಯಗೊಂಡಿದ್ದ 52ರ ವ್ಯಕ್ತಿಯ ಹೃದಯ 17 ವರ್ಷದ ಯುವಕನಿಗೆ ಜೋಡಣೆ

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಾರಾಷ್ಟ್ರ ಮೂಲದ 52 ವರ್ಷದ ವ್ಯಕ್ತಿಯ ಹೃದಯವನ್ನು ತೆಗೆದು 17 ವರ್ಷದ ಯುವಕನಿಗೆ ಹೃದಯ ಕಸಿ ಮಾಡುವ ಮೂಲಕ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ 2ನೇ ಬಾರಿ ಯಶಸ್ಸು ಸಾಧಿಸಿದೆ.

Published: 24th March 2021 01:54 PM  |   Last Updated: 24th March 2021 02:05 PM   |  A+A-


The 17-year-old boy interacting with media and the doctors' team via video conference

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ವೈದ್ಯರು

Posted By : Manjula VN
Source : The New Indian Express

ಬೆಳಗಾವಿ: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಾರಾಷ್ಟ್ರ ಮೂಲದ 52 ವರ್ಷದ ವ್ಯಕ್ತಿಯ ಹೃದಯವನ್ನು ತೆಗೆದು 17 ವರ್ಷದ ಯುವಕನಿಗೆ ಹೃದಯ ಕಸಿ ಮಾಡುವ ಮೂಲಕ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ 2ನೇ ಬಾರಿ ಯಶಸ್ಸು ಸಾಧಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು, ಮಹಾರಾಷ್ಟ್ರ  ಮೂಲದ 52 ವರ್ಷದ ವ್ಯಕ್ತಿಯ ಹೃದಯವನ್ನು 17 ವರ್ಷದ ಯುವಕನಿಗೆ ಮರುಜೋಡಣೆ  ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದರು.

17 ವರ್ಷದ ಯುವಕನು ಡಯಲೇಟೆಡ್ ಕಾರ್ಡಿಯೋಮಯೋಪಥಿ ಎಂಬ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ. ತೀವ್ರ ತೊಂದರೆ ಅನುಭವಿಸುತ್ತಿದ್ದ ಯುವಕ ತಪಾಸಣೆಗಾಗಿ ಕೆಎಲ್ಇ ಸಂಸ್ಥೆಯ ಆಸ್ಪತ್ರೆಗೆ ಧಾವಿಸಿ ಫೆ.8, 2021ರಂದು ದಾಖಲಾದ. ಆಗ ಆಸ್ಪತ್ರೆಯ ಚಿಕ್ಕಮಕ್ಕಳ ಹೃದಯ ತಜ್ಞ ಡಾ.ವೀರೇಶ ಮಾನ್ವಿ, ಮುಖ್ಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್ ಸಾಲ್ಡಾನಾ ಹಾಗೂ ಅವರ ತಂಡವು ಸಮಗ್ರವಾಗಿ ತಪಾಸಣೆ ನಡೆಸಿತು. ಮಾತ್ರವಲ್ಲ, ಹೃದಯ ನಿಷ್ಕ್ರಿಯಗೊಂಡಿದ್ದು, ಹೃದಯ ಕಸಿ (ಮರು ಜೋಡಣೆ)ಯೊಂದೇ ಪರಿಹಾರ ಎಂದು ತಿಳಿಸಿದ್ದರು.

ಇದೇ ವೇಳೆಗೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯ ಮೆದುಳಿನಿಲ್ಲಿ ರಕ್ತ ಹೆಪ್ಪುಗಟ್ಟಿ ಮಿದುಳು ತನ್ನ ಕಾರ್ಯ ಸ್ಥಗಿತಗೊಳಿಸಿತ್ತು. ನರರೋಗ ತಜ್ಞ ವೈದ್ಯ ಡಾ.ರವಿಶಂಕರ ನಾಯಕ ಹಾಗೂ ತೀವ್ರ ನಿಗಾ ತಜ್ಞ ವೈದ್ಯ ಡಾ.ಅಂಬರೀಶ ನೇರ್ಲಿಕರ ಅವರು, ಹೃದಯವು ಸುಗಮವಾಗಿರುವುದನ್ನು ಖಚಿತಪಡಿಸಿದ್ದರು. ಮೆದುಳು ಮೃತಗೊಂಡಿದ್ದನ್ನು ದೃಢೀಕರಿಸಿದ್ದರು. ನಂತರ ಈ ವ್ಯಕ್ತಿಯ ಹೃದಯವನ್ನು ಯುವಕನಿಗೆ ಜೋಡಿಸಲು ರಾಜ್ಯ ಸರ್ಕಾರದ ಅಂಗಾಂಗ ಕಸಿ ಪ್ರಾಧಿಕಾರದ ಜೀವನ ಸಾರ್ಥಕತೆ ಕಾರ್ಯಕ್ರಮದಲ್ಲಿ ಹೃದಯ ಕಸಿಗೆ ಯುವಕನ ಹೆಸರನ್ನು ನೋಂದಾಯಿಸಲಾಗಿತ್ತು. ನಂತರ ಅಲ್ಲಿಂದ ಅನುಮತಿ ಸಿಕ್ಕಿತು.

ಇದಾದ ಬಳಿಕ ಫೆ.26, 2021ರಂದು ತಡರಾತ್ರಿ ದಾನಿಯ ಹೃದಯವನ್ನು ತೆಗೆದು 17 ವರ್ಷದ ಯುವಕನಿಗೆ ಕಸಿ ಮಾಡಲಾಯಿತು. ಅರ್ಥೋಟಾಪಿಕ್ ಹೃದಯ ಕಸಿ ಎಂಬ ತಂತ್ರಜ್ಞಾನವನ್ನು ಬಳಸಿ ಹೃದಯವನ್ನು ಜೋಡಿಸಲಾಯಿತು.

ನಿಗದಿತ ಸ್ಥಳಕ್ಕೆ ಹೃದಯವನ್ನು ಜೋಡಿಸಿ ರಕ್ತನಾಳಗಳನ್ನು ಸಂಪರ್ಕಕ್ಕೆ ತರಲಾಯಿತು. ಮರುಜೋಡಣೆಗೊಂಡ ಹೃದಯವು ತಕ್ಷಣವೇ ತನ್ನ ಕಾರ್ಯ ಆರಂಭಿಸಿತು. ಮರುಜೋಡಣೆಗೊಂಡ ನಂತರ ತಜ್ಞ ಶಸ್ತ್ರಚಿಕಿತ್ಸಕರ ತಂಡ, ಅರವಳಿಕೆ ತಜ್ಞರು, ನೆಫ್ರೋಲಾಜಿಸ್ಟ್ ಅವರು ನಿರ್ವಹಿಸಿದರು. ಹೃದಯ ಸ್ವೀಕರಿಸಿದ ರೋಗಿಯ ದೇಹವು ದಾನಿಯ ಹೃದಯವನ್ನು ಸ್ವೀಕರಿಸಿದ್ದು, ಈಗ ಅವರು ಆರೋಗ್ಯವಾಗಿದ್ದಾರೆ.

ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೆರವೇರಿಸಲಾಯಿತು. ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಡಾ.ರಿಚರ್ಡಡ್ ಸಾಲ್ಡಾನಾ, ಡಾ.ಮೋಹನ ಗಾನ, ಡಾ.ಪ್ರವೀಣ ತಂಬ್ರಳ್ಳಿ ಮಠ. ಡಾ.ಕಿರಣ ಕುರುಕುರೆ, ಡಾ.ರವಿ, ಡಾ ದರ್ಶನ್ ಡಿ.ಎಸ್ ಸೇರಿದಂತೆ ಹಲವು ವೈದ್ಯರ ತಂಡ 6 ಗಂಟೆಗಳ ಕಾಲ ನಿರಂತರವಾಗಿ ಶಸ್ತ್ರಚಿಕಿತ್ಸೆಯ ಮೂಲಕ ದಾನಿಯ ಹೃದಯವನ್ನು ತೆಗೆದು, ಮತ್ತೊಬ್ಬ ರೋಗಿಗೆ ಮರುಜೋಡಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು ಎಂದು ತಿಳಿಸಿದ್ದಾರೆ.

ಹೃದಯವನ್ನು ದಾನ ಮಾಡುವ ಮೂಲಕ ದಾನಿಯ ಕುಟುಂಬ ಇತರರಿಗೆ ಮಾದರಿಯಾಗಿದ್ದಾರೆ. ದೇಶದಲ್ಲಿ 50,000 ಹೆಚ್ಚು ಜನರಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ವೈದ್ಯಕೀಯ ಮೂಲಸೌಕರ್ಯ ಹೊಂದಿರುವ ಕೆಎಲ್ಇಎಸ್ ಹಾರ್ಟ್ ಸೆಂಟರ್ ವಿಶ್ವದ ಅತ್ಯುತ್ತಮ ಆಸ್ಪತ್ರೆಗಳಿಗೆ ಹೊಂದಿಕೆಯಾಗಲಿದೆ ಎಂದು ಡಾ.ಸಾಲ್ಡಾನಾ ಅವರು ಹೇಳಿದ್ದಾರೆ.

Stay up to date on all the latest ವಿಶೇಷ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp