ಬಡವರ ಬದುಕಿನ ಆಶಾಕಿರಣ, ಕಲಬುರಗಿಯ '10 ರೂಪಾಯಿ ಡಾಕ್ಟರ್': ಮನುಕುಲ ಸೇವೆಯೇ ಇವರ ಧ್ಯೇಯ 

ಬಡವರಿಗೆ ವೈದ್ಯಕೀಯ ಸೇವೆ ಕೈಗೆಟಕುವುದಿಲ್ಲ ಎಂಬ ಮಾತು ಮೊದಲಿನಿಂದಲೂ ಇದೆ, ಅದೀಗ ಕೊರೋನಾ ಸೋಂಕು ಬಂದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಮಾಡಿಕೊಂಡು ರೋಗಿಗಳಿಂದ ಮನಸೋ ಇಚ್ಛೆ ದರವನ್ನು ಕೀಳುತ್ತಿವೆ ಎಂಬ ಆರೋಪಗಳು ಬರುತ್ತಿವೆ.
ಡಾ ಮಲ್ಲರ್ ರಾವ್ ಮಲ್ಲೆ ಕಲಬುರಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವುದು
ಡಾ ಮಲ್ಲರ್ ರಾವ್ ಮಲ್ಲೆ ಕಲಬುರಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವುದು

ಕಲಬುರಗಿ: ಬಡವರಿಗೆ ವೈದ್ಯಕೀಯ ಸೇವೆ ಕೈಗೆಟಕುವುದಿಲ್ಲ ಎಂಬ ಮಾತು ಮೊದಲಿನಿಂದಲೂ ಇದೆ, ಅದೀಗ ಕೊರೋನಾ ಸೋಂಕು ಬಂದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಮಾಡಿಕೊಂಡು ರೋಗಿಗಳಿಂದ ಮನಸೋ ಇಚ್ಛೆ ದರವನ್ನು ಕೀಳುತ್ತಿವೆ ಎಂಬ ಆರೋಪಗಳು ಬರುತ್ತಿವೆ.

ಇಂಥವರ ಮಧ್ಯೆ ಬಡವರ ಬಾಳಿನ ಆಶಾಕಿರಣವೆಂಬಂತೆ ಉತ್ತರ ಕರ್ನಾಟಕದ ಕಲಬುರಗಿಯ ವೈದ್ಯರೊಬ್ಬರು ರೋಗಿಗಳಿಂದ ಪರೀಕ್ಷೆಗೆ(consultancy fees) ತೆಗೆದುಕೊಳ್ಳುತ್ತಿರುವ ಮೊತ್ತ ಕೇವಲ 20 ರೂಪಾಯಿಗಳು.

ತೀರಾ ಇತ್ತೀಚಿನವರೆಗೆ ಈ ವೈದ್ಯರು ಕೇವಲ 10 ರೂಪಾಯಿ ತೆಗೆದುಕೊಳ್ಳುತ್ತಿದ್ದರು, ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಇವರು 10 ರೂಪಾಯಿ ಡಾಕ್ಟರು ಅಂತಲೇ ಫೇಮಸ್ಸು.ಕಲಬುರಗಿಯ ಜಗಟ್ ನಲ್ಲಿ 75 ವರ್ಷದ ಡಾ ಮಲ್ಲರ್ ರಾವ್ ಮಲ್ಲೆ ಕ್ಲಿನಿಕ್ ಇಟ್ಟುಕೊಂಡಿದ್ದಾರೆ. 1974ರಲ್ಲಿ ಎಂಬಿಬಿಎಸ್ ಮುಗಿಸಿದ್ದ ಡಾ ಮಲ್ಲರ್ ರಾವ್ ಮಲ್ಲೆ ಅವರು ಹಲವು ವರ್ಷಗಳ ಕಾಲ ಡಾ ವಿಠಲ್ ರಾವ್ ಪಲ್ನಿಟ್ಕರ್ ಅವರ ಕೈ ಕೆಳಗೆ ಕೆಲಸ ಮಾಡುತ್ತಿದ್ದರಂತೆ.

ಈ ಸಮಯದಲ್ಲಿ ಅವರು ಒಮ್ಮೆ ವೃತ್ತಿ ಬದಲಿಸುವ ಯೋಚನೆಯನ್ನು ಮಾಡಿದ್ದರಂತೆ. ಕಾನೂನಿನಲ್ಲಿ ಪದವಿ ಪಡೆದರಂತೆ. ತನ್ನ ತಂದೆಯ ವೃತ್ತಿಯನ್ನು ಅನುಸರಿಸುವ ಮನಸ್ಸು ಅವರಿಗಾಗಿತ್ತು. 1984ರಲ್ಲಿ ಲಾ ಡಿಗ್ರಿ ಮುಗಿಸಿ ಕ್ರಿಮಿನಲ್ ಲಾಯರ್ ಆಗಿ ವೃತ್ತಿ ಆರಂಭಿಸುವುದರಲ್ಲಿದ್ದರು, ಆಗ ಅವರ ತಂದೆ ಕೊಟ್ಟ ಒಂದು ಸಲಹೆ ಅವರ ಯೋಚನೆಯನ್ನು ಬದಲಾಯಿಸಿತಂತೆ.

''ಒಂದು ದಿನ ನನ್ನ ತಂದೆ ಕಿಶನ್ ರಾವ್ ಮಲ್ಲೆ ಭಗವದ್ಗೀತೆಯ ಅಧ್ಯಾಯವೊಂದನ್ನು ತೋರಿಸಿ ವೈದ್ಯರ ಸೇವೆ ಮನುಕುಲಕ್ಕೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಹಣ ಸಂಪಾದನೆ ಮಾಡಲು ವೈದ್ಯರೊಬ್ಬರು ಲಾಯರ್ ಆಗುವುದು ಸರಿಯಲ್ಲ ಎಂದು ನನ್ನ ತಂದೆ ಹೇಳಿದರು, ಅವರು ಕೊಟ್ಟ ಸಲಹೆ ನನ್ನನ್ನು ಮನುಷ್ಯನನ್ನಾಗಿ ಮಾಡಿತು, ಬಡವರಿಗೆ ಕೈಗೆಟಕುವ ದರದಲ್ಲಿ  ಶುಲ್ಕವನ್ನು ತೆಗೆದುಕೊಂಡು ವೈದ್ಯಕೀಯ ಸೇವೆಯನ್ನು ಮುಂದುವರಿಸಿದೆ'' ಎನ್ನುತ್ತಾರೆ ಡಾ ಮಲ್ಲರ್ ರಾವ್.

1995ರವರೆಗೆ ಡಾ ಮಲ್ಲೆ ರೋಗಿಗಳಿಂದ ಶುಲ್ಕವೇ ತೆಗೆದುಕೊಳ್ಳುತ್ತಿರಲಿಲ್ಲವಂತೆ. ಪಿನಿಸಿಲಿನ್ ಇಂಜೆಕ್ಷನ್ ಗೆ 3 ರೂಪಾಯಿ ತೆಗೆದುಕೊಳ್ಳುತ್ತಿದ್ದರಂತೆ. ಇದರಿಂದ ತಿಂಗಳಿಗೆ 1500ರಿಂದ 2 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದೆ ಎನ್ನುತ್ತಾರೆ.ಅವರ ಸ್ವಂತ ದುಡ್ಡಿನಲ್ಲಿಯೇ ಸಿರಿಂಜ್ ಗಳನ್ನು, ಮೆಡಿಸಿನ್ ಗಳನ್ನು ಮತ್ತು ಆಂಟಿಬಯೋಟಿಕ್ ಗಳನ್ನು ತರಿಸುತ್ತಿದ್ದರಂತೆ.

1995ರಲ್ಲಿ, ಉದಾರೀಕರಣ ಸಮಯದಲ್ಲಿ ಡಾ ಮಲ್ಲೆ ರೋಗಿಗಳಿಂದ 10 ರೂಪಾಯಿ ಶುಲ್ಕ ಪಡೆಯಲು ಆರಂಭಿಸಿದರು. ಆ ಸಮಯದಲ್ಲಿ ಬೇರೆ ವೈದ್ಯರು ಸುಮಾರು 60 ರೂಪಾಯಿ ಶುಲ್ಕ ಕೇಳುತ್ತಿದ್ದರಂತೆ. ನಂತರ 25 ವರ್ಷಗಳಲ್ಲಿ ಎಲ್ಲದಕ್ಕೂ ದರ ಹೆಚ್ಚಳವಾಗಿದೆ, ಆದರೆ ಡಾ ಮಲ್ಲೆ ಮಾತ್ರ ಹೆಚ್ಚಿಸಲೇ ಇಲ್ಲ.

ಇಂದು ಕಲಬುರಗಿಯಲ್ಲಿ ಬೇರೆ ವೈದ್ಯರು 100 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಿದ್ದರೆ ಡಾ ಮಲ್ಲೆ ಕಳೆದ ವರ್ಷ ಅಕ್ಟೋಬರ್ ವರೆಗೂ 10 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಈಗ 20 ರೂಪಾಯಿಗೆ ಶುಲ್ಕ ಏರಿಕೆ ಮಾಡಿದ್ದಾರೆ. 

ನಾಲ್ಕು ವರ್ಷಗಳ ಹಿಂದೆ ಡಾ ಮಲ್ಲೆ ಅವರ ಪುತ್ರಿ ಶುಭ ಎಂಬಿಬಿಎಸ್ ಡಿಗ್ರಿ ಮುಗಿಸಿದರು. ಆಗ ಮಗಳು ಅಪ್ಪಾ, ಶುಲ್ಕ ಹೆಚ್ಚಿಳ ಮಾಡಿ ಎಂದರಂತೆ. ನಾನು ನಿನ್ನನ್ನು 10 ರೂಪಾಯಿ ಶುಲ್ಕ ತೆಗೆದುಕೊಳ್ಳುತ್ತಿರುವಾಗ ಓದಿಸಿದ್ದೇನೆ, ದಿನಕ್ಕೆ  ಸಾವಿರ ರೂಪಾಯಿಗಿಂತ ಹೆಚ್ಚು ಸಂಪಾದಿಸುತ್ತಿದ್ದೆ. ಸಾಕಷ್ಟು ನನಗೆ ಎಂದರಂತೆ ಡಾ ಮಲ್ಲೆ.

ಡಾ ಮಲ್ಲೆ ಅವರು ಸೈಂಟ್ ಜಾನ್ ಆಂಬ್ಯುಲೆನ್ಸ್ ಮತ್ತು ರೆಡ್ ಕ್ರಾಸ್ ಸೊಸೈಟ್ ಗೆ ಗೌರವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ, ಅಲ್ಲಿಂದ ಅವರಿಗೆ ಹಣ-ಕೀರ್ತಿ ಸಿಕ್ಕಿದೆ. ಇಂದಿಗೂ ಅವರು ಸೈಂಟ್ ಜಾನ್ಸ್ ಆಂಬ್ಯುಲೆನ್ಸ್ ನ ಕಾರ್ಯದರ್ಶಿಯಾಗಿದ್ದಾರೆ.

ಈ ಎರಡೂ ಸಂಸ್ಥೆಗಳ ಮೂಲಕ ಡಾ ಮಲ್ಲೆ 142 ರಕ್ತದಾನ ಶಿಬಿರ ಮತ್ತು 62 ಆರೋಗ್ಯ ಶಿಬಿರಗಳನ್ನು ಕೊಳಗೇರಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಎರಡು ದಶಕಗಳಲ್ಲಿ ಮಾಡಿಸಿದ್ದಾರೆ. 54 ಬಾರಿ ಡಾ ಮಲ್ಲೆಯವರು ಸ್ವತಃ ರಕ್ತದಾನ ಮಾಡಿದ್ದಾರೆ. ಕೆಲ ತಿಂಗಳ ಹಿಂದಿನವರೆಗೂ ಡಾ ಮಲ್ಲೆಯವರು ಪೂರ್ಣಕಾಲಿಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಈಗ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ರೋಗಿಗಳನ್ನು ನೋಡಿ ಚಿಕಿತ್ಸೆ ನೀಡುತ್ತಾರೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com