ಪ್ಲಾಸ್ಮಾ ದಾನ ಮಾಡಿ ಕೊರೋನಾ ಸೋಂಕಿತ ಗರ್ಭಿಣಿ ಮಹಿಳೆ ಜೀವ ಉಳಿಸಿದ ದೆಹಲಿ ಪೊಲೀಸ್ ಅಧಿಕಾರಿ!

ಕೊರೋನಾ ಸೋಂಕಿಗೊಳಗಾಗಿ ಗಂಭೀರ ಪರಿಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸಮಯಕ್ಕೆ ಸರಿಯಾಗಿ ಪ್ಲಾಸ್ಮಾ ದಾನ ಮಾಡುವ ಮೂಲಕ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಜೀವ ರಕ್ಷಣೆ ಮಾಡಿದ್ದಾರೆ. 
ಪ್ಲಾಸ್ಮಾ ದಾನ ಮಾಡುತ್ತಿರುವ ದೆಹಲಿ ಪೊಲೀಸ್ ಆಕಾಶ್
ಪ್ಲಾಸ್ಮಾ ದಾನ ಮಾಡುತ್ತಿರುವ ದೆಹಲಿ ಪೊಲೀಸ್ ಆಕಾಶ್

ನವದೆಹಲಿ: ಕೊರೋನಾ ಸೋಂಕಿಗೊಳಗಾಗಿ ಗಂಭೀರ ಪರಿಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸಮಯಕ್ಕೆ ಸರಿಯಾಗಿ ಪ್ಲಾಸ್ಮಾ ದಾನ ಮಾಡುವ ಮೂಲಕ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಜೀವ ರಕ್ಷಣೆ ಮಾಡಿದ್ದಾರೆ. 

ದೆಹಲಿಯ ರೂಪ್ ನಗರ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆಕಾಶ್ ಎಂಬುವವರು ಗರ್ಭಿಣಿಯ ಜೀವ ಉಳಿಸಿದ ಅಧಿಕಾರಿಯಾಗಿದ್ದಾರೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೊಲೀಸರ ತಂಡ ಜೀವನ್ ರಕ್ಷಕ್ ಪ್ಲಾಸ್ಮಾ ಬ್ಯಾಂಕ್ ನಡೆಸುತ್ತಿದೆ. ಇದರಂತೆ ಜೀವನ್ ರಕ್ಷಕ್ ತಂಡದಿಂದ ಆಕಾಶ್ ಅವರಿಗೆ ತುಂಬು ಗರ್ಭಿಣಿಯೊಬ್ಬರಿಗೆ ಪ್ಲಾಸ್ಮಾ ಅಗತ್ಯವಿದೆ ಎಂಬ ಮಾಹಿತಿ ಸಿಕ್ಕಿದೆ. ಕೂಡಲೇ ಆಕಾಶ್ ಅವರು ಪ್ಲಾಸ್ಮಾ ದಾನ ಮಾಡಿದ್ದು, ಮಹಿಳೆಯ ಜೀವ ರಕ್ಷಣೆ ಮಾಡಿದ್ದಾರೆ. 

ಮಾಹಿತಿ ತಿಳಿದ ಕೂಡಲೇ ಐಎಲ್'ಬಿಎಸ್ ಆಸ್ಪತ್ರೆಗೆ ತೆರಳಿ ಪ್ಲಾಸ್ಮಾ ದಾನ ಮಾಡಿದೆ. ಇದೀಗ ಮಹಿಳೆ ಹಾಗೂ ಇನ್ನೂ ಕಣ್ಣು ಬಿಡದ ಮಗು ಸೇರಿ ಇಬ್ಬರು ಪ್ರಾಣ ಉಳಿದಿದೆ ಎಂದು ಆಕಾಶ್ ಅವರು ಹೇಳಿದ್ದಾರೆ. 

27 ವರ್ಷದ ಗರ್ಭಿಣಿ ಮಹಿಳೆ ಕೊರೋನಾ ಸೋಂಕಿಗೊಳಗಾಗಿದ್ದು, ದೆಹಲಿ ಉತ್ತಮ್ ನಗರ ಪ್ರದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ 0+ ರಕ್ತ ಗುಂಪಿನ ಪ್ಲಾಸ್ಮಾ ಅಗತ್ಯವಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹರಿದಾಡುತ್ತಿತ್ತು. ಜೀವನ್ ರಕ್ಷಕ್ ತಂಡ ಸೋಂಕಿತರನ್ನು ಸಂಪರ್ಕಿಸಲು ಸಂಖ್ಯೆಯನ್ನೂ ನೀಡಿತ್ತು. ಇದರಿಂದ ಸಹಾಯ ಮಾಡಲು ನನಗೆ ಸುಲಭವಾಯಿತು ಎಂದು ತಿಳಿಸಿದ್ದಾರೆ. 

ಐಎಲ್'ಬಿಎಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದ ಬಳಿಕ ಆಕಾಶ್ ಅವರು ಸ್ವತಃ ಪ್ಲಾಸ್ಮಾವನ್ನು ಗರ್ಭಿಣಿ ಮಹಿಳೆಯ ಪತಿಯ ಕೈಗೆ ನೀಡಿದ್ದಾರೆ. ಸಾಕಷ್ಟು ಜನರ ಬಳಿ ಮನವಿ ಮಾಡಿಕೊಂಡಿದ್ದೆ. ಆದರೆ, ಯಾರೊಬ್ಬರೂ ಸಹಾಯಕ್ಕೆ ಮುಂದೆ ಬರಲಿಲ್ಲ. ಬಳಿಕ ಎಲ್ಲಾ ಭರವಸೆಗಳನ್ನೂ ಕೈಚೆಲ್ಲಿ ಕುಳಿತಿಲ್ಲೆ. ಇದೀಗ ಪೊಲೀಸ್ ಅಧಿಕಾರಿ ಪ್ಲಾಸ್ಮಾ ದಾನ ಮಾಡಿ ಪತ್ನಿಯ ಜೀವ ಉಳಿಸಿದ್ದಾರೆಂದು ಮಹಿಳೆಯ ಪತಿ ಹೇಳಿದ್ದಾರೆ. 

ಜೀವನ್ ರಕ್ಷಕ್ ತಂಡಕ್ಕೆ ಪ್ಲಾಸ್ಮಾ ದಾನ ಕೋರಿ ನೂರಾರು ದೂರವಾಣಿ ಕರೆಗಳು ಬರುತ್ತಿದ್ದು, ಪ್ಲಾಸ್ಮಾ ದಾನ ಮಾಡಲು ಹಲವು ಪೊಲೀಸರೂ ಒಪ್ಪಿಗೆ ನೀಡಿದ್ದಾರೆ. 20 ಜನರಿಗೆ ಈ ವರೆಗೂ ಪ್ಲಾಸ್ಮಾ ದಾನ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com