ಕರೆ ಮಾಡಿದರೆ ಮನೆ ಬಾಗಿಲಿಗೇ 'ಆಕ್ಸಿಜನ್'; ಉದ್ಯಮಿ ಯತೀಶ್ ಬಾಬು ಮತ್ತು ತಂಡದಿಂದ ಮಾನವೀಯ ನೆರವು

ಮಾರಕ ಕೋವಿಡ್ ಸಾಂಕ್ರಾಮಿಕದ 2ನೇ ಅಲೆಯಲ್ಲಿ ಸಾಕಷ್ಟು ಸೋಂಕಿತರು ಬೆಡ್ ಸಿಗದೆ ಆಸ್ಪತ್ರೆ ಸಿಗದೇ ಪರದಾಡುತ್ತಿದ್ದಾರೆ. ಚಿಕಿತ್ಸೆ ಸಿಗದೇ ಸಾಯುತ್ತಿರುವವರು ಒಂದೆಡೆಯಾದರೆ, ಆಮ್ಲಜನಕ ಸಿಗದೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ದೊಡ್ಡದಿದೆ.
ಯತೀಶ್ ಬಾಬು ಮತ್ತು ತಂಡದಿಂದ ಆಕ್ಸಿಜನ್ ಸಿಲಿಂಡರ್ ಸೇವೆ
ಯತೀಶ್ ಬಾಬು ಮತ್ತು ತಂಡದಿಂದ ಆಕ್ಸಿಜನ್ ಸಿಲಿಂಡರ್ ಸೇವೆ

ಮಾರಕ ಕೋವಿಡ್ ಸಾಂಕ್ರಾಮಿಕದ 2ನೇ ಅಲೆಯಲ್ಲಿ ಸಾಕಷ್ಟು ಸೋಂಕಿತರು ಬೆಡ್ ಸಿಗದೆ ಆಸ್ಪತ್ರೆ ಸಿಗದೇ ಪರದಾಡುತ್ತಿದ್ದಾರೆ. ಚಿಕಿತ್ಸೆ ಸಿಗದೇ ಸಾಯುತ್ತಿರುವವರು ಒಂದೆಡೆಯಾದರೆ, ಆಮ್ಲಜನಕ ಸಿಗದೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ದೊಡ್ಡದಿದೆ.

ಇದೇ ಆಮ್ಲಜನಕದ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ ಇರುವ ಹತ್ತಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಚಾಮರಾಜನಗರ, ತಿರುಪತಿ, ಹಿಂದೂಪುರ ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್ ದುರಂತಗಳೇ ಸ್ಪಷ್ಟಸಾಕ್ಷಿ.. ಆಸ್ಪತ್ರೆಗಳೇ ಆಕ್ಸಿಜನ್ ಸಿಗದೇ ಪರದಾಡುತ್ತಿರುವ ಈ ಹೊತ್ತಿನಲ್ಲಿ ಸೋಂಕಿತರು ಆಕ್ಸಿಜನ್  ಸಿಗದೇ ಸಾವನ್ನಪ್ಪಬಾರದು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಸೋಂಕಿತರ ಮನೆಬಾಗಿಲಿಗೇ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅದೂ ಕೂಡ ಉಚಿತವಾಗಿ..

ಹೌದು.. ಇವರ ಹೆಸರು ಯತೀಶ್ ಬಾಬು, ವೃತ್ತಿಯಲ್ಲಿ ಉದ್ಯಮಿಯಾಗಿರುವ ಇವರು ಇದೀಗ ಆಮ್ಲಜನಕ ಸಿಗದೇ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರ ಪಾಲಿಗೆ ಆಪದ್ಭಾಂಧವರಾಗಿದ್ದಾರೆ. ಸೋಂಕಿತರ ಮನೆ ಬಾಗಿಲಿಗೇ ಆಕ್ಸಿಜನ್ ಸಿಲಿಂಡರ್ ಗಳನ್ನು ತಲುಪುಸಿವುದಷ್ಟೇ ಅಲ್ಲದೇ ಸೋಂಕಿತರಿಗೆ ಆಕ್ಸಿಜನ್  ಅಳವಡಿಸಿ ಬರುತ್ತಾರೆ. ಯತೀಶ್ ಬಾಬು ಅವರ ಈ ಸಮಾಜ ಸೇವಾ ಕಾರ್ಯಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಕನ್ನಡಪ್ರಭ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಯತೀಶ್ ಬಾಬು ಅವರು, ಆಕ್ಸಿಜನ್ ಇಲ್ಲದೇ ಸೋಂಕಿತರು ಪರದಾಡುತ್ತಿರುವ ಸುದ್ದಿಗಳನ್ನು ಟಿವಿಗಳಲ್ಲಿ ನೋಡಿ ತುಂಬಾ ನೋವಾಗಿತ್ತು. ಹೀಗಾಗಿ ನನ್ನ ಮನೆಮಂದಿಗೆ ಹಾಗೂ ಸ್ನೇಹಿತರಿಗೆ ಎಂದು ನಾನು 2 ಆಕ್ಸಿಜನ್ ಸಿಲಿಂಡರ್ ಖರೀದಿ ಮಾಡಿದ್ದೆ. ಆದರೆ ದೇವರದಯೆ ಅದರ ಬಳಕೆಯ ಅವಶ್ಯಕತೆಯೇ ಬೀಳಲಿಲ್ಲ. ಆದರೆ ಈ ಆಕ್ಸಿಜನ್ ಸಿಲಿಂಡರ್ ಗಳು ನನ್ನ ಮನೆಯಲ್ಲಿರುವುದಕ್ಕಿಂತ ಅವಶ್ಯಕತೆ ಇರುವವರಿಗೆ ನೀಡಿದರೆ ಅವರ ಅಮೂಲ್ಯ ಪ್ರಾಣ ಉಳಿಯುತ್ತದೆ ಎಂದು ನಿರ್ಧರಿಸಿ ಆ ಸಿಲಿಂಡರ್ ಗಳನ್ನು ನೀಡಿದೆ. ಅಂದಿನಿಂದ ನಮ್ಮ ಈ ಕಾರ್ಯ ಆರಂಭವಾಯಿತು. ತುರ್ತು ಅವಶ್ಯಕತೆ ಇರುವವರ ಮನೆಬಾಗಿಲಿಗೇ ತೆರಳಿ ನಾನು ಸಿಲಿಂಡರ್ ತಲುಪಿಸುತ್ತಿದ್ದೇನೆ. ನನ್ನ ಕಾರ್ಯಕ್ಕೆ ನನ್ನ ಸ್ನೇಹಿತರಾದ ವಿಜಯ್, ಪ್ರವೀಣ್, ಕೃಷ್ಣ, ಬಸವರಾಜ್ ಸಾಥ್ ನೀಡಿದರು. ನಾವು ಎಲ್ಲರೂ ಒಗ್ಗೂಡಿ ಇಂದು ಹತ್ತಾರು ಮಂದಿಗೆ ಆಕ್ಸಿಜನ್ ನೀಡುತ್ತಿದ್ದೇವೆ. ಸೋಂಕಿತರು ಇರುವ  ಪುಟ್ಟ ಕುಟುಂಬಗಳಲ್ಲಿ ಯಾರೂ ಕೂಡ ಮನೆಯಿಂದ ಹೊರಬಂದು ಆಕ್ಸಿಜನ್ ಪಡೆಯುವ ಸ್ಥಿತಿಯಲ್ಲಿರುವುದಿಲ್ಲ. ಅಂತಹವರಿಗೆ ನಮ್ಮ ಸೇವೆ ನೆರವಾಗಲಿದೆ ಎಂದರು.

ಸಂಪೂರ್ಣ ಉಚಿತ ಸೇವೆ
ಇನ್ನು ಯತೀಶ್ ಬಾಬು ಅವರ ಈ ಆಕ್ಸಿಜನ್ ಸಿಲಿಂಡರ್ ಸೇವೆ ಸಂಪೂರ್ಣ ಉಚಿತವಾಗಿದ್ದು, ಸೋಂಕಿತರು ಹಣ ಪಾವತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕೋವಿಡ್ ನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಮತ್ತಷ್ಟು ಹೊರೆಯಾಗಬಾರದು ಎಂಬ ಉದ್ದೇಶದಿಂದ ನಾವು ಉಚಿತ ಸೇವೆ ನೀಡುತ್ತಿದ್ದೇವೆ. ಸಮಾಜ ನಮಗೆ ಸಾಕಷ್ಟು ನೀಡಿದೆ. ಈಗ ನಮ್ಮ ಸರದಿ... ಸಮಾಜಕ್ಕೇನಾದರೂ ಮಾಡಬೇಕು ಎಂಬ ಉದ್ದೇಶದಿಂದ ನಾವೂ ಈ ಕಾರ್ಯ ಮಾಡುತ್ತಿದ್ದೇವೆ ಅಷ್ಟೇ.. ಇಂದು ಕೋಟಿಗಟ್ಟಲೇ ಇರುವವರೂ ಕೂಡ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೇ ಪರದಾಡುತ್ತಿದ್ದಾರೆ. ಮಾನವೀಯತೆ ಮುಖ್ಯ.. ಇದರಿಂದ ಯಾವುದೇ  ರೀತಿಯ ಫಲಾಪೇಕ್ಷೆ ನಮಗಿಲ್ಲ.. ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರ ಜೀವ ಉಳಿಸುವ ಪ್ರಯತ್ನದಲ್ಲಿ ನಮ್ಮದೊಂದು ಸಣ್ಣ ಕಾರ್ಯ ಎಂದು ಯತೀಶ್ ಬಾಬು ಹೇಳಿದ್ದಾರೆ.

ಹಣ ಬೇಡ-ಸಿಲಿಂಡರ್ ನೀಡಿ
ಇನ್ನು ತಮ್ಮದು ನಿಸ್ವಾರ್ಥ ಸೇವೆಯಾಗಿದ್ದು, ತಮ್ಮ ಈ ಕಾರ್ಯದಿಂದ ಒಂದಷ್ಟು ಜೀವ ಉಳಿಯುತ್ತದೆ ಎಂದರೆ ಅದೇ ನಮಗೆ ಎಲ್ಲಕ್ಕಿಂತ ಮಿಗಿಲು.. ಸಾಕಷ್ಟು ಮಂದಿ ಆಕ್ಸಿಜನ್ ಸಿಲಿಂಡರ್ ನೀಡಿದಾಗ ಹಣ ನೀಡಲು ಬರುತ್ತಾರೆ. ಆದರೆ ಅವರಿಗೆ ನಾನು ಹೇಳುವುದು ಒಂದೇ.. ನಮಗೆ ಹಣ ಬೇಡ.. ಒಂದಷ್ಟು ಖಾಲಿ  ಸಿಲಿಂಡರ್ ಗಳನ್ನು ಕೊಡಿಸಿ.. ಅದಕ್ಕೆ ನಾವು ಆಕ್ಸಿಜನ್ ತುಂಬಿಸಿ ಮತ್ತಷ್ಟು ಮಂದಿಗೆ ಹಂಚುತ್ತೇವೆ ಎಂದು ಹೇಳುತ್ತಾರೆ.

ಎಲ್ಲಿ ಸೇವೆ ಲಭ್ಯ?
ಪ್ರಸ್ತುತ ನಾವು ನಮ್ಮ ಕಾರ್ಯಕ್ಕೆ ಯಾವುದೇ ರೀತಿಯ ಗಡಿ ಹಾಕಿಕೊಂಡಿಲ್ಲ.. ಯಾರು ಎಲ್ಲಿಂದಲೇ ಕರೆ ಮಾಡಿದರೂ ಆಕ್ಸಿಜನ್ ಸಿಲಿಂಡರ್ ತಲುಪಿಸುತ್ತಿದ್ದೇವೆ. ಬೆಂಗಳೂರಿನಾದ್ಯಂತ ಹಲವು ಪ್ರದೇಶಗಳಲ್ಲಿ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಿದ್ದೇವೆ. ರಾಮಮೂರ್ತಿ ನಗರ, ಕೆಆರ್ ಪುರಂ, ಕನಕಪುರ  ಸೇರಿದಂತೆ ಹಲವೆಡೆ ನಾವು ಆಕ್ಸಿಜನ್ ನೀಡಿದ್ದೇವೆ. ಇಂದೂ ಕೂಡ ತಮಿಳುನಾಡಿನಿಂದ ಕರೆ ಬಂದಿತ್ತು. ಅವರಿಗೂ ಆಕ್ಸಿಜನ್ ಸಿಲಿಂಡರ್ ತಲಪಿಸುತ್ತಿದ್ದೇವೆ. ಪ್ರಸ್ತುತ ಲಾಕ್ ಡೌನ್ ಇರುವುದರಿಂದ ಬೆಂಗಳೂರು ನಗರದಿಂದ ತಮಿಳುನಾಡು ಗಡಿಯವರೆಗೂ ತೆರಳಿ ಅವರಿಗೆ ಆಕ್ಸಿಜನ್ ಸಿಲಿಂಡರ್ ತಲುಪಿಸಬೇಕು.  ಅವರಿಗೂ ಅಲ್ಲಿಗೆ ಬರಲು ಹೇಳಿದ್ದೇವೆ. ಅವರಿಗೆ ಆಕ್ಸಿಜನ್ ಸಿಲಿಂಡರ್ ತಲುಪಿಸುತ್ತೇವೆ. ಸಾಕಷ್ಟು ಮಂದಿ ವಿದೇಶದಿಂದ ಕರೆ ಮಾಡುತ್ತಿದ್ದಾರೆ. ಯುಕೆ, ಅಮೆರಿಕ, ಹ್ಯೂಸ್ಟನ್ ನಿಂದಲೂ ಕರೆ ಮಾಡಿದ್ದಾರೆ. ಇಲ್ಲಿರುವ ತಮ್ಮ ಕುಟುಂಬಸ್ಥರಿಗೆ ಸಿಲಿಂಡರ್ ತಲುಪಿಸುವಂತೆ ಮನವಿ ಮಾಡಿದರು. ನಾವು ಯಾರಿಗೂ ಇಲ್ಲ ಎಂದು ಹೇಳಿಲ್ಲ.. ಕೆಲವೊಮ್ಮೆ ಕರೆ ಸ್ವೀಕರಿಸಲಾಗುವುದಿಲ್ಲ.. ಮೆಸೇಜ್ ಗಳು ಬಂದರೆ ಕೆಲಸದಿಂದಾಗಿ ರಿಪ್ಲೈ ಮಾಡುವುದು ಲೇಟ್ ಆಗಬಹುದು.. ಆದರೆ ಖಂಡಿತಾ ನಾವು ಅವರಿಗೆ ಕಾಲ್ ಬ್ಯಾಕ್ ಮಾಡುತ್ತೇವೆ. ಮೆಸೇಜ್ ಗಳಿಗೆ ರಿಪ್ಲೈ ಮಾಡುತ್ತೇವೆ ಎಂದು ಹೇಳಿದ್ದಾರೆ.

ಒಬ್ಬರಿಗೆ ಒಂದೇ ಸಿಲಿಂಡರ್
ಇದೇ ವೇಳೆ ಓರ್ವ ಸೋಂಕಿತರಿಗೆ ಒಂದೇ ಸಿಲಿಂಡರ್ ನೀಡುತ್ತೇವೆ ಎಂದು ಯತೀಶ್ ಬಾಬು ಸ್ಪಷ್ಟಪಡಿಸಿದ್ದಾರೆ. ಮತ್ತೆ ಸಿಲಿಂಡರ್ ನ ಅವಶ್ಯಕತೆ ಬಂದರೆ ನಿಸ್ಸಂಕೋಚವಾಗಿ ನಮಗೆ ಕರೆ ಮಾಡಬಹುದು. ಒಂದೇ ಬಾರಿ ಓರ್ವ ವ್ಯಕ್ತಿಗೆ 1ಕ್ಕಿಂತ ಹೆಚ್ಚು ಆಕ್ಸಿಜನ್ ಸಿಲಿಂಡರ್ ನೀಡುವುದಿಲ್ಲ. ಇದರಿಂದ ಮತ್ತೊಂದು ಜೀವ ಉಳಿಸಲು ನೆರವಾಗುತ್ತದೆ. ಆಕ್ಸಿಜನ್ ಸಿಲಿಂಡರ್ ಖಾಲಿಯಾಗುವ ಭಯ ಬೇಡ.. ಸಿಲಿಂಡರ್ ನ ಅಗತ್ಯ ಬಿದ್ದರೆ ನಮಗೆ ಕರೆ ಮಾಡಿದ ಕೂಡಲೇ ಆಕ್ಸಿಜನ್ ಸಿಲಿಂಡರ್ ಅನ್ನು ಅವರ ಮನೆ ಬಾಗಿಲಿಗೇ ತಲುಪಿಸುತ್ತೇವೆ ಎಂದು ಯತೀಶ್ ಬಾಬು ಹೇಳಿದ್ದಾರೆ.

ಆಕ್ಸಿಜನ್ ತುಂಬಿಸಿಕೊಳ್ಳಲು ಹರಸಾಹಸ
ಆಸ್ಪತ್ರೆಗಳಿಗೇ ಆಕ್ಸಿಜನ್ ಸಿಲಿಂಡರ್ ಪಡೆಯಲು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ನೀವು ಹೇಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ಪಡೆಯುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಯತೀಶ್ ಬಾಬು ಅವರು, ನಮಗೂ ಕೂಡ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದರ ನಡುವೆ ಡ್ರಗ್ ಕಂಟ್ರೋಲ್ ಬೋರ್ಡ್ ವ್ಯಕ್ತಿಗಳಿಗೆ ಸಿಲಿಂಡರ್ ನೀಡದಂತೆ, ಆಸ್ಪತ್ರೆಗಳಿಗೆ ವೈದ್ಯಕೀಯ ಬಳಕೆಗೆ ಮಾತ್ರ ಸಿಲಿಂಡರ್ ತುಂಬಿಸುವಂತೆ ಆಕ್ಸಿಜನ್ ರೀ ಫಿಲ್ಲಿಂಗ್ ಕೇಂದ್ರಗಳಿಗೆ ಸೂಚನೆ ನೀಡಿದೆ. ಹೀಗಾಗಿ ಅವರು ಸಾಮಾನ್ಯರು ಹೋದರೆ ರೀಫಿಲ್ ಮಾಡುವುದಿಲ್ಲ. ಆದರೆ ನಾವು ಅವರನ್ನು ಕಾಡಿಬೇಡಿ, ನಾವು ನಮ್ಮ ಕೆಲಸವನ್ನು ಅವರಿಗೆ ಹೇಳಿ ಸಿಲಿಂಡರ್ ತುಂಬಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರದ ನೆರವು, ಬೆಂಬಲ ಅತ್ಯಗತ್ಯ
ಇನ್ನು ನಮ್ಮ ಈ ಕಾರ್ಯಕ್ಕೆ ಸರ್ಕಾರದ ನೆರವು, ಬೆಂಬಲ ಅತ್ಯಗತ್ಯ ಎಂದು ಹೇಳಿರುವ ಯತೀಶ್ ಬಾಬು ಅವರು, ಸಾಂಕ್ರಾಮಿಕ ಸಂದರ್ಭದಲ್ಲಿ ಸರ್ಕಾರ ತನ್ನ ಕೈ ಮೀರಿ ಕೆಲಸ ಮಾಡುತ್ತಿದೆ. ಆದರೆ ಸರ್ಕಾರದಿಂದಲೇ ಎಲ್ಲವೂ ಅಗಬೇಕು.. ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎಂದು ನಾವು ಭಾವಿಸಬಾರದು. ನಮ್ಮ ಕೈಲಾದದ್ದನ್ನು ನಾವು ಮಾಡಬೇಕು. ಪ್ರಸ್ತುತ ಈ ಸಾಂಕ್ರಾಮಿಕ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಮಾತ್ರ ಆಕ್ಸಿಜನ್ ನೀಡುವಂತೆ ಹೇಳಲಾಗಿದೆ. ಆದರೆ ಸಾಕಷ್ಟು ಮಂದಿ ಬೆಡ್ ಗಳು ಸಿಗದೇ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರೂ ಕೂಡ ಆಕ್ಸಿಜನ್ ಸಿಲಿಂಡರ್ ಖರೀದಿ ಮಾಡುವಂತೆ  ಸೂಚಿಸುತ್ತಿದ್ದಾರೆ. ವೈಯುಕ್ತಿಕವಾಗಿ ಸಿಲಿಂಡರ್ ತೆಗೆದುಕೊಂಡು ಹೋದರೆ ರೀಫಿಲ್ಲಿಂಗ್ ಸೆಂಟರ್ ಗಳಲ್ಲಿ ತುಂಬಿಸಿಕೊಡುವುದಿಲ್ಲ. ಹೀಗಾಗಿ ಸರ್ಕಾರ ನಮ್ಮಂತಹವರಿಗೆ ಬೆಂಬಲ ನೀಡಬೇಕು. ನಮ್ಮನ್ನು ನೋಡಿ ಮತ್ತೊಂದಷ್ಟು ಜನ ನೆರವಿಗೆ ಮುಂದೆ ಬರುತ್ತಾರೆ. ಆಗ ಸರ್ಕಾರದ ಮೇಲಿನ ಒತ್ತಡವೂ ಕೂಡ  ಕಡಿಮೆಯಾಗುತ್ತದೆ. ನಮಗೂ ಮತ್ತಷ್ಟು ಕೆಲಸ ಮಾಡಲು ಸ್ಪೂರ್ತಿಯಾಗುತ್ತದೆ ಎಂದು ಹೇಳಿದರು.

ಸಂಪರ್ಕ ಹೇಗೆ?
ನಾನು ಸೇರಿದಂತೆ ನಮ್ಮ ತಂಡದಲ್ಲಿ ಒಟ್ಟು ಐದು ಮಂದಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ತಂಡದ ಯಾರಿಗೇ ಕರೆ ಮಾಡಿದರೂ, ಯಾವುದೇ ಕ್ಷಣದಲ್ಲೂ ಆಕ್ಸಿಜನ್ ತಲುಪಿಸಿಲು ಸಿದ್ಧ. ದಿನದ 24 ಗಂಟೆಯೂ ನಮ್ಮ ತಂಡ ಕಾರ್ಯ ನಿರ್ವಹಿಸುತ್ತದೆ. 

ಯತೀಶ್ ಬಾಬು
98459 00666
9900966600

ವಿಜಯ್
9449060666

ಪ್ರವೀಣ್
9591546414

- ಶ್ರೀನಿವಾಸ ಮೂರ್ತಿ ವಿಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com